ಬೆಳಗಾವಿ: ಪಾಗಲ್ ಪ್ರೇಮಿಯೊಬ್ಬ ಯುವತಿಯ ಬೆನ್ನು ಬಿದ್ದು, ಬದುಕನ್ನೇ ನರಕ ಮಾಡಿರುವ ಘಟನೆಯೊಂದು ನಡೆದಿದೆ.
ತಾಲೂಕಿನ ಕಿಣೈ ಗ್ರಾಮದ ಪಾಗಲ್ ಪ್ರೇಮಿ ತಿಪ್ಪಣ್ಣ ಡೋಕರೆ (27) ಎಂಬಾತ ಅದೇ ಗ್ರಾಮದ ಯುವತಿಯ ಹಿಂದೆ ಬಿದ್ದಿದ್ದಾನೆ. ಪ್ರೀತಿಸದಿದ್ದರೆ ಕೊಲೆ ಮಾಡುವುದಾಗಿ ಯುವತಿ ಹಾಗೂ ಆಕೆಯ ತಾಯಿಗೆ ಧಮ್ಕಿ ಹಾಕಿದ್ದಾನೆ. ಬಿಕಾಂ ಓದುತ್ತಿದ್ದ ಯುವತಿ ಕಾಲೇಜಿಗೆ ಹೋಗುವಾಗಿ ತಿಪ್ಪಣ್ಣ ಹಿಂದೆ ಬಿದ್ದು ರೇಗಿಸುತ್ತಿದ್ದ. ಆತನ ಕಾಟದಿಂದಾಗಿ ಯುವತಿ ಓದನ್ನೇ ಅರ್ಧಕ್ಕೆ ನಿಲ್ಲಿಸಿದ್ದಳು.
ನಿನ್ನ ಮಗಳನ್ನು ನನಗೆ ಮದುವೆ ಮಾಡಿಕೊಡು. ಇಲ್ಲವಾದರೆ ಇಬ್ಬರನ್ನೂ ಕೊಲೆ ಮಾಡುವುದಾಗಿ ಧಮ್ಕಿ ಕೂಡ ಹಾಕಿದ್ದಾನೆ. ತಿಪ್ಪಣ್ಣ ಡೋಕರೆ ಯಾವುದೇ ಕೆಲಸ ಮಾಡದೆ ಕುಡಿದು ಊರಲ್ಲಿ ಸುತ್ತಾಡುತ್ತಿದ್ದನು. ಇತ್ತೀಚೆಗೆ ಮನೆಗೆ ಹಿಂಬಾಗಿಲಿಗೆ ಪ್ರೀತಿಸು ಅಂತ ಬೆನ್ನು ಬಿದ್ದು ಬೆಂಕಿ ಕೂಡ ಹಚ್ಚಿದ್ದಾನೆ. ಆತನ ಕಿರಿಕಿರಿ ಸಹಿಸದೆ ಕಳೆದ ಮೂರು ವರ್ಷಗಳ ಹಿಂದೆಯೇ ಯುವತಿ ಪೊಲೀಸರಿಗೆ ದೂರು ನೀಡಿದ್ದಳು. ಪೊಲೀಸರು ತಿಪ್ಪಣ್ಣನನ್ನು ಠಾಣೆಗೆ ಕರೆಸಿ ಎಚ್ಚರಿಕೆ ನೀಡಿ ಕಳುಹಿಸಿದ್ದರು. ಆಗ ತಿಪ್ಪಣ್ಣ ಯುವತಿ ತಂಟೆಗೆ ಹೋಗದೆ ಸುಮ್ಮನಿದ್ದ.
ಈಗ ಮತ್ತೆ ತನ್ನ ಹಳೆಯ ಚಾಳಿ ಮುಂದುವರೆಸಿದ್ದಾನೆ. ಯುವತಿಯ ಮನೆ ಮೇಲೆ ಕಲ್ಲು ತೂರಿ ಅಟ್ಟಹಾಸ ಮೆರೆದಿದ್ದಾನೆ. ಇದಕ್ಕೆ ಯುವತಿ ಮತ್ತು ಆಕೆಯ ತಾಯಿ ರಕ್ಷಣೆ ಕೋರಿ ಬೆಳಗಾವಿ ಪೊಲೀಸ್ ಆಯುಕ್ತರನ್ನು ಭೇಟಿ ಮಾಡಿದ್ದಾರೆ. ಯುವತಿ ಮನೆಗೆ ಓರ್ವ ಪೊಲೀಸ್ ಪೇದೆ ನಿಯೋಜಿಸಲಾಗಿದೆ. ಈ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ.