ಸಿದ್ದರಾಮಯ್ಯ ಬರೋಬ್ಬರಿ 14 ನೇ ಬಾರಿಗೆ ರಾಜ್ಯ ಬಜೆಟ್ ಮಂಡಿಸುವ ಮೂಲಕ ಇಡೀ ದೇಶದಲ್ಲಿ ಇಷ್ಟು ಬಾರಿ ಬಜೆಟ್ ಮಂಡಿಸಿದ ಮೊದಲಿಗ ಎನ್ನುವ ಖ್ಯಾತಿ ಪಡೆದುಕೊಂಡಿದ್ದಾರೆ. ಆರ್ಥಿಕವಾಗಿ ಸಾಕಷ್ಟು ಜ್ಞಾನ ಹೊಂದಿರುವ ಸಿಎಂ ಸಿದ್ದರಾಮಯ್ಯ, ತಮ್ಮ ಪಕ್ಷದ 5 ಗ್ಯಾರಂಟಿಗಳಿಗೆ ಹಣ ಹೊಂದಿಸುವ ಜೊತೆಗೆ ರಾಜ್ಯದ ಆರ್ಥಿಕ ಶಿಸ್ತು ಕಡೆಗೆ ಹೆಚ್ಚಿನ ಒತ್ತು ನೀಡಿದ್ದಾರೆ. ಇದರ ಜೊತೆಗೆ ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಾರಿಗೆ ಬಂದಿದ್ದ ಹಲವಾರು ಕಾರ್ಯಕ್ರಮಗಳಿಗೆ ಸಿದ್ದರಾಮಯ್ಯ ಸರ್ಕಾರ ಕೊಕ್ ನೀಡಿದೆ. ಈ ಹಿಂದೆ 2013ರಲ್ಲಿ ತಮ್ಮದೇ ಸರ್ಕಾರ ಜಾರಿ ಮಾಡಿದ್ದ ಹಲವಾರು ಕಾರ್ಯಕ್ರಮಗಳಿಗೆ ಸಿದ್ದರಾಮಯ್ಯ ಮರು ಜೀವ ನೀಡಿದ್ದಾರೆ.
ಖಜಾನೆ ತುಂಬಿಸಲು ಸಿದ್ದರಾಮಯ್ಯ ಸರ್ಕಾರದ ಕ್ರಮ..!
ರಾಜ್ಯದ ಜನತೆಗೆ ಸರ್ಕಾರ ಯಾವುದೇ ಯೋಜನೆ ಜಾರಿ ಮಾಡಬೇಕಿದ್ದರೂ ಸರ್ಕಾರದ ಖಜಾನೆ ಸುಸ್ಥಿತಿಯಲ್ಲಿ ಇರಬೇಕು. ಅದೇ ಕಾರಣದಿಂದ ಮೂರು ಪ್ರಮುಖ ಇಲಾಖೆಯಿಂದ ರಾಜಸ್ವ ಸಂಗ್ರಹದ ಗುರಿ ಹೊಂದಲಾಗಿದೆ. ವಾಣಿಜ್ಯ ತೆರಿಗೆ ಇಲಾಖೆಯಿಂದ 1,01,000 ಲಕ್ಷ ಕೋಟಿ, ಅಬಕಾರಿ ಇಲಾಖೆಯಿಂದ ರಾಜಸ್ವ 36,000 ಕೋಟಿ ರೂಪಾಯಿ ಹಾಗು ನೋಂದಣಿ ಮತ್ತು ಮುದ್ರಾಂಕ ಇಲಾಖೆಯಿಂದ 25,000 ಕೋಟಿ ರೂಪಾಯಿ ಆದಾಯ ಹರಿದು ಬರುವ ನಿರೀಕ್ಷೆ ಹೊಂದಲಾಗಿದೆ. ಒಟ್ಟು 1,62,000 ಕೋಟಿ ರೂಪಾಯಿ ರಾಜಸ್ವ ಗುರಿ ಹೊಂದಿದ್ದು, ಹೊಸ ವಾಹನ ನೋದಂಣಿಯಿಂದ 11,500 ಕೋಟಿ ಆದಾಯ ಬರುವುದಾಗಿ ನಿರೀಕ್ಷೆ ಮಾಡಲಾಗಿದೆ. ಇನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ 9 ಸಾವಿರ ಕೋಟಿ ಆದಾಯ ಬರುವುದಾಗಿ ಬಜೆಟ್‌ನಲ್ಲಿ ತಿಳಿಸಲಾಗಿದೆ.
ಬಿಜೆಪಿ ಸರ್ಕಾರದ ಯೋಜನೆಗಳಿಗೆ ಕತ್ತರಿ ಪ್ರಯೋಗ..!
ಬಸವರಾಜ ಬೊಮ್ಮಾಯಿ ಸರ್ಕಾರದಲ್ಲಿ ರೈತರ ಮಕ್ಕಳಿಗೆ ನೀಡುತ್ತಿದ್ದ ವಿದ್ಯಾಸಿರಿ ಸ್ಕಾಲರ್ಶಿಪ್ ಯೋಜನೆಗೆ ಕೊಕ್ ನೀಡಲಾಗಿದೆ. ಜಿಲ್ಲೆಗೊಂದು ಗೋಶಾಲೆ ತೆರೆಯುವ ಹಿಂದಿನ ಸರ್ಕಾರದ ಯೋಜನೆಗೆ ಬ್ರೇಕ್ ಹಾಕಲಾಗಿದೆ. ಎಪಿಎಂಸಿ ಕಾಯ್ದೆ ರದ್ದು ಮಾಡುವ ಬಗ್ಗೆ ಬಜೆಟ್‌ನಲ್ಲಿ ಘೋಷಣೆ ಆಗಿದೆ. ಕೃಷಿ ಭೂಮಿ ಮಾರಾಟ ಕಾಯ್ದೆ ರದ್ದುಮಾಡುವುದಾಗಿ ಹೇಳಿದ್ದಾರೆ. ವಿವೇಕ ಶಾಲೆ ಅಭಿವೃದ್ಧಿ ಮಾಡುವ ಸ್ವಾಮಿ ವಿವೇಕಾನಂದ ಯುವ ಶಕ್ತಿ ಯೋಜನೆ ಕೈಬಿಡಲಾಗಿದೆ. ಮಹಿಳಾ ಸ್ತ್ರೀ ಸಾಮರ್ಥ್ಯ ಯೋಜನೆ ಮೂಲಕ ಮಹಿಳೆಯರ ಸ್ವಸಹಾಯ ಸಂಘಗಳಿಗೆ 5 ಲಕ್ಷ ರೂಪಾಯಿ ಸಹಾಯಧನ ನೀಡುವ ಯೋಜನೆ ರದ್ದಾಗಿದೆ. ಭೂಸಿರಿ ಯೋಜನೆ ಮೂಲಕ ರೈತರಿಗೆ 10 ಸಾವಿರ ರೂಪಾಯಿ ಕೊಡುವುದನ್ನು ನಿಲ್ಲಿಸಲಾಗಿದೆ. ಶ್ರಮಶಕ್ತಿ ಯೋಜನೆಯಲ್ಲಿ ಕೃಷಿಕ ಮಹಿಳೆಯರಿಗೆ 500 ರೂಪಾಯಿ ಪ್ರತಿ ತಿಂಗಳು ನೀಡುವುದನ್ನು ನಿಲ್ಲಿಸಲಾಗಿದೆ. ಅಗ್ನಿ ವೀರ ಯೋಜನೆಗೆ ಸೇರುವ ಎಸ್ಸಿ, ಎಸ್ಟಿ ಯುವಕರಿಗೆ ತರಬೇತಿ ನೀಡುವ ಯೋಜನೆಗೂ ಕೋಕ್ ನೀಡಲಾಗಿದೆ. ಮಕ್ಕಳ ಉಚಿತ ಬಸ್ ಯೋಜನೆ ಹಾಗು ಅಂತರಜಲ ಹೆಚ್ಚಿಸುವ ಜಲನಿಧಿ ಯೋಜನೆಯನ್ನೂ ಸಿದ್ದರಾಮಯ್ಯ ಸರ್ಕಾರ ಕೈಬಿಟ್ಟಿದೆ.
ಸಿದ್ದರಾಮಯ್ಯ ಸರ್ಕಾರದ ಹಳೇ ಯೋಜನೆಗಳಿಗೆ ಜೀವ..!
ಸರ್ಕಾರದ ಐದು ಗ್ಯಾರಂಟಿಗೆ ಹಣ ಮೀಸಲು ಇಟ್ಟಿರುವ ಸರ್ಕಾರ ಶಕ್ತಿ ಯೋಜನೆಗೆ ವಾರ್ಷಿಕ 4000 ಕೋಟಿ, ಗೃಹ ಜ್ಯೋತಿ ಯೋಜನೆಗೆ 13,900 ಕೋಟಿ, ಮೈಸೂರಲ್ಲಿ ಪಿಪಿಪಿ ಮಾದರಿಯಲ್ಲಿ ಫಿಲ್ಮ್ ಸಿಟಿ ನಿರ್ಮಾಣ, ಬೆಂಗಳೂರಲ್ಲಿ ಮತ್ತೆ ವೈಟ್ ಟಾಪಿಂಗ್ ಯೋಜನೆಗೆ 800 ಕೋಟಿ ಮೀಸಲಿಟ್ಟು ಯೋಜನೆ ಜಾರಿ ಮಾಡಲು ನಿರ್ಧಾರ ಮಾಡಲಾಗಿದೆ. ಇನ್ನು ಬೆಂಗಳೂರು ಮೂಲಸೌಕರ್ಯ ಅಭಿವೃದ್ಧಿಗೆ 12 ಸಾವಿರ ಕೋಟಿ, ನಮ್ಮ ಮೆಟ್ರೋ ಹಾಗು ಬೆಂಗಳೂರು ಉಪನಗರ ರೈಲು ಯೋಜನೆಗೆ 30 ಸಾವಿರ ಕೋಟಿ ಅನುದಾನ ಮೀಸಲಿಡಲಾಗಿದೆ. ಸಿಎಂ ತವರು ಜಿಲ್ಲೆ ಮೈಸೂರಿಗೆ ಬಜೆಟ್‌ನಲ್ಲಿ ಬಂಪರ್ ಕೊಡುಗೆ ಸಿಕ್ಕಿದ್ದು, ಮೈಸೂರಲ್ಲಿ ಚಾಮುಂಡಿ ಬೆಟ್ಟದ ಸಮಗ್ರ ಅಭಿವೃದ್ಧಿಗಾಗಿ, ಚಾಮುಂಡೇಶ್ವರಿ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ನಿರ್ಧಾರ ಮಾಡಲಾಗಿದೆ. ಅನುಗ್ರಹ ಯೋಜನೆ ಮತ್ತೊಮ್ಮೆ ಜಾರಿ ಮಾಡಲು ಸಿದ್ದರಾಮಯ್ಯ ಮುಂದಾಗಿದ್ದಾರೆ. ಕುರಿ ಮತ್ತು ಮೇಕೆಗಳು ಸತ್ತರೆ 5,000 ರೂಪಾಯಿ ಹಾಗೂ ಹಸು, ಎಮ್ಮೆ ಮತ್ತು ಎತ್ತುಗಳು ಸಾವನ್ನಪ್ಪಿದರೆ 10,000 ರೂಪಾಯಿ ಪರಿಹಾರ ನೀಡುವ ಯೋಜನೆ ಮರು ಜೀವ ಪಡೆದಿದೆ.
ಬೆಂಗಳೂರಿನಲ್ಲಿ ಬ್ಯಾಸ್ಕೆಟ್ ಬಾಲ್ ಪ್ರಾದೇಶಿಕ ಕೇಂದ್ರ ಸ್ಥಾಪನೆ, ಮೈಸೂರಿನಲ್ಲಿ ಸೈಕ್ಲೋನ್ ವೇಲೊಡ್ರಮ್ ಸ್ಥಾಪನೆಗೆ 10 ಕೋಟಿ. ಡಾ ಎಂ.ಎಂ ಕಲ್ಬುರ್ಗಿ ಅವರ ಹೆಸರಿನಲ್ಲಿ ಟ್ರಸ್ಟ್ ಸ್ಥಾಪನೆ. ಬೆಂಗಳೂರಿನ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಹೆಚ್ಚಾದ ಜನದಟ್ಟಣೆ ನಿವಾರಿಸಲು ಎಂಟು ಕಚೇರಿಗಳಿಗೆ ಮೂಲಭೂತ ಸೌಕರ್ಯ ಹಾಗು ಜನಸ್ನೇಹಿ ಕಚೇರಿಗೆ ಉನ್ನತಿಕರಣ. ಹಿಂದೂಯೇತರ ಧಾರ್ಮಿಕ ಸಂಸ್ಥೆಗಳಿಗೆ ಕರ್ನಾಟಕ ಇನಾಮ್ ರದ್ದಿಯಾತಿ ಅಧಿನಿಯಮದ ಅನ್ವಯ ನೀಡುವ ತಸ್ತಿಕ್ ಮೊತ್ತ ಹೆಚ್ಚಳ ಮಾಡಲಾಗಿದೆ. ಈ ಹಿಂದೆ ಇದ್ದ 48 ಸಾವಿರ ರೂಗಳಿಂದ 60 ಸಾವಿರಕ್ಕೆ ಹೆಚ್ಚಳ ಮಾಡಲಾಗಿದೆ. ತಸ್ತಿಕ್ ಪಡೆಯುತ್ತಿರುವ 868 ಸಂಸ್ಥೆಗಳಿಗೆ ಅನುಕೂಲ ಆಗಲಿದೆ. ಸ್ವಾವಲಂಬಿ ಸಾರಥಿ ಯೋಜನೆ ಮರು ಜಾರಿ ಮಾಡಿದ್ದು, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ನಿರುದ್ಯೋಗಿ ಯುವಕರು ನಾಲ್ಕು ಚಕ್ರಗಳ ವಾಹನ ಖರೀದಿಗೆ ಪಡೆಯುವ ಸಾಲದ ಶೇಕಡ 75 ರಷ್ಟು, ಅಥವಾ ಗರಿಷ್ಠ 4 ಲಕ್ಷ ರೂಪಾಯಿ ಸಹಾಯಧನ ನೀಡಿ, ಸ್ವಯಂ ಉದ್ಯೋಗ ಕೈಗೊಳ್ಳಲು ಯೋಜನೆ ಜಾರಿ ಮಾಡಲಾಗ್ತಿದೆ.