“ನ್ಯಾಯ ಮಾಡುವಲ್ಲಿ ವಿಳಂಬ ಎಂಬುದು ನ್ಯಾಯದ ನಿರಾಕರಣೆ” ಎಂಬ ಪ್ರಸಿದ್ಧ ನ್ಯಾಯವಾಕ್ಯಕ್ಕೆ ಒಳ್ಳೆಯ ಉದಾಹರಣೆ ಈಗ ನಡೆದಿರುವ ಕೇಂದ್ರ ಪರಿಸರ ಇಲಾಖೆಯ ಕಸ್ತೂರಿ ರಂಗನ್ ವರದಿ ಕುರಿತ ಚರ್ಚೆ. ಪಶ್ಚಿಮಘಟ್ಟಗಳನ್ನು ಕೇವಲ ಫೋಟೋದಲ್ಲಿ ಕಾಣುವ ದಿನಗಳು ಬರುವ ತನಕ ಇವರು ಯಾರೂ ವಿಶ್ರಮಿಸುವುದಿಲ್ಲ!
1986ರಲ್ಲಿ ದಿ| ರಾಜೀವ್ ಗಾಂಧಿ ಮಾಡಿದ ಒಂದು ಒಳ್ಳೆಯ ಕೆಲಸ ಎಂದರೆ ಪರಿಸರ ಸಂರಕ್ಷಣಾ ಕಾಯಿದೆ 1986ನ್ನು ಜಾರಿಗೆ ತಂದದ್ದು. ಆಗಿನ್ನೂ ಹೊಸದಾಗಿ ಅಧಿಕಾರ ವಹಿಸಿಕೊಂಡಿದ್ದ ಹುಮ್ಮಸ್ಸಿನಲ್ಲಿ ನಿಜ ಕಳಕಳಿಯಿಂದ ಹೊರಬಂದ ಕಾಯಿದೆ ಇದು. ಅದಾಗಿ ಈಗ 36ವರ್ಷ ಕಳೆದಿದೆ. ಇಲ್ಲಿಯ ತನಕವೂ ಈ ಕಾಯಿದೆಯನ್ನು ಪೂರ್ಣಪ್ರಮಾಣದಲ್ಲಿ ಜಾರಿಗೆ ತರುವುದು ಯಾವುದೇ ಸರ್ಕಾರಕ್ಕೆ ಸಾಧ್ಯ ಆಗಿಲ್ಲ. ಯಾಕೆಂದರೆ ಅಲ್ಲಿಂದೀಚೆಗೆ ಆಳುತ್ತಾ ಬಂದಿರುವವರೇ ಪರಿಸರ ನುಂಗಿ ತಮ್ಮ ಹೊಟ್ಟೆ ಬೆಳೆಸಿಕೊಳ್ಳುವ ಪರಿಣತರು. ದಕ್ಷಿಣ ಭಾರತದ ಜೀವವೇ ಆಗಿರುವ ಪಶ್ಚಿಮಘಟ್ಟಗಳು ಸಂಪೂರ್ಣ ನಾಶ ಆಗುವ ತನಕ ಇವರು ಬಿಡುವುದಿಲ್ಲ.
1986ರಲ್ಲಿ ಕಾಯಿದೆ ಜಾರಿ ಆದ ಬಳಿಕ, ಅದರ ಅನುಷ್ಠಾನ ಹೇಗೆಂಬ ಬಗ್ಗೆ, 1996ರಲ್ಲಿ ಪರಿಸರ ಸಚಿವಾಲಯ ವರದಿ, 1996ರಲ್ಲಿ ಯೋಜನಾ ಆಯೋಗದ ವರದಿ, 2000ದಲ್ಲಿ ಪ್ರಣವ್ ಸೇನ್ ಸಮಿತಿ ವರದಿ, 2001ರಲ್ಲಿ ಮೋಹನ್ ರಾಂ ಸಮಿತಿ ವರದಿಗಳು ಬಂದಿವೆ. ಆ ಬಳಿಕ ಪಶ್ಚಿಮಘಟ್ಟಗಳಿಗೇ ಪ್ರತ್ಯೇಕವಾಗಿ 2011ರಲ್ಲಿ ಮಾಧವ ಗಾಡ್ಗೀಳ್ ಸಮಿತಿ, 2013ರಲ್ಲಿ ಕಸ್ತೂರಿ ರಂಗನ್ ಸಮಿತಿ ವರದಿಗಳು ಬಂದಿವೆ. ಕಸ್ತೂರಿರಂಗನ್ ಸಮಿತಿ ವರದಿಯ ಆಧಾರದಲ್ಲಿ 2022ಜುಲೈ 6ರ ಪರಿಸರ ಇಲಾಖೆಯ ಪ್ರಕಟಣೆ ಈಗ ಲೇಟೆಸ್ಟ್ ಬೆಳವಣಿಗೆ. ವರದಿಗಳ ಮೇಲೆ ವರದಿಗಳು-ನೊಟಿಫಿಕೇಷನ್‌ಗಳು ಎಂಬುದು ಈಗ ಸಮಯ ಕೊಲ್ಲುವ ತಂತ್ರ!
