ಕಲಬುರಗಿ ಜಿಲ್ಲೆಯ ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ಮತಗಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ (SIT) ಅಧಿಕಾರಿಗಳು ತನಿಖೆ ತೀವ್ರಗೊಳಡಿಸಿದ್ದು, ಆಳಂದ ಕ್ಷೇತ್ರದ ಬಿಜೆಪಿಯ ಮಾಜಿ ಶಾಸಕ ಸುಭಾಷ್ ಗುತ್ತೇದಾರ್ (Ex MLA Subhash Guttedar) ಮನೆ ಸೇರಿದಂತೆ ಮೂರು ಕಡೆ ದಾಳಿ ಮಾಡಿದೆ. ಎಸ್ಐಟಿ ಎಸ್ಪಿ ಶುಭಾನ್ವಿತಾ (SIT SP Shubhanvita) ನೇತೃತ್ವದ ತಂಡ ಕಲಬುರಗಿಯ ಗುಬ್ಬಿ ಕಾಲೋನಿಯಲ್ಲಿರುವ ಸುಭಾಷ್ ಗುತ್ತೇದಾರ್ ಮನೆ ಹಾಗೂ ಸಿಎ ಮನೆ ಮೇಲೂ ದಾಳಿ ನಡೆಸಿ ಪರಿಶೀಲನೆ ನಡೆಸಿದೆ.

ನಿನ್ನೆ ಅಷ್ಟೇ ಎಸ್ಐಟಿ ಅಧಿಕಾರಿಗಳು ಕಲಬುರಗಿಯಲ್ಲಿ ಅಕ್ರಂ ಎನ್ನುವಾತನ ಮನೆಯಲ್ಲಿ ದಾಳಿ ಮಾಡಿತ್ತು. ಆ ವೇಳೆ ರಾಶಿ ರಾಶಿ ವೋಟರ್ ಐಡಿಗಳು ಪತ್ತೆ ಆಗಿದ್ದವು. ಒಟ್ಟು 15 ಮೊಬೈಲ್ ಫೋನ್, 7 ಲ್ಯಾಪ್ ಟಾಪ್ಗಳನ್ನು ಎಸ್ಐಟಿ ಅಧಿಕಾರಿಗಳು ಜಪ್ತಿ ಮಾಡಿಕೊಂಡಿದ್ದರು. ಇದರ ಬೆನ್ನಲ್ಲೇ ಇದೀಗ ಎಸ್ಐಟಿ ಮಾಜಿ ಶಾಸಕರ ಮನೆ ಮೇಲೂ ದಾಳಿ ನಡೆಸಿದೆ.

ಆಳಂದ ಕ್ಷೇತ್ರದ ಜೊತೆ ಕಲಬುರಗಿಯ ಇನ್ನು ಎರಡು ಕ್ಷೇತ್ರಗಳಲ್ಲಿ ನಡೆದ ಮತ ಅಕ್ರಮ ಪ್ರಕರಣದಲ್ಲಿ ಎಸ್ ಐಟಿ ಕೈಹಾಕಿದ್ದು ತನಿಖೆ ತೀವ್ರಗೊಳಿಸಿದೆ. ಬಿಜೆಪಿಯ ಇಬ್ಬರು ನಾಯಕರ ಚಾರ್ಟೆಡ್ ಅಕೌಂಟೆಂಟ್ ಆಗಿರುವ ಮಲ್ಲಿಕಾರ್ಜುನ ಮಹಾಂತಗೋಳ ಮನೆ ಹಾಗೂ ಕಚೇರಿ ಮೇಲೂ ಎಸ್ಐಟಿ ದಾಳಿ ಮಾಡಿದೆ. 2023ರ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಮತದಾರರ ಸೇರ್ಪಡೆಗೆ ಮಲ್ಲಿಕಾರ್ಜುನ, ಅಕ್ರಂ ಎಂಬ ವ್ಯಕ್ತಿಗೆ ಡೀಲ್ ಕೊಟ್ಟಿದ್ದ ