ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನೂ ದಿನಾಂಕವೇ ಘೋಷಣೆಯಾಗಿಲ್ಲ. ಆದರೆ ಅಷ್ಟರಲ್ಲಾಗಲೇ ಚುನಾವಣೆಯಲ್ಲಿ ಯಾರು ಗೆಲ್ಲಬಹುದು..? ಸ್ವತಂತ್ರ ಪಕ್ಷ ಅಧಿಕಾರಕ್ಕೆ ಬರುತ್ತಾ..? ಅಥವಾ ಸಮ್ಮಿಶ್ರ ಸರ್ಕಾರ ರಚನೆಯಾಗುತ್ತಾ..? ಹೀಗೆ ನಾನಾ ಪ್ರಶ್ನೆಗಳು ಜನತೆಯಲ್ಲಿ ಮೂಡುತ್ತಿದೆ. ಈ ಬಾರಿ ರಾಜ್ಯದ ಜನತೆ ಯಾವ ಪಕ್ಷದ ಪರ ಒಲವು ತೋರುತ್ತಾರೆ ಅನ್ನೋದು ಮಿಲಿಯನ್ ಡಾಲರ್ ಪ್ರಶ್ನೆಯಾಗಿ ಪರಿಣಮಿಸಿದೆ.
ರಾಜ್ಯದಲ್ಲಿ ಬಿಜೆಪಿ ಸರ್ಕಾರವನ್ನು ಉಳಿಸಿಕೊಳ್ಳಲು ಪಣ ತೊಟ್ಟಿರುವ ದೆಹಲಿ ಬಿಜೆಪಿ ನಾಯಕರು ಒಬ್ಬರಾದ ಮೇಲೊಬ್ಬರಂತೆ ರಾಜ್ಯಕ್ಕೆ ಭೇಟಿ ನೀಡುತ್ತಲೇ ಇದ್ದಾರೆ . ಕೆಲವೇ ಕೆಲವು ದಿನಗಳ ಹಿಂದೆಯಷ್ಟೇ ಕಂದಾಯ ಸಚಿವ ಆರ್.ಅಶೋಕ್ ಚುನಾವಣೆ ಮುಗಿಯುವವರೆಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಬೆಂಗಳೂರಿನಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ ಅಂತಾ ಸಹ ಹೇಳಿದ್ದರು. ಅಷ್ಟರಮಟ್ಟಿಗೆ ಬಿಜೆಪಿಯು ರಾಜ್ಯದಲ್ಲಿ ಸರ್ಕಾರವನ್ನು ಉಳಿಸಿಕೊಳ್ಳುವ ಪ್ರಯತ್ನದಲ್ಲಿದೆ.
ಆದರೆ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಗೆಲುವಿಗೆ ಅಡ್ಡಗಾಲು ಹಾಕುವಂತಹ ಸಾಕಷ್ಟು ವಿಚಾರಗಳಿವೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದ ಕೆಲವು ಲೋಪದೋಷಗಳು ಬಿಜೆಪಿಯನ್ನು ಗೆಲುವಿನಿಂದ ದೂರ ಮಾಡಬಹುದು ಅಂತಾ ಸಹ ಹೇಳಲಾಗುತ್ತಿದೆ. ಹಾಗಾದರೆ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಗೆ ಸವಾಲು ಎನಿಸುವ ವಿಚಾರಗಳು ಯಾವುದು ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.
ಯಡಿಯೂರಪ್ಪರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿದ್ದು : ಬಿಜೆಪಿಯು ಹಿಂದುತ್ವ ಅಜೆಂಡಾದ ಮೂಲಕ ಜನರನ್ನು ಸಂಪಾದಿಸಿದೆ ಎಂಬುದು ಒಂದು ಲೆಕ್ಕವಾದರೆ ಉತ್ತರ ಕರ್ನಾಟಕ ಭಾಗಗಳಲ್ಲಿ ಲಿಂಗಾಯತ ಮತಗಳ ಮೂಲಕವೇ ಬಿಜೆಪಿ ತನ್ನ ಅಸ್ತಿತ್ವ ಉಳಿಸಿಕೊಂಡಿದೆ ಎಂಬ ಮಾತನ್ನೂ ಸಹ ತಳ್ಳಿ ಹಾಕುವಂತಿಲ್ಲ. ಬಿಜೆಪಿಯಲ್ಲಿ ಹಳೆ ತಲೆಮಾರುಗಳನ್ನು ಪಕ್ಕಕ್ಕೆ ಸರಿಸಿ ಹೊಸ ಮುಖಗಳಿಗೆ ಅವಕಾಶ ನೀಡುವ ಪ್ರಯತ್ನ ನಡೆಯುತ್ತಿದೆ. ಆದರೆ ಯಡಿಯೂರಪ್ಪ ತಮ್ಮದೇ ಆದ ಪ್ರತ್ಯೇಕ ಅಭಿಮಾನಿಗಳನ್ನು ಹೊಂದಿದ್ದಾರೆ. ಹೀಗಾಗಿ ಸದ್ಯ ಲಿಂಗಾಯತ ಸಿಎಂ ರಾಜ್ಯದಲ್ಲಿ ಅಧಿಕಾರದಲ್ಲಿದ್ದರೂ ಸಹ ಯಡಿಯೂರಪ್ಪ ನೇಪಥ್ಯಕ್ಕೆ ಸರಿದಿರೋದು ಬಿಜೆಪಿಗೆ ಹೊಡೆತ ಕೊಡುವ ಸಾಧ್ಯತೆಯಿದೆ.
ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ : ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲೂಕಿನ ಬೆಳ್ಳಾರೆ ಎಂಬಲ್ಲಿ ನಡೆದ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣವು ಕರಾವಳಿ ಜಿಲ್ಲೆಯ ಜನತೆಗೆ ಬಿಜೆಪಿಯ ಮೇಲೆ ಆಕ್ರೋಶ ಹುಟ್ಟುವಂತೆ ಮಾಡಿತ್ತು. ಶಿವಮೊಗ್ಗ ಹರ್ಷ ಕೊಲೆ ಪ್ರಕರಣ ಮಾಸುವ ಮುನ್ನವೇ ನಡೆದಿದ್ದ ಈ ಕೊಲೆ ಕರಾವಳಿಗರ ಆಕ್ರೋಶ ಏನು ಅನ್ನೋದನ್ನು ತೋರಿಸಿಕೊಟ್ಟಿತ್ತು. ಅನೇಕರು ಬಿಜೆಪಿ ಕಾರ್ಯಕರ್ತ ಸ್ಥಾನದಿಂದ ಹಿಂದೆ ಸರಿದಿದ್ದರು. ಹೀಗಾಗಿ ಈ ಪ್ರಕರಣ ಕೂಡ ಬಿಜೆಪಿಗೆ ಮುಳುವಾಗುವ ಸಾಧ್ಯತೆಯಿದೆ.
40 ಪರ್ಸೆಂಟ್ ಸರ್ಕಾರ ಆರೋಪ : ಬಿಜೆಪಿ ಸರ್ಕಾರದ ವಿರುದ್ಧ ಕೇಳಿ ಬಂದಿರುವ ಭ್ರಷ್ಟಾಚಾರದ ಆರೋಪಗಳು ಕೂಡ ಚುನಾವಣೆಯ ಸಂದರ್ಭದಲ್ಲಿ ಸವಾಲು ಎನಿಸುವ ಸಾಧ್ಯತೆಯಿದೆ. ಗುತ್ತಿಗೆದಾರ ಸಂತೋಷ್ ಕುಮಾರ್ ಆತ್ಮಹತ್ಯೆ ಪ್ರಕರಣದಲ್ಲಿ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಕ್ಲೀನ್ ಚಿಟ್ ಪಡೆದಿದ್ದರೂ ಸಹ ಬಿಜೆಪಿ ಸರ್ಕಾರದ ಮೇಲಿನ 40 ಪರ್ಸೆಂಟ್ ಸರ್ಕಾರದ ಆರೋಪ ಹಾಗೂ ಬಿಟ್ಕಾಯಿನ್ ದಂಧೆ ಇವೆಲ್ಲವೂ ಬಿಜೆಪಿ ಸರ್ಕಾರದ ವೈಫಲ್ಯಗಳಾಗಿದೆ.
ಪಿಎಸ್ಐ ಅಕ್ರಮ ನೇಮಕಾತಿ ಪ್ರಕರಣ : ಪಿಎಸ್ಐ ನೇಮಕಾತಿ ಪ್ರಕ್ರಿಯೆಯಲ್ಲಿ ನಡೆದ ಅಕ್ರಮವಂತೂ ಬಿಜೆಪಿ ಸರ್ಕಾರಕ್ಕೆ ಭಾರೀ ಮುಖಭಂಗ ಉಂಟಾಗುವಂತೆ ಮಾಡಿತ್ತು. ಪೊಲೀಸ್ ಉನ್ನತಾಧಿಕಾರಿಗಳು ಮಾಡಿದ ತಪ್ಪಿಗೆ ಪ್ರಾಮಾಣಿಕತೆಯಿಂದ ಪರೀಕ್ಷೆ ಬರೆದು ಪಾಸಾಗಿದ್ದ ಅಭ್ಯರ್ಥಿಗಳೂ ಸಹ ತಲೆದಂಡ ತೆರುವಂತೆ ಮಾಡಿತ್ತು. ಇದು ಬಿಜೆಪಿ ಸರ್ಕಾರದ ಬಹುದೊಡ್ಡ ವೈಫಲ್ಯವಾಗಿದೆ.ಇದರ ಜೊತೆಯಲ್ಲಿ ಅಸಿಸ್ಟಂಟ್ ಪ್ರೊಫೆಸರ್ಗಳ ನೇಮಕಾತಿಯಲ್ಲಿ ನಡೆದ ಅಕ್ರಮವನ್ನೂ ಮರೆಯುವಂತಿಲ್ಲ.
ಇದರ ಜೊತೆಯಲ್ಲಿ ನೆರೆ ಪರಿಹಾರವನ್ನು ನಿಭಾಯಿಸುವಲ್ಲಿ ಬಿಜೆಪಿ ಸರ್ಕಾರ ಎಡವಿದ್ದು, ರಾಜ್ಯದ ಜನತೆ ಮನೆ, ಬೆಳೆ, ಮೂಲ ಸೌಕರ್ಯ ಎಲ್ಲವನ್ನೂ ಕಳೆದುಕೊಂಡ ದೆಹಲಿಯ ಬಿಜೆಪಿ ನಾಯಕರು ಕನಿಕರಕ್ಕೂ ಕರ್ನಾಟಕದ ಕಡೆಗೆ ಮುಖ ಮಾಡದೇ ಇದ್ದದ್ದು ಇವೆಲ್ಲವನ್ನೂ ರಾಜ್ಯದ ಜನತೆ ಮರೆತಂತೆ ಕಾಣುತ್ತಿಲ್ಲ. ಇದರ ಜೊತೆಯಲ್ಲಿ ಹಿಜಾಬ್ ಪ್ರಕರಣ , ಆಝಾನ್ ವಿವಾದ, ಹಲಾಲ್ ವಿವಾದಗಳನ್ನು ನಿಭಾಯಿಸುವಲ್ಲಿ ಸರ್ಕಾರ ಎಡವಿದ್ದು ಬಿಜೆಪಿಗೆ ಚುನಾವಣೆಯಲ್ಲಿ ದೊಡ್ಡ ಮಟ್ಟದ ಸವಾಲಾಗಿ ಪರಿಣಮಿಸುವ ಸಾಧ್ಯತೆಯಿದೆ ಎಂದು ರಾಜಕೀಯ ತಜ್ಞರು ಅಂದಾಜಿಸಿದ್ದಾರೆ.