ಇಂದು ಸಂಪುಟ ಸಭೆ (Cabinet meeting) ನಡೆಯಲಿದ್ದು, ಇವತ್ತಿನ ಸಭೆಯಲ್ಲಿ ಒಳಮೀಸಲಾತಿ (Reservation) ಬಗ್ಗೆ ಮಹತ್ವದ ಚರ್ಚೆ ನಡೆಯಲಿದೆ. ಎಸ್.ಸಿ ಜಾತಿಗೆ ಒಳ ಮೀಸಲಾತಿ ನೀಡುವ ಕುರಿತು ನ್ಯಾ.ನಾಗಮೋಹನ್ ದಾಸ್ (Nag mohan das) ಆಯೋಗ ಈಗಾಗಲೇ ವರದಿ ಸಲ್ಲಿಕೆ ಮಾಡಿದೆ. ಇಂದು ಸಚಿವ ಸಂಪುಟ ಸಭೆಯಲ್ಲಿ ವರದಿ ಮಂಡನೆಯಾಗಲಿದೆ.

ಹೀಗಾಗಿ ಒಳ ಮೀಸಲಾತಿ ಅನುಷ್ಠಾನ ಕುರಿತು ವ್ಯಾಪಕ ಚರ್ಚೆ ನಡೆಯುವ ಸಾಧ್ಯತೆಯಿದೆ. ಆದರೆ ಒಳ ಮೀಸಲಾತಿ ಜಾರಿ ಕುರಿತು ಸಭೆಯಲ್ಲಿ ಅಂತಿಮ ತೀರ್ಮಾನವಾಗಲಿದ್ಯಾ ಎಂಬುದನ್ನೇ ಕಾಡು ನೋಡಬೇಕಿದೆ.ಇಲ್ಲವೇ ವರದಿ ಅಧ್ಯಯನಕ್ಕೆ ಮತ್ತೆ ಕಾಲಾವಕಾಶ ಪಡೆಯಲಾಗುತ್ತದೆಯೇ ಎಂಬ ಕುತೂಹಲ ಮನೆಮಾಡಿದೆ.
ಇನ್ನು ಇದೇ ವೇಳೆ ರೋಹಿತ್ ವೇಮುಲ ಹಾಗೂ ದೇವದಾಸಿ ಪದ್ಧತಿ ವಿಧೇಯಕಗಳನ್ನ ಸಭೆಯಲ್ಲಿ ಅಂಗೀಕರಿಸುವ ಸಾಧ್ಯತೆಯಿದೆ. ದೇವದಾಸಿ ಪದ್ಧತಿಯಿಂದ ಜನಿಸಿದ ಮಕ್ಕಳಿಗೆ ತನ್ನ ತಂದೆಯನ್ನು ಗುರುತಿಸಲು (ಪಿತೃತ್ವ ಹಕ್ಕು) ಅವಕಾಶ ನೀಡುವ ವಿಧೇಯಕ ಇದಾಗಿದೆ.

ರೋಹಿತ್ ವೇಮುಲಾ ವಿಧೇಯಕ ಜಾರಿಗೆ ತರುವಂತೆ ಸಿಎಂ ಸಿದ್ದರಾಮಯ್ಯಗೆ ಖುದ್ದು ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಸೂಚನೆ ನೀಡಿದ್ದರು. ಇದರ ಜೊತೆಗೆ ಸಾಮಾಜಿಕ, ಶೈಕ್ಷಣಿಕ ಮರುಸಮೀಕ್ಷೆ ಬಗ್ಗೆಯೂ ಇಂದಿನ ಸಂಪುಟ ಸಭೆಯಲ್ಲಿ ತೀರ್ಮಾನವಾಗುವ ಸಾಧ್ಯತೆಯಿದೆ.
ಈಗಾಗಲೇ ಸೆ.22ರಿಂದ ಅ.7ರವರೆಗೆ ಹದಿನೈದು ದಿನಗಳ ಕಾಲ ಮರುಸಮೀಕ್ಷೆ ನಡೆಸಲು ಸರ್ಕಾರ ತೀರ್ಮಾನಿಸಿದೆ. ಹಿಂದುಳಿದ ವರ್ಗಗಳ ಆಯೋಗವು 624 ಕೋಟಿ ಸಮೀಕ್ಷೆಗಾಗಿ ಪ್ರಸ್ತಾವನೆ ಸಲ್ಲಿಕೆ ಮಾಡಿದ್ದು, ಈ ಬಗ್ಗೆ ಸಂಪುಟ ಸಭೆಯಲ್ಲಿ ಅಧಿಕೃತ ತೀರ್ಮಾನ ಕೈಗೊಳ್ಳ ಸಾಧ್ಯತೆಯಿದೆ.