ಬೆದರಿಕೆ, ಬ್ಲಾಕ್‌ಮೇಲ್ ಮೂಲಕ ವಿಪಕ್ಷ ನಾಯಕರನ್ನು ಬಿಜೆಪಿ ತನ್ನ ಪಾಳೆಯಕ್ಕೆ ಸೇರಿಸಿಕೊಳ್ಳುತ್ತಿದೆ ಎಂಬ ಆರೋಪದ ನಡುವೆಯೂ ಬಿಜೆಪಿ ತನ್ನ ಕೆಟ್ಟ ಪರಂಪರೆಯನ್ನು ನಿಲ್ಲಿಸಿಲ್ಲ. ಪಶ್ಚಿಮ ಬಂಗಾಳದಲ್ಲಿ ಹೇಗಾದರೂ ಗದ್ದುಗೆ ಹಿಡಿಯಬೇಕೆಂಬ ಪಣ ತೊಟ್ಟಿರುವ ಬಿಜೆಪಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿಯಿಂದ ಮತ್ತೆ ಐವರು ಶಾಸಕರನ್ನು ತನ್ನೆಡೆಗೆ ಸೆಳೆದಿದೆ.
ಮಹತ್ವದ ಬೆಳವಣಿಗೆಯೊಂದರಲ್ಲಿ, ತೃಣಮೂಲ ಕಾಂಗ್ರೆಸ್ ನ ಐದು ಮಂದಿ ಹಾಲಿ ಶಾಸಕರು ಮತ್ತು ಹಬೀಪುರದಿಂದ ಟಿಎಂಸಿಯಿಂದ ಟಿಕೆಟ್ ಪಡೆದ ಪಕ್ಷದ ಅಭ್ಯರ್ಥಿಯೊಬ್ಬರು ಸೋಮವಾರ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.

ಪಶ್ಚಿಮ ಬಂಗಾಳದ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್, ಪಕ್ಷದ ಉಪಾಧ್ಯಕ್ಷ ಮುಕುಲ್ ರಾಯ್ ಮತ್ತು ಪಕ್ಷದ ಮುಖಂಡ ಸುವೇಂದು ಅಧಿಕಾರಿಯವರ ಸಮ್ಮುಖದಲ್ಲಿ ಟಿಎಂಸಿ ಶಾಸಕರಾದ ಸೋನಾಲಿ ಗುಹಾ, ದೀಪೇಂಡು ಬಿಸ್ವಾಸ್, ರವೀಂದ್ರನಾಥ್ ಭಟ್ಟಾಚಾರ್ಯ, ಸಿತಾಲ್ ಕುಮಾರ್ ಸರ್ದಾರ್ ಮತ್ತು ಜತು ಲಾಹಿರಿ ಬಿಜೆಪಿಗೆ ಸೇರಿದ್ದಾರೆ. ಈ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದ ಅಭ್ಯರ್ಥಿಗಳ ಪಟ್ಟಿಯಲ್ಲಿ ತನ್ನ ಹೆಸರನ್ನು ಉಲ್ಲೇಖಿಸಲಾಗಿದೆ ಎಂಬ ಅಂಶವನ್ನು ತಿಳಿಸಿದ್ದರೂ ಕೂಡಾ ಹಬೀಪುರದಿಂದ ಸ್ಪರ್ಧಿಸಲು ಪಕ್ಷದ ಟಿಕೆಟ್ ನೀಡಿದ್ದ ಟಿಎಂಸಿ ನಾಯಕಿ ಸರಲಾ ಮುರ್ಮು ಬಿಜೆಪಿಗೆ ಸೇರಿದ್ದಾರೆ.
ಕಳೆದ ಕೆಲವು ತಿಂಗಳುಗಳಲ್ಲಿ ನಿರಂತರವಾಗಿ ಪಶ್ಚಿಮ ಬಂಗಾಳದಲ್ಲಿ ಟಿಎಂಸಿಯಿಂದ ಬಿಜೆಪಿಗೆ ನಾಯಕರ ವಲಸೆ ನಡೆಯುತ್ತಿದೆ. ಸುವೆಂದು ಅಧಿಕಾರಿ, ದಿನೇಶ್ ತ್ರಿವೇದಿ, ಮಿಥುನ್ ಚಕ್ರವರ್ತಿ ಮೊದಲಾದ ಪ್ರಭಾವಿ ನಾಯಕರನ್ನೇ ಬಿಜೆಪಿ ತನ್ನೆಡೆಗೆ ಸೆಳೆದುಕೊಂಡಿರುವುದು ಮಮತಾ ಬ್ಯಾನರ್ಜಿಗೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆ ಇದೆಯೆಂದು ವಿಶ್ಲೇಷಿಸಲಾಗಿದೆ.
ಏತನ್ಮಧ್ಯೆ, ಮುಂಬರುವ ವಿಧಾನಸಭಾ ಚುನಾವಣೆಗೆ 291 ಅಭ್ಯರ್ಥಿಗಳ ಪಟ್ಟಿಯನ್ನು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಶುಕ್ರವಾರ ಬಿಡುಗಡೆ ಮಾಡಿದ್ದಾರೆ.

ಇದರ ಬೆನ್ನಲ್ಲೇ ಬಿಜೆಪಿ ತನ್ನ 57 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಶನಿವಾರ ಬಿಡುಗಡೆ ಮಾಡಿದೆ. ಮತ್ತು ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ವಿರುದ್ಧ ನಂದಿಗ್ರಾಮ್‌ನಿಂದ ಸುವೆಂದು ಅಧಿಕಾರಿಯನ್ನು ಕಣಕ್ಕಿಳಿಸಿ, ಚುನಾವಣಾ ಕಾವನ್ನು ಏರಿಸಿದೆ.
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ಮಾರ್ಚ್ 27 ರಿಂದ ಎಂಟು ಹಂತಗಳಲ್ಲಿ ನಡೆಯಲಿದ್ದು, ಅಂತಿಮ ಸುತ್ತಿನ ಮತದಾನ ಏಪ್ರಿಲ್ 29 ರಿಂದ ನಡೆಯಲಿದೆ. ಮತ ಎಣಿಕೆ ಮೇ 2 ರಂದು ನಡೆಯಲಿದೆ.







