ರಾಜ್ಯದ ರಾಜಕೀಯ ಬೆಳವಣಿಗೆಗಳ ನಡುವೆ ಮುಖ್ಯಮಂತ್ರಿ ಸ್ಥಾನದಿಂದ ಸಿದ್ದರಾಮಯ್ಯ ಅವರು ಕೆಳಗಿಳಿದಿರುವ ವಿಚಾರಕ್ಕೆ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಹಾಗೂ ಮಾಜಿ ಸಂಸದ ಪ್ರತಾಪ್ ಸಿಂಹ ಸಮತೋಲನದ ಪ್ರತಿಕ್ರಿಯೆ ನೀಡಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಮೋದಾದೇವಿ ಒಡೆಯರ್, “ಸಿದ್ದರಾಮಯ್ಯ ಅವರ ವಿರುದ್ಧ ನನಗೆ ಯಾವುದೇ ದ್ವೇಷವಿಲ್ಲ. ಅವರು ರಾಜಮನೆತನಕ್ಕೆ ಹತ್ತಿರವೂ ಅಲ್ಲ, ದೂರವೂ ಅಲ್ಲ. ಪ್ರಸ್ತುತ ರಾಜಕೀಯ ಬೆಳವಣಿಗೆಗಳ ಬಗ್ಗೆ ನಾನು ಪ್ರತಿಕ್ರಿಯೆ ನೀಡಲು ಇಷ್ಟಪಡುವುದಿಲ್ಲ” ಎಂದು ಹೇಳಿದರು.

ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನ ತೊರೆದಿದ್ದರಿಂದ ಅಭಿವೃದ್ಧಿ ಕಾರ್ಯಗಳು ನಿಲ್ಲುವುದಿಲ್ಲ ಎಂದು ಅಭಿಪ್ರಾಯಪಟ್ಟ ಅವರು, “ಯಾವುದೇ ಸರ್ಕಾರ ಬಂದರೂ ಅಭಿವೃದ್ಧಿ ಮುಂದುವರಿಯಬೇಕು. ನಿರ್ಲಕ್ಷ್ಯ ಕಂಡುಬಂದರೆ ಜನರು ಒತ್ತಡ ಹಾಕಿ ತಮ್ಮ ಕೆಲಸಗಳನ್ನು ಮಾಡಿಸಿಕೊಳ್ಳಬೇಕು” ಎಂದರು.
ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳಲಿರುವ ಡಿ.ಕೆ. ಶಿವಕುಮಾರ್ ಅವರಿಗೆ ಶುಭ ಹಾರೈಸಿದ ಅವರು, “ಹೊಸ ಮುಖ್ಯಮಂತ್ರಿಗೆ ಆಡಳಿತದ ಸಂಪೂರ್ಣ ಹಿಡಿತ ಪಡೆಯಲು ಮತ್ತು ಅಭಿವೃದ್ಧಿ ಕಾರ್ಯಗಳನ್ನು ವೇಗಗೊಳಿಸಲು ಕನಿಷ್ಠ ಮೂರ್ನಾಲ್ಕು ತಿಂಗಳು ಸಮಯ ಬೇಕಾಗುತ್ತದೆ. ಮೈಸೂರಿಗೆ ಈಗಾಗಲೇ ಮಂಜೂರಾಗಿರುವ ಯೋಜನೆಗಳನ್ನು ಹೊಸ ಸರ್ಕಾರ ಮುಂದುವರಿಸಬೇಕು” ಎಂದು ಹೇಳಿದರು.

ದೇ ವೇಳೆ ಮಾಜಿ ಸಂಸದ ಪ್ರತಾಪ್ ಸಿಂಹ ಕೂಡ ಸಿದ್ದರಾಮಯ್ಯ ಅವರ ನಿರ್ಧಾರವನ್ನು ಗೌರವಿಸಿದ್ದಾರೆ. “ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನವನ್ನು ಗೌರವಯುತವಾಗಿ ಬಿಟ್ಟುಕೊಟ್ಟಿದ್ದಾರೆ. ಹೀಗಾಗಿ ಈ ಸಂದರ್ಭದಲ್ಲಿ ಅವರನ್ನು ಟೀಕಿಸುವುದು ಸರಿಯಲ್ಲ. ಅವರ ಮುಂದಿನ ರಾಜಕೀಯ ಮತ್ತು ವೈಯಕ್ತಿಕ ಜೀವನ ಸುಖಕರವಾಗಿರಲಿ ಎಂದು ಹಾರೈಸುತ್ತೇನೆ” ಎಂದರು.
ರಾಜ್ಯ ಸರ್ಕಾರದ ಕಾರ್ಯವೈಖರಿಯನ್ನು ಸದ್ಯಕ್ಕೆ ವಿಮರ್ಶಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ ಪ್ರತಾಪ್ ಸಿಂಹ, “ಕಳೆದ ಮೂರು ವರ್ಷಗಳಿಂದ ಸರ್ಕಾರದ ವಿರುದ್ಧ ಟೀಕೆ ಮಾಡಿದ್ದೇನೆ. ಆದರೆ ಈಗ ಅದು ಮಾಡುವ ಸಮಯವಲ್ಲ” ಎಂದು ಹೇಳಿದರು.
ಮುಂದಿನ ಮುಖ್ಯಮಂತ್ರಿ ಆಗಲಿರುವ ಡಿ.ಕೆ. ಶಿವಕುಮಾರ್ ಅವರ ಕುರಿತು ಪ್ರತಿಕ್ರಿಯಿಸಿದ ಅವರು, “ಅವರನ್ನೂ ಈಗ ಟೀಕಿಸುವುದಿಲ್ಲ. ಅವರು ಉತ್ತಮ ಆಡಳಿತ ನೀಡಿದರೆ ಜನರ ಮೆಚ್ಚುಗೆ ಪಡೆಯುತ್ತಾರೆ. ಆಡಳಿತದಲ್ಲಿ ವೈಫಲ್ಯ ಕಂಡುಬಂದರೆ ಟೀಕೆಗಳು ಸಹಜವಾಗಿಯೇ ಬರುತ್ತವೆ. ಅವರ ಆಡಳಿತದ ಶೈಲಿ ಮತ್ತು ನಿರ್ಧಾರಗಳ ಆಧಾರದ ಮೇಲೆ ಮುಂದಿನ ದಿನಗಳಲ್ಲಿ ನಮ್ಮ ಅಭಿಪ್ರಾಯಗಳು ವ್ಯಕ್ತವಾಗಲಿವೆ” ಎಂದು ಹೇಳಿದರು.ರಾಜಕೀಯ ಬದಲಾವಣೆಯ ಈ ಹಂತದಲ್ಲಿ ಆಡಳಿತದ ನಿರಂತರತೆ ಮತ್ತು ಅಭಿವೃದ್ಧಿ ಕಾರ್ಯಗಳ ಮುಂದುವರಿಕೆಗೆ ಒತ್ತು ನೀಡಿರುವ ಇಬ್ಬರು ನಾಯಕರು, ಹೊಸ ಸರ್ಕಾರಕ್ಕೆ ಸಮಯ ಮತ್ತು ಅವಕಾಶ ನೀಡಬೇಕೆಂಬ ಸಂದೇಶವನ್ನು ನೀಡಿದ್ದಾರೆ.






