
ವೋಟ್ ಬ್ಯಾಂಕ್ ರಾಜಕಾರಣ, ಬೇನಾಮಿ ಆಸ್ತಿಗಳು, ಪರಿಸರವಾದಿಗಳ ಸಣ್ಣತನದ ಯೋಚನೆಗಳು, ಅಗತ್ಯತೆಯನ್ನು ತಿಳಿದುಕೊಳ್ಳದೆ ಮತ್ತು ವಾಸ್ತವ ಅರಿಯದೆ ಮಾಡುವ ವಿರೋಧಗಳು ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಿಗೆ ಯಾವ ರೀತಿ ತೊಂದರೆ ಒಡ್ಡುತ್ತಿದೆ ಎಂಬುದಕ್ಕೆ ಉದಾಹರಣೆ ರಾಜ್ಯ ಸರ್ಕಾರ ಕರ್ನಾಟಕ ವಿದ್ಯುತ್ ನಿಗಮ ನಿಯಮಿತ (ಕೆಪಿಸಿಎಲ್)ದ ಮೂಲಕ ಕೈಗೊಳ್ಳಲು ಉದ್ದೇಶಿಸಿರುವ 2000 ಮೆಗಾವ್ಯಾಟ್ ಸಾಮರ್ಥ್ಯದ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ.
ಯಾವುದೇ ಯೋಜನೆಗಳು ಬಂದರೂ ಅದರಿಂದ ಪರಿಸರದ ಮೇಲೆ ಪ್ರತೀಕೂಲ ಪರಿಣಾಮ ಉಂಟಾಗುವುದು ಸಹಜ. ಹೀಗಾಗಿ ಅತಿ ಕಡಿಮೆ ಪರಿಸರ ಹಾನಿಯೊಂದಿಗೆ ಹೆಚ್ಚು ಲಾಭದಾಯಕವಾದ ಯೋಜನೆಗಳನ್ನು ಜಾರಿಗೊಳಿಸಲು ಸರ್ಕಾರಗಳು ಆದ್ಯತೆ ನೀಡುತ್ತಿವೆ. ಅದರ ಒಂದು ಭಾಗವೇ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗಳು. ಯಾವುದೇ ಅಣೆಕಟ್ಟೆ ನಿರ್ಮಿಸದರೆ ಇರುವ ಅಣೆಕಟ್ಟೆಗಳನ್ನೇ ಬಳಸಿಕೊಂಡು ಸುರಂಗ ಮಾರ್ಗದಲ್ಲಿ ಯೋಜನೆ ಅನುಷ್ಠಾನಗೊಳಿಸಿ ಪರಿಸರಕ್ಕೆ ಆಗುವ ಹಾನಿ ತಪ್ಪಿಸುವುದರ ಜತೆಗೆ ಜನರಿಗೆ ಸಮರ್ಪಕ ವಿದ್ಯುತ್ ಪೂರೈಸಲು ಈ ಯೋಜನೆ ಜಾರಿಗೊಳಿಸಲಾಗುತ್ತಿದೆ.