ಮೊದಲು ಒಂದು ಪ್ರಶ್ನೆ ಕೇಳಿಕೊಳ್ಳಿ. 1986ರಲ್ಲಿ ಪಶ್ಚಿಮ ಘಟ್ಟದ ಗಾತ್ರ ಎಷ್ಟಿತ್ತು ಮತ್ತು ಕಾಯಿದೆ ಜಾರಿ ಆದಮೇಲೆ ಹಂತಹಂತವಾಗಿ ಅದರ ಗಾತ್ರ ಎಷ್ಟಕ್ಕಿಳಿದಿದೆ? ದೇಶದ ಜನಸಂಖ್ಯೆ ಏರಿಕೆ ಆದ ಕಾರಣಕ್ಕೆ ಜನರಿಗೆ ಜಾಗ ಬೇಕು ಎಂದು ಪಶ್ಚಿಮಘಟ್ಟವನ್ನು ತರಿದರೆ? ಎಷ್ಟು ಜನಸಂಖ್ಯೆ ಜಾಸ್ತಿ ಆದದ್ದಕ್ಕೆ ಎಷ್ಟು ತರಿದರು? ಜನವಸತಿಗಾಗಿಯೇ ತರಿದರೆ ಅಥವಾ ದುರಾಸೆಗಾಗಿ ತರಿದರೆ?

ಇದೆಲ್ಲ ಪ್ರಶ್ನೆಗಳಿಗೆ 2018ರಲ್ಲಿ ಪಶ್ಚಿಮಘಟ್ಟಗಳುದ್ದಕ್ಕೂ ಸಂಭವಿಸಿದ ಮತ್ತು ಈಗಲೂ ಮಳೆಗಾಲ ಬಂತೆಂದರೆ ಅವ್ಯಾಹತವಾಗಿ ಸಂಭವಿಸುತ್ತಿರುವ ಭೂಕುಸಿತಗಳು ಆ ಪ್ರಶ್ನೆಗೆ ಉತ್ತರ ಕೊಡುತ್ತಿವೆ. ಸರ್ಕಾರ ಈಗ 2013ರ ಹಿಂದಿನ ಭೂಕಳ್ಳತನಗಳನ್ನೆಲ್ಲ ಮಾಫಿ ಮಾಡಿ, ಆ ಬಳಿಕದ ಪರಿಸರವನ್ನು ಮಾತ್ರ ಉಳಿಸಿಕೊಳ್ಳುವ ಕಾಳಜಿ ತೋರಿಸಿದೆ. ಮಾಧವ ಗಾಡ್ಗೀಳರು ಮುಂದಿನ ಜನಾಂಗಗಳಿಗಾಗಿ 1,29,037 ಚದರ ಕಿಲೋಮೀಟರ್ ವ್ಯಾಪ್ತಿಯ ಪಶ್ಚಿಮಘಟ್ಟಗಳನ್ನು ಉಳಿಸಿಕೊಳ್ಳಬೇಕೆಂದರೆ, ಅದನ್ನು ಕಸ್ತೂರಿ ರಂಗನ್ 56,865 ಚದರ ಕಿಲೋಮೀಟರ್‌ಗಳಿಗೆ ಇಳಿಸಿದ್ದರು. ಗಾಡ್ಗೀಳರು ಕೃಷಿಕರು-ಕಾಡಿನಂಚಿನ ಜೀವಿಗಳಿಗೆ ತೊಂದರೆಯಾಗದಂತೆ ಮತ್ತು ನೆಲಕಳ್ಳರು, ದುರಾಸೆಯ ಕೈಗಾರಿಕೆ-ಗಣಿಗಾರಿಕೆ ಇತ್ಯಾದಿಗಳವರಿಗೆ ಮೀಸೆ ತುರುಕಿಸಲು ಅವಕಾಶ ಇರದಂತೆ ವರದಿ ಸಿದ್ಧಪಡಿಸಿದ್ದರೆ, ಕಸ್ತೂರಿ ರಂಗನ್ ಅವರ “ಸ್ಯಾಟಲೈಟ್ ತಂತ್ರಜ್ಞಾನದ” ವರದಿ ಕಾಡುಕಳ್ಳರು-ನೆಲಬಾಕರ ಒತ್ತಡಗಳಿಗೆ ಮಣಿದು, ಕೇವಲ 60,000ಚದರ ಕಿಮೀ.ಗಳಿಗೆ ಪಶ್ಚಿಮಘಟ್ಟಗಳನ್ನು ಇಳಿಸಿ ವರದಿ ಸಲ್ಲಿಸಿದ್ದರು. ಒತ್ತಡಕ್ಕೆ ಸರ್ಕಾರಗಳು ಮಣಿಯುತ್ತವೆ ಎಂಬ ರುಚಿ ಹತ್ತಿದ್ದೇ ತಡ, 60,000 ಚದರ ಕಿಮೀ, 2017ರ ಹೊತ್ತಿಗೆ 56,865 ಚದರ ಕಿಲೋಮೀಟರ್‌ಗಳಿಗೆ ಇಳಿಯಿತು!
ಈಗ 2022ರ ಲೇಟೆಸ್ಟ್ ನೊಟಿಫಿಕೇಷನ್ ಹೊತ್ತಿಗೆ ಗಾತ್ರ 56,865ಚದರ ಕಿಲೋಮೀಟರ್ ಎಂದೇ ಉಳಿದಿದ್ದರೂ, ಕಾಡುಕಳ್ಳರು-ನೆಲಬಾಕರುಗಳಿಗೆ ಮೀಸೆ ತೂರಿಸಲು ಅವಕಾಶಗಳನ್ನು ಕಲ್ಪಿಸಲಾಗಿದೆ. ಕಸ್ತೂರಿ ರಂಗನ್ ಅವರ ಹಳೆಯ ವರದಿಯಲ್ಲಿ ಟೌನ್‌ಶಿಪ್ ಮತ್ತು “ಅಭಿವೃದ್ಧಿ ಯೋಜನೆ” ಗಳಿಗೆ ಅವಕಾಶ ಇಲ್ಲ ಮತ್ತು ಸೂಕ್ಶ್ಮ ಪ್ರದೇಶ ಎಂದು ಗುರುತಿಸಲಾಗಿರುವ ಜಾಗದಿಮ್ದ 10 ಕಿಮೀ ವ್ಯಾಪ್ತಿಯಲ್ಲಿ ಅಭಿವೃದ್ಧಿ ಚಟುವಟಿಕೆಗಳು ನಿಯಂತ್ರಿತವಾಗಬೇಕು ಎಂದಿದ್ದರೆ, ಹೊಸ ವರದಿಯಲ್ಲಿ, 50 ಹೆಕ್ಟೇರ್ ತನಕದ ಟೌನ್‌ಶಿಪ್‌ಗಳು ಅಥವಾ 1,50,000 ಚದರ ಮೀಟರ್ ನಿರ್ಮಿತ ಪ್ರದೇಶ ಹೊಂದಿರುವ ಯೋಜನೆಗಳಿಗೆ ಅವಕಾಶ ಮಾಡಿಕೊಡಲಾಗಿದೆ!
ತಮಾಷೆ ಎಂದರೆ, ಪಶ್ಚಿಮಘಟ್ಟದ ಬುಡದಲ್ಲಿರುವ ಬಡ ರೈತ ಮಕ್ಕಳು, ಕಾಡಿನ ಅಂಚಿನ ನಿವಾಸಿಗಳ ಹೆಸರಿನಲ್ಲೇ ನೆಲಬಾಕರು ಹೋರಾಟಗಳನ್ನು ನಡೆಸಿ ಪಶ್ಚಿಮಘಟ್ಟವನ್ನು ಉಳಿಸುವ ಪ್ರಯತ್ನಗಳಿಗೆ ಅಡ್ಡಿ ಮಾಡುವಲ್ಲಿ ಯಶಸ್ವಿಯಾದರೂ, ಫಲಿತಾಂಶದ ಹೊತ್ತಿಗೆ ಅವರನ್ನು ಬದಿಗೆ ಸರಿಸಿ, ತಮ್ಮ ಲಾಭ ಮಾತ್ರ ಪಡೆದುಕೊಂಡಿದ್ದಾರೆ. ಉದಾಹರಣೆಗೆ, ಸೂಕ್ಷ್ಮ ಪ್ರದೇಶದ ಒಳಗೆ ಬರುವ ಬಡ ರೈತನ ಮಕ್ಕಳು ತಂದೆಯ ಕಾಲದ ನಂತರ ಭೂಮಿ ಪಾಲು ಮಾಡಿಕೊಂಡು, ತನ್ನ ಪಾಲಿಗೆ ಬಂದ ಜಾಗದಲ್ಲಿ ಒಂದು ಪುಟ್ಟ ಮನೆ ಕಟ್ಟಿಕೊಳ್ಳಬೇಕೆಂದರೆ, ಅದಕ್ಕೆ ಹೊಸ ನೊಟಿಫಿಕೇಷನ್ನಿನಲ್ಲಿ ಅವಕಾಶ ಇಲ್ಲ. ಆದರೆ ಲಕ್ಷಗಟ್ಟಲೆ ಚದರ ಮೀಟರ್ ರೆಸಾರ್ಟುಗಳು, ಯೋಜನೆಗಳನ್ನು ನಿರ್ಮಿಸುವುದಕ್ಕೆ ಭರಪೂರ ಅವಕಾಶ!

ಸರ್ಕಾರಗಳು, ಜನಪ್ರತಿನಿಧಿಗಳು ಎಲ್ಲರೂ ಒಂದೋ ನೆಲದ ಶತ್ರುಗಳ ಪರ, ಇಲ್ಲವೇ ತಾವೇ ನೆಲದ ಶತ್ರುಗಳಾಗಿರುವುದರಿಂದ ಇಂತಹದೊಂದು ಪರಿಸ್ಥಿತಿ ಒದಗಿದೆ. ಜನ ಎಚ್ಚೆತ್ತುಕೊಂಡು, ನಮ್ಮ ಮಕ್ಕಳಿಗೆ ಉಸಿರಾಡಲು ಶುದ್ಧಗಾಳಿ, ಒಳ್ಳೆಯ ಪರಿಸರ, ನೀರು, ಬದುಕು ಕೊಡಬೇಕೆಂಬ ಆಸಕ್ತಿ ಇದ್ದರೆ, ಕೇಂದ್ರ ಸರ್ಕಾರದ ಈ ನೊಟಿಫಿಕೇಷನ್‌ನಲ್ಲಿ ನಮಗೆ ಏನು ಬೇಡ – ಏನು ಬೇಕೆಂಬುದನ್ನು ಸ್ಪಷ್ಟ ಮಾತುಗಳಲ್ಲಿ ಹೇಳಬೇಕು. ಯಾರದ್ದೋ ದುರಾಸೆಯ ಹುನ್ನಾರಗಳಿಗೆ ಬಲಿ ಬೀಳಬಾರದು.
ಕಳೆದ ಐದಾರು ವರ್ಷಗಳಿಂದ ಸ್ವತಃ ಪರಿಸರವೇ ಭೂಕುಸಿತಗಳ ಮೂಲಕ, ಅಕಾಲಿಕ ಮಳೆ-ನೆರೆ-ಬರಗಳ ಮೂಲಕ ಎಚ್ಚರಿಸಲಾರಂಭಿಸಿದೆ. ಇನ್ನಾದರೂ ಎಚ್ಚೆತ್ತುಕೊಳ್ಳಿ.











