ಮೋದಿ ಆಡಳಿತ ಭಾರತದ ಬಡತನˌ ಮೌಢ್ಯ ˌ ಪುರೋಹಿತಶಾಹಿಗಳ ಪುಂಡಾಟ ಮುಂತಾದ ಪರಂರಾಗತ ಪಿಡುಗುಗಳನ್ನು ಬದಲಾಯಿಸುವ ಕೆಲಸ ಮಾಡುವ ಬದಲಿಗೆ ಕೆಲಸಿಗೆ ಬರದ ಇನ್ನೇನೊ ಮಾಡುತ್ತ ಕುಳಿತಿದೆ. ಬಿಜೆಪಿ ಆಡಳಿತ ತ್ವರಿತವಾಗಿ ಬದಲಾಯಿಸುತ್ತಿರುವುದು ಹಿಂದಿನ ಆಡಳಿತ ಮಾಡಿರುವ ಜನಪರ ಸುಧಾರಣಾವಾದಿ ಯೋಜನೆಗಳನ್ನು ˌ ದೇಶದ ಇತಿಹಾಸವನ್ನು ಹಾಗು ಸಾಂಪ್ರದಾಯಿಕ ಲಾಂಛನಗಳನ್ನು. ದೇಶಕ್ಕೆ ಅಗತ್ಯವಿದ್ದದ್ದು ಉದ್ಯೋಗ ಸೃಷ್ಟಿ ˌ ಆರ್ಥಿಕ ಚೇತರಿಕೆಯ ಕ್ರಮಗಳು ಹಾಗು ಇನ್ನೂ ಅನೇಕ ಅಭಿವೃದ್ಧಿಪರ ಕೆಲಸಗಳು. ಆದರೆ ಮೋದಿ ಮಾಡುತ್ತಿರುವುದು ಆಡಂಬರದ ಕೆಲಸಗಳು. ಅವುಗಳಲ್ಲಿ ಈ ಹೊಸ ಸಂಸತ್ ಭವನದ ನಿರ್ಮಾಣವೂ ಒಂದು. ಕಳೆದ ತಿಂಗಳು ಮೋದಿ ಹೊಸ ಸಂಸತ್ ಭವನದ ಮೇಲಿನ ಸರಕಾರಿ ಲಾಂಛನವನ್ನು ಅನಾವನರಣಗೊಳಿಸಿದರು. ಭಾರತದ ಮಹಾನ್ ಸಾಮ್ರಾಟನಾಗಿದ್ದ ಮೌರ್ಯ ಸಂಸ್ಥಾನದ ಅಶೋಕ ರೂಪಿಸಿದ ಮೂರು ಸಿಂಹಗಳು ಮತ್ತು ಅಶೋಕ ಚಕ್ರವುಳ್ಳ ಚಿತ್ರವನ್ನು ಸ್ವತಂತ್ರ ಭಾರತದ ಪ್ರಥಮ ಸರಕಾರವು ಅದನ್ನು ಸರಕಾರದ ಅಧಿಕೃತ ಲಾಂಛನವಾಗಿ ಅನುಷ್ಟಾನಗೊಳಿಸಿತ್ತು.
ಈಗ ಮೋದಿಯವರು ಹಿಂದಿನ ಸರಕಾರದ ಯೋಜನೆಗಳ ಹೆಸರು ಬದಲಾಯಿಸಿದಂತೆ ಸರಕಾರಿ ಲಾಂಛನವನ್ನು ಕೂಡ ಬದಲಾಯಿಸುವ ಚಾಳಿ ಮುಂದುವರೆಸಿದ್ದಾರೆ. ಕೇವಲ ಬದಲಾಯಿಸುವುದಷ್ಟೇ ಅಲ್ಲದೆ ಅವುಗಳನ್ನು ವಿಕೃತಗೊಳಿಸುವ ಮೋದಿ ಸರಕಾರದ ಕಾರ್ಯವನ್ನು ಅನೇಕ ಜನ ಇತಿಹಾಸ ತಜ್ಞರು ವಿಮರ್ಶಿಸಿದ್ದಾರೆ. ತಿರುಚಲಾಗಿರುವ ಸರಕಾರಿ ಲಾಂಛನದಲ್ಲಿನ ಸಿಂಹಗಳನ್ನು ಆಕ್ರಮಣಕಾರಿ ಸಿಂಹಗಳನ್ನಾಗಿಸಿ ಅಶೋಕ ರೂಪಿಸಿದ್ದ ಲಾಂಛನದ ಮೂಲ ಸಾರ ಹಾಗು ಸ್ವರೂಪವನ್ನೆ ವಿಕೃತಗೊಳಿಸಲಾಗಿದೆ ಎನ್ನುತ್ತಾರೆ ಅನೇಕ ಜನ ಇತಿಹಾಸ ತಜ್ಞರು. ಜುಲೈ ೧೭ ರ ‘ದಿ ವೈರ್’ ವೆಬ್ ಜರ್ನಲ್ಲಿನಲ್ಲಿ ಅಂಕಣಕಾರ ಆಸಿಮ್ ಕಮಲ್ ಅವರು ಬರೆದಿರುವ ಲೇಖನದಲ್ಲಿ ಈ ಕುರಿತು ಅನೇಕ ಜನ ಇತಿಹಾಸ ತಜ್ಞರ ಅಭಿಪ್ರಾಯವನ್ನು ಪಡೆಯಲಾಗಿದೆ. ಹೊಸ ಸಂಸತ್ ಭವನದ ಮೇಲೆ ಸ್ಥಾಪಿಸಲಾಗಿರುವ ಸರಕಾರಿ ಲಾಂಛನದ ಕುರಿತು ಇಂದು ದೇಶಾದ್ಯಂತ ಬಿಸಿಬಿಸಿ ಚರ್ಚೆಯನ್ನು ಹುಟ್ಟುಹಾಕಿದೆ.
ಹಲವಾರು ಇತಿಹಾಸಕಾರರು ಅಶೋಕ ರೂಪಿಸಿದ ಮೂಲ “ರಕ್ಷಣಾತ್ಮಕ” ಸಿಂಹಗಳ ಸಾರವನ್ನು ತಿರುಚಲಾಗಿದೆ ಎಂದು ನಿರಾಶೆಭಾವ ವ್ಯಕ್ತಪಡಿಸಿದ್ದಾರಂತೆ. ಈಗಿನ ಲಾಂಛನವು ಅನಿಮೇಟೆಡ್ ಅಥವಾ ಆಕ್ರಮಣಕಾರಿಯಂತೆ ರೂಪಿಸಲಾಗಿದೆ ಎಂದು ಕೆಲವರು ಅಭಿಪ್ರಾಯಪಟ್ಟರೆ ಇತರರು ಎರಡರ ನಡುವಿನ ವ್ಯತ್ಯಾಸ ಕಿರಿದಾಗಿದೆ ಮತ್ತು ಎರಡು ಕಲಾಕೃತಿಗಳು ಒಂದೇ ತರ ಹೊರಹೊಮ್ಮಲಾರವು ಎಂದಿದ್ದಾರಂತೆ. ಹರ್ಬನ್ಸ್ ಮುಖಿಯಾ, ರಾಜಮೋಹನ್ ಗಾಂಧಿ, ಕುನಾಲ್ ಚಕ್ರವರ್ತಿ ಮತ್ತು ನಯನ್ಜೋತ್ ಲಾಹಿರಿ ಸೇರಿದಂತೆ ಹಲವಾರು ಇತಿಹಾಸಕಾರರ ಪ್ರಕಾರ, ಅಶೋಕ ಮಾದರಿಯ ಸಿಂಹಗಳಿಗೆ ಹೋಲಿಸಿದರೆ ಹೊಸ ಸಿಂಹಗಳು ಅಸಮಾನವಾಗಿದ್ದು ಮೂಲ ಸಿಂಹಗಳಲ್ಲಿರುವ ಶಾಂತ ಮುಖಭಾವ ಅವು ಹೊಂದಿಲ್ಲ. ಇತಿಹಾಸಕಾರ್ತಿ ಪರೋಮಿತಾ ದಾಸ್ ಗುಪ್ತಾ ಅವರು ಈ ಹೊಸ ಮಾದರಿಯಲ್ಲಿನ ಸಿಂಹಗಳು ದೊಡ್ಡದಾಗಿಯು ಹಾಗು ಹೆಚ್ಚು ಅನಿಮೇಟೆಡ್ ಆಗಿಯು ಕಾಣುತ್ತವೆ ಎಂದು ವಾದಿಸಿದ್ದಾರಂತೆ.