ಒಂದೆಡೆ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರವೇ ಪಂಪ್ಡ್ ಸ್ಟೋರೇಜ್ ಯೋಜನೆಗಳನ್ನು ಜಾರಿಗೊಳಿಸಲು ರಾಜ್ಯಕ್ಕೆ ಸೂಚನೆ ನೀಡಿದರೂ ಇಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿರುವುದರಿಂದ ಬಿಜೆಪಿ ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಿದೆ. ಜತೆಗೆ ವೋಟ್ ಬ್ಯಾಂಕ್ ರಾಜಕಾರಣದಿಂದಾಗಿ ಕಾಂಗ್ರೆಸ್ ಪಕ್ಷದ ಸ್ಥಳೀಯ ಮುಖಂಡರೂ ಇವರಿಗೆ ಬೆಂಬಲವಾಗಿ ನಿಲ್ಲುತ್ತಿದ್ದಾರೆ. ಮತ್ತೊಂದೆಡೆ ಸ್ಥಳೀಯವಾಗಿ ಬೇನಾಮಿ ಆಸ್ತಿಗಳನ್ನು ಹೊಂದಿರುವ ಪ್ರಭಾವಿಗಳು ತಮ್ಮ ಈ ಬೇನಾಮಿ ಆಸ್ತಿಯ ಲಾಭ ಪಡೆಯುವ ಉದ್ದೇಶದಿಂದ ಯೋಜನೆಯ ವಾಸ್ತವಾಶಂಗಳನ್ನು ಮುಚ್ಚಿಟ್ಟು ಪರಿಸರದ ಹೆಸರಿನಲ್ಲಿ ಅಲ್ಲಿನ ಜನರ ದಾರಿ ತಪ್ಪಿಸಿ ಯೋಜನೆಗೆ ವಿರೋಧ ವ್ಯಕ್ತವಾಗುವಂತೆ ನೋಡಿಕೊಳ್ಳುತ್ತಿದ್ದಾರೆ. ಇನ್ನೊಂದೆಡೆ ಪರಿಸರವಾದಿಗಳು ಅರಣ್ಯ ನಾಶವಾಗುತ್ತದೆ, ವನ್ಯಜೀವಿಗಳಿಗೆ ಹಾನಿಯಾಗುತ್ತಿದೆ ಎಂದು ಹೇಳಿ ಜನರನ್ನು ಸರ್ಕಾರದ ಯೋಜನೆ ವಿರುದ್ಧ ಎತ್ತಿಕಟ್ಟುತ್ತಿದ್ದಾರೆ.

ಇದೆಲ್ಲದರ ಪರಿಣಾಮ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯಿಂದ ಪರಿಸರಕ್ಕೆ ಹೆಚ್ಚಿನ ಹಾನಿ ಆಗದೇ ಇದ್ದರೂ ಯೋಜನೆಯಿಂದ ಪಶ್ಚಿಮ ಘಟ್ಟವೇ ನಾಶವಾಗುತ್ತದೆ, ನದಿಯ ಹರಿವಿನಲ್ಲಿ ಬದಲಾವಣೆಯಾಗುತ್ತದೆ, ಸಮುದ್ರದ ಉಪ್ಪು ನೀರು ನದಿಗೆ ಸೇರಿ ನೀರಿನ ಸಮಸ್ಯೆ ಉದ್ಭವವಾಗುತ್ತದೆ ಎಂಬ ಸತ್ಯಕ್ಕೆ ದೂರವಾದ ಮಾತುಗಳು ಆ ಭಾಗದ ಜನರ ವಿರೋಧಕ್ಕೆ ಕಾರಣವಾಗುತ್ತದೆ. ಯೋಜನೆ ಜಾರಿಯಾಗುವ ಪ್ರದೇಶದ ಜನರಿಂದ ಇದಕ್ಕೆ ಹೆಚ್ಚಿನ ವಿರೋಧ ವ್ಯಕ್ತವಾಗದೇ ಇದ್ದರೂ ಹೊರಗಿನವರು, ರಾಜಕಾರಣಿಗಳು ಮತ್ತು ಬೇನಾಮಿ ಭೂಮಿ ಹೊಂದಿರುವವರಿಂದ ಸಮಸ್ಯೆಗಳು ಸೃಷ್ಟಿಯಾಗುತ್ತಿದೆ.

ಏನಿದು ಪಂಪ್ಡ್ ಸ್ಟೋರೇಜ್ ಯೋಜನೆ?
ಪರಿಸರದ ಹಿತದೃಷ್ಟಿ ಕಾರಣದಿಂದ ಇತ್ತೀಚಿನ ದಿನಗಳಲ್ಲಿ ನವೀಕರಿಸಬಹುದಾದ ಇಂಧನ ಮೂಲಗಳಿಂದ ವಿದ್ಯುತ್ ಉತ್ಪಾದನೆ ಮಾಡುವ ಅನಿವಾರ್ಯತೆ ಸೃಷ್ಟಿಯಾಗಿದೆ. ಅದರಂತೆ ಸರ್ಕಾರಗಳು ಕಾರ್ಯಕ್ರಮಗಳನ್ನು ರೂಪಿಸುತ್ತಿದೆ. ಆದರೆ, ನವೀಕರಿಸಬಹುದಾದ ಇಂಧನ ಮೂಲಗಳಿಂದ ಅದರಲ್ಲೂ ಮುಖ್ಯವಾಗಿ ಸೌರ ವಿದ್ಯುತ್ ಉತ್ಪಾದನೆ ಆರ್ಥಿಕವಾಗಿಯೂ ಹೆಚ್ಚು ಯಶಸ್ವಿಯಾಗುತ್ತಿದೆ. ಬೇಡಿಕೆಯ ಶೇ. 65ರಷ್ಟು ವಿದ್ಯುತ್ ಉತ್ಪಾದನೆ ನವೀಕರಿಸಬಹುದಾದ ಇಂಧನ ಮೂಲಗಳಿಂದಲೇ ಬರುವಂತಾಗಿದೆ. ಇದನ್ನು ಇನ್ನೂ ಹೆಚ್ಚು ಮಾಡಲು ಎಲ್ಲಾ ಅವಕಾಶಗಳು ಇವೆ.
