ಜಲಾಶಯವೊಂದಕ್ಕೆ ಅಡ್ಡಲಾಗಿ ನಿರ್ಮಾಣವಾಗುತ್ತಿರುವ ಬೃಹತ್ ಸೇತುವೆ ಯೋಜನೆಯೊಂದರ ಕಾಮಗಾರಿಗಾಗಿ ಜಲಾಶಯದ ನೀರನ್ನೇ ಬರಿದು ಮಾಡುವ ಅತಿಬುದ್ದಿವಂತಿಕೆಯ ತೀರ್ಮಾನಕ್ಕೆ ಸದ್ಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಬಂದಿದೆ! ಜಲವಿದ್ಯುತ್ ಯೋಜನೆಯ ತುಂಬಿದ ಜಲಾಶಯ ಬರಿದು ಮಾಡಿ ಸೇತುವೆ ಕಟ್ಟುವ ಪ್ರಾಧಿಕಾರದ ಈ ನಡೆ ಬಹುದೊಡ್ಡ ಹಗರಣವೊಂದರ ಸುಳಿವು ನೀಡುತ್ತಿದೆ!
ಹೌದು, ಪ್ರಸಿದ್ಧ ಯಾತ್ರಾ ಸ್ಥಳ ಸಿಗಂದೂರಿಗೆ ಸಂಪರ್ಕ ಕಲ್ಪಿಸುವ ಸೇತುವೆ ನಿರ್ಮಾಣ ಕಾಮಗಾರಿಗಾಗಿ ಲಿಂಗನಮಕ್ಕಿ ಜಲಾಶಯದ ನೀರನ್ನು ನದಿಗೆ ಬಿಟ್ಟು ಸರಿಸುಮಾರು ಅರ್ಧಕ್ಕರ್ಧ ನೀರನ್ನೇ ಖಾಲಿ ಮಾಡುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ(ಎನ್ ಎಚ್ ಎಐ) ಜಲಾಶಯದ ನಿರ್ವಹಣೆ ಮಾಡುವ ಕರ್ನಾಟಕ ಪವರ್ ಕಾರ್ಪೊರೇಷನ್(ಕೆಪಿಸಿ)ಗೆ ಪತ್ರ ಬರೆದಿದೆ.
ಸಮುದ್ರಮಟ್ಟದಿಂದ 1819 ಅಡಿ ಎತ್ತರವಿರುವ ಜಲಾಶಯದ ಗರಿಷ್ಠ ನೀರು ಸಂಗ್ರಹ ಸಾಮರ್ಥ್ಯ 151,75 ಟಿಎಂಸಿ. ಆ ಪೈಕಿ ಸದ್ಯ 106.75 ಟಿಎಂಸಿಯಷ್ಟು ನೀರು ಸಂಗ್ರಹ ಇದೆ. ಹೊರಹರಿವು 6,442 ಕ್ಯೂಸೆಕ್ ಇದೆ. ಆದರೆ, ಎನ್ ಎಚ್ ಎ ಬೇಡಿಕೆಯ ಪ್ರಕಾರ, ಬರೋಬ್ಬರಿ 60 ಟಿಎಂಸಿ ನೀರನ್ನು ಹೊರಹಾಯಿಸಿ, ಜಲಾಶಯದ ನೀರಿನ ಮಟ್ಟವನ್ನು ಸದ್ಯದ 1800 ಅಡಿಯಿಂದ 1760 ಅಡಿಗೆ ತಗ್ಗಿಸಬೇಕಿದೆ. ಅಂದರೆ ಬರೋಬ್ಬರಿ ಅರ್ಧಕ್ಕೂ ಹೆಚ್ಚು ನೀರು ಖಾಲಿ ಮಾಡಿ, ಸರಿಸುಮಾರು ಜಲಾಶಯದ ಡೆಡ್ ಸ್ಟೋರೇಜ್ ಮಟ್ಟಕ್ಕೆ ನೀರು ತಗ್ಗಿಸಬೇಕಿದೆ!
ಈಗ ಸಮಸ್ಯೆ ಆಗಿರುವುದು ಈ ವಿಷಯವೇ. ರಾಜ್ಯದ ಒಟ್ಟು ಜಲವಿದ್ಯುತ್ ಉತ್ಪಾದನೆಯ ಪೈಕಿ ಶೇ.40ರಷ್ಟು ಶರಾವತಿ ನದಿ ಕಣಿವೆಯ ನಾಲ್ಕು ಜಲವಿದ್ಯುತ್ ಯೋಜನೆಗಳಿಂದಲೇ ಬರುತ್ತದೆ ಎಂಬ ಹಿನ್ನೆಲೆಯಲ್ಲಿ ಇನ್ನೂ ಬೇಸಿಗೆ ಆರಂಭಕ್ಕೆ ಮುನ್ನವೇ ಜಲಾಶಯ ಬರಿದುಮಾಡಿಕೊಂಡರೆ ವಿದ್ಯುತ್ ಕೊರತೆಯನ್ನು ಸರಿದೂಗಿಸುವುದು ಹೇಗೆ ಎಂಬುದು ಪ್ರಶ್ನೆ.
ಅದಕ್ಕಿಂತ ಮುಖ್ಯವಾದ ಪ್ರಶ್ನೆ ತುಂಬಿದ ಜಲಾಶಯದ ಅತಿ ಎತ್ತರದ ನೀರಿನ ಪ್ರಮಾಣದ ಅಂದಾಜಿನ ಆಧಾರದ ಮೇಲೆಯೇ ಸೇತುವೆ ಕಾಮಗಾರಿಯ ಗುತ್ತಿಗೆ ನೀಡಿ, ಜಲಾಶಯದ ತುಂಬಿ ತುಳುಕುವ ಮಳೆಗಾಲದ ಅವಧಿಯನ್ನೂ ಪರಿಗಣಿಸಿಯೇ ಕಾಮಗಾರಿಗೆ ಕಾಲಮಿತಿ ನಿಗದಿ ಮಾಡಿರುವಾಗ, ನೀರಿನ ನಡುವೆ ಕಾಮಗಾರಿ ನಿರ್ವಹಿಸುವ ತಾಂತ್ರಿಕತೆ ಬಳಕೆಗೆ ಅವಕಾಶವೂ ಇದ್ದು, ಕಳೆದ ಮೂರು ವರ್ಷಗಳಿಂದ ಅದೇ ರೀತಿಯಲ್ಲಿ ಕಾಮಗಾರಿಗೂ ನಡೆದಿರುವಾಗ ಈಗ ದಿಢೀರನೇ ನೀರು ತಗ್ಗಿಸಬೇಕು ಎಂದು ಪ್ರಾಧಿಕಾರ ಪತ್ರ ಬರೆದಿರುವುದು ಯಾವ ಉದ್ದೇಶಕ್ಕೆ ಎಂಬುದು ಹಲವು ಸಂಶಯಗಳಿಗೆ ಎಡೆಮಾಡಿರುವ ಪ್ರಶ್ನೆ.
ವಾಸ್ತವವಾಗಿ ಈ ಬಾರಿ ಮಲೆನಾಡು ಭಾಗದಲ್ಲಿ ಭಾರೀ ಮಳೆಯಾದ ಹಿನ್ನೆಲೆಯಲ್ಲಿ ಜಲಾಶಯದಲ್ಲಿ ಕಳೆದ ಬಾರಿಗಿಂತ ಹೆಚ್ಚು ನೀರಿದೆ. ಹಾಗಾಗಿ ತುಂಬಿದ ಜಲಾಶಯದಲ್ಲಿ ಸೇತುವೆಯ ಪಿಲ್ಲರ್ ನಿರ್ಮಾಣ ಕಾಮಗಾರಿಗೆ ತೊಡಕಾಗಿದೆ. ಆ ಹಿನ್ನೆಲೆಯಲ್ಲಿ ನೀರು ನದಿಗೆ ಬಿಡುವ ಮೂಲಕ ಕಾಮಗಾರಿಗೆ ಅನುಕೂಲ ಮಾಡಿಕೊಡುವಂತೆ ಕೋರಲಾಗಿದೆ ಎಂಬುದು ಕೇಳಿಬರುತ್ತಿರುವ ಮಾತು. ಆದರೆ, ಜಲಾಶಯದ ನೀರಿನ ಮಟ್ಟದ ಕುರಿತ ದೈನಂದಿನ ವರದಿ ಹೇಳುತ್ತಿರುವುದು ಬೇರೆಯದೇ ಸತ್ಯ. ಕೆಪಿಸಿ ನೀಡುವ ಆ ಅಧಿಕೃತ ವರದಿಯ ಪ್ರಕಾರ ಶುಕ್ರವಾರ ಜಲಾಶಯದ ನೀರಿನ ಮಟ್ಟ 106 ಟಿಎಂಸಿಯಷ್ಟಿದ್ದರೆ, ಕಳೆದ ವರ್ಷದ ಇದೇ ಅವಧಿಯಲ್ಲಿ ಜಲಾಶಯದ ನೀರಿನ ಮಟ್ಟ 113 ಟಿಎಂಸಿಯಷ್ಟಿತ್ತು! ಅಂದರೆ, ಕಳೆದ ವರ್ಷಕ್ಕಿಂತ ಈ ವರ್ಷ ಜಲಾಶಯದ ನೀರಿನ ಮಟ್ಟ ಸುಮಾರು 7 ಅಡಿಗಳಷ್ಟು ಕಡಿಮೆ ಇದೆ!
ಹಾಗಾಗಿ ಜಲಾಶಯದ ನೀರಿನ ಮಟ್ಟ ಕಳೆದ ವರ್ಷಕ್ಕಿಂತ ಹೆಚ್ಚಿದೆ ಎಂಬ ವಾದ ಹಸೀ ಸುಳ್ಳು ಎಂಬುದನ್ನು ಸಾರ್ವಜನಿಕವಾಗಿ ಲಭ್ಯವಿರುವ ಜಲಾಶಯದ ದೈನಂದಿನ ನೀರಿನ ಮಟ್ಟದ ವರದಿಯೇ ಹೇಳುತ್ತಿದೆ. ಹಾಗಾಗಿ ಸಾಗರದ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಸೇರಿದಂತೆ ಹಲವರು ಕಳೆದ ವಾರವೇ ಎತ್ತಿರುವ ಅನುಮಾನದಂತೆ; ಜಲಾಶಯದ ನೀರನ್ನು ಬಿಡಲು ಹೇಳುತ್ತಿರುವುದು ನಿಜವಾಗಿಯೂ ಸೇತುವೆ ಕಾಮಗಾರಿಗಾಗಿಯೇ ಅಥವಾ ಶರಾವತಿ ಕಣಿವೆಯ ನೀರು ಬರಿದು ಮಾಡಿ ಬೇಸಿಗೆಯಲ್ಲಿ ವಿದ್ಯುತ್ ಕೃತಕ ಅಭಾವ ಸೃಷ್ಟಿಸುವ ಮೂಲಕ ಖಾಸಗಿ ವಿದ್ಯುತ್ ವಲಯದ ಉದ್ಯಮಿಗಳಿಗೆ ಪರೋಕ್ಷ ಲಾಭ ಮಾಡಿಕೊಡುವ ಲೆಕ್ಕಾಚಾರಗಳು ಇವೆಯೇ? ಎಂಬುದು ಈಗಿರುವ ಮಿಲಿಯನ್ ಡಾಲರ್ ಪ್ರಶ್ನೆ!
ಅಲ್ಲದೆ, ಕಳೆದ ಒಂದು ತಿಂಗಳಿನಿಂದ ಜಲಾಶಯದ ನೀರಿನ ಮಟ್ಟದಲ್ಲಿ ದಿಢೀರ್ ಕುಸಿತವಾಗಿರುವ ಬಗ್ಗೆ ಗಮನ ಸೆಳೆದಿರುವ ಮಾಜಿ ಶಾಸಕರು ಮತ್ತು ಇತರೆ ಹಲವು ಸ್ಥಳೀಯರು, ವಿದ್ಯುತ್ ಬೇಡಿಕೆ ಹೆಚ್ಚು ಇರುವಾಗ ಮಾತ್ರ ಕೆಪಿಸಿಯ ಶರಾವತಿ ಕಣಿವೆಯ ಜಲವಿದ್ಯುತ್ ಗೆ ಬೇಡಿಕೆ ಇರುತ್ತದೆ. ಉಳಿದ ಅವಧಿಯಲ್ಲಿ ತುರ್ತು ಬಳಕೆಗೆ ಹೊರತುಪಡಿಸಿ ಹೆಚ್ಚಿನ ಖರೀದಿ ಮಾಡುವುದಿಲ್ಲ. ಹಾಗಾಗಿ ಸಾಮಾನ್ಯ ಸಂದರ್ಭದಲ್ಲಿ ಕಣಿವೆಯ ನಾಲ್ಕೂ ಸ್ಥಾವರಗಳ ಉತ್ಪಾದನೆಯ ವಾಸ್ತವಿಕ ಸಾಮರ್ಥ್ಯದ ಅರ್ಧದಷ್ಟು ಕೂಡ ಬಳಕೆಯಾಗುವುದಿಲ್ಲ. ಹಾಗಿದ್ದರೂ ಕಳೆದ ಒಂದು ತಿಂಗಳಲ್ಲಿ ಜಲಾಶಯದ ನೀರಿನ ಮಟ್ಟದಲ್ಲಿ ಬರೋಬ್ಬರಿ 10 ಅಡಿಗೂ ಅಧಿಕ ನೀರು ಕಡಿಮೆಯಾಗಿರುವುದು ಹೇಗೆ ಮತ್ತು ಯಾಕೆ ಎಂಬ ಪ್ರಶ್ನೆಯನ್ನು ಎತ್ತಿದ್ದಾರೆ.
ಅಂದರೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಪತ್ರ ಬರೆಯುವ ಮುನ್ನವೇ ಕಳೆದ ಕೆಲವು ದಿನಗಳಿಂದ ಅನಧಿಕೃತವಾಗಿ ಜಲಾಶಯದ ನೀರನ್ನು ಹರಿಯಬಿಡಲಾಗಿದೆ. ಈ ವಿಷಯ ಸಾರ್ವಜನಿಕ ಗಮನಕ್ಕೆ ಬಂದು, ಆ ಭಾಗದ ನಾಯಕರು ಮಾಧ್ಯಮಗಳ ಮೂಲಕ ಪ್ರಶ್ನೆ ಮಾಡತೊಡಗಿದ ಮೇಲೆ ಅದಕ್ಕೆ ತೇಪೆ ಹಚ್ಚಲು ಇದೀಗ ರಾಷ್ಟ್ರೀಯ ಹೆದ್ದಾರಿ ಅಧಿಕೃತ ಪತ್ರ ಬರೆಯುವ ಜಾಣತನ ತೋರುತ್ತಿದೆ ಎಂಬ ಮಾತು ಕೇಳಿಬಂದಿದೆ.
