ಬಿಬಿಎಂಪಿ ಚುನಾವಣೆ ಮೂರು ಪಕ್ಷಗಳಿಗೂ ಪ್ರತಿಷ್ಠೆಯ ಕಣ. ಅದರಲ್ಲೂ ಹೈಕಮಾಂಡ್ ಮುಂದೆ ಮಾನ ಉಳಿಸಿಕೊಳ್ಳಲು ರಾಜ್ಯ ಬಿಜೆಪಿ ಮುಂದಿರುವ ಅಗ್ನಿ ಪರೀಕ್ಷೆ. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಗೆ ಬಿಬಿಎಂಪಿ ಚುನಾವಣೆಯಲ್ಲಿ ಗೆದ್ದು ಬೀಗದಿದ್ದರೆ ಮುಂದಿನ ದಿನಗಳನ್ನು ಅರಾಮವಾಗಿ ಮನೆಯಲ್ಲಿ ಕಳೆಯಬಹುದು. ಇತ್ತ ಕಾಂಗ್ರೆಸ್ ಗೆ ಬಿಬಿಎಂಪಿಯನ್ನು ಮತ್ತೊಮ್ಮೆ ಗೆದ್ದು ಮುಂದಿನ ವಿಧಾನಸಭಾ ಚುನಾವಣೆಯ ಹುರುಪನ್ನು ಇಮ್ಮಡಿ ಮಾಡಿಕೊಳ್ಳಬೇಕು. ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್ ಗೆ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ ಬಿಬಿಎಂಪಿ ಗೆಲ್ಲಿಸಿ ಮತ್ತೊಮ್ಮೆ ಪಕ್ಷದೊಳಗೆ ತಮ್ಮ ತಮ್ಮ ಹಿಡಿತ ಗಟ್ಟಿಗೊಳಿಸುವ ಅವಶ್ಯಕತೆ ಇದೆ. ಎಂದಿನಂತೆ ಜೆಡಿಎಸ್ ಗೆಲ್ಲುವ ಅಲ್ಪಸ್ವಲ್ಪ ವಾರ್ಡ್‌ಗಳನ್ನು ಮುಂದಿಟ್ಟು ಸ್ಥಾಯಿ ಸಮಿತಿಯ ಮೇಲೆ ತಮಗಿರುವ ಆಧಿಪತ್ಯ ಮುಂದುವರೆಸಿಕೊಳ್ಳುವ ಲೆಕ್ಕಾಚಾರವಂತೂ ಇದೆ. ಹೀಗೆ ಪ್ರತಿ ಪಕ್ಷಗಳಿಗೂ ಈ ಬಾರಿಯ ಬಿಬಿಎಂಪಿ ಚುನಾವಣೆ ಅಗ್ನಿ ಪರೀಕ್ಷೆಯ ಅಖಾಡವಾಗಿ ಮಾರ್ಪಾಡಾಗಿದೆ.
ಸಿಎಂ ಬೊಮ್ಮಾಯಿ ಹಾಗೂ ರಾಜ್ಯ ಬಿಜೆಪಿ ಕಳೆದ ಬೈ ಎಲೆಕ್ಷನ್ ಹಾಗೂ ಸ್ಥಳೀಯ ಚುನಾವಣೆಯಲ್ಲಿ ನಿರೀಕ್ಷಿತ ಮಟ್ಟದಲ್ಲಿ ಗೆಲುವು ಸಾಧಿಸಿಕೊಂಡಿಲ್ಲ. ಇದು ಕಮಲ ಹೈ ಕಮಾಂಡ್ ರಾಜ್ಯ ಬಿಜೆಪಿಗರನ್ನು ತುಚ್ಛವಾಗಿ ಕಾಣೋದಕ್ಕೆ ದಾರಿ ಮಾಡಿ ಕೊಟ್ಟಿತು. ಹೀಗಾಗಿ ಈ ಬಿಬಿಎಂಪಿ ಚುನಾವಣೆ ರಾಜ್ಯ ಬಿಜೆಪಿ ಪಾಲಿಕೆಗೆ ಮಹತ್ವದ್ದು ಮತ್ತು ನಿರ್ಣಾಯಕ. ಇದೇ ಕಾರಣಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹಾಗೂ ಸಿಎಂ ಬೊಮ್ಮಾಯಿ ವಿಶೇಷವಾಗಿರುವ ಪ್ಲ್ಯಾನ್‌ಗಳೆನ್ನೆಲ್ಲಾ ಮಾಡಿಕೊಂಡು ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ಎಂದು ಬಿಜೆಪಿಯ ಓರ್ವ ನಾಯಕ ಪ್ರತಿಧ್ವನಿಯ ಪ್ರತಿನಿಧಿ ಜೊತೆಗೆ ಮಾತನಾಡುತ್ತಾ ಎಂದರು.
