ಕಳೆದ ವಾರ ಬಿಜೆಪಿಯ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿ ರಾಜ್ಯಕ್ಕೆ ವಾಪಸ್ ಆಗಿರುವ ಬಿಜೆಪಿಯ (bjp) ಮಾಜಿ ಸಚಿವ ವಿ. ಸೋಮಣ್ಣ (VSomanna) ರಾಜಕೀಯವಾಗಿ ಹೊಸದೊಂದು ದಾಳ ಉರುಳಿಸಿದ್ದಾರೆ. ನನಗೆ ಲೋಕಸಭಾ ಚುನಾವಣೆಯಲ್ಲಿ ಯಾವುದೇ ಕ್ಚೇತ್ರದ ಟಿಕೆಟ್ ಬೇಡ. ನನ್ನನ್ನು ರಾಜ್ಯಸಭೆಗೆ ಆಯ್ಕೆ ಮಾಡಿ ಎಂದು ಹೈಕಮಾಂಡ್ ನಾಯಕರ ಬಳಿ ಹೇಳಿದ್ದಾರೆ. ಈ ವಿಚಾರ ಈಗ ರಾಜ್ಯ ಬಿಜೆಪಿಯಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

2023 ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಎರಡು ಕ್ಷೇತ್ರಗಳಿಂದ ಕಣಕ್ಕಿಳಿದು ಪರಾಭವಗೊಂಡಿರುವ ವಿ. ಸೋಮಣ್ಣ(VSomanna) 2024 ರ ಲೋಕಸಭಾ (Lokasabha) ಚುನಾವಣೆಯಲ್ಲಿ ತುಮಕೂರು (Tumkur) ಕ್ಷೇತ್ರದಿಂದ ಕಣಕ್ಕಿಳಿಯುತ್ತಾರೆ ಎನ್ನಲಾಗುತ್ತಿದ್ದು, ಏಕಾಏಕಿ ಸೋಮಣ್ಣ ರಾಜ್ಯಸಭೆಗೆ ಆಯ್ಕೆ ಬಯಸಿದ್ದೇಕೆ? ಎಂಬ ಕುತೂಹಲ ಹುಟ್ಟುಕೊಂಡಿದೆ.
ವಿ.ಸೋಮಣ್ಣ ಲೋಕಸಭಾ ಚುನಾವಣೆಯ ಹೊಸ್ತಿಲಿನಲ್ಲಿ, ರಾಜ್ಯಸಭೆಗೆ ಆಯ್ಕೆ ಬಯಸಿದ್ದರ ಹಿಂದೆ ಬಹಳ ಪ್ರಮುಖವಾದ ಅಂಶಗಳು ಅಡಕವಾಗಿದೆ ಎಂಬುದು ಇದೀಗ ಹೊರಬಿದ್ದಿದೆ.
ಹಾಗಾದ್ರೆ ಏನದು ಪ್ರಮುಖ ಅಂಶಗಳು ಎಂಬುದನ್ನು ನೋಡುವುದಾದ್ರೆ,
- ಈಗಾಗಲೇ ಸೋಮಣ್ಣರಿಗೆ 73 ವರ್ಷ ವಯಸ್ಸು. ಈಗ ಚುನಾವಣೆಗೆ ಓಡಾಟ ಮಾಡುವ ಶಕ್ತಿ ಸಾಮರ್ಥ್ಯ ಕಡಿಮೆಯಾಗಿರಬಹುದು.
- ಲೋಕಸಭಾ ಚುನಾವಣೆಯಲ್ಲಿ ಸ್ಫರ್ಧೆ ಮಾಡುವುದಾದ್ರೆ ಸೋಮಣ್ಣ ಸ್ಪರ್ಧೆ ಮಾಡಬೇಕಾಗಿರುವುದು ಕೇವಲ ತುಮಕೂರು ಕ್ಷೇತ್ರದಿಂದ ಮಾತ್ರ.
- ಕಳೆದ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಚಾಮರಾಜನಗರ ಹಾಗೂ ವರುಣಾ ಎರಡು ವಿಧಾನಸಭಾ ಕ್ಷೇತ್ರಗಳಲ್ಲೂ ಸ್ಪರ್ಧೆ ಮಾಡಿದ್ದ ಸೋಮಣ್ಣ ಎರಡು ಕಡೆಗಳಲ್ಲೂ ಪರಾಭವಗೊಂಡಿದ್ದು ಈಗ ಇತಿಹಾಸ.
- ಆದ್ರೆ, ಸೋಮಣ್ಣರ ಮಾತಿನ ಪ್ರಕಾರವೇ ಅವರ ಸೋಲಿನ ಕಾರಣ ಬಿ.ಎಸ್.ಯಡಿಯೂರಪ್ಪ ಹಾಗೂ ಅವರ ಪುತ್ರ ಬಿ.ವೈ.ವಿಜಯೇಂದ್ರ.