ಆದರೆ, ಅಂತಹ ಅನುಮಾನಗಳು ಏಳುತ್ತಲೇ ಸ್ಪಷ್ಟನೆ ನೀಡಿರುವ ಕೆಪಿಸಿಯ ಶರಾವತಿ ವಿಭಾಗದ ಮುಖ್ಯ ಎಂಜಿನಿಯರ್ ಮಹೇಶ್ ಅವರು, ಸದ್ಯ ಕೆಪಿಸಿ ವಿದ್ಯುತ್ ಉತ್ಪಾದನೆಗಾಗಿ ಮಾತ್ರ ನೀರು ಬಳಕೆ ಮಾಡುತ್ತಿದ್ದೆವೆಯೋ ವಿನಃ ಬೇರೆ ಉದ್ದೇಶಗಳಿಗೆ ಬಳಕೆಯಾಗಿಲ್ಲ. ಈ ಆರೋಪಗಳಲ್ಲಿ ಸತ್ಯವಿಲ್ಲ ಎಂದು ಹೇಳಿದ್ದಾರೆ. ಆದರೆ, ಕೆಪಿಸಿಯೇ ನೀಡುವ ಜಲಾಶಯದ ನೀರಿನ ಮಟ್ಟದ ಮಾಹಿತಿ ಮತ್ತು ಕೆಪಿಸಿ ವೆಬ್ ನಲ್ಲಿ ಲಭ್ಯವಿರುವ ಶರಾವತಿ ಕಣಿವೆಯ ದೈನಂದಿನ ವಿದ್ಯುತ್ ಉತ್ಪಾದನೆಯ ವಿವರಗಳನ್ನು ತಾಳೆ ಮಾಡಿದರೆ, ಹರಿದ ನೀರಿಗೂ, ಉತ್ಪಾದನೆಯಾದ ವಿದ್ಯುತ್ ಗೂ ಇರುವ ಅಂತರ ಬೇರೆಯದೇ ಸತ್ಯವನ್ನೂ ಹೇಳುತ್ತಿದೆ.
ಈ ನಡುವೆ ಗಮನಿಸಬೇಕಾದ ಮತ್ತೊಂದು ಅಂಶವೆಂದರೆ; ಲಿಂಗನಮಕ್ಕಿ ಜಲಾಶಯದ ನಟ್ಟನಡುವಲ್ಲಿ ಹಾದುಹೋಗುವ ತುಮರಿ ಸೇತುವೆಯ ಉದ್ದ ಬರೋಬ್ಬರಿ 2.5 ಕಿ.ಮೀ. 30-55 ಮೀಟರ್ ಎತ್ತರದ 17 ಪಿಲ್ಲರ್ ಒಳಗೊಂಡ ಕೇಬಲ್ ತಂತ್ರಜ್ಞಾನದ ಸೇತುವೆ ನಿರ್ಮಾಣ ಕಾರ್ಯಕ್ಕೆ 2018ರ ಫೆಬ್ರವರಿಯಲ್ಲೇ ಚಾಲನೆ ನೀಡಲಾಗಿದೆ. ಗುತ್ತಿಗೆ ಷರತ್ತಿನ ಪ್ರಕಾರ 2023ರ ಮೇ ಒಳಗೆ ಕಾಮಗಾರಿ ಪೂರ್ಣಗೊಳಿಸಬೇಕಿದೆ. ಬರೋಬ್ಬರಿ 423.15 ಕೋಟಿ ರೂ. ವೆಚ್ಚದ ಸೇತುವೆ ನಿರ್ಮಾಣ ಕಾಮಗಾರಿ ಈವರೆಗೆ ಕೇವಲ ಶೇ.35ರಷ್ಟು ಮಾತ್ರ ಪ್ರಗತಿ ಕಂಡಿದ್ದು, ಇನ್ನುಳಿದ ಒಂದೂವರೆ ವರ್ಷದಲ್ಲಿ ಉಳಿದ ಶೇ.65ರಷ್ಟು ಕಾಮಗಾರಿ ಪೂರೈಸಬೇಕಿದೆ.
ಆದರೆ, ಕಳೆದ ಆರು ತಿಂಗಳುಗಳಿಂದ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದ್ದು, ಈವರೆಗೆ ಕೇವಲ ಐದು ಪಿಲ್ಲರ್ ಮಾತ್ರ ನಿರ್ಮಾಣ ಮಾಡಲಾಗಿದೆ. ಹಾಗಾಗಿ ನಿಗಧಿತ ಅವಧಿಯಲ್ಲಿ ಷರತ್ತಿನಂತೆ ಕಾಮಗಾರಿ ಮುಗಿಸುವುದು ದುಃಸಾಧ್ಯವೆಂಬುದನ್ನು ಮನಗಂಡಿರುವ ಗುತ್ತಿಗೆದಾರರು, ಇದೀಗ ಹೆದ್ದಾರಿ ಪ್ರಾಧಿಕಾರದ ಮೂಲಕ ನದಿ ನೀರು ಖಾಲಿ ಮಾಡಿಸಲು ಪತ್ರ ಬರೆಯುವ ನಾಟಕವಾಡುತ್ತಿದ್ದಾರೆ. ವಾಸ್ತವವಾಗಿ ಜಲಾಶಯದ ಮುಕ್ಕಾಲು ಪಾಲು ನೀರನ್ನು ಬರಿದು ಮಾಡಲು ಕೆಪಿಸಿ ಒಪ್ಪಿದರೂ ಸಾರ್ವಜನಿಕರು ಆಕ್ಷೇಪವೆತ್ತುವುದು ಖಾತರಿ. ಹಾಗಾಗಿ ವಿವಾದವಾಗಲಿದೆ. ಹಾಗೆ ವಿವಾದವಾಗಿ ನೀರು ಬಿಡುಗಡೆ ವಿಳಂಬವಾದರೆ ಅದನ್ನೇ ನೆಪವಾಗಿಟ್ಟುಕೊಂಡು ಕಾಮಗಾರಿ ಕಾಲಮಿತಿಯನ್ನು ಹಿಗ್ಗಿಸುವುದು ಗುತ್ತಿಗೆದಾರರು ಮತ್ತು ಹೆದ್ದಾರಿ ಪ್ರಾಧಿಕಾರದ ಜಂಟಿ ಯೋಜನೆ ಎಂಬ ವಾದವೂ ಕೇಳಿಬರುತ್ತಿದೆ!
ಒಟ್ಟಾರೆ ಒಂದು ಕಡೆ ಕಾಲಮಿತಿಯಲ್ಲಿ ಕಾಮಗಾರಿ ಮಾಡಿ ಮುಗಿಸಲಾಗದ ಕಾರಣಕ್ಕೆ ನದಿ ನೀರು ಬರಿದು ಮಾಡುವ ಒಂದು ದುಷ್ಟ ಯೋಜನೆಯಾದರೆ, ಮತ್ತೊಂದು ಕಡೆ ಜಲವಿದ್ಯುತ್ ಉತ್ಪಾದನೆಗೆ ಕುತ್ತು ತಂದು ಬೇಸಿಗೆಯಲ್ಲಿ ಖಾಸಗಿ ವಲಯದ ವಿದ್ಯುತ್ ಖರೀದಿಗೆ ರಹದಾರಿ ಮಾಡಿಕೊಳ್ಳುವ ದೂರಾಲೋಚನೆಯ ಷಢ್ಯಂತ್ರ ಈ ನೀರು ಬಿಡುಗಡೆಯ ಸರ್ಕಸ್ಸು ಹಿಂದೆ ಕೆಲಸ ಮಾಡುತ್ತಿವೆ ಎಂಬ ಅನುಮಾನಗಳಿಗೆ ಪುಷ್ಟಿ ಕೊಡುವಂತಹ ಹಲವು ಸಂಗತಿಗಳು ಒಂದೊಂದಾಗಿ ಅನಾವರಣಗೊಳ್ಳತೊಡಗಿದೆ. ಬಹುದೊಡ್ಡ ಹಗರಣವೊಂದರ ವಾಸನೆ ಬಡಿಯತೊಡಗಿದೆ.
ಆ ಹಿನ್ನೆಲೆಯಲ್ಲಿಯೇ ಈ ಬಗ್ಗೆ ತನಿಖೆಯಾಗಬೇಕು ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ. ಒಂದು ವೇಳೆ ಬಿಗಿ ತನಿಖೆ ನಡೆದರೆ ಕೆಪಿಸಿ, ಖಾಸಗಿ ವಿದ್ಯುತ್ ಉತ್ಪಾದಕರು, ತುಮರಿ ಸೇತುವೆ ಗುತ್ತಿಗೆದಾರರು ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಡುವಿನ ಹಲವು ರಹಸ್ಯಗಳು ಹೊರಬರಬಹುದು. ಆದರೆ ಬೆಕ್ಕಿಗೆ ಘಂಟೆ ಕಟ್ಟುವವರಾರು?