ಕೊಪ್ಪಳ: ವಿಪಕ್ಷ ನಾಯಕ ಸಿದ್ದರಾಮಯ್ಯ ರಾಜ್ಯದಲ್ಲಿ ಏಲ್ಲೇ ಸ್ಪರ್ಧಿಸಿದರೂ ಸೋಲಿಸುತ್ತೇವೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕೊಪ್ಪಳ ತಾಲ್ಲೂಕಿನ ಹಲಗೇರಿ ಗ್ರಾಮದಲ್ಲಿ ಮಂಗಳವಾರ ಸುದ್ದಿಗಾರರ ಜೊತೆ ಮಾತನಾಡಿ, ನಿಶ್ಚಿತ ಕ್ಷೇತ್ರವಿಲ್ಲದೆ ರಾಜ್ಯದಲ್ಲಿ ಎಲ್ಲಿಯೇ ಸ್ಪರ್ಧಿಸಿದರೂ ಗೆಲ್ಲುತ್ತೇನೆ ಎನ್ನುತ್ತಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ. ಬಾದಾಮಿ, ವರುಣಾದಲ್ಲಿ ಸ್ಪರ್ಧಿಸಲಿ ನೋಡೊಣ ಎಂದು ಸವಾಲು ಹಾಕಿದರು.
ಸಿದ್ರಾಮಣ್ಣ ರಾಜಕೀಯ ಬಿಟ್ಟು ಜ್ಯೋತಿಷ್ಯ ಹೇಳೋದು ಒಳ್ಳೆಯದು
ಚುನಾವಣೆಯಲ್ಲಿ ಬಿಜೆಪಿ ಗೆಲ್ಲುವುದಿಲ್ಲ ಎನ್ನುವ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿ, ಸಿದ್ರಾಮಣ್ಣ ರಾಜಕಾರಣ ಬಿಟ್ಟು ಜ್ಯೋತಿಷ್ಯ ಹೇಳೋದು ಒಳ್ಳೆಯದು. ಚುನಾವಣೆ ಬಳಿಕ ಅವರು ನಿರುದ್ಯೋಗಿಯಾಗುತ್ತಾರೆ ಅವರಿಗೆ ಕ್ಷೇತ್ರವೇ ಇಲ್ಲ. ಕೋಲಾರದಿಂದ ಅವರನ್ನು ಜನ ಓಡಿಸುತ್ತಾರೆ. ಮುನಿಯಪ್ಪ ಈಗಾಗಲೇ ಮುನಿಸುಗೊಂಡಿದ್ದಾರೆ ಎಂದರು.
ಬಹುಮತಕ್ಕಿಂತ ಹೆಚ್ಚು ಸ್ಥಾನ ಗೆಲ್ಲುತ್ತೇವೆ
ರಾಜ್ಯದಲ್ಲಿ ನಮ್ಮ ಪಕ್ಷದ ಪ್ರಚಾರಯಾತ್ರೆಗಳು ಉತ್ತಮವಾಗಿ ನಡೆಯುತ್ತಿದ್ದು ಅಪೂರ್ವ ಬೆಂಬಲ ಸಿಗುತ್ತದೆ. ಪೇಜ್ ಪ್ರಮುಖರ ತಂಡ ರಚನೆ ಮಾಡಲಾಗಿದ್ದು ಒಳ್ಳೆಯ ವಾತಾವರಣದಲ್ಲಿ ಬಿಜೆಪಿ ಚುನಾವಣಾ ತಯಾರಿ ನಡೆಸುತ್ತಿದೆ. ಅಗತ್ಯ ಬಹುಮತಕ್ಕಿಂತಲೂ ಹೆಚ್ಚು ಸ್ಥಾನಗಳಲ್ಲಿ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಯಾವ ಪಕ್ಷದವರು ಜಾತಿ ಎತ್ತಿ ಮಾತನಾಡಬಾರದು
ಬ್ರಾಹ್ಮಣ ಸಮಾಜದ ಕುರಿತು ಎಚ್.ಡಿ. ಕುಮಾರಸ್ವಾಮಿ ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಚುನಾವಣೆಯಲ್ಲಿ ಅಭಿವೃದ್ಧಿ, ಸಾಮಾಜಿಕ ನ್ಯಾಯದ ಬಗ್ಗೆ ಚರ್ಚೆ ಆಗಬೇಕು. ಜಾತಿ, ಮತ, ವೈಷಮ್ಯ ಬೆಳೆಸುವ ಚುನಾವಣೆ ಅಗಬಾರದು. ಯಾವ ರಾಜಕೀಯ ಪಕ್ಷದವರೂ ಜಾತಿ ಎತ್ತಿ ಮಾತನಾಡಬಾರದು ಎಂದು ಮನವಿ ಮಾಡಿದರು.