- ಈಗ ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಒಂದು ವೇಳೆ ಸೋಮಣ್ಣ ಸ್ಫರ್ಧೆ ಮಾಡಿ, ಆಗಲೂ ಸೋಮಣ್ಣಗೆ, ಯಡಿಯೂರಪ್ಪ ಹಾಗೂ ವಿಜಯೇಂದ್ರ ಸೋಲಿಸುವುದಿಲ್ಲ ಎಂಬ ನಂಬಿಕೆ ಇಲ್ಲ.
- ಇನ್ನು ಯಡಿಯೂರಪ್ಪ, ವಿಜಯೇಂದ್ರರನ್ನು ಕಂಡರೆ ಈಗಲೂ ಸೋಮಣ್ಣ ಕೊಂಚ ಹೆದರಿದ್ದಾರೆ.
- ಇತ್ತ ಬಿಜೆಪಿ ಹೈಕಮಾಂಡ್ ನಾಯಕರ ಶ್ರೀರಕ್ಷೆ ಇದ್ದರೂ, ರಾಜ್ಯ ನಾಯಕರ ಬೆಂಬಲವಿಲ್ಲದೇ ಹೋದರೆ, ಸೋಲು ನಿಶ್ಚಿತ.
- ಇದೆಲ್ಲದರ ಜೊತೆಗೆ, ಸೋಮಣ್ಣರಿಗೆ ಆರ್ಥಿಕವಾಗಿಯೂ ಕಳೆದ ಚುನಾವಣೆ ಸಾಕಷ್ಟು ಪೆಟ್ಟು ಕೊಟ್ಟಿದ್ದು, ಅದರಿಂದ ಹೊರಬರಲು ಇನ್ನು ಸ್ವಲ್ಪ ದಿನಗಳು ಬೇಕು ಎಂಬ ಕಾರಣವು ಇದೆ.
ಹೀಗೆ ಸಾಲು ಸಾಲು ಕಾರಣಗಳನ್ನು ಮುಂದಿಟ್ಟುಕೊಂಡು ಸೋಮಣ್ಣ, ಹೈಕಮಾಂಡ್ ನಾಯಕರ ಬಳಿ ಲೋಕಸಭಾ ಬದಲಿಗೆ ರಾಜ್ಯಸಭೆಗೆ ಆಯ್ಕೆ ಬಯಸಿದ್ದಾರೆ ಎನ್ನಲಾಗಿದೆ.
ಹಾಗಾದ್ರೆ ಹೈಕಮಾಂಡ್ ನಾಯಕರು ಸೋಮಣ್ಣಗೆ ರಾಜ್ಯಸಭೆಗೆ ಆಯ್ಕೆ ಮಾಡುತ್ತಾರಾ?

ಇಲ್ಲ. ಈಗಿರುವ ಮಾಹಿತಿಯ ಪ್ರಕಾರ, ಇದು ಅಸಾಧ್ಯವೇ. ವಿ. ಸೋಮಣ್ಣ ರಾಜ್ಯ ಲಿಂಗಾಯತ ಸಮುದಾಯದ ನಾಯಕರಲ್ಲಿ ಒಬ್ಬರು. ಅವರಿಗೆ ಈಗಲೂ ಚುನಾವಣಾ ರಾಜಕಾರಣದಲ್ಲಿ ಸ್ಪರ್ಧೆ ಮಾಡುವ ತಾಕತ್ತು ಇದೆ. ಹಿಂಬಾಗಿಲ ರಾಜಕಾರಣ ಸೋಮಣ್ಣರಿಗೆ ಅವಶ್ಯಕತೆ ಇಲ್ಲ. ಇದರ ಜೊತೆಗೆ ನನಗೆ ಲೋಕಸಭೆಗೆ ಟಿಕೆಟ್ ಬೇಡ. ರಾಜ್ಯಸಭೆಗೆ ಆಯ್ಕೆ ಮಾಡಿ ಎಂದರೆ, ಲೋಕಸಭಾ ಚುನಾವಣೆಯಲ್ಲಿ ಮೂರ್ನಾಲ್ಕು ಕ್ಷೇತ್ರಗಳ ಜವಾಬ್ದಾರಿ ನೀಡಿ ಎಂದಿರುವ ಅವರಿಗೆ, ಜವಾಬ್ದಾರಿ ನೀಡಿದ್ದೇ ಆದ್ರೆ, ರಾಜ್ಯದಲ್ಲಿ ಬಿಜೆಪಿಗೆ ಇನ್ನೊಂದು ಪವರ್ ಸೆಂಟರ್ ರೂಪಿಸಿದಂತಾಗುತ್ತದೆ. ಈ ನಿಟ್ಟಿನಲ್ಲಿ ಯಾವುದೇ ಕಾರಣಕ್ಕೂ ಸೋಮಣ್ಣಗೆ ರಾಜ್ಯಸಭೆಗೆ ಆಯ್ಕೆ ಮಾಡುವುದಿಲ್ಲ. ಅವರನ್ನು ಏನಿದ್ರೂ ಲೋಕಸಭಾ ಚುನಾವಣೆಗೆ ಟಿಕೆಟ್ ಕೊಡುವುದು ಹೈಕಮಾಂಡ್ ನಾಯಕರ ಪ್ಲಾನ್ ಎನ್ನಲಾಗಿದೆ.