2005 ರಲ್ಲಿ ತುಮಕೂರಿನಲ್ಲಿ ಬೃಹತ್ ಅಹಿಂದ ಸಮಾವೇಶವನ್ನು ಏರ್ಪಾಡು ಮಾಡಿದ್ದೆವು. ಅದಾದ ನಂತರ ಇದೇ ಮೊದಲ ಬಾರಿಗೆ ದೊಡ್ಡ ಮಟ್ಟದಲ್ಲಿ ಒಂದು ಜಾತಿಯ ಸಮಾವೇಶ ಇಂದು ನಡೆಯುತ್ತಿರೋದು ಸಂತಸದ ವಿಚಾರ. ಸಮಾಜದ ಎಲ್ಲ ಜಾತಿಯ ಜನರು ರಾಜಕೀಯವಾಗಿ ಜಾಗೃತರಾಗಬೇಕಿರುವುದು ಅವಶ್ಯ. ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತ ಸಮಾಜದ ಜನ ಶತಮಾನಗಳಿಂದ ಅವಕಾಶ ವಂಚಿತವಾಗಿದ್ದಾರೆ. ದೇಶದ ಸಂಪತ್ತು ಮತ್ತು ಅಧಿಕಾರ ಎಲ್ಲಾ ಜಾತಿ, ಧರ್ಮಗಳ ಜನರಿಗೆ ಸಮಾನವಾಗಿ ಹಂಚಿಕೆಯಾಗಬೇಕು ಎಂದು ಹೇಳಿದ್ದಾರೆ.
ತುಮಕೂರಿನಲ್ಲಿ ಇಂದು ಆಯೋಜಿಸಿದ್ದ ಕುರುಬ ಸಮುದಾಯದ ಜಾಗೃತಿ ಸಮಾವೇಶದಲ್ಲಿ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಮಾತನಡಿ, ಸ್ವತಂತ್ರ ಭಾರತದಲ್ಲಿ ಅಧಿಕಾರ ಕೇವಲ ಬಲಾಢ್ಯರ ಕೈಲಿರಬಾರದು, ಒಂದು ವೇಳೆ ಅಧಿಕಾರ ಬಲಾಢ್ಯರಿಗೆ ಸೀಮಿತವಾದರೆ ಶೋಷಿತ ಜನರಿಗೆ ನ್ಯಾಯ ಸಿಗುವುದು ಅಸಾಧ್ಯ ಎಂದು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಹೇಳಿದ್ದರು. ಇದೇ ಕಾರಣಕ್ಕಾಗಿ ನಾನು ಮುಖ್ಯಮಂತ್ರಿ ಆದ ನಂತರ ಸಮಾಜದ ಎಲ್ಲಾ ಜಾತಿಯ ಬಡವರಿಗೆ ಆರ್ಥಿಕವಾಗಿ, ಸಾಮಾಜಿಕವಾಗಿ ಶಕ್ತಿ ತುಂಬುವ ಕೆಲಸ ಮಾಡಿದೆ. ಅನ್ನಭಾಗ್ಯ, ಕ್ಷೀರಭಾಗ್ಯ, ಕೃಷಿಭಾಗ್ಯ, ಶಾದಿಭಾಗ್ಯ, ಪಶುಭಾಗ್ಯ, ವಿದ್ಯಾಸಿರಿ, ಇಂದಿರಾ ಕ್ಯಾಂಟೀನ್ ಮುಂತಾದವುಗಳ ಮೂಲಕ ಬಡವರ ಸಬಲೀಕರಣಕ್ಕಾಗಿ ದುಡಿದಿದ್ದೆ. ಅನ್ನಭಾಗ್ಯದ ಮೂಲಕ ಎಲ್ಲ ಜಾತಿಗಳ 4 ಕೋಟಿ 30 ಲಕ್ಷ ಬಡ ಜನರಿಗೆ ತಲಾ ಏಳು ಕೆ.ಜಿ ಅಕ್ಕಿಯನ್ನು ಉಚಿತವಾಗಿ ಕೊಟ್ಟಿದ್ದೆ ಎಂದರು.
1983 ರಲ್ಲಿ ನಾನು ಪಕ್ಷೇತರ ಶಾಸಕನಾಗಿ ಆಯ್ಕೆಯಾಗಿ, ನಂತರ ಕನ್ನಡ ಕಾವಲು ಸಮಿತಿಯ ಅಧ್ಯಕ್ಷನಾಗಿ, ರೇಷ್ಮೆ ಸಚಿವನಾಗಿ, ಪಶು ಸಂಗೋಪನೆ ಸಚಿವನಾಗಿ, ಸಾರಿಗೆ ಸಚಿವನಾಗಿ, ಹಣಕಾಸು ಮಂತ್ರಿಯಾಗಿ, ಕಾರ್ಮಿಕ ಸಚಿವನಾಗಿ, ಉಪಮುಖ್ಯಮಂತ್ರಿಯಾಗಿ, ಮುಖ್ಯಮಂತ್ರಿಯಾಗಿ ಆಡಳಿತ ಮಾಡಿದ್ದೇನೆ. ನನಗೆ ಈ ಎಲ್ಲಾ ಅಧಿಕಾರ ಸಿಗಲು ಈ ಸಮಾಜದ ಕೆಳವರ್ಗದ ಜನರು ಕಾರಣ. ಹೀಗಾಗಿ ಅಧಿಕಾರ ಸಿಕ್ಕಾಗೆಲ್ಲಾ ಈ ಜನರ ಋಣ ತೀರಿಸುವ ಕೆಲಸ ಮಾಡಿದ್ದೇನೆ ಎಂದು ಹೇಳಿದ್ದಾರೆ.
ಕೆಲವು ರಾಜಕೀಯ ವಿರೋಧಿಗಳು ಸಿದ್ದರಾಮಯ್ಯ ಕುರುಬ ಸಮುದಾಯಕ್ಕೆ ಏನು ಮಾಡಿದ್ದಾರೆ ಎಂದು ಪ್ರಶ್ನೆ ಮಾಡ್ತಾರೆ. ನಾನು ಕುರುಬ ಸಮುದಾಯದಲ್ಲಿ ಹುಟ್ಟಿದ್ದೇನೆ, ನಮ್ಮಂತೆ ಸಮಾಜದಲ್ಲಿ ಅವಕಾಶಗಳಿಂದ ವಂಚಿತರಾದ ಪ್ರತಿ ಜಾತಿ, ಧರ್ಮದ ಜನರಿಗೆ ನ್ಯಾಯ ಕೊಡಿಸಬೇಕಾದುದ್ದು ನನ್ನ ಕರ್ತವ್ಯ. ಅದನ್ನು ಪ್ರಾಮಾಣಿಕವಾಗಿ ಮಾಡುವ ಪ್ರಯತ್ನ ಮಾಡಿದ್ದೇನೆ. ಮುಖ್ಯಮಂತ್ರಿ ಹುದ್ದೆ ಎಂದರೆ ಇಡೀ ರಾಜ್ಯದ ಜನರ ಹಿತವನ್ನು ಕಾಯುವುದು. ಹಾಗಂತ ನಾನು ಕುರುಬ ಜನಾಂಗವನ್ನು ಮರೆತಿಲ್ಲ. ನನ್ನ ರಾಜಕೀಯ ಬದುಕಿನ ಆರಂಭದಿಂದ ಇವತ್ತಿನವರೆಗೆ ಕುರುಬ ಸಮುದಾಯಕ್ಕೆ ಸಿಗಬೇಕಾದ ನ್ಯಾಯಯುತ ಹಕ್ಕು, ಪಾಲಿಗಾಗಿ ಹೋರಾಟ ಮಾಡಿದ್ದೇನೆ, ಮುಂದೆಯೂ ಮಾಡುತ್ತೇನೆ ಎಂದಿದ್ದಾರೆ.
ರಾಮಕೃಷ್ಣ ಹೆಗಡೆಯವರು ಮುಖ್ಯಮಂತ್ರಿಯಾಗಿದ್ದಾಗ 1986 ರಲ್ಲಿ ನಾನು ಮತ್ತು ಕೊರಟಗೆರೆ ವೀರಣ್ಣನವರು ಸೇರಿ ರಾಮಕೃಷ್ಣ ಹೆಗಡೆಯವರ ಮನವೊಲಿಸಿ, ಯಾರೆಲ್ಲಾ ಕಾಡುಕುರುಬ, ಜೇನುಕುರುಬ, ವಾಲ್ಮೀಕಿ, ನಾಯಕ್ ಎಂಬ ಪ್ರಮಾಣಪತ್ರ ಪಡೆದಿದ್ದಾರೆ ಅವರ ಮೇಲೆ ಯಾವುದೇ ಶಿಸ್ತುಕ್ರಮ ಜರುಗಿಸದಂತೆ, ಕೆಲಸದಿಂದ ವಜಾ ಮಾಡಿದ್ದರೆ ಪುನಃ ಕೆಲಸ ಕೊಡುವಂತೆ, ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದರೆ ಅದನ್ನು ವಜಾಗೊಳಿಸುವಂತೆ ಆದೇಶ ಹೊರಡಿಸಿದ್ದೆವು. ಬಿಜೆಪಿ ಸರ್ಕಾರ ಸಾಮಾಜಿಕ ನ್ಯಾಯದ ವಿರೋಧಿ. ಇತ್ತೀಚೆಗೆ ಬೀದರ್, ಕಲಬುರಗಿ, ಯಾದಗಿರಿ ಜಿಲ್ಲೆಯ ಗೊಂಡ, ರಾಜಗೊಂಡ, ಕುರುಬ ಸಮುದಾಯಕ್ಕೆ ಸರಿಯಾಗಿ ಪ್ರಮಾಣಪತ್ರ ನೀಡದೆ ತೊಂದರೆ ಮಾಡುತ್ತಿದೆ. ಗೊಂಡ, ರಾಜಗೊಂಡ, ಕುರುಬ ಎಲ್ಲವೂ ಒಂದೇ ಜಾತಿ ಎಂದು ಹೇಳಿದ್ದಾರೆ.
ಕುರುಬ ಸಮುದಾಯವನ್ನು ಎಸ್.ಟಿ ಗೆ ಸೇರಿಸಲು ಕುಲಶಾಸ್ತ್ರ ಅಧ್ಯಯನಕ್ಕಾಗಿ 40 ಲಕ್ಷ ರೂಪಾಯಿ ನೀಡಿದ್ದೆ. ಅದಾದ ಮೇಲೆ ಬಿಜೆಪಿ ಸರ್ಕಾರ ಬಂದಿದೆ, ಕಳೆದ ನಾಲ್ಕು ವರ್ಷದಿಂದ ಈ ಬಗ್ಗೆ ಯಾವ ಸುದ್ದಿ ಇಲ್ಲ. ಈಗ ಈಶ್ವರಪ್ಪ ಅವರು ಕುರುಬರನ್ನು ಎಸ್.ಟಿ ಗೆ ಸೇರಿಸುತ್ತೇನೆ ಎನ್ನುತ್ತಾರೆ, ರಾಜ್ಯದಲ್ಲಿ ಮತ್ತು ಕೇಂದ್ರದಲ್ಲಿ ಎರಡೂ ಕಡೆ ಬಿಜೆಪಿ ಸರ್ಕಾರವಿದೆ, ನಿಮಗೆ ಕುರುಬರ ಬಗ್ಗೆ ನಿಜವಾಗಿ ಕಾಳಜಿ ಇದ್ದರೆ ಅವರನ್ನು ಎಸ್.ಟಿ ಗೆ ಸೇರಿಸಲು ಏನು ಸಮಸ್ಯೆ? ಸಮಾವೇಶ, ಪಾದಯಾತ್ರೆ ಮಾಡಿ ಬೂಟಾಟಿಕೆ ಮಾಡುವುದಲ್ಲ. ಇದನ್ನು ಮಾಡಿ ತೋರಿಸಿ ಎಂದು ಹೇಳಿದ್ದಾರೆ.
ಮುಂಬರುವ ತಾಲೂಕು ಮತ್ತು ಜಿಲ್ಲಾ ಪಂಚಾಯತ ಚುನಾವಣೆಯಲ್ಲಿ ಹಿಂದುಳಿದ ಜಾತಿಗಳು ಮೀಸಲಾತಿಯಿಂದ ವಂಚಿತವಾಗುತ್ತಿವೆ. ಈ ಜಾತಿಗಳನ್ನು ಸಾಮಾನ್ಯ ವರ್ಗದಡಿ ಸೇರಿಸಿ ಚುನಾವಣೆ ಮಾಡಿ ಎಂದು ಸುಪ್ರೀಂ ಕೋರ್ಟ್ ಆದೇಶ ಮಾಡಿದೆ. ಇದರಿಂದ ಅನ್ಯಾಯವಾಗೋದು ಹಿಂದುಳಿದ ಜಾತಿಗಳಿಗೆ. ರಾಜೀವ್ ಗಾಂಧಿ ಅವರು ಸಂವಿಧಾನಕ್ಕೆ 73 ಹಾಗೂ 74 ನೇ ತಿದ್ದುಪಡಿ ಮಾಡಿದ್ದರು, ಆಗ ನಾನು ರಾಜ್ಯದ ಹಣಕಾಸು ಮಂತ್ರಿಯಾಗಿದ್ದೆ, ಅಂದು ನಾನು ಸಂಪುಟ ಉಪಸಮಿತಿ ರಚನೆ ಮಾಡಿ ಹಿಂದುಳಿದ ಜಾತಿಗಳಿಗೆ 33% ಮೀಸಲಾತಿ ನೀಡುವಂತೆ ತೀರ್ಮಾನ ಮಾಡಿದ್ದೆ.
ನಾನು ಮುಖ್ಯಮಂತ್ರಿಯಾಗಿದ್ದಾಗ ರಾಜ್ಯದ ಎಲ್ಲಾ ಜಾತಿಯ ಜನರ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳ ಸಮೀಕ್ಷೆ ಆಗಬೇಕು ಎಂದು ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷರಾದ ಕಾಂತರಾಜ್ ಅವರ ನೇತೃತ್ವದಲ್ಲಿ ಸಮೀಕ್ಷೆ ನಡೆಸಲು 162 ಕೋಟಿ ರೂಪಾಯಿ ಅನುದಾನ ಒದಗಿಸಿದ್ದೆ. ಸಮಿತಿಯ ವರದಿಯನ್ನು ರಾಜ್ಯ ಸರ್ಕಾರ ಈ ವರೆಗೆ ಸ್ವೀಕರಿಸಿಲ್ಲ. ಈಗಲಾದರೂ ಸರ್ಕಾರ ವರದಿ ಸ್ವೀಕರಿಸಿ ಹಿಂದುಳಿದ ಜಾತಿಗಳು ಚುನಾವಣೆಯಲ್ಲಿ ಮೀಸಲಾತಿಯಿಂದ ವಂಚಿತವಾಗುವುದನ್ನು ತಡೆಯಬೇಕು. ನಾವು ಮತ್ತೆ ಅಧಿಕಾರಕ್ಕೆ ಬಂದ ತಕ್ಷಣ ವರದಿ ಸ್ವೀಕಾರ ಮಾಡುತ್ತೇವೆ.
ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳಿಂದ ಸಾಮಾಜಿಕ ನ್ಯಾಯ ಸಿಗಲು ಸಾಧ್ಯವಿಲ್ಲ. ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂಬ ತತ್ವದಲ್ಲಿ ನಂಬಿಕೆಯಿಟ್ಟು ಅದಕ್ಕೆ ಬದ್ಧರಾಗಿರುವುದು ಕಾಂಗ್ರೆಸ್ ಪಕ್ಷ ಮಾತ್ರ.
1988 ರಲ್ಲಿ ಕನಕದಾಸರ 500 ನೇ ಜಯಂತ್ಯುತ್ಸವ ಕಾರ್ಯಕ್ರಮವನ್ನು ಸರ್ಕಾರವೇ ಮಾಡಿತು. ಆಗ ನಾನು ಎಸ್.ಆರ್ ಬೊಮ್ಮಾಯಿ ಅವರ ಸಂಪುಟದಲ್ಲಿ ಸಾರಿಗೆ ಸಚಿವನಾಗಿದ್ದೆ. ಆ ವರೆಗೆ ಕನಕದಾಸರ ಜಯಂತಿ ಆಚರಣೆ ಇರಲಿಲ್ಲ. ಇಡೀ ರಾಜ್ಯಾದ್ಯಂತ ಸಂಚರಿಸಿ ಜಯಂತಿ ಆಚರಣೆ ಮಾಡಿದೆ, ಇದಾದ ಮೇಲೆ 1992 ರಲ್ಲಿ ಕಾಗಿನೆಲೆ ಮಠ ಸ್ಥಾಪನೆಯಾದದ್ದು. ಕಾಗಿನೆಲೆ ಗುರುಪೀಠ ಸ್ಥಾಪನೆಗಾಗಿ ಜನರ ಕೈಕಾಲು ಹಿಡಿದು ದೇಣಿಗೆ ಸಂಗ್ರಹ ಮಾಡಿದ್ದು ನಾವು, ಇವತ್ತು ಕೆಲವರು ತಮ್ಮಿಂದ ಗುರುಪೀಠ ಸ್ಥಾಪನೆ ಆಯ್ತು ಎನ್ನುತ್ತಾರೆ.
ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದವರಿಗೆ ಮೀಸಲಾತಿ ಕೊಡಬೇಕು ಎಂದು ಸಂವಿಧಾನ ಹೇಳುತ್ತೆ, ಆದರೆ ಈಗ ಮೇಲ್ಜಾತಿಯಲ್ಲಿ ಆರ್ಥಿಕವಾಗಿ ದುರ್ಬಲರಿಗೂ ಶೇಕಡಾ ಹತ್ತು ಮೀಸಲಾತಿ ನೀಡಲಾಗಿದೆ. ಇದು ಸರಿಯಲ್ಲ ಎಂದು ಕುಮಾರಸ್ವಾಮಿ ಅಥವಾ ಈಶ್ವರಪ್ಪ ಯಾವತ್ತಾದರೂ ಹೇಳಿದ್ದಾರ?
ನಾವು ಮತ್ತೆ ಅಧಿಕಾರಕ್ಕೆ ಬಂದಮೇಲೆ ಯಾವೆಲ್ಲಾ ತಾಲೂಕುಗಳಲ್ಲಿ ಸಮುದಾಯ ಭವನದ ಕಾಮಗಾರಿ ಅರ್ಧಕ್ಕೆ ನಿಂತಿದೆ, ಅವೆಲ್ಲವನ್ನು ಪೂರ್ಣಗೊಳಿಸುತ್ತೇನೆ, ತುಮಕೂರಿನಲ್ಲಿ ಇನ್ನೂ ಎರಡು ಕೋಟಿ ರೂಪಾಯಿ ಹೆಚ್ಚಿಗೆ ಅನುದಾನ ನೀಡಿ ದೊಡ್ಡ ಸಮುದಾಯ ಭವನ ನಿರ್ಮಾಣ ಮಾಡುತ್ತೇನೆ ಎಂದರು.
ನನಗೆ ಅಧಿಕಾರ ಇರಲಿ, ಇಲ್ಲದಿರಲಿ ಕುರುಬ ಸಮಾಜದ ಧ್ವನಿಯಾಗಿ ಇದ್ದೇನೆ, ಮುಂದೆಯೂ ಇರುತ್ತೇನೆ. ತಾವು ಮುಂದಿನ ಚುನಾವಣೆಯಲ್ಲಿ ನನ್ನ ಜೊತೆಗಿದ್ದು, ನನಗೆ ಶಕ್ತಿ ತುಂಬುವ ಕೆಲಸ ಮಾಡಬೇಕು ಎಂದು ಕೈಮುಗಿದು ಪ್ರಾರ್ಥಿಸುತ್ತೇನೆ ಎಂದು ಹೇಳಿದ್ದಾರೆ.