ವಾರ್ಡ್ ವಿಂಗಡಣೆ : ಬಿಜೆಪಿ ಹೊಸ ಲೆಕ್ಕಾಚಾರ
ಈ ಬಾರಿ 198 ವಾರ್ಡ್ ಗಳನ್ನು ವಿಂಗಡಿಸಿ 242 ವಾರ್ಡ್‌ಗಳನ್ನಾಗಿಸಿ ತನ್ನ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸುತ್ತಿದೆ ಬಿಬಿಎಂಪಿ. ಈ ವಾರ್ಡ್ ವಿಂಗಡಣೆಯ ಹಿಂದಿರುವ ಹಿಡನ್ ಅಜೆಂಡಾವೇ ಬೇರೆ ಇದೆ. ಏನೆಂದರೆ, ವಾರ್ಡ್‌ಗಳನ್ನು ಹೆಚ್ಚಿಸಿ ಹೆಚ್ಚೆಚ್ಚು ವಾರ್ಡ್‌ಗಳನ್ನು ತಮ್ಮ ತೆಕ್ಕೆಗೆ ಹಾಕಿಕೊಳ್ಳುವ ರೂಪುರೇಷೆ ಹಾಕಿಕೊಂಡಿರುವ ಬಿಜೆಪಿ, ತನ್ನ ಪ್ರಾಬಲ್ಯ ಹೆಚ್ಚಿರುವ ವಿಧಾನಸಭಾ ಕ್ಷೇತ್ರಗಳಲ್ಲಿ ಹೆಚ್ಚು ವಾರ್ಡ್ ವಿಂಗಡಣೆ ಮಾಡಿಕೊಂಡಿದೆ. ಮುಖ್ಯವಾಗಿ, ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಬಿಜೆಪಿ ಹಿಡಿತದ ಆಳ ಅಗಲ ಈಗ ಗೌಪ್ಯವಾಗಿ ಉಳಿದಿರುವ ವಿಚಾರವೇನು ಅಲ್ಲ. ಎಲ್ಲಿ ಸೋತರೂ ಬೆಂಗಳೂರು ದಕ್ಷಿಣ ಭಾಗದಲ್ಲಿ ಮಾತ್ರ ಬಿಜೆಪಿ ಸೋತು ಹಿಡಿತ ಕಳೆದುಕೊಳ್ಳುವುದಿಲ್ಲ ಎಂದು ಬಿಜೇಪಿಯೇತರ ನಡುವೆಯೇ ಇರುವ ಮಾತು. ಹೀಗೆ ಆರ್‌ಆರ್ ನಗರ ವಲಯ, ಬೊಮ್ಮನಹಳ್ಳಿ ವಲಯ, ಕೆಆರ್ ಪುರಂ ಈ ಭಾಗದಲ್ಲಿ ಹೆಚ್ಚೆಚ್ಚು ವಾರ್ಡ್‌ಗಳನ್ನು ವಿಂಗಡಿಸಿ ಬಿಬಿಎಂಪಿ ಚುನಾವಣೆ ಗೆಲ್ಲುವ ಲೆಕ್ಕಾಚಾರ ಹಾಕಿಕೊಂಡಿದೆ ಬಿಜೆಪಿ.
ಮೇಕೆದಾಟು ಪಾದಯಾತ್ರೆ : ಕೈ ರಣತಂತ್ರ
ಇದು ಕಾಂಗ್ರೆಸ್ಗೂ ಗೊತ್ತಿರುವ ವಿಚಾರವೇ. ಇದೇ ಕಾರಣಕ್ಕೆ ಇದರ ವಿರುದ್ಧ ಪ್ರತಿಭಟಿಸಿ ಇದನ್ನು ಜನರಿಗೆ ಅರಿವು ಮಾಡಿಸಬೇಕು ಎಂದು ಕೆಪಿಸಿಸಿ ಕಚೇರಿಯಲ್ಲಿ ಕೂತು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗ ರೆಡ್ಡಿ ಹಾಗೂ ತಂಡ ನಿರ್ಧಾರ ಮಾಡಿದೆ. ಇದೇ ಕಾರಣಕ್ಕೆ ಚುನಾವಣೆ ಕಾವು ಹೆಚ್ಚಿದ ಕೂಡಲೇ ಮೂರು ಪ್ರಮುಖ ಅಂಶಗಳನ್ನಿಟ್ಟುಕೊಂಡು ಬೀದಿಗಳಿಯಲು ನಿರ್ಧರಿಸಿದೆ. ಒಂದು, ಅವೈಜ್ಞಾನಿಕವಾಗಿ ವಾರ್ಡ್ ವಿಂಗಡಣೆ ಮಾಡಲಾಗಿದೆ. ಎರಡು, ಗಾರ್ಬೇಜ್ ಬಿಲ್ ಹೇರಿಕೆ ಮಾಡಿ ಜನರ ಮೇಲೆ ಮತ್ತಷ್ಟು ಹೊರೆ ಹಾಕಲಾಗುತ್ತಿದೆ. ಮೂರು, ಕೊರೋನಾ ಪರಿಸ್ಥಿತಿಯನ್ನು ಬಿಜೆಪಿ ನಿಭಾಯಿಸಿದ ರೀತಿ. ಹೀಗೆ ಮೂರು ಪ್ರಮುಖ ಅಂಶಗಳನ್ನು ಇಟ್ಟುಕೊಂಡು ಬಿಬಿಎಂಪಿ ಚುನಾವಣಾ ರಣರಂಗಕ್ಕೆ ದಾಪುಗಾಲಿಡಲು ಕಾಂಗ್ರೆಸ್ ನಿರ್ಧರಿಸಿದೆ. ಈಗಾಗಲೇ ಈ ಬಗ್ಗೆ ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಜೊತೆಗೆ ಬೆಂಗಳೂರಿನ ಕೈ ಕೌನ್ಸಿಲರ್‌ಗಳಾಗಬಹುದಾದ ನಾಯಕರು ಮೀಟಿಂಗ್ ಮಾಡಿ ಚುನಾವಣೆ ತಯಾರಿ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಅಲ್ಲದೆ ಇತ್ತೀಚೆಗೆ ಕೈಗೊಳ್ಳಲಾಗಿದ್ದ ಮೇಕೆದಾಟು ಪಾದಯಾತ್ರೆ ಈ ಬಾರಿಯ ಬಿಬಿಎಂಪಿ ಚುನಾವಣೆಯಲ್ಲಿ ಕೈ ಬಳಿ ಇರುವ ಪ್ರಮುಖ ಅಸ್ತ್ರ. ಮೇಕೆದಾಟು ಪಾದಯಾತ್ರೆಯಿಂದ ಬಿಜೆಪಿಗೆ ತೀವ್ರ ಮುಖಭಂಗವಾಗಿದೆ ಎಂಬುವುದು ಸತ್ಯ. ಅದನ್ನೇ ಮುಂದಿಟ್ಟುಕೊಂಡು ಬೆಂಗಳೂರಿನ ಕುಡಿಯವ ನೀರಿಗೆ ಮೇಕೆದಾಟು ಪಾದಯತ್ರೆಯೇ ಪರಿಹಾರ ಎಂಬ ನೆಲೆಗಟ್ಟಿನಲ್ಲಿ ಜನರ ಕಡೆಗೆ ಹೆಜ್ಜೆ ಹಾಕಲು ಕಾಂಗ್ರೆಸ್ ಹಿರಿಯ ನಾಯಕರ ನಿರ್ದೇಶನವಿದೆ.
ಒಂದು ಕಡೆ ವಾರ್ಡ್ ವಿಂಗಡಿಸಿ ಹಿಂಬಂದಿಯಿಂದ ಮತ್ತೊಮ್ಮೆ ಅಧಿಕಾರಕ್ಕೆ ಏರಲು ಪ್ರಯತ್ನಿಸುತ್ತಿರುವ ಬಿಜೆಪಿಗೆ ಈ ಬಿಬಿಎಂಪಿ ಚುನಾವಣೆ ಸುಲಭದ ತುತ್ತಲ್ಲ. ಕಳೆದ ಬಾರಿ ಗದ್ದುಗೆ ಗೆದ್ದುಕೊಂಡಿದ್ದ ಬಿಜೆಪಿ ಗೌತಮ್ ಕುಮಾರ್‌ಗೆ ಮೇಯರ್ ಪಟ್ಟ ಕಟ್ಟಿ ಅಧಿಕಾರ ನಡೆಸಿ ಮಳೆಯಿಂದಾದ ಅನಾಹುತಗಳಿಂದ ಎಷ್ಟು ಸಾಧ್ಯವೋ ಅಷ್ಟು ಕೆಟ್ಟ ಹೆಸರು ಪಡೆದುಕೊಂಡಿತ್ತು. ಅದಾಗಿ ಕೊರೋನಾ ಧಾವಿಸಿದ್ದರಿಂದ ಅದೀಗ ಜನರ ನೆನಪಿನಲ್ಲಿ ಇರಲು ಸಾಧ್ಯವಿಲ್ಲ. ಇದು ಸ್ವಲ್ಪ ಮಟ್ಟಿಗೆ ಈ ಚುನಾವಣೆಯಲ್ಲಿ ಬಿಜೆಪಿಯ ಕೈ ಹಿಡಿಯಲಿದೆ. ಆದರೆ ಎರಡು ಬೈ ಎಲೆಕ್ಷನ್ ಹಾಗೂ ಸ್ಥಳೀಯ ಸಂಸ್ಥೆಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ನೀಡಿದ ಪೈಪೋಟಿಗೆ ಬಿಜೆಪಿ ಖಂಡಿತ ಬೆದರಿದೆ. ಹೀಗಾಗಿಯೇ ವಾರ್ಡ್ ವಿಂಗಡಣೆ ಅಸ್ತ್ರ ಮುಂದಿಟ್ಟಿದ್ದು, ಇನ್ನೇನು 198 ಇದ್ದ ವಾರ್ಡ್ ಸಂಖ್ಯೆ 242 ಆಗಲಿದೆ. ಇದರ ಜೊತೆಗೆ ಇನ್ನೇನು ಕೆಲವೇ ದಿನಗಳಲ್ಲಿ ಬಿಬಿಎಂಪಿ ಈ ಪ್ರಸಕ್ತ ಸಾಲಿನ ಪ್ರಾಸ್ತವಿಕ ಬಜೆಟ್ ಮಂಡಿಸಲಿದೆ. ಈ ಬಜೆಟ್‌ನಲ್ಲಿ ಭರಪೂರ ಅನುಮೋದನೆ ನೀಡಲು ನಿರ್ಧಾರ ಮಾಡಿದೆ ಎನ್ನುವ ಮಾಹಿತಿ ಮಲ್ಲೇಶ್ವರದ ಕಚೇರಿಯಿಂದ ಸಿಕ್ಕಿದೆ.
ಹೀಗೆ ಬಿಬಿಎಂಪಿ ಚುನಾವಣೆ ಈ ಬಾರಿಯ ವಿಧಾನಸಭಾ ಚುನಾವಣೆಗೆ ದಿಕ್ಸೂಚಿಯಾಗಿ ನಿಂತಿದೆ. ಇಲ್ಲಿ ಸೋತರೆ ಅಲ್ಲಿ ಸೋಲು ಎಂಬರ್ಥದಲ್ಲಿ ಅಲ್ಲದಿದ್ದರೂ ಬಿಜೆಪಿ ಸೋತರೆ ಹೈ ಕಮಾಂಡ್ ಮುಂದೆ ತಮ್ಮ ಕಿಮ್ಮತ್ತು ಕಳೆದುಕೊಂಡು ಇಲ್ಲದ ಬೆಲೆಯಲ್ಲಿ ಮತ್ತೊಂದಿಷ್ಟು ಬೆಲೆ ಕಳೆದುಕೊಳ್ಳಲಿದೆ. ಇದೇ ವೇಳೆ ಕಾಂಗ್ರೆಸ್ ಸೋತರೆ ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯನವರ ನಡುವಿನ ಮನಸ್ತಾಪವೇ ಇದಕ್ಕೆ ಕಾರಣ ಎಂಬ ಸಂಗತಿ ಮತ್ತೊಮ್ಮೆ ದೆಹಲಿ ಎಐಸಿಸಿ ಬಾಗಿಲು ಬಡಿಯಲಿದೆ. ಇದರ ನಡುವೆ ಕುಮಾರಣ್ಣ ಸಿಕ್ಕಷ್ಟು ಬಾಚಿಕೊಳ್ಳುವ ಎಂದಿನ ತಂತ್ರಗಾರಿಕೆಯೊಂದಿಗೇ ಇದ್ದು, ಕನಿಷ್ಠ 3 ಸ್ಥಾಯಿ ಸಮಿತಿ ಧಕ್ಕಿಸಿಕೊಳ್ಳುವ ಆಟ ಆಡಲಿದೆ.