ಕೆಪಿಎಸ್ ಸಿ ಇತಿಹಾಸದಲ್ಲೆ ಕಂಡುಕೇಳರಿಯದ 2011ನೇ ಸಾಲಿನ ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿ ಹಗರಣ ಮತ್ತೊಮ್ಮೆ ಚರ್ಚೆಗೆ ಬಂದಿದೆ. ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಮತ್ತು ಸಿರಿಗೆರೆಯ ತರಳಬಾಳು ಸ್ವಾಮೀಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಪತ್ರ ಬರೆದು ವಿವಾದಿತ 362 ಮಂದಿಗೆ ನೇಮಕಾತಿ ಆದೇಶ ನೀಡುವಂತೆ ಸಲಹೆ ನೀಡಿರುವುದು ಇಡೀ ಹಗರಣಕ್ಕೆ ಹೊಸ ತಿರುವು ನೀಡಿದೆ.
2011ರಲ್ಲಿ ಗೆಜೆಟೆಟ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿಗಾಗಿ ಕೆಪಿಎಸ್ ಸಿ ನಡೆಸಿದ ನೇಮಕಾತಿ ಪ್ರಕ್ರಿಯೆಯಲ್ಲಿ ಭಾರೀ ಅಕ್ರಮ ನಡೆದಿದೆ. ಅಂಕಗಳ ತಿದ್ದುಪಡಿ, ಅನರ್ಹರಿಂದ ಮೌಲ್ಯಮಾಪನ, ಭಾರೀ ಮೊತ್ತದ ಹಣಕಾಸು ವಹಿವಾಟು, ಕೆಪಿಎಸ್ಸಿ ಅಧ್ಯಕ್ಷರು, ಸದಸ್ಯರು ಮತ್ತು ಅಧಿಕಾರಿಗಳೊಂದಿಗೆ ಅಭ್ಯರ್ಥಿಗಳು ಮೊಬೈಲ್ ಕರೆ, ಸಂದೇಶಗಳ ಮೂಲಕ ವ್ಯವಹಾರ ನಡೆಸಿರುವುದು, ಅಕ್ರಮ ಮುಚ್ಚಿಹಾಕಲು ಸಿಸಿಟಿವಿ ದಾಖಲೆ ನಾಶ ಸೇರಿದಂತೆ ಹಲವು ಗಂಭೀರ ಆರೋಪಗಳು ಕೇಳಿಬಂದಿದ್ದವು. ಆ ಹಿನ್ನೆಲೆಯಲ್ಲೇ ಅವಕಾಶವಂಚಿತ ಸುಮಾರು 160 ಮಂದಿ ಅಭ್ಯರ್ಥಿಗಳು ದಾಖಲೆಸಹಿತ ದೂರು ಸಲ್ಲಿಸಿದ್ದರು. ಸಾರ್ವಜನಿಕ ಒತ್ತಡಕ್ಕೆ ಮಣಿದ ಸರ್ಕಾರ, 2013ರಲ್ಲಿ ಅಕ್ರಮದ ಕುರಿತು ಸಿಐಡಿ ತನಿಖೆಗೆ ಆದೇಶಿಸಿತ್ತು.
ಬರೋಬ್ಬರಿ 215 ಸಾಕ್ಷಿ, 700 ಮೊಬೈಲ್, 75 ಬ್ಯಾಂಕ್ ಖಾತೆ ಮತ್ತು ಕೆಪಿಎಸ್ ಸಿಯ 337 ಕಡತಗಳನ್ನು ಜಪ್ತಿ ಮಾಡಿ ತನಿಖೆ ನಡೆಸಿದ್ದ ಸಿಐಡಿ, ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿತ್ತು. ಪ್ರಕರಣದ ವಿಚಾರಣೆ ನಡೆಸಿದ್ದ ರಾಜ್ಯ ಹೈಕೋರ್ಟ್ 2018ರಲ್ಲಿ 362 ಅಭ್ಯರ್ಥಿಗಳ ನೇಮಕವನ್ನು ಅಕ್ರಮ ಎಂದು ಘೋಷಿಸಿ, 2014ರಲ್ಲಿ ಕೆಪಿಎಸ್ ಸಿ ಪ್ರಕಟಿಸಿದ್ದ ಆ ಅಭ್ಯರ್ಥಿಗಳ ಅಂತಿಮ ಆಯ್ಕೆಪಟ್ಟಿಯನ್ನು ಕಾನೂನುಬಾಹಿರ ಎಂದು ತೀರ್ಪು ನೀಡಿತ್ತು. ಬಳಿಕ ಹೈಕೋರ್ಟ್ ನ ಆ ತೀರ್ಪು ಪ್ರಶ್ನಿಸಿ ಸುಪ್ರೀಂಕೋರ್ಟಿಗೆ ಮೇಲ್ಮನವಿ ಸಲ್ಲಿಸಲಾಗಿತ್ತು. ಆದರೆ, ಮೇಲ್ಮನವಿಯ ಪರಿಶೀಲನೆ ನಡೆಸಿದ ಸುಪ್ರೀಂಕೋರ್ಟ್ ಕೂಡ ಹೈಕೋರ್ಟ್ ತೀರ್ಪನ್ನೇ ಎತ್ತಿಹಿಡಿದು ಅಕ್ರಮ ನೇಮಕಾತಿ ಆದವರಿಗೆ ಸರ್ಕಾರ ನೇಮಕಾತಿ ಆದೇಶ ನೀಡುವುದು ಕಾನೂನು ಮತ್ತು ಸಂವಿಧಾನಕ್ಕೆ ವಿರುದ್ಧ. ಅಲ್ಲದೆ ಒಂದು ಆಯ್ಕೆ ಪ್ರಕ್ರಿಯೆಯಲ್ಲಿಯೇ ಸಂಪೂರ್ಣ ದೋಷವಿರುವಾಗ ಕೆಲವರು ಒಳ್ಳೆಯವರು ಮತ್ತು ಕೆಲವರು ಕೆಟ್ಟವರು ಎಂದು ವಿಂಗಡಿಸಲು ಸಾಧ್ಯವಾಗದು. ಆದ್ದರಿಂದ ಪ್ರಕರಣದಲ್ಲಿ ಸಂಪೂರ್ಣ ಆಯ್ಕೆ ಪ್ರಕ್ರಿಯೆಯನ್ನೇ ರದ್ದು ಮಾಡಿರುವ ಹೈಕೋರ್ಟ್ ತೀರ್ಮಾನ ಸೂಕ್ತವಾಗಿದೆ ಎಂದು ಹೇಳಿತ್ತು.
ಒಟ್ಟು 566 ಅಭ್ಯರ್ಥಿಗಳ ಪೈಕಿ 362 ಮಂದಿ ಆಯ್ಕೆಯಾದವರಿಗೆ ಸಂದರ್ಶನದಲ್ಲಿ ಆಯ್ಕೆ ಸಮಿತಿಯ ಎಲ್ಲಾ ಸದಸ್ಯರೂ ಏಕ ರೀತಿಯ ಅಂಕ ನೀಡಿರುವುದು, ಉತ್ತರ ಪತ್ರಿಕೆಗಳ ಅಂಕಗಳ ಮರು ಎಣಿಕೆಯಲ್ಲಿ ಅಂಕ ತಿದ್ದಿರುವುದು, ಕೆಪಿಎಸ್ ಸಿ ಅಧ್ಯಕ್ಷರ ಖಾಸಗಿ ಕಾರ್ಯದರ್ಶಿಯಾಗಿದ್ದ ಗೋಪಾಲಕೃಷ್ಣ ಎಂಬಾತ ಪ್ರತಿ ದಿನ ಅಭ್ಯರ್ಥಿಗಳ ಸಂದರ್ಶನ ಮುಗಿದ ಬಳಿಕ ಅಧ್ಯಕ್ಷರು ಮತ್ತು ಸದಸ್ಯರೊಂದಿಗೆ ನಿರ್ದಿಷ್ಟ ಅಭ್ಯರ್ಥಿಗಳ ಸಾಧನೆ ಕುರಿತು ಚರ್ಚಿಸುತ್ತಿದ್ದುದು ಮುಂತಾದ ಅಕ್ರಮದ ಕರಾರುವಾಕ್ಕು ಸಂಗತಿಗಳನ್ನು ಹೈಕೋರ್ಟ್ ತನ್ನ ಆದೇಶದಲ್ಲಿ ಉಲ್ಲೇಖಿಸಿತ್ತು.
