ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತ ಆರಂಭವಾದ ನಂತರ ಸರಣಿ ಭರವಸೆಗಳನ್ನು ನಿಡಲಾಗಿತ್ತು. ವಿಶ್ವದಾದ್ಯಂತ ತಾಲಿಬಾನ್’ನ ಕಳೆದ ಆಡಳಿತವನ್ನು ನೆನಪಿಸಿಕೊಂಡು ಆತಂಕವನ್ನು ವ್ಯಕ್ತಪಡಿಸುತ್ತಿದ್ದ ಸಂದರ್ಭದಲ್ಲಿ, ಮಹಿಳಾ ಶಿಕ್ಷಣ, ಪತ್ರಿಕಾ ಸ್ವಾತಂತ್ರ್ಯ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ತಾಲಿಬಾನ್ ಸಡಿಲಿಕೆಯನ್ನು ಘೋಷಿಸಿತ್ತು. ಆಗಸ್ಟ್ 17ರಂದು ಪತ್ರಿಕಾ ಗೋಷ್ಠಿ ನಡೆಸಿದ್ದ ತಾಲಿಬಾನ್ ನಾಯಕರು ಅಫ್ಘಾನಿಸ್ತಾನದಲ್ಲಿ ಪತ್ರಕರ್ತರಿಗೆ ಯಾವುದೇ ಅಪಾಯವಿಲ್ಲ ಎಂದು ಹೇಳಿದ್ದರು.
ತಾಲಿಬಾನ್ ವಕ್ತಾರ ಝಬೀಹುಲ್ಲಾಹ್ ಮುಜಾಹಿದ್ ಮಾತನಾಡಿ, ಅಫ್ಘಾನಿಸ್ತಾನದಲ್ಲಿ ಕರ್ತವ್ಯನಿರತರಾಗಿರುವ ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳ ಪತ್ರಕರ್ತರು ಅಪರಾಧಿಗಳಲ್ಲ. ಅವರಿಗೆ ಇಲ್ಲಿ ಯಾವ ಅಪಾಯವೂ ಇಲ್ಲ. ಯುದ್ದದ ಪರಿಸ್ಥಿತಿ ನಿರ್ಮಾಣವಾದ ಕಾರಣಕ್ಕೆ ಹಲವು ಪತ್ರಕರ್ತರು ಮನೆಯ ಒಳಗೆ ಸೇರಿಕೊಂಡಿದ್ದಾರೆ. ಅವರು ಶೀಘ್ರದಲ್ಲಿಯೇ ಕೆಲಸಕ್ಕೆ ಮರಳುತ್ತಾರೆ, ಎಂದು ಹೇಳಿದ್ದರು.
“ನಾನು ಮತ್ತೆ ಮಾಧ್ಯಗಳಿಗೆ ಭರವಸೆ ನೀಡಲು ಬಯಸುತ್ತೇನೆ. ನಮ್ಮ ‘ಸಾಂಸ್ಕೃತಿಕ ಚೌಕಟ್ಟಿ’ನೊಳಗೆ ಮಾಧ್ಯಮಕ್ಕೆ ಮನ್ನಣೆ ನೀಡಲು ನಾವು ಸಿದ್ದರಿದ್ದೇವೆ. ಖಾಸಗಿ ಮಾಧ್ಯಮಗಳು ಸ್ವತಂತ್ರ ವರದಿಗಾರಿಕೆಗೆ ಮರಳಬಹುದು. ಅವರ ಕೆಲಸಗಳನ್ನು ಮುಂದುವರೆಸಬಹುದು,” ಎಂದು ಭರವಸೆ ನಿಡಿದ್ದರು.

ಈ ಪತ್ರಿಕಾಗೋಷ್ಠಿ ನಡೆದ ಕೆಲವೇ ದಿನಗಳ ಬಳಿಕ ಆಯುಧಧಾರಿ ತಾಲಿಬಾನಿಗಳು ಜರ್ಮನಿ ಮೂಲದ ಪತ್ರಕರ್ತನ ಹುಡುಕಾಟದಲ್ಲಿ ತೊಡಗಿದ್ದರು. ಆ ಪತ್ರಕರ್ತನ ಕುಟುಂಬದ ಸದಸ್ಯರನ್ನು ಕೂಡಾ ಬರ್ಬರವಾಗಿ ಹತ್ಯೆಗೈಯಲಾಗಿತ್ತು. ಇದಾದ ಬಳಿಕ ಅಫ್ಘಾನಿಸ್ತಾನದ ಪತ್ರಕರ್ತ ತೂಫಾನ್ ಓಮರ್ ಅವರನ್ನು ಕೂಡಾ ತಾಲಿಬಾನಿಗಳು ಹತ್ಯೆಗೈದಿದ್ದರು.