ಆದರೆ, ನವೀಕರಿಸಬಹುದಾದ ಇಂಧನ ಮೂಲಗಳಿಂದ ಹಗಲು ವೇಳೆ ವಿದ್ಯುತ್ ಉತ್ಪಾದಿಸಲು ಮಾತ್ರ ಅವಕಾಶವಿದ್ದು, ಇದನ್ನು ಸಂಗ್ರಹಿಸಿ ಬೇಡಿಕೆ ಅವಧಿಯಲ್ಲಿ ಪೂರೈಸಲು ಸದ್ಯದ ಪರಿಸ್ಥಿತಿಯಲ್ಲಿ ಸಾಧ್ಯವಾಗುತ್ತಿಲ್ಲ. ಹೀಗಾಗಿ ಬ್ಯಾಟರಿ ಆಧಾರಿತ ಸಂಗ್ರಹ ವ್ಯವಸ್ಥೆ ಮತ್ತು ಪಂಪ್ಡ್ ಸ್ಟೋರೇಜ್ ಯೋಜನೆಗಳ ಮೂಲಕ ಸಂಗ್ರಹ ಮಾಡಿ ಬೇಡಿಕೆ ಅವಧಿಯಲ್ಲಿ ಪೂರೈಸಲು ಕೇಂದ್ರ ಸರ್ಕಾರ ಮುಂದಾಗಿದೆ. ಬ್ಯಾಟರಿ ಸ್ಟೋರೇಜ್ ವ್ಯವಸ್ಥೆ ವೆಚ್ಚದಾಯಕ ಮಾತ್ರವಲ್ಲ, ಈ ಬ್ಯಾಟರಿಗಳನ್ನು ವಿಲೇವಾರಿ ಮಾಡುವುದು ಪ್ರಮುಖ ಸಮಸ್ಯೆಯಾಗಿರುವುದರಿಂದ ಕೇಂದ್ರ ಸರ್ಕಾರವು ಪಂಪ್ಡ್ ಸ್ಟೋರೇಜ್ ಯೋಜನೆಗಳನ್ನು ಜಾರಿಗೊಳಿಸಲು ರಾಜ್ಯಗಳಿಗೆ ಸೂಚನೆ ನೀಡಿದೆ.
ಕೇಂದ್ರ ಸರ್ಕಾರವು ಪಂಪ್ಡ್ ಸ್ಟೋರೇಜ್‌ನ ವಿಶೇಷ ಲಾಭಗಳನ್ನು ಪರಿಗಣಿಸಿ ಮತ್ತು ಗ್ರಿಡ್ ಸ್ಥಿರತೆ/ಸಮತೋಲನಕ್ಕಾಗಿ ವಿದ್ಯುತ್ ಸಂಗ್ರಹ ವ್ಯವಸ್ಥೆಯ ಹೆಚ್ಚುತ್ತಿರುವ ಅಗತ್ಯವನ್ನು ಗಮನಿಸಿ, 2031-32ರೊಳಗೆ ಪಂಪ್ಡ್ ಸ್ಟೋರೇಜ್ ಯೋಜನೆಯಿಂದ 26,600 ಮೆಗಾವ್ಯಾಟ್ ಶಕ್ತಿಸಂಗ್ರಹ ಸಾಮರ್ಥ್ಯದ ಗುರಿಯನ್ನು ನಿಗದಿಪಡಿಸಿದೆ. ಅದರಂತೆ ಕರ್ನಾಟಕದಲ್ಲಿ ಸುಮಾರು 12,000 ಮೆಗಾವ್ಯಾಟ್ ಪಂಪ್ಡ್ ಸ್ಟೋರೇಜ್ ಸಾಮರ್ಥ್ಯ ಸಾಧ್ಯತೆ ಇದೆ. ಈ ಪೈಕಿ ಪ್ರಮುಖವಾಗಿರುವುದು 2000 ಮೆಗಾವ್ಯಾಟ್ ಸಾಮರ್ಥ್ಯದ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ. ಅದರಂತೆ ಭಾರೀ ಪ್ರಮಾಣದ ವಿದ್ಯುತ್ ಉತ್ಪಾದನೆಯ ಈ ಯೋಜನೆಯನ್ನು ಕೆಪಿಸಿಎಲ್ ಅತಿ ಕಡಿಮೆ ಪರಿಸರ ಹಾನಿಯೊಂದಿಗೆ ಜಾರಿಗೊಳಿಸಲು ಮುಂದಾಗಿದೆ. 