ಹೈದರಾಬಾದ್ನ ಮಹೀಂದ್ರ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರೊಬ್ಬರ ವಾದವು ವಿಭಿನ್ನವಾಗಿದೆಯಂತೆ. ಅವರು ಪಿಟಿಐಗೆ ನೀಡಿರುವ ಮಾಹಿತಿಯ ಪ್ರಕಾರ: “ಮೂಲ ಕೃತಿ ಮತ್ತು ಈಗಿನ ಕೃತಿಗಳನ್ನು ರಚಿಸಿದ ಕಲಾವಿದರ ನಡುವೆ ೨,೫೦೦ ವರ್ಷಗಳ ಅಂತರವಿರುವುದಾಗಿಯುˌ ಆದ್ದರಿಂದ ಕರಕುಶಲತೆ ರೂಪಿಸುವಲ್ಲಿ ಭಿನ್ನತೆ ಸಹಜ. ಯಾವುದೇ ಎರಡು ಕಲಾಕೃತಿಗಳು ಒಂದೇ ರೀತಿಯಾಗಿರಲು ಸಾಧ್ಯವಿಲ್ಲದ ಕಾರಣ ಅವು ಒಂದು ಇನ್ನೊಂದರ ನಕಲುಗಳಾಗಲು ಸಾಧ್ಯವಿಲ್ಲ” ಎಂದಿದ್ದಾರಂತೆ. ಮಹಾತ್ಮ ಗಾಂಧಿಯವರ ಮೊಮ್ಮಗ ಹಾಗು ಪ್ರಸ್ತುತ ಅರ್ಬಾನಾ-ಚಾಂಪೇನ್ನಲ್ಲಿರುವ ಇಲಿನಾಯ್ಸ್ ವಿಶ್ವವಿದ್ಯಾಲಯದಲ್ಲಿ ಭೋದಕರಾಗಿರುವ ಇತಿಹಾಸಕಾರ ರಾಜಮೋಹನ್ ಗಾಂಧಿಯವರು ಪಿಟಿಐಗೆ ನೀಡಿರುವ ಮಾಹಿತಿಯ ಪ್ರಕಾರ “ಹೊಸ ಲಾಂಛನ ಹಾಗು ಸಾರನಾಥದಲ್ಲಿರುವ ಅಶೋಕನ ಮೂಲ ಸಿಂಹ ಲಾಂಛನಗಳ ನಡುವಿನ ವ್ಯತ್ಯಾಸವು ತುಂಬಾ ಎದ್ದು ಕಾಣುತ್ತಿದ್ದು ˌ ಎರಡರ ನಡುವಿನ ಮೂಲಭೂತ ವ್ಯತ್ಯಾಸವನ್ನು ತ್ವರಿತವಾಗಿ ಅವನ್ನು ನೋಡಿದ ಯಾರಾದರೂ ಗಮನಿಸಬಹುದು ಎನ್ನುವುದಾಗಿದೆ.
