ರಾಹುಲ್ ಗಾಂಧಿ ಅವರ ಲೋಕಸಭಾ ಸದಸ್ಯತ್ವ ಅನರ್ಹತೆ ರಾಷ್ಟ್ರ ರಾಜಕಾರಣದಲ್ಲಿ ಭಾರೀ ಸದ್ದನ್ನು ಮಾಡುತ್ತಿದೆ. ಕಾಂಗ್ರೆಸ್ ಮಾತ್ರವಲ್ಲದೆ, ಇತರೆ ಪ್ರತಿಪಕ್ಷಗಳೂ ಈ ನಡೆಗೆ ಬೆಚ್ಚಿಬಿದ್ದಿವೆ. ಈ ನಡುವೆ, ಪ್ರಧಾನಿ ನರೇಂದ್ರ ಮೋದಿಗೆ ಸವಾಲು ಹಾಕಿರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ವಾದ್ರಾ, ನಿಮ್ಮಂತಹ ಪುಕ್ಕಲು ಸರ್ವಾಧಿಕಾರಿಗೆ ಹೆದರುವುದಿಲ್ಲ, ನೀವು ಮಾಡುವುದು ಮಾಡಿಕೊಳ್ಳಿ ಎಂದಿದ್ದಾರೆ.
ನೀವು ಏನು ಮಾಡಿದರೂ ನಿಮ್ಮಂತಹ ಹೇಡಿ, ಸರ್ವಾಧಿಕಾರಿಯ ಮುಂದೆ ನಾವು ತಲೆ ಬಾಗುವುದಿಲ್ಲ, ಅದು ನಮ್ಮ ಕುಟುಂಬದ ರಕ್ತದ ವಿಶೇಷತೆ ಎಂದು ಪ್ರಿಯಾಂಕ ಗಾಂಧಿ ಹೇಳಿದ್ದಾರೆ.
ಭಾರತದ ಪ್ರಜಾಪ್ರಭುತ್ವದ ಬೇರನ್ನು ತನ್ನ ರಕ್ತ ಹರಿಸಿ ಈ ಕುಟುಂಬವು ಗಟ್ಟಿಗೊಳಿಸಿದೆ. ಆ ಕುಟುಂಬವನ್ನು ನೀವು ʼಪರಿವಾರವಾದಿ ಅನ್ನುತ್ತೀರಿʼ ಅದನ್ನು ನಾಶಮಾಡಲು ನೀವು ಯತ್ನಿಸುತ್ತಿದ್ದೀರಿ. ಈ ಕುಟುಂಬವು ಭಾರತದ ಜನರ ಧ್ವನಿಯನ್ನು ಎತ್ತಿದೆ, ತಲೆಮಾರುಗಳಿಂದ ಸತ್ಯಕ್ಕಾಗಿ ಹೋರಾಡಿದೆ. ನಮ್ಮ ರಕ್ತನಾಳಗಳಲ್ಲಿ ಹರಿಯುವ ರಕ್ತಕ್ಕೆ ಒಂದು ವಿಶೇಷತೆ ಇದೆ. ಅದು ನಿಮ್ಮಂತಹ ಹೇಡಿ, ಅಧಿಕಾರ ದಾಹಿ ಸರ್ವಾಧಿಕಾರಿಯ ಎದುರು ಎಂದಿಗೂ ತಲೆಬಾಗುವುದಿಲ್ಲ. ನೀವು ಏನು ಬೇಕಾದರೂ ಮಾಡಿ ಎಂದು ಪ್ರಿಯಾಂಕ ಗಾಂಧಿ ಸವಾಲು ಹಾಕಿದ್ದಾರೆ.
“ಮೋದಿಯವರೇ, ನಿಮ್ಮ ಹೊಗಳುಭಟರು ಹುತಾತ್ಮ ಪ್ರಧಾನಿಯ ಮಗನನ್ನು ದೇಶದ್ರೋಹಿ ಮೀರ್ ಜಾಫರ್ ಎಂದು ಕರೆದರು. ನಿಮ್ಮ ಮುಖ್ಯಮಂತ್ರಿಯೊಬ್ಬರು ರಾಹುಲ್ ಗಾಂಧಿಯವರ ತಂದೆ ಯಾರು ಎಂಬ ಪ್ರಶ್ನೆಯನ್ನು ಎತ್ತಿದರು.. ಕಾಶ್ಮೀರಿ ಪಂಡಿತರ ಸಂಪ್ರದಾಯದ ಪ್ರಕಾರ, ತನ್ನ ತಂದೆಯ ಮರಣದ ನಂತರ ಮಗನು ರುಮಾಲು ಧರಿಸುತ್ತಾನೆ, ತನ್ನ ಕುಟುಂಬದ ಸಂಪ್ರದಾಯವನ್ನು ಮುಂದುವರೆಸಿ ಹೋಗುತ್ತಾನೆ. ನೀವು ನಮ್ಮ ಇಡೀ ಕುಟುಂಬ ಮತ್ತು ಕಾಶ್ಮೀರಿ ಪಂಡಿತ ಸಮುದಾಯವನ್ನು ಅವಮಾನಿಸಿದ್ದೀರಿ. ಆದರೆ, ಅದಕ್ಕಾಗಿ ಯಾವ ಜಡ್ಜ್ ಕೂಡಾ ನಿಮಗೆ ಎರಡು ವರ್ಷಗಳ ಶಿಕ್ಷೆ ನೀಡಿಲ್ಲ. ನಿಮ್ಮನ್ನು ಸಂಸತ್ತು ಸ್ಥಾನ ರದ್ದುಗೊಳಿಸಿಲ್ಲ ಎಂದು ಪ್ರಿಯಾಂಕ ಟ್ವೀಟ್ ಮಾಡಿದ್ದಾರೆ.
ನಿಜವಾದ ದೇಶಪ್ರೇಮಿಯಂತೆ ರಾಹುಲ್, ಅದಾನಿಯ ಲೂಟಿಯನ್ನು ಪ್ರಶ್ನಿಸಿದ್ದಾರೆ. ನೀರವ್ ಮೋದಿ ಮತ್ತು ಮೆಹುಲ್ ಚೋಕ್ಸಿ ಮೇಲೆ ಪ್ರಶ್ನೆಗಳನ್ನು ಎತ್ತಿದ್ದಾರೆ. ನಿಮ್ಮ ಗೆಳೆಯ ಗೌತಮ್ ಅದಾನಿ ದೇಶದ ಸಂಸತ್ತಿಗಿಂತ ದೊಡ್ಡವರೇ? ಅದಾನಿ ಲೂಟಿಯನ್ನು ಪ್ರಶ್ನಿಸಿದ ತಕ್ಷಣ ನೀವು ಬೆಚ್ಚಿದ್ದೀರ? ಎಂದು ಪ್ರಿಯಾಂಕ ಗಾಂಧಿ ಪ್ರಶ್ನಿಸಿದ್ದಾರೆ.