2000 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಗೆ ಬಳಕೆಯಾಗುವುದು ಕೇವಲ 100.645 ಹೆಕ್ಟೇರ್ ಪ್ರದೇಶ (248.7 ಎಕರೆ ಪ್ರದೇಶ) ಮಾತ್ರ. ಈ ಪೈಕಿ 54.155 ಹೆಕ್ಟೇರ್ ಅರಣ್ಯ ಪ್ರದೇಶವಾಗಿದ್ದರೆ, 46.49 ಹೆಕ್ಟೇರ್ ಅರಣ್ಯೇತರ ಪ್ರದೇಶವಾಗಿದೆ.

ಈ ಯೋಜನೆ ಜಾರಿ ವೇಳೆ ಈಗಾಗಲೇ ನಿರ್ಮಾಣವಾಗಿರುವ ಗೇರುಸೊಪ್ಪ ಮತ್ತು ತಲಕಳಲೆ ಅಣೆಕಟ್ಟೆಗಳನ್ನು ಬಳಸಿಕೊಳ್ಳುವ ಪರಿಣಾಮ ಹೊಸ ಅಣೆಕಟ್ಟೆ ನಿರ್ಮಾಣದಂತಹ ಕಾಮಗಾರಿ ಈ ಯೋಜನೆಯಲ್ಲಿ ಇಲ್ಲ. ಇನ್ನು ಭೂಮಿಯ ಆಳದಲ್ಲಿ ಟನಲ್ (ಸುರಂಗ) ಮೂಲಕ ನೀರನ್ನು ಹರಿಬಿಡುವ ಮತ್ತು ಅದೇ ಟನಲ್ ಮೂಲಕ ನೀರನ್ನು ಎತ್ತುವಳಿ ಮಾಡುವ ಪರಿಣಾಮ ಸುರಂಗ ನಿರ್ಮಾಣದ ಭೂಮಿಯ ಮೇಲ್ಮೈನಲ್ಲಿ ಇರುವ ಮರ-ಗಿಡ- ಪರಿಸರಕ್ಕೆ ಯಾವುದೇ ಹಾನಿ ಆಗುವುದಿಲ್ಲ. ಪ್ರಸ್ತುತ ಇರುವ ರಸ್ತೆಯನ್ನೇ ಬಳಕೆ ಮಾಡಿಕೊಳ್ಳಲು ಉದ್ದೇಶಿಸಲಾಗಿದ್ದು, ಪ್ರಸ್ತುತ 3.5 ಮೀಟರ್ ಇರುವ ಈ ರಸ್ತೆಯನ್ನು ಅಗತ್ಯ ವಸ್ತುಗಳ ರವಾನೆಗೆ ಅನುವಾಗುವಂತೆ 5.5 ಮೀಟರ್ ವಿಸ್ತರಿಸಲು ಯೋಜಿಸಲಾಗಿದೆ. ಈ ರಸ್ತೆ ಸುಮಾರು 3.5 ಕೀ.ಮೀನಷ್ಟು ಉದ್ದವಿರಲಿದೆ. ಭೂಮಿಯ ಒಳಗೆ ಪಂಪ್ ಹೌಸ್ ಸೇರಲು ಸುರಂಗ ಪ್ರವೇಶಿಸುವ ಸ್ಥಳದಲ್ಲಿ ಮಾತ್ರ ಅಲ್ಪ ಪ್ರಮಾಣದ ಅರಣ್ಯ ಪ್ರದೇಶ ಬಳಕೆ ಮಾಡಿಕೊಳ್ಳಲಾಗುವುದು. ಯೋಜನೆ ಪೂರ್ಣಗೊಂಡ ನಂತರ ಸುರಂಗದ ಪ್ರವೇಶ ದ್ವಾರದ ಸುತ್ತಮುತ್ತ ಅರಣ್ಯ ಪುನರ್ ನಿರ್ಮಾಣವಾಗಲಿದೆ. ಈ ಸಂಬಂಧ ಈಗಾಗಲೇ ರಾಜ್ಯ ಅರಣ್ಯ ಇಲಾಖೆ, ಕೇಂದ್ರ ಅರಣ್ಯ ಇಲಾಖೆ ಹಲವು ಭಾರಿ ಸ್ಥಳ ಪರಿಶೀಲನೆ ನಡೆಸಿ ಕನಿಷ್ಠ ಗಿಡ-ಮರಗಳ ಕಡಿತದೊಂದಿಗೆ ಯೋಜನೆ ಜಾರಿ ಮಾಡಲು ಕ್ರಮವಹಿಸಿವೆ.

