ಇಲ್ಲಿ ಒಂದು ಲಿಂಗಾಯತರ ಶತಮಾನಪೂರ್ವದ ಮಠವಿದೆ, ಪಕ್ಕದಲ್ಲೇ ಶತಮಾನ ಪೂರೈಸಿದ ಹೆಣ್ಣುಮಕ್ಕಳ ಕನ್ನಡ ಸರ್ಕಾರಿ ಶಾಲೆಯಿದೆ. ಇವೆರಡನ್ನೂ ಧ್ವಂಸಗೊಳಿಸಿ ಇಲ್ಲಿ ವಿವೇಕಾನಂದರ ಸ್ಮಾರಕದ ಹೆಸರಲ್ಲಿ ರಿಯಲ್ ಎಸ್ಟೇಟ್ ವ್ಯವಹಾರ ಮಾಡಲು ಮೈಸೂರಿನ ರಾಮಕೃಷ್ಣಾಶ್ರಮ ಹೊರಟಿದೆ. ಈ ಆಶ್ರಮ ಎಂದೋ ವೈದಿಕ ಸ್ವರೂಪ ಪಡೆದುಕೊಇಂಡಿದೆ.
2013ರಲ್ಲಿ ವಿವೇಕಾನಂದರ 150ನೆ ಜನ್ಮ ದಿನಾಚರಣೆ ನಿಮಿತ್ತ, ವಿವೇಕಾನಂದರು ತಂಗಿದ, ಧ್ಯಾನ ಮಾಡಿದ ಸ್ಥಳಗಳಲ್ಲಿ ಸ್ಮಾರಕ ನಿರ್ಮಿಸಲು ಕೇಂದ್ರದ ಮನಮೋಹನಸಿಂಗ್ ಸರ್ಕಾರ ನಿರ್ಧರಿಸಿತು. ಆಗ ಇಲ್ಲಿ ಅದಿಕಾರದಲ್ಲಿದ್ದ ಸದಾನಂದಗೌಡರ ಸರ್ಕಾರ ಕ್ಯಾಬಿನೆಟ್ ತೀರ್ಮಾನ ತೆಗೆದುಕೊಂಡು ಮೈಸೂರಿನಲ್ಲಿ ಸ್ಮಾರಕ ನಿರ್ಮಿಸುವ ಜವಾಬ್ದಾರಿಯನ್ನು ರಾಮಕೃಷ್ಣ ಮಠಕ್ಕೆ ನೀಡಿತು.
ಸರ್ಕಾರಿ ಶಾಲೆ ಮತ್ತು ನಿರಂಜನ ಮಠಗಳನ್ನು ಹಾಗೇ ಉಳಿಸಿಕೊಳ್ಳಲಯ ಸರ್ಕಾರದ ಆದೇಶವಿದ್ದರೂ, ನಿರಂಜನ ಮಠ ಮತ್ತು ಶಾಲೆಯನ್ನು ಧ್ವಂಸ ಮಾಡಲು ರಾಮಕೃಷ್ಣ ಮಠ ನಿರ್ಧರಿಸಿತು. ಆಗ ಸಾ.ರಾ. ಸುದರ್ಶನ್ ನೇತೃತ್ವದ ಕನ್ನಡ ಕ್ರಿಯಾಸಮಿತಿ ಶಾಲೆಯ ಉಳಿವಿಗಾಗಿ ಹೈಕೋರ್ಟ್ ಮೆಟ್ಟಿಲು ಏರಿತು. ಇನ್ನೊಂದು ಕಡೆ ಲಿಂಗಾಯತ ಸಂಘಟನೆಗಳು ನಿರಂಜನ ಮಠದ ಉಳಿವಿಗಾಗಿ ಹೈಕೋರ್ಟ್ ಮೊರೆ ಹೋದವು. ಅದಿನ್ನೂ ಕೋರ್ಟಿನಲ್ಲಿ ವಿಚಾರಣೆ ನಡೆಯುತ್ತಿದೆ.
ಹೀಗಿರುವಾಗ 10 ದಿನಗಳ ಹಿಂದೆ ಏಕಾಏಕಿ ರಾಮಕೃಷ್ಣ ಮಠದವರು ನಿರಂಜನ ಮಠದಲ್ಲಿನ ಕೆಲವು ಗದ್ದುಗೆಗಳನ್ನು ನಾಶ ಮಾಡಿದರು. ದಕ್ಷಿಣಾ ಮೂರ್ತಿಯನ್ನು ತೆಗೆದು ಅದನ್ನು ಹೂಳಲು ಹೊರಟಾಗ ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾ ಅಧ್ಯಕ್ಷ ಮಹಾದೇವಪ್ಪ ಇದನ್ನು ತಡೆದರು. ಈಗ 10 ದಿನಗಳಿಂದ 70ಕ್ಕೂ ಹೆಚ್ಚು ಲಿಂಗಾಯತ ಸಂಘಟನೆಗಳ ಸದಸ್ಯರು ಸರದಿ ಮೇಲೆ ಅಹೋರಾತ್ರಿ ಧರಣಿ ಆರಂಭಿಸಿದ್ದಾರೆ. ಇನ್ನೊಂದು ಕಡೆ ಶಾಲೆ ಉಳಿವಿಗಾಗಿ ದೇವನೂರು ಮಹಾದೇವರ ನೇತೃತ್ವದಲ್ಲಿ ಕನ್ನಡ ಕ್ರಿಯಾ ಸಮಿತಿ ಪ್ರತಿಭಟನೆ ನಡೆಸಿದೆ.
ಇತಿಹಾಸ ಏನು ಹೇಳುತ್ತದೆ?
1892ರಲ್ಲಿ ವಿವೇಕಾನಂದರು ಮೈಸೂರಿಗೆ ಭೇಟಿ ನೀಡಿದ್ದಾಗ ಅವರು ಶೂದ್ರ ಎಂಬ ಕಾರಣಕ್ಕೆ ಇಲ್ಲಿನ ಬ್ರಾಹ್ಮಣ ಮಠಗಳು ಅವರಿಗೆ ತಂಗಲು ವ್ಯವಸ್ಥೆ ಮಾಡಲು ಹಿಂದೆ ಮುಂದೆ ನೋಡಿದ್ದವು. ಆಗ ಲಿಂಗಾಯತರ ನಿರಂಜನ ಮಠವು ಅವರಿಗೆ ತಂಗಲು ಅವಕಾಶ ನೀಡಿತ್ತು. ಅಲ್ಲಿ ವ್ಯವಸ್ಥೆ ಅಷ್ಟುಸರಿಯಾಗಿ ಇರದ ಕಾರಣ ಮೂರು ದಿನಗಳ ನಂತರ ವಿವೇಕಾನಂದರು ಪಕ್ಕದ ಶೇಷಾದ್ರಿ ಭವನದಲ್ಲಿ 12 ದಿನ ತಂಗಿದ್ದರು. ಈಗ ವಿವೇಕಾನಂದರ ಆಶಯಗಳಿಗೆ ವಿರುದ್ಧವಾಗಿ ಶಾಲೆಯನ್ನೇ ನೆಲಸಮ ಮಾಡಲು ರಾಮಕೃಷ್ಣ ಆಶ್ರಮ ಮುಂದಾಗಿದೆ.
ಮೈಸೂರು ರಾಜ ಕೃಷ್ಭರಾಜ ಒಡೆಯರ್ ಅವರ ತಾಯಿ ಅನಕ್ಷರಸ್ಥರು. ಹೆಣ್ಣು ಮಕ್ಕಳಿಗೆ ವಿದ್ಯಾಭ್ಯಾಸ ನೀಡುವ ಉದ್ದೇಶದಿಂದ ಅವರು ನಿರಂಜನ ಮಠದ ಪಕ್ಕದಲ್ಲಿ 1880ರಲ್ಲಿ ಹೆಣ್ಣು ಮಕ್ಕಳ ಶಾಲೆ ಸ್ಥಾಪಿಸಿದರು. ಸಾವಿತ್ರಿಬಾಯಿ ಪುಲೆ ಮಹಾರಾಷ್ಟ್ರದಲ್ಲಿ ಹೆಣ್ಣು ಮಕ್ಕಳಿಗೆ ಶಾಲೆ ಆರಂಭಿಸಿದ ನಂತರ ಶುರುವಾದ ಎರಡನೇ ಹೆಣ್ಣುನಕ್ಕಳ ಶಾಲ ಇದಾಗಿದೆ.
ಈ ಕುರಿತು ಪ್ರತಿಧ್ವನಿ ಜೊತೆ ಮಾತನಾಡಿದ ದೇವನೂರು ಮಹಾದೇವ ಮತ್ತು ಸಾ.ರಾ. ಸುದರ್ಶನ್, ಶತಮಾನಗಳ ಇತಿಹಾಸದ ಕನ್ನಡ ಶಾಲೆ ಉಳಿಸಿಕೊಳ್ಳಲು ಬದ್ಧರಾಗಿದ್ದೇವೆ ಎಂದರು.
ಜಾಗತಿಕ ಲಿಂಗಾಯತ ಮಹಾಸಭಾದ ಮಹಾದೇವಪ್ಪ, ‘ಮೈಸೂರಿನ ಹೃದಯ ಭಾಗದ ಕೃಷ್ಣ ವಿಲಾಸ ರಸ್ತೆಯಲ್ಲಿರುವ ಈ ಜಾಗ 46 ಸಾವಿರ ಚದರ ಅಡಿ ಇದ್ದು, ಸದ್ಯ ಚದರ ಅಡಿಗೆ 10-15 ಸಾವಿರ ರೂ ಮಾರುಕಟ್ಟೆ ಮೌಲ್ಯವಿದ್ದು, ಲಿಂಗಾಯತರ ನಿರಂಜನ ಮಠ ಮತ್ತು ಸರ್ಕಾರಿ ಹೆಣ್ಣು ಮಕ್ಕಳ ಶಾಲೆಯನ್ನು ನಾಶ ಮಾಡಿ ಇಲ್ಲಿ ವಿವೇಕಾನಂದರ ಹೆಸರಲ್ಲಿ ರಿಯಲ್ ಎಸ್ಟೇಟ್ ದಂಧೆ ನಡೆಯುತ್ತಿದೆ. ಸ್ಥಾವರಕ್ಕೆ ಅಳಿವುಂಟು ಜಂಗಮಕ್ಕೆ ಅಳಿವಿಲ್ಲ ಎಂಬ ಬಸವಣ್ಣನವರ ಆಶಯಕ್ಕೆ ವಿರುದ್ಧವಾಗಿ ವೈದಿಕ ಹಿತಾಸಕ್ತಿಗಳು ಈ ಕೆಲಸ ಮಾಡುತ್ತಿವೆ. ಎಲ್ಲ ಲಿಂಗಾಯತ ಸಂಘಟನೆಗಳು ಸೇರಿ ನಿರಂಜನ ಮಠ ಉಳಿಸಲು ಅಹೋರಾತ್ರಿ ಧರಣಿ ಮಾಡುತ್ತಿದ್ದೇವೆ. ಇದು ಒಂದು ರೀತಿಯಲ್ಲಿ ಲಿಂಗಾಯತ ವರ್ಸಸ್ ಬ್ರಾಹ್ಮಣ್ಯ ಸ್ವರೂಪದ ಹೋರಾಟವಾಗಿದೆ’ ಎಂದರು.
ವೀರಶೈವ ಮಹಾಸಭಾ ಕೂಡ ಈ ಹೋರಾಟದಲ್ಲಿ ಭಾಗಿಯಾಗಿದ್ದು, ಮಹಾಸಭಾದ ರಾಷ್ಟ್ರೀಯ ಕಾರ್ಯದರ್ಶಿ ರೇಣುಕಾ ಪ್ರಸಾದ ಅವರು, ‘ಇದು ನಮ್ಮ ಅಸ್ತಿತ್ವ ಮತ್ತು ಅಸ್ಮಿತೆಯ ಪ್ರಶ್ನೆ. ಮಠ ಮತ್ತು ಶಾಲೆ ಎರಡನ್ನೂ ಉಳಿಸಿಕೊಳ್ಳಲೇಬೇಕಿದೆ’ ಎಂದರು.
ಸರ್ಕಾರ ಕೂಡಲೇ ಮಧ್ಯಸ್ಥಿಕೆ ಬಹಿಸಿ ರಾಮಕೃಷ್ಣ ಮಠದವರಿಗೆ ನೀಡಿರುವ ಅಧಿಕಾರವನ್ನು ಹಿಂಪಡೆಯಬೇಕು. ಸಾಂಕೇತಿಕವಾಗಿ ವಿವೇಕಾನಂದರ ಒಂದು ಪ್ರತಿಮೆ ನಿಲ್ಲಿಸಿ ವಿವಾದ ಬಗೆಹರಿಸಬೇಕು ಅಲ್ಲವೇ?