ಇಷ್ಟು ಮಾತ್ರವಲ್ಲದೇ, ಕರ್ತವ್ಯದ ವೇಳೆ ಪತ್ರಕರ್ತರ ಮೇಲೆ ತಾಲಿಬಾನ್ ಉಗ್ರರು ಹಲ್ಲೆ ನಡೆಸಿದ್ದಾರೆಂಬ ಕುರಿತು ಏಳಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿದೆ. ಮಹಿಳಾ ಪತ್ರಕರ್ತರ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಲಾಗಿದೆ. ನಾಹಿದ್ ಬಷಾರ್ದೋಸ್ತ್ ಎಂಬ ಮಹಿಳಾ ಪತ್ರಕರ್ತೆ ಹಾಗೂ ಝಿಯಾರ್ ಖಾನ್ ಯಾದ್ ಹಲ್ಲೆಗೊಳಗಾದ ಪತ್ರಕರ್ತರು.
ಝಿಯಾರ್ ಖಾನ್ ಯಾದ್ ಹೇಳಿರುವ ಪ್ರಕಾರ, ತಾಲಿಬಾನಿಗಳು ಬಂದೂಕನ್ನು ತೋರಿಸಿ ಪತ್ರಕರ್ತರಿಗೆ ಬೆದರಿಕೆ ಒಡ್ಡಿದ್ದಾರೆ. ಪ್ರತಿರೋಧ ತೋರಿದ ಪತ್ರಕರ್ತರ ಮೇಲೆ ಹಲ್ಲೆ ನಡೆಸಿದ್ದಾರೆ. ಕಾಬೂಲ್’ನಲ್ಲಿ ಪ್ರಸ್ತುತ ನಿರ್ಮಾಣವಾಗಿರುವ ಬಡತನದ ಪರಿಸ್ಥಿತಿಯ ವಾಸ್ತವಿಕ ವರದಿ ಮಾಡಲು ಹೋದಾಗ ಈ ಘಟನೆ ನಡೆದಿದೆ, ಎಂದು ಹೇಳಿದ್ದಾರೆ. ಇದರೊಂದಿಗೆ, ಪತ್ರಕರ್ತರ ಫೋನ್, ಕ್ಯಾಮೆರಾ ಸೇರಿದಂತೆ ಇತರೆ ಸಾಮಗ್ರಿಗಳನ್ನು ಕುಡಾ ಪತ್ರಕರ್ತರು ವಶಪಡಿಸಿಕೊಂಡಿದ್ದಾರೆ.
“ನನ್ನ ಫೋನ್ ತಾಲಿಬಾನಿಗಳ ಕೈಯಲ್ಲಿದೆ. ನನ್ನ ಸ್ನೇಹಿತರು ಹಾಗೂ ಕುಟುಂಬಸ್ಥರು ಕರೆ ಮಾಡಿದರೆ, ಅವರು ಕರೆಯನ್ನು ಸ್ವೀಕರಿಸಿ ನನ್ನ ಮನೆಯ ವಿಳಾಸ ಕೇಳುತ್ತಿದ್ದಾರೆ. ನನ್ನ ಕುಟುಂಬಕ್ಕೂ ತಾಲಿಬಾನಿಗಳು ಅಪಾಯ ಒಡ್ಡುವ ಆತಂಕವಿದೆ. ಕುಟುಂಬಸ್ಥರಿಗೆ ನನ್ನ ಕುರಿತು ಚಿಂತೆಯಾಗುತ್ತದೆ. ನನಗೆ ನನ್ನ ಕುಟುಂಬಸ್ಥರ ಕುರಿತು ಚಿಂತೆಯಾಗುತ್ತಿದೆ,” ಎಂದು ಡಿಡಬ್ಲ್ಯು ಸಂಸ್ಥೆಯೊಂದಿಗೆ ಝಿಯಾದ್ ತಮ್ಮ ಭಾವನೆಗಳನ್ನು ಹಂಚಿಕೊಂಡಿದ್ದಾರೆ.

ಭಾರತ ಮೂಲದ ಪತ್ರಕರ್ತ ಹಾಗೂ ಛಾಯಾಗ್ರಾಹಕ ದಾನಿಷ್ ಸಿದ್ದೀಕಿ ಅವರ ಹತ್ಯೆಯ ಬಳಿಕ ತಾಲಿಬಾನಿಗಳು, ಯಾವುದೇ ಪತ್ರಕರ್ತರನ್ನು ಹತ್ಯೆಗೈದ ಕುರಿತು ವರದಿಯಾಗಿಲ್ಲ. ಆದರೆ, ನಿರಂತರವಾಗಿ ಪತ್ರಕರ್ತರ ಮೇಲಿನ ದೌರ್ಜನ್ಯಗಳು ನಡೆಯುತ್ತಲೇ ಇವೆ. ಅಫ್ಘಾನಿಸ್ತಾನದ ಖಾಸಗಿ ಮಾಧ್ಯಮ ಸಂಸ್ಥೆಗಳು ಕೂಡಾ ಪ್ರತಿದಿನ ತಾವು ಎದುರಿಸುತ್ತಿರುವ ಅಪಾಯಗಳ ಕುರಿತು ಬೆಳಕು ಚೆಲ್ಲುವ ಪ್ರಯತ್ನಗಳನ್ನು ಮಾಡಿವೆ.
ತಾಲಿಬಾನ್ ವಕ್ತಾರ ಝಬೀಹುಲ್ಲಾಹ್ ಮುಜಾಹಿದ್ ಹೇಳಿರುವ ‘ಮಾಧ್ಯಮ ಸ್ವಾತಂತ್ಯ’ ಹಾಗೂ ‘ಸಾಂಸ್ಕೃತಿಕ ಚೌಕಟ್ಟಿನ’ ವ್ಯಾಖ್ಯಾನ ಏನೆಂಬುದು ತಾಲಿಬಾನ್ ಇನ್ನೂ ಹೇಳಿಲ್ಲ. ಅಫ್ಘಾನಿಸ್ತಾನದಲ್ಲಿ ಕರ್ತವ್ಯ ನಿರತರಾಗಿರುವ ಪತ್ರಕರ್ತರು ಈ ವಿಚಾರದ ಕುರಿತು ಸ್ಪಷ್ಟನೆಯನ್ನು ಕೇಳಿದ್ದಾರೆ.
“ನಮಗೆ ‘ಮಾಧ್ಯಮ ಸ್ವಾತಂತ್ಯ’ ಹಾಗೂ ‘ಸಾಂಸ್ಕೃತಿಕ ಚೌಕಟ್ಟಿನ’ ಕುರಿತು ನೇರವಾದ ಹಾಗೂ ಲಿಖಿತ ವ್ಯಾಖ್ಯಾನ ಬೇಕು. ಇತ್ತೀಚಿನ ದಿನಗಳಲ್ಲಿ ನಡೆದಂತಹ ಅನಾಹುತಕಾರಿ ಘಟನೆಗಳನ್ನು ತಡೆಯಲು, ಇಲ್ಲಿ ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಪಾಲಿಸಬೇಕಾದ ನಿಯಮಗಳನ್ನು ರೂಪಿಸಬೇಕು,” ಎಂದು ಪತ್ರಕರ್ತರು ಡಿಡಬ್ಲ್ಯು ಸಂಸ್ಥೆಗೆ ಹೇಳಿದ್ದಾರೆ.
RSF ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಕ್ರಿಸ್ಟೋಫರ್ ಡಿಲಾಯ್ರೆ ಅವರು, ಅಫ್ಘಾನಿಸ್ತಾನದಲ್ಲಿ ಆಡಳಿತ ನಡೆಸುತ್ತಿರುವ ತಾಲಿಬಾನಿಗಳು ಅಧಿಕೃತವಾಗಿ ಯಾವುದೇ ನಿಯಮಗಳನ್ನು ರೂಪಿಸಿಲ್ಲ. ಆದರೆ, ಇಲ್ಲಿ ಪತ್ರಕರ್ತರನ್ನು ಅಮಾನುಷವಾಗಿ ಹಲ್ಲೆಗೆ ಒಳಪಡಿಸಲಾಗುತ್ತಿದೆ. ಈಗಲೇ ತಾಲಿಬಾನಿಗಳ ಮುಖವಾಡ ಕಳಚಿ ಬಿದ್ದಿತೇ? ಅಫ್ಘಾನಿಸ್ತಾನದಲ್ಲಿ ಪತ್ರಕರ್ತರ ಸುರಕ್ಷತೆಯ ಕುರಿತು ನಮಗೆ ತಾಲಿಬಾನಿಗಳು ಖಾತರಿಪಡಿಸಬೇಕು, ಎಂದು ಹೇಳಿದ್ದಾರೆ.