ಈ ಯೋಜನೆ ಜಾರಿ ಸಾಧ್ಯಾಸಾಧ್ಯಾತೆಗಳ ಬಗ್ಗೆ ಕೇಂದ್ರ ಸರ್ಕಾರದ 13 ವಿವಿಧ ಸ್ವಾತಂತ್ರ್ಯ ಇಲಾಖೆ/ ನಿರ್ದೇಶನಾಲಯಗಳು ಪರಿಶೀಲಿಸಿ ಅನುಮತಿಸಿದ ನಂತರವೇ ಕೆಪಿಸಿ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಜಾರಿಗೆ ಮುಂದಾಗಿದೆ. ಸುರಂಗ ಮಾರ್ಗ ನಿರ್ಮಾಣದ ವೇಳೆ ಕಡಿಮೆ ಸಾಮರ್ಥ್ಯದ ಸ್ಫೋಟಕಗಳ ಬಳಕೆ, ಆ ಭಾಗಲ್ಲಿರುವ ಸಿಂಗಳೀಕಗಳ ರಕ್ಷಣೆಗೆ ಟ್ರೀ ಕೆನೊಪಿಗಳನ್ನು ಸಿದ್ಧಪಡಿಸುವುದು ಮುಂತಾದ ಕಾರ್ಯಕ್ರಮಗಳನ್ನು ಅರಣ್ಯ, ಪರಿಸರ ಮತ್ತು ವನ್ಯಜೀವಿ ಸಚಿವಾಲಗಳ ನೆರವಿನೊಂದಿಗೆ ಕೈಗೊಂಡು ಯೋಜನೆ ಜಾರಿಗೊಳಿಸಲು ಕೆಪಿಸಿ ಕ್ರಮ ಕೈಗೊಳ್ಳುತ್ತಿದೆ.
ಅತಿ ಕಡಿಮೆ ಮತ್ತು ನೀರಿನ ದೀರ್ಘಾವಧಿ ಬಳಕೆಯೇ ಈ ಯೋಜನೆಯ ವಿಶೇಷತೆ. ಲಿಂಗನಮಕ್ಕಿ ಜಲಾಶಯದಲ್ಲಿ ವಾರ್ಷಿಕ ಸರಾಸರಿ 180ರಿಂದ 220 ಟಿಎಂಸಿ ನೀರು ಸಂಗ್ರಹವಾಗುತ್ತದೆ. ಈ ನೀರನ್ನು ಬಳಕೆ ಮಾಡಿಕೊಂಡು ಈಗಾಗಲೇ ಜಲ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ. ಈ ನೀರಿನ ಬಳಕೆಯಿಂದ ಜಲ ವಿದ್ಯುತ್ ಉತ್ಪಾದನೆ ನಂತರ ಕೃಷಿ, ಕುಡಿಯಲು, ಮೀನುಗಾರಿಗೆ ಸೇರಿದಂತೆ ವಿವಿಧ ರೀತಿಯಲ್ಲಿ ಸಾರ್ವಜನಿಕರು ಮತ್ತು ರೈತರು ಬಳಕೆ ಮಾಡಿಕೊಂಡ ನಂತರ ಆ ನೀರು ಸಮುದ್ರ ಸೇರುತ್ತಿದೆ. ಶರಾವತಿ ಪಿಎಸ್ಪಿ ಜಾರಿ ನಂತರವೂ ಈಗಿನ ಶರಾವತಿ ನೀರಿನ ಬಳಕೆದಾರರಿಗೆ ಯಾವುದೇ ರೀತಿಯಲ್ಲಿ ನೀರಿನ ಪ್ರಮಾಣದಲ್ಲಿ ಕೊರತೆ ಆಗುವುದಿಲ್ಲ. ಶರಾವತಿ ಪಿಎಸ್ಪಿ ಯೋಜನೆಯಡಿ ನೀರಿನ್ನು ಮರುಬಳಕೆ ಮಾಡುವುದರಿಂದ ಮತ್ತು ಮುಂದಿನ 50-60 ವರ್ಷಗಳ ಅವಧಿಗೆ ಒಮ್ಮೆ ಮಾತ್ರ ಕೇವಲ 0.37 ಟಿಎಂಸಿ ನೀರನ್ನು ಬಳಕೆ ಮಾಡಲಾಗುವುದು. ಇದಕ್ಕಿಂತ ಹೆಚ್ಚಿನ ನೀರನ್ನು ಬಳಕೆ ಮಾಡಲು ಅಥವಾ ಅಣೆಕಟ್ಟೆಯ ಸಾಮರ್ಥ್ಯಕ್ಕಿಂತ ಹೆಚ್ಚಿನ ನೀರನ್ನು ಸಂಗ್ರಹಿಸಲು ಅವಕಾಶವೇ ಇಲ್ಲದಿರುವುದರಿಂದ ಎಲ್ಲೆಡೆ ಈಗಿನಂತೆಯೇ ನೀರು ಹರಿಯಲಿದೆ ಮತ್ತು ಸಮುದ್ರಕ್ಕೂ ನೀರು ಸೇರಲಿದೆ. ಹೀಗಾಗಿ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯಿಂದ ನೀರಿನ ಕೊರತೆ ಅಥವಾ ಪರಿಸರದ ಮೇಲೆ ದುಷ್ಪರಿಣಾಮ ಉಂಟಾಗುವುದಿಲ್ಲ ಎಂಬುದನ್ನು ಕೆಪಿಸಿಎಲ್ ಉದಾಹರಣೆಗಳ ಸಹಿತ ವಿವರಿಸಿದೆ.

ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯಡಿ ಉತ್ಪಾದಿಸಲಾಗುವ 2000 ಮೆಗಾವ್ಯಾಟ್ ವಿದ್ಯುತ್ ಅನ್ನು ಸರಬರಾಜು ಮಾಡಲು ಪ್ರಸ್ತುತ “ಓನ್ ನೇಷನ್- ಓನ್ ಗ್ರಿಡ್”ನಡಿ ಇರುವ ವಿದ್ಯುತ್ ಸರಬರಾಜು ವ್ಯವಸ್ಥೆಯನ್ನೇ ಬಳಸಲಾಗುವುದು. ಪ್ರಸ್ತುತ ಈ ವ್ಯಾಪ್ತಿಯಲ್ಲಿ ಲಭ್ಯವಿರುವ 220 ಕೆ.ವಿ ಸರಬರಾಜು ವ್ಯವಸ್ಥೆಯನ್ನು 400 ಕೆ.ವಿ. ಮೇಲ್ದರ್ಜೆಗೆ ಏರಿಸಲಾಗುವುದು. ಈ ನಿಟ್ಟಿನಲ್ಲಿಯೂ ಯೋಜನೆ ಜಾರಿ ವೇಳೆ ಮರ ಕಡಿತ ಮತ್ತು ಪರಿಸರ ಹಾನಿಯನ್ನು ತಡೆಯಲಾಗಿದೆ. ಇದಲ್ಲದೆ, ಶರಾವತಿ ಪಿಎಸ್ಪಿ ಯೋಜನೆ ಜಾರಿಯಿಂದ ಗುಡ್ಡ ಕುಸಿತ ಭೀತಿ ಬಗ್ಗೆ ಸಾರ್ವಜನಿಕರು ಆತಂಕಗೊಂಡಿರುವ ಬಗ್ಗೆಯೂ ಕೆಪಿಸಿ ಸ್ಪಷ್ಟನೆ ನೀಡ ಬಯಸಿದ್ದು, ಶರಾವತಿ ಪಿಎಸ್ಪಿ ಯೋಜನೆ ಜಾರಿಗೂ ಮುನ್ನ ಪ್ರಾಥಮಿಕ ಹಂತದಲ್ಲಿ ಕೇಂದ್ರ ಸರ್ಕಾರದ ಭಾರತೀಯ ಭೂ ಸರ್ವೇಕ್ಷಣಾ ಇಲಾಖೆಯೂ ಈ ಪ್ರದೇಶದಲ್ಲಿ ಸರ್ವೆ ಕಾರ್ಯ ನಡೆಸಿದ್ದು, ಪಿಎಸ್ಪಿ ಜಾರಿ ಪ್ರದೇಶದಲ್ಲಿ ಸುರಂಗ ನಿರ್ಮಾಣ ಅಥವಾ ಕಾಮಗಾರಿಯಿಂದ ಭೂ ಕುಸಿತ ಸಾಧ್ಯತೆ ಆಗುವುದಿಲ್ಲ ಎಂಬುದನ್ನು ದೃಢೀಕರಿಸಿದ ನಂತರ ನಂತರವೇ ಯೋಜನೆಗೆ ಅನುಮತಿ ನೀಡಿರುತ್ತದೆ. ಹೀಗಾಗಿ ಇಲ್ಲಿ ಗುಡ್ಡ ಕುಸಿತ ಸಾಧ್ಯತೆಗಳೂ ಇರುವುದಿಲ್ಲ. ಇಷ್ಟೆಲ್ಲಾ ಆದರೂ ಸ್ಥಳೀಯರನ್ನು ಎತ್ತಿಕಟ್ಟಿ ಪರಿಸರ, ನೀರಿನ ಹರಿವು, ವನ್ಯಜೀವಿಗಳ ಹೆಸರಿನಲ್ಲಿ ಯೋಜನೆಗೆ ವಿರೋಧ ವ್ಯಕ್ತಪಡಿಸಲಾಗುತ್ತಿದೆ.

ಶರಾವತಿ ಪಿಎಸ್ಪಿ ಏಕೆ ಬೇಕು?
ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯಡಿ 2000 ಮೆಘಾ ವ್ಯಾಟ್ ವಿದ್ಯುತ್ ಉತ್ಪಾದಿಸಲಾಗುತ್ತದೆ. ಹಗಲು ವೇಳೆ ನವೀಕರಿಸಬಹುದಾದ ಇಂಧನ ಹೇರಳವಾಗಿ ಲಭ್ಯವಾಗಲಿದ್ದು, ಈ ಸಮಯದಲ್ಲಿ ಕೆಳಗಿನ ಜಲಾಶಯದಿಂದ ಮೇಲಿನ ಜಲಾಶಯಕ್ಕೆ ನೀರು ಪಂಪ್ ಮಾಡಲಾಗುವುದು. ಹೆಚ್ಚು ಬೇಡಿಕೆ ಅವಧಿಯಲ್ಲಿ ಅಥವಾ ರಾತ್ರಿ ವೇಳೆ ವಿದ್ಯುತ್ ಉತ್ಪಾದಿಸಿ ಗ್ರಾಹಕರಿಗೆ ಪೂರೈಸಲಾಗುವುದು. ಹೀಗೆ ಸೋಲಾರ್ ಮತ್ತು ಗಾಳಿಯಿಂದ ಉತ್ಪಾದನೆಯಾಗುತ್ತಿರುವ ವಿದ್ಯುತ್ ವ್ಯರ್ಥವಾಗದಂತೆ ಉಳಿಸಿಕೊಂಡು ಅದನ್ನು ಬೇಡಿಕೆ ಅವಧಿಯಲ್ಲಿ ತ್ವರಿತವಾಗಿ ಉತ್ಪಾದಿಸಿ ಗ್ರಾಹಕರಿಗೆ ಸರಬರಾಜು ಮಾಡಲು ಪಿಎಸ್ಪಿಗಳಿಂದ ಮಾತ್ರ ಸಾಧ್ಯ.