ರಾಜಮೋಹನ್ ಗಾಂಧಿಯವರ ಪ್ರಕಾರ ಮೂಲ ಕೃತಿಯು ಅನನ್ಯ ಘನತೆ ಹೊಂದಿದ್ದು ಅದರಲ್ಲಿ ವಿಶ್ವಾಸವು ಎದ್ದುಕಾಣುತ್ತದೆ. ಮೂಲ ಕೃತಿಯಲ್ಲಿನ ಸಿಂಹಗಳು ರಕ್ಷಣಾತ್ಮಕವಾಗಿವೆˌ ಪ್ರಸ್ತುತ ಶಿಲ್ಪದೊಳಗಿನ ಸಿಂಹಗಳು ಕೋಪಿಷ್ಟ ಮತ್ತು ರೋಗಗ್ರಸ್ತವಾಗಿದ್ದು ಅವು ಆಕ್ರಮಣಕಾರಿಯಾಗಿವೆ” ಎನ್ನುವುದಾಗಿದೆ. ಇನ್ನೊಬ್ಬ ಹೆಸರಾಂತ ಇತಿಹಾಸಕಾರ ಹರ್ಬನ್ಸ್ ಮುಖಿಯಾ ಕೂಡ ರಾಜಮೋಹನ್ ಗಾಂಧಿಯವರ ಅಭಿಪ್ರಾಯವನ್ನೇ ಅನುಮೋದಿಸಿದ್ದಾರಂತೆ. “ಹೊಸ ಕಲಾಕೃತಿಯಲ್ಲಿ ಸಿಂಹಗಳ ಕೋರೆ ಹಲ್ಲುಗಳು ಹೆಚ್ಚುಚ್ಚಾಗಿ ಎದ್ದು ಕಾಣುತ್ತಿದ್ದು ಅದು ಹಳೆಯ ಕಲಾಕೃತಿಯಲ್ಲಿರುವ ಸಿಂಹಗಳಲ್ಲಿ ಕಂಡುಬರುವುದಿಲ್ಲ”ಎಂದು ಮುಖಿಯಾ ಅವರು ಪಿಟಿಐಗೆ ನೀಡಿರುವ ಹೇಳಿಕೆಯಲ್ಲಿ ಅಭಿಪ್ರಾಯ ಪಟ್ಟಿದ್ದಾರಂತೆ. ಹಲ್ಲುಗಳ ಪ್ರದರ್ಶನವು “ಆಕ್ರಮಣಶೀಲತೆ”ಯ ಬಲವಾದ ಸಂಕೇತವಾಗಿದೆ, ಇದು “ಆಕ್ರಮಣಕಾರಿ ರಾಷ್ಟ್ರೀಯತೆ” ಯನ್ನು ಬಿಂಬಿಸಲು ಪ್ರಯತ್ನಿಸುತ್ತಿದೆ ಎಂದು ಅವರು ಹೇಳಿದ್ದಾರಂತೆ.
“ಈ ವ್ಯತ್ಯಾಸವು ಅರಿವಿಲ್ಲದೆ ನಡೆದದ್ದಲ್ಲ ಅಥವಾ ಇದು ಕಲಾವಿದನ ಅಭಿವ್ಯಕ್ತಿ ಸ್ವಾತಂತ್ರ್ಯದ ಫಲಿತಾಂಶವು ಅಲ್ಲ. ಕಲಾವಿದರಿಗೆ ಅಭಿವ್ಯಕ್ತಿಯ ಸ್ವಾತಂತ್ರ್ಯವಿದೆ ಆದರೆ ಮೂಲ ಕಲಾಕೃತಿಯು ರವಾನಿಸ ಬಯಸುವ ಮೂಲಭೂತ ಸಂದೇಶವನ್ನು ಯಾವ ಕಲಾವಿದರೂ ಬದಲಾಯಿಸಲು ಸಾಧ್ಯವಿಲ್ಲ” ಎಂದಿದ್ದಾರಂತೆ ಮುಖಿಯಾ. “ಸಿಂಹದ ತೆರೆದ ಹಲ್ಲುಗಳು ಇಲ್ಲಿ ವಿಶೇಷವಾಗಿ ಬಹಳ ಉಗ್ರ ಹಾಗು ಆಕ್ರಮಣಕಾರಿಯಾಗಿ ಗೋಚರಿಸುತ್ತವೆ. ಇದು ಹಳೆಯ ಕಲಾಕೃತಿಯ ಮೂಲ ಸ್ವರೂಪವನ್ನು ವಿಕೃತಗೊಳಿಸಿದ್ದರ ಸಂಕೇತ. ಈ ಉದ್ದೇಶಿತ ಮಾರ್ಪಾಡುಗಳು ಒಂದು ಗೂಢ ಅರ್ಥವನ್ನು ರವಾನಿಸುತ್ತವೆ. ಈಗಿನ ಮೋದಿ ಆಡಳಿತವು ನೀಡಬಯಸುವ ಸಂದೇಶವನ್ನು ಈ ಕಲಾಕೃತಿಗಳಲ್ಲಿ ಬಿಂಬಿಸಲಾಗಿದೆ. ಮೋದಿಯವರು ಭಾರತವನ್ನು ಶಾಂತಿಯುತ ರಾಷ್ಟ್ರದ ಖ್ಯಾತಿಯಿಂದ ಆಕ್ರಮಣಕಾರಿ ರಾಷ್ಟ್ರದ ಕುಖ್ಯಾತಿಗೆ ಪರಿವರ್ತಿಸುತ್ತಿರಬೇಕು” ಎಂದಿದ್ದಾರಂತೆ ಮುಖಿಯಾ. ಮೂಲ ಕಲಾಕೃತಿಯಲ್ಲಿನ ಸಿಂಹಗಳು ಶಾಂತಿ ಮತ್ತು ರಕ್ಷಣೆಯ ಅರ್ಥವನ್ನು ಬಿಂಬಿಸಿತ್ತಿವೆ ಎಂದು ಮುಖಿಯಾ ಒತ್ತಿ ಹೇಳಿದ್ದಾರಂತೆ.
ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದ ಪ್ರಾಚೀನ ಭಾರತೀಯ ಇತಿಹಾಸದ ಪ್ರಾಧ್ಯಾಪಕರಾಗಿ ನಿವೃತ್ತರಾದ ಕುಣಾಲ್ ಚಕ್ರವರ್ತಿ ಅವರು, ಹೊಸ ಸಂಸತ್ತಿನ ಮೇಲೆ ನಿಲ್ಲಿಸಲಾಗಿರುವ ಸರಕಾರಿ ಲಾಂಛನವು ಹಲವು ವರ್ಷಗಳಿಂದ ನೋಡಿದ್ದಕ್ಕಿಂತ “ವಿಭಿನ್ನವಾಗಿದೆ” ಎಂದು ಹೇಳಿದ್ದಾರಂತೆ. “ಸಾರನಾಥನಲ್ಲಿರುವ ಮೂಲ ಕಲಾಕೃತಿಯಲ್ಲಿನ ಸಿಂಹಗಳು ಆಂತರಿಕ ಶಕ್ತಿ ಮತ್ತು ಶಾಂತತೆಯನ್ನು ಹೊರಸೂಸುತ್ತವೆ” ಎಂದು ಕುಣಾಲ್ ಚಕ್ರವರ್ತಿ ಹೇಳಿದ್ದಾರಂತೆ. ಸರಿಯಾಗಿ ವಿಮರ್ಶೆ ಮಾಡಲು ತಾನು ಸಂಸತ್ ಭವನದಲ್ಲಿ ಸ್ಥಾಪಿಸಲಾದ ಹೊಸ ಲಾಂಛನವನ್ನು ಇನ್ನೂ ಹೆಚ್ಚು ಹತ್ತಿರದಿಂದ ನೋಡಬೇಕಾಗಿದೆ ಎಂದು ಚಕ್ರವರ್ತಿಯವರು ಹೇಳಿದ್ದಾರಂತೆ. “ನಾನು ಅಶೋಕನ ಸಿಂಹಗಳನ್ನು ಹತ್ತಿರದಿಂದ ನೋಡಿದ್ದೇನೆ ಮತ್ತು ಅವು ಶಾಂತಿ, ಶಕ್ತಿ, ಸಹನೆ ಮತ್ತು ರಕ್ಷಣೆಯನ್ನು ಹೊರಸೂಸುತ್ತವೆ, ಅದೇ ಸಂದೇಶ ಹೊಸ ಕಲಾಕೃತಿಗಳು ಕೂಡ ಹೊಂದಿರಬೇಕು” ಎಂದು ಅವರು ಚಕ್ರವರ್ತಿ ಅಭಿಪ್ರಾಯಪಟ್ಟಿದ್ದಾರಂತೆ. “ಹಲ್ಲುಗಳು ಹೆಚ್ಚು ಎದ್ದುಕಾಣುತ್ತಿವುದನ್ನು ನಾನು ನೋಡಿದ್ದೇನೆ. ಹೊಸ ಕೃತಿಯನ್ನು ರೂಪಿಸಿರುವ ಕಲಾವಿದರು ಟಿವಿ ಚರ್ಚೆಗಳಲ್ಲಿ ಹೊಸ ಕೃತಿಯು ಹಳೆಯ ಕೃತಿಗಿಂತ ಭಿನ್ನವಾಗಿಲ್ಲವೆಂದು ಹೇಳಿದ್ದನ್ನು ನಾನು ಕೇಳಿದ್ದೇನೆ. ಆದರೆ ಅವುಗಳು ಭಿನ್ನವಾಗಿ ಗೋಚರಿಸುತ್ತವೆನ್ನುವುದರಲ್ಲಿ ಯಾವುದೇ ಸಂದೇಹವಿಲ್ಲ” ಎಂದು ಚಕ್ರವರ್ತಿ ಪ್ರತಿಪಾದಿಸಿದ್ದಾರಂತೆ.
ಭಾರತದ ನುರಿತ ಪುರಾತನ ಇತಿಹಾಸ ತಜ್ಞ ನಯನಜೋತ್ ಲಾಹಿರಿ ಅವರು “ಹೊಸ ಸಿಂಹಗಳ ಮುಖದ ಮೇಲಿನ “ಉಗ್ರ ಅಭಿವ್ಯಕ್ತಿ” ಸಾರಾನಾಥ್ ದಲ್ಲಿನ ಸಿಂಹಗಳಿಗಿಂತ ಗುಣಾತ್ಮಕವಾಗಿ ವಿಭಿನ್ನವಾಗಿದೆ” ಎಂದಿದ್ದಾರಂತೆ. “ಅಧುನಿಕ ಸಂಸದೀಯ ವ್ಯವಸ್ಥೆಯನ್ನು ಒಪ್ಪಿಕೊಳ್ಳುವವರು ಇದು ಬಿಜೆಪಿಯ ಉಗ್ರ ಧಾರ್ಮಿಕ ಭಾವನೆಯನ್ನು ಪ್ರತಿನಿಧಿಸುತ್ತದೆ ಎಂದು ಖಂಡಿತವಾಗಿಯೂ ಹೇಳಿಕೊಳ್ಳಬಹುದು. ಆದರೆ ಪ್ರಾಚೀನ ಅಶೋಕನ ಸಿಂಹಗಳ ಚಿತ್ರಣಕ್ಕೆ ವಿಶಿಷ್ಟವಾದ ವಿಶ್ರಾಂತಿಯ ಸಂಯಮಕ್ಕೆ ಈ ಹೊಸ ಕಲಾಕೃತಿಯಲ್ಲಿ ಅಪಘಾತವಾಗಿದೆ” ಎಂದು ಚಕ್ರವರ್ತಿಯವರು ಹೇಳಿದ್ದಾರೆಂದು ಅವರ ಇಂಡಿಯನ್ ಎಕ್ಸ್ಪ್ರೆಸ್ನಲ್ಲಿನ ಒಂದು ಲೇಖನವನ್ನು ಆಧಾರವಾಗಿಸಿಕೊಂಡು ದಿ ವೈರ್ ವರದಿ ಮಾಡಿದೆ. ಚಕ್ರವರ್ತಿಯವರು ತಮ್ಮ ಲೇಖನದಲ್ಲಿ ಸರಕಾರಿ ಲಾಂಛನದಲ್ಲಿರುವ ಮೊದಲಿನ ಸಿಂಹಗಳ ಮುಖಭಾವದಲ್ಲಿದ್ದ ಸಂಯಮ ಮತ್ತು ಸೌಮ್ಯ ಭಾವವನ್ನು ಮೋದಿ ರೂಪಿಸಿದ ಹೊಸ ಸಿಂಹಗಳ ಕಲಾಕೃತಿಯಿಂದ ಹೊರಹಾಕಲಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರಂತೆ.
ಪರೋಮಿತಾ ದಾಸ್ ಗುಪ್ತಾ ಎಂಬ ಇತಿಹಾಸಕಾರ್ತಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾ, ಹೊಸ ಸಂಸತ್ತಿನ ಕಟ್ಟಡದಲ್ಲಿ ಇತ್ತೀಚಿನ ಅನುಕರಣೆಯ ಚಿತ್ರಗಳು ೧೯೫೦ ರಲ್ಲಿ ಭಾರತವು ಗಣರಾಜ್ಯವಾದಾಗ ಅಳವಡಿಸಿಕೊಂಡ ರಾಷ್ಟ್ರೀಯ ಲಾಂಛನದ ಅಗತ್ಯ ಚಿಹ್ನೆಗಳು ಅಥವಾ ಗುರುತುಗಳನ್ನು ಹೊಂದಿರುವಂತೆ ತೋರುತ್ತಿದೆ ಎಂದು ಹೇಳಿದ್ದಾರಂತೆ. “ಚಿಕ್ಕ ವ್ಯತ್ಯಾಸಗಳು ಹೊಸ ರೂಪಾಂತರದ ಗಾತ್ರ/ಆಯಾಮದಲ್ಲಿವೆ. ಇತ್ತೀಚಿನ ಚಿತ್ರದಲ್ಲಿ ಸಿಂಹಗಳು ದೊಡ್ಡದಾಗಿ ಮತ್ತು ಹೆಚ್ಚು ಅನಿಮೇಟೆಡ್ ಆಗಿ ಕಾಣುತ್ತವೆ, ಹಾಗು ಪ್ರಾಣಿಗಳ ಕ್ರೌರ್ಯವು ಅವುಗಳಲ್ಲಿ ನೈಜವಾಗಿ ಎದ್ದು ಕಾಣುತ್ತದೆ,” ಎಂದು ಹೇಳಿದ್ದಾರಂತೆ. “ಮೂಲಭೂತ ಅಂಶಗಳು ಬದಲಾಗದೆ ಉಳಿಯುವವರೆಗೆ ಮತ್ತು ಭಾರತದ ರಾಜ್ಯ ಲಾಂಛನ ಕಾಯಿದೆ, ೨೦೦೫ ರ ತತ್ವಗಳನ್ನು ಅನುಸರಿಸುವವರೆಗೆ, ಮೌರ್ಯ ಸಿಂಹಗಳ ರೂಪಾಂತರ ಮತ್ತು ರಾಷ್ಟ್ರೀಯ ಲಾಂಛನದ ಇತ್ತೀಚಿನ ಅನುಕರಣೆ ನಡುವೆ ತಾಂತ್ರಿಕವಾಗಿ ಯಾವುದೇ ಮಹತ್ವದ ವ್ಯತ್ಯಾಸವಿಲ್ಲ” ಎಂದು ಪರೋಮಿತಾ ಗುಪ್ತಾ ಅವರು ಹೇಳಿದ್ದಾರೆಂದು ದಿ ವೈರ್ ವರದಿ ಮಾಡಿದೆ.
ಪರೋಮಿತಾ ದಾಸ್ ಗುಪ್ತಾ ಅವರು ಈ ವಿವಾದವು “ಅತ್ಯಂತ ಅನಗತ್ಯ”ಎಂದು ಕರೆದಿದ್ದಲ್ಲದೆ “ರಾಷ್ಟ್ರೀಯ ಲಾಂಛನದ ಮೂಲಭೂತ ಅಂಶಗಳು/ಚಿಹ್ನೆಗಳು ರಾಜಿ ಮಾಡಿಕೊಂಡಿಲ್ಲ ಅಥವಾ ವಿರೂಪಗೊಂಡಿಲ್ಲ” ಎಂದು ವಾದಿಸಿದ್ದಾರಂತೆ. ಆದ್ದರಿಂದ ಈ ಚರ್ಚೆಯು ಅರ್ಥಹೀನವಾಗಿದೆ ಮತ್ತು ಟೀಕೆಗಳು ಆಧಾರರಹಿತವಾಗಿವೆ ಎಂದು ಪರೋಮಿತಾ ಅಭಿಪ್ರಾಯ ಪಟ್ಟಿದ್ದಾಗಿ ದಿ ವೈರ್ ಹೇಳಿದೆ. ವಿರೋಧಪಕ್ಷಗಳು ಮೋದಿ ಸರಕಾರವು ಸಿಂಹಗಳ ಶಿಲ್ಪಕ್ಕೆ “ಉಗ್ರ” ನೋಟವನ್ನು ನೀಡುತ್ತಿದೆ ಮತ್ತು ಚಿಹ್ನೆಯನ್ನು ಅವಮಾನಿಸಿದೆ ಎಂದು ಆರೋಪಿಸಿದರೆ, ಬಿಜೆಪಿ ಇದು ಮೋದಿಯನ್ನು ಗುರಿಯಾಗಿಸಿ ಟೀಕಿಸುವ ವಿರೋಧಿಗಳ ಮತ್ತೊಂದು “ಪಿತೂರಿ” ಎಂದು ತಳ್ಳಿಹಾಕಿದೆಯಂತೆ.
ಈ ರಾಷ್ಟ್ರೀಯ ಲಾಂಛನವು ಸಾರನಾಥದಲ್ಲಿರುವ ಅಶೋಕನ ಸಿಂಹಗಳ ಕಲಾಕೃತಿಯ ರೂಪಾಂತರವಾಗಿದೆ. ಇದನ್ನು ಮೂಲತಃ ಕ್ರಿಸ್ತಪೂರ್ವ ೨೫೦ ವರ್ಷಗಳ ಹಿಂದೆ ಮೌರ್ಯ ಚಕ್ರವರ್ತಿ ಸಾಮ್ರಾಟ್ ಅಶೋಕನ ಆದೇಶದಂತೆ ಗೌತಮ ಬುದ್ಧನ ಮೊದಲ ಧರ್ಮೋಪದೇಶದ ಸ್ಥಳವಾದ ಸಾರನಾಥದಲ್ಲಿ ಸ್ಥಾಪಿಸಲಾಗಿತ್ತು. ಇಡೀ ದೇಶದ ಬಹುತ್ವ ಸ್ವರೂಪ ಮತ್ತು ಸಾಮಾಜಿಕ ನೇಯ್ಗೆಯನ್ನು ಬದಲಾಯಿಸಿ ಏಕ ಸಂಸ್ಕೃತಿಗೆ ಬದಲಾಯಿಸಲು ಹವಣಿಸುತ್ತಿರುವ ವೈದಿಕ ಮೂಲಭೂತವಾದಿಗಳ ಪಿತೂರಿಗಳ ನಡುವೆ ರಾಷ್ಟ್ರ ಲಾಂಛನವು ಕೂಡ ಇದೀಗ ವಿವಾದದ ಕೇಂದ್ರಬಿಂದುವಾಗಿರುವುದು ದುರ್ದೈವದ ಸಂಗತಿಯಾಗಿದೆ.