ಹೀಗೆ 362 ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯ ಪ್ರತಿ ಹಂತದಲ್ಲೂ ಅಕ್ರಮ ನಡೆದಿರುವುದು ಮತ್ತು ಅಕ್ರಮದ ಮೂಲಕವೇ 2011ನೇ ಸಾಲಿನ ಗೆಜೆಟೆಡ್ ಪ್ರೊಬೇಷನರಿ ಹುದ್ದೆಯ ಇಡೀ ಆಯ್ಕೆ ನಡೆದಿರುವುದು ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ಗಳೆರಡೂ ಕಡೆ ಸಾಬೀತಾಗಿರುವಾಗ ದೇಶದ ಮಾಜಿ ಪ್ರಧಾನಿಯಾಗಿರುವ ಜೆಡಿಎಸ್ ನಾಯಕ ಎಚ್ ಡಿ ದೇವೇಗೌಡರು ಮತ್ತು ರಾಜ್ಯದ ಪ್ರಭಾವಿ ಮಠದ ಸ್ವಾಮೀಜಿಗಳು ಎಲ್ಲ ಕಾನೂನು ಮತ್ತು ಸಂವಿಧಾನಿಕ ಮೌಲ್ಯಗಳನ್ನು ಗಾಳಿಗೆ ತೂರಿ ಅಕ್ರಮವನ್ನು ಸಕ್ರಮಗೊಳಿಸಿ, ನೇಮಕಾತಿ ಆದೇಶ ನೀಡಿ ಎಂದು ಪತ್ರ ಬರೆದಿರುವುದು ಏನನ್ನು ಸೂಚಿಸುತ್ತದೆ?
ಹಾಗೇ ನೋಡಿದರೆ ಜೆಡಿಎಸ್ ನಾಯಕರು ಈ ಪ್ರಕರಣದಲ್ಲಿ ಅನಪೇಕ್ಷಿತ ಆಸಕ್ತಿ ತೋರುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆಯೂ ಹಗರಣ ಮಾಧ್ಯಮಗಳ ಮೂಲಕ ಮೊಟ್ಟಮೊದಲು ಬಯಲಿಗೆ ಬಂದಾಗಲೂ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅಕ್ರಮದಲ್ಲಿ ಭಾಗಿಯಾದವರ ಪರ ವಕಾಲತು ವಹಿಸಿ ಹಲವು ಮಾಧ್ಯಮಗಳ ವಿರುದ್ಧ ಕಿಡಿ ಕಾರಿದ್ದರು. ಈ ಅಕ್ರಮವನ್ನು ಪ್ರಶ್ನಿಸಿ ಹೋರಾಟ ನಡೆಸುತ್ತಿದ್ದ ಅವಕಾಶವಂಚಿತ ಅಭ್ಯರ್ಥಿಗಳ ನ್ಯಾಯಯುತ ಹೋರಾಟದ ವಿರುದ್ಧ ಅಸಹಜ ರೀತಿಯಲ್ಲಿ ವರ್ತಿಸಿದ್ದರು. ಟಿವಿ ಸ್ಟುಡಿಯೋಗಳಲ್ಲೂ ರಾದ್ಧಾಂತಗಳೇ ನಡೆದಿದ್ದವು.
ಇದೀಗ ಸುಪ್ರೀಂಕೋರ್ಟ್ ಕೂಡ ನಡೆದಿರುವುದು ಅಕ್ರಮ ಮತ್ತು ಸಂವಿಧಾನವಿರೋಧಿ ನೇಮಕ ಪ್ರಕ್ರಿಯೆ ಎಂಬುದನ್ನು ಎತ್ತಿಹಿಡಿದು ನೇಮಕಾತಿ ರದ್ದುಪಡಿಸಿದ ಹೈಕೋರ್ಟ್ ತೀರ್ಪನ್ನು ಪುರಸ್ಕರಿಸಿದ ಮೇಲೆಯೂ ಅಕ್ರಮ ನೇಮಕಾತಿಯನ್ನು ಸಕ್ರಮ ಮಾಡಿ ಎಂದು ಗಣ್ಯಾತಿಗಣ್ಯರು ಪತ್ರ ಬರೆಯುವುದು, ಆ ಪತ್ರಗಳನ್ನು ಪುರಸ್ಕರಿಸಿ ಮುಖ್ಯಮಂತ್ರಿಗಳು ಮುಖ್ಯಕಾರ್ಯದರ್ಶಿಗಳಿಗೆ ಕಡತ ಮಂಡಿಸುವಂತೆ ಸೂಚನೆ ನೀಡುವುದು ಕೂಡ ಹಗರಣದ ವಿಷಯದಲ್ಲಿ ಸರ್ಕಾರದ ಮಟ್ಟದಲ್ಲೇ ರಂಗೋಲಿ ಕೆಳಗೆ ತೂರುವ ಮತ್ತೇನೋ ಆಟ ಶುರುವಾದಂತಿದೆ ಎಂಬುದನ್ನು ಸೂಚಿಸುತ್ತಿದೆ.
ಆ ಹಿನ್ನೆಲೆಯಲ್ಲಿ ಆಡಳಿತರೂಢ ಬಿಜೆಪಿಯ ಹಿರಿಯ ನಾಯಕ ಎಚ್ ವಿಶ್ವನಾಥ್, ಈ ವಿಷಯದಲ್ಲಿ ದೇವೇಗೌಡರು ಮತ್ತು ಸ್ವಾಮೀಜಿ ಪತ್ರವನ್ನು ಪ್ರಸ್ತಾಪಿಸಿ, “ಸಂವಿಧಾನಬಾಹಿರವಾಗಿ ಆಯ್ಕೆಯಾದ 362 ಮಂದಿ ಸುಪ್ರೀಂಕೋರ್ಟ್ ತೀರ್ಪು ಉಲ್ಲಂಘಿಸಿ ಒಬ್ಬ ರಾಜಕಾರಣಿಗೆ ಪತ್ರ ಬರೆಯುವುದು, ಆ ರಾಜಕಾರಣಿ ಮುಖ್ಯಮಂತ್ರಿಗೆ ಪತ್ರ ಬರೆಯುವುದು, ಆ ಪತ್ರವನ್ನು ಆಧರಿಸಿ ಮುಖ್ಯಮಂತ್ರಿ ಕ್ರಮಕೈಗೊಳ್ಳಲು ಮುಂದಾಗುವುದು ಎಂದರೆ ಏನರ್ಥ?” ಎಂದು ಪ್ರಶ್ನಿಸಿದ್ದಾರೆ. ದೇಶದ ನ್ಯಾಯವ್ಯವಸ್ಥೆಯ ಮೇಲೆ ರಾಜಕಾರಣಿಗಳು ಮತ್ತು ಮಠಾಧೀಶರು ಸವಾರಿ ಮಾಡುವುದು ಎಂದರೆ ಸುಪ್ರೀಂ ಮತ್ತು ಹೈಕೋರ್ಟ್ ತೀರ್ಪುಗಳಿಗೆ ಬೆಲೆ ಇಲ್ಲವೆ? ಎಂದೂ ವಿಶ್ವನಾಥ್ ಪ್ರಶ್ನಿಸಿದ್ದಾರೆ.
ಹೌದು, ವಿಶ್ವನಾಥ್ ಎತ್ತಿರುವ ಪ್ರಶ್ನೆ ಗಂಭೀರವಾದುದು. ಸಾರ್ವಜನಿಕ ಆಡಳಿತದಲ್ಲಿ ಪಾರದರ್ಶಕತೆ ಮತ್ತು ಪ್ರಾಮಾಣಿಕತೆಯನ್ನೇ ಬುಡಮೇಲು ಮಾಡುವಂತಹ 2011ರ ಕೆಪಿಎಸ್ ಸಿ ನೇಮಕಾತಿ ಅಕ್ರಮವನ್ನು ದೇಶದ ಸರ್ವೋಚ್ಛ ನ್ಯಾಯಾಲಯವೇ ಕಾನೂನುಬಾಹಿರ ಎಂದು ತೀರ್ಪು ನೀಡಿರುವಾಗ, ನೇಮಕಾತಿಯ ವಿಷಯದಲ್ಲಿ ಹಣಕಾಸು ವಹಿವಾಟು ಸೇರಿದಂತೆ ಸಾಲು ಸಾಲು ಅಕ್ರಮಗಳು ನಡೆದಿರುವುದು ನ್ಯಾಯಾಲಯದಲ್ಲೇ ಸಾಬೀತಾಗಿರುವಾಗ, ಅಂತಹ ಅಕ್ರಮದಲ್ಲಿ ಭಾಗಿಯಾದವರ ಪರ ಮಾಜಿ ಪ್ರಧಾನಿ ಮತ್ತು ಮಠಾಧೀಶರು ವಕಾಲತು ವಹಿಸುವುದು ತೀರಾ ಆತಂಕಕಾರಿ ಬೆಳವಣಿಗೆ. ಜೊತೆಗೆ ಯಾವ ಹಿತಾಸಕ್ತಿಗಾಗಿ ಈ ಗಣ್ಯರು ಹೀಗೆ ಸಾರ್ವಜನಿಕ ಲಜ್ಜೆ ಬದಿಗಿಟ್ಟು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ ಎಂಬುದು ಕೂಡ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಯಾಗುತ್ತಿರುವ ಪ್ರಶ್ನೆ!