ಭಾರತದ ಖಾಸಗಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಇತಿಹಾಸ ನಿರ್ಮಾಣವಾಗಿದೆ. ದೇಶದ ಮೊದಲ ಖಾಸಗಿ ನಿರ್ಮಿತ ಆರ್ಬಿಟಲ್-ಕ್ಲಾಸ್ ರಾಕೆಟ್ ‘ವಿಕ್ರಮ್-1’ ಯಶಸ್ವಿಯಾಗಿ ಉಡಾವಣೆಯಾದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸ್ಕೈರೂಟ್ ಏರೋಸ್ಪೇಸ್ ಸಂಸ್ಥಾಪಕರಾದ ಪವನ್ ಕುಮಾರ್ ಚಂದನ ಮತ್ತು ನಾಗ ಭರತ್ ಡಾಕಾ ಅವರಿಗೆ ದೂರವಾಣಿ ಕರೆ ಮಾಡಿ ಅಭಿನಂದನೆ ಸಲ್ಲಿಸಿದರು.
ಈ ಸಾಧನೆ ಭಾರತದ ವಿಜ್ಞಾನಿಗಳ ಪ್ರತಿಭೆ, ತಾಂತ್ರಿಕ ಸಾಮರ್ಥ್ಯ ಹಾಗೂ ಖಾಸಗಿ ಬಾಹ್ಯಾಕಾಶ ವಲಯದ ಬೆಳವಣಿಗೆಗೆ ಸಾಕ್ಷಿಯಾಗಿದೆ ಎಂದು ಪ್ರಧಾನಿ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಯಶಸ್ಸು ದೇಶದ ಬಾಹ್ಯಾಕಾಶ ಕನಸುಗಳಿಗೆ ಹೊಸ ಬಲ ನೀಡುವುದರ ಜೊತೆಗೆ ಯುವ ವಿಜ್ಞಾನಿಗಳು ಮತ್ತು ಉದ್ಯಮಿಗಳಿಗೆ ಸ್ಫೂರ್ತಿಯಾಗಲಿದೆ ಎಂದು ಹೇಳಿದರು.

ಸಂಸ್ಥಾಪಕರೊಂದಿಗೆ ಮಾತನಾಡಿದ ಪ್ರಧಾನಿ, “ನೀವು ಕೇವಲ ಬಾಹ್ಯಾಕಾಶಕ್ಕೆ ರಾಕೆಟ್ ಉಡಾಯಿಸಿಲ್ಲ, ಭವಿಷ್ಯದ ಪೀಳಿಗೆಗೆ ಕನಸು ಕಾಣುವ ಧೈರ್ಯವನ್ನೂ ನೀಡಿದ್ದೀರಿ. ದೇಶದ ಯುವಕರಿಗೆ ನೀವು ಹೊಸ ದಾರಿಯನ್ನು ತೋರಿಸಿದ್ದೀರಿ,” ಎಂದು ಪ್ರಶಂಸಿಸಿದರು.
ರಾಕೆಟ್ ಉಡಾವಣೆಯನ್ನು ತಾವು ಕೂಡ ಅತ್ಯಂತ ಕುತೂಹಲದಿಂದ ಗಮನಿಸುತ್ತಿದ್ದೆ ಎಂದು ಹೇಳಿದ ಪ್ರಧಾನಿ, “ನಾನೂ ಆ ಯುವ ವಿಜ್ಞಾನಿಗಳ ತಂಡದೊಂದಿಗೆ ಅಲ್ಲಿಯೇ ಇರಬೇಕೆಂದು ಬಯಸಿದ್ದೆ. ನಿಮ್ಮ ಈ ಸಾಧನೆ ಇಡೀ ದೇಶಕ್ಕೆ ಹೆಮ್ಮೆ ತಂದಿದೆ,” ಎಂದು ಹೇಳಿದರು.
ಶನಿವಾರ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಸ್ಕೈರೂಟ್ ಏರೋಸ್ಪೇಸ್ ಅಭಿವೃದ್ಧಿಪಡಿಸಿದ ‘ವಿಕ್ರಮ್-1’ ರಾಕೆಟ್ ಯಶಸ್ವಿಯಾಗಿ ಉಡಾವಣೆಯಾಯಿತು. ‘ಮಿಷನ್ ಆಗಮನ್’ ಹೆಸರಿನ ಈ ಕಾರ್ಯಾಚರಣೆಯು ಭಾರತದ ಖಾಸಗಿ ಬಾಹ್ಯಾಕಾಶ ಉದ್ಯಮಕ್ಕೆ ಜಾಗತಿಕ ಮಟ್ಟದಲ್ಲಿ ಹೊಸ ಗುರುತನ್ನು ತಂದಿದೆ. ಇದರಿಂದ ಸ್ವತಂತ್ರವಾಗಿ ಕಕ್ಷೀಯ ರಾಕೆಟ್ ಅಭಿವೃದ್ಧಿಪಡಿಸಿ ಯಶಸ್ವಿಯಾಗಿ ಉಡಾವಣೆ ಮಾಡಿದ ದೇಶಗಳ ಸಾಲಿನಲ್ಲಿ ಭಾರತವೂ ಸ್ಥಾನ ಪಡೆದಿದೆ.

ಉಡಾವಣೆಯ ಕೊನೆಯ ಹಂತದಲ್ಲಿ ಸಣ್ಣ ತಾಂತ್ರಿಕ ತಪಾಸಣೆಯಿಂದ ಕೆಲಕಾಲ ವಿಳಂಬವಾದರೂ, ಬಳಿಕ ರಾಕೆಟ್‌ನ ಎಲ್ಲಾ ಹಂತಗಳು ಯೋಜನೆಯಂತೆ ಕಾರ್ಯನಿರ್ವಹಿಸಿದವು. ಹಂತಗಳ ಬೇರ್ಪಡೆ ಸೇರಿದಂತೆ ಸಂಪೂರ್ಣ ಕಾರ್ಯಾಚರಣೆ ಯಶಸ್ವಿಯಾಗಿ ಪೂರ್ಣಗೊಂಡಿತು.ಸುಮಾರು ಏಳು ಮಹಡಿಗಳಷ್ಟು ಎತ್ತರದ ವಿಕ್ರಮ್-1 ಸಂಪೂರ್ಣ ಕಾರ್ಬನ್ ಕಾಂಪೋಸಿಟ್‌ನಿಂದ ನಿರ್ಮಿತ ಬಹು-ಹಂತದ ಉಡಾವಣಾ ವಾಹನವಾಗಿದ್ದು, 350 ಕೆಜಿವರೆಗೆ ತೂಕದ ಉಪಗ್ರಹಗಳನ್ನು ಭೂಮಿಯ ಕೆಳ ಕಕ್ಷೆಗೆ (LEO) ಸಾಗಿಸುವ ಸಾಮರ್ಥ್ಯ ಹೊಂದಿದೆ. 3D ಪ್ರಿಂಟೆಡ್ ರಾಕೆಟ್ ಎಂಜಿನ್‌ಗಳು ಹಾಗೂ ಸಂಪೂರ್ಣ ಸ್ವದೇಶಿ ಪ್ರೊಪಲ್ಷನ್ ತಂತ್ರಜ್ಞಾನ ಇದರ ವಿಶೇಷತೆ.
ಈ ಮೊದಲ ಪ್ರಾಯೋಗಿಕ ಹಾರಾಟದಲ್ಲಿ ಗ್ರಾಹಾ ಸ್ಪೇಸ್, ಕಾಸ್ಮೋಸರ್ವ್, ಡಿಕ್ಯೂಬ್ಡ್ ಸಂಸ್ಥೆಗಳ ತಂತ್ರಜ್ಞಾನ ಪ್ರದರ್ಶನ ಪೇಲೋಡ್‌ಗಳ ಜೊತೆಗೆ ಸ್ಕೈರೂಟ್‌ನ SCOPE ಪ್ರಯೋಗೋಪಕರಣಗಳನ್ನೂ ಯಶಸ್ವಿಯಾಗಿ ಬಾಹ್ಯಾಕಾಶಕ್ಕೆ ಕೊಂಡೊಯ್ಯಲಾಯಿತು.ಇದಲ್ಲದೆ ಪ್ರಧಾನಿ ನರೇಂದ್ರ ಮೋದಿ ಅವರು ಕೈಬರಹದಲ್ಲಿ ಬರೆದ “ವಂದೇ ಮಾತರಂ” ಪೋಸ್ಟ್‌ಕಾರ್ಡ್, ಇಸ್ರೋದ ಹಾಲಿ ಮತ್ತು ಮಾಜಿ ಅಧ್ಯಕ್ಷರು, ಭಾರತೀಯ ಗಗನಯಾತ್ರಿಗಳು, ಸ್ಕೈರೂಟ್ ಉದ್ಯೋಗಿಗಳು, ಹೂಡಿಕೆದಾರರು ಹಾಗೂ ವಿಶ್ವದಾದ್ಯಂತದ ಬೆಂಬಲಿಗರ ಹಸ್ತಾಕ್ಷರಗಳನ್ನು ಒಳಗೊಂಡ ವಿಶೇಷ ಸಾಂಕೇತಿಕ ಪೇಲೋಡ್‌ಗಳೂ ಈ ಐತಿಹಾಸಿಕ ಹಾರಾಟದ ಭಾಗವಾಗಿದ್ದವು. ಭಾರತದ ಖಾಸಗಿ ಬಾಹ್ಯಾಕಾಶ ಕ್ಷೇತ್ರದ ಬೆಳವಣಿಗೆಯಲ್ಲಿ ಈ ಯಶಸ್ಸು ಮಹತ್ವದ ಮೈಲಿಗಲ್ಲಾಗಿ ದಾಖಲಾಗಿದೆ.






