ಸುಭಾಷ್ ಚಂದ್ರ ಬೋಸ್ ಅವರನೇ 124ನೇ ಜನ್ಮದಿನಾಚರಣೆಯಂದು ಕೊಲ್ಕತ್ತಾದಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮದಲ್ಲಿ ಬಿಜೆಪಿ ಕಾರ್ಯಕರ್ತರು ಜೈ ಶ್ರೀರಾಮ್ ಘೋಷಣೆಯನ್ನು ಕೂಗಿದ್ದ ವಿವಾದಕ್ಕೆ ಎಡೆ ಮಾಡಿಕೊಟ್ಟಿತ್ತು. ಕಾರ್ಯಕ್ರಮಕ್ಕೆ ಅತಿಥಿಯಾಗಿ ಕರೆದು ಈ ರೀತಿ ಅವಮಾನ ಮಾಡುವುದು ಸರಿಯಲ್ಲ ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ವೇದಿಕೆಯನ್ನು ಬಿಟ್ಟು ಇಳಿದಿದ್ದರು ಕೂಡಾ. ಇದರ ಕುರಿತಾಗಿ RSS ಪ್ರತಿಕ್ರಿಯೆ ನೀಡಿದ್ದು, ಈ ಘೋಷಣೆಗಳನ್ನು RSS ಬೆಂಬಲಿಸುವುದಿಲ್ಲ ಎಂದು ಹೇಳಿದೆ.
ಪಶ್ಚಿಮ ಬಂಗಾಳ ಆರ್ಎಸ್ಎಸ್ನ ಪ್ರಧಾನ ಕಾರ್ಯದರ್ಶಿಯಾಗಿರುವ ಜಿಷ್ಣು ಬಸು ಅವರು ಮಾತನಾಡಿ, ನೇತಾಜಿ ಅವರನ್ನು ಸ್ಮರಿಸಲು ಆಯೋಜಿಸಿದ್ದ ಸರ್ಕಾರಿ ಕಾರ್ಯಕ್ರಮದಲ್ಲಿ ʼಜೈ ಶ್ರೀರಾಮ್ʼ ಘೋಷಣೆಯನ್ನು ಕೂಗಿದ್ದುಸರಿಯಲ್ಲ ಎಂಬ ಭಾವನೆಯನ್ನು ಆರ್ಎಸ್ಎಸ್ ಹೊಂದಿದೆ, ಎಂದಿದ್ದಾರೆ.
“ಈ ಘಟನೆಯಿಂದಾಗಿ ನಾವು ಬೇಸಗೊಂಡಿದ್ದೇವೆ. ಘೋಷಣೆ ಕೂಗಿದವರು, ನೇತಾಜಿಗೂ ಗೌರವ ತೋರಲಿಲ್ಲ, ಶ್ರೀರಾಮನಿಗೂ ಗೌರವ ತೋರಲಿಲ್ಲ. ಈ ಘೋಷಣೆಗಳನ್ನು ಕೂಗಿದವರನ್ನು ಬಿಜೆಪಿಯು ತಕ್ಷಣವೇ ಪತ್ತೆ ಹಚ್ಚಬೇಕು,” ಎಂದು ಹೇಳಿದ್ದಾರೆ.
ಸರ್ಕಾರಿ ಕಾರ್ಯಕ್ರಮದಲ್ಲಿ ಜೈ ಶ್ರೀರಾಮ್ ಘೋಷಣೆ ಕೂಗಿದ್ದನ್ನು ಸಿಎಂ ಮಮತಾ ಬ್ಯಾನರ್ಜಿ ತಮಗೆ ಸಾಧಕವಾಗುವಂತೆ ಬಳಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಮುಂಬರುವ ಪಶ್ಚಿಮ ಬಂಗಾಳ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಪ್ರಧಾನಿ ಮೋದಿಯವರು ಸರ್ಕಾರಿ ಕಾರ್ಯಕ್ರಮವನ್ನು ಕೊಲ್ಕತ್ತಾದಲ್ಲಿ ಆಯೋಜಿಸಲು ನಿರ್ಧರಿಸಿದ್ದರು. ಈ ಕಾರ್ಯಕ್ರಮದ ಮೂಲಕ, ಜನರನ್ನು ತಮ್ಮತ್ತ ಸೆಳೆಯುವ ಕಾರ್ಯಯೋಜನೆ ರೂಪಿತವಾಗಿತ್ತು. ಆದರೆ, ಬಿಜೆಪಿ ಬೆಂಬಲಿಗರು ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದ್ದರಿಂದ ಎಲ್ಲಾ ಯೋಜನೆಗಳು ಪ್ರಧಾನಿ ಆಶಯಕ್ಕೆ ಉಲ್ಟಾ ಹೊಡೆದಿವೆ ಎಂದು ವಿಶ್ಲೇಷಿಸಲಾಗುತ್ತದೆ.
ಸಿಎಂ ಮಮತಾ ಬ್ಯಾನರ್ಜಿ ಅವರನ್ನು ವೇದಿಕೆಗೆ ಕರೆಯುವಾಗ ಜೈ ಶ್ರೀರಾಮ್ ಎಂಬ ಘೋಷಣೆ ಕೂಗಿದ್ದರಿಂದ, ಅವರು ಮಾತನಾಡಲು ನಿರಾಕರಿಸಿದರು. “ಸರ್ಕಾರಿ ಕಾರ್ಯಕ್ರಮಗಳಿಗೆ ಅದರದ್ದೇ ಆದ ಗೌರವ ಇರಬೇಕು. ಇದು ಒಂದು ರಾಜಕೀಯ ಪಕ್ಷದ ಕಾರ್ಯಕ್ರಮವಲ್ಲ. ಇದು ಎಲ್ಲಾ ಪಕ್ಷಗಳ ಮತ್ತು ಸಾರ್ವಜನಿಕರ ಕಾರ್ಯಕ್ರಮ,” ಎಂದಿದ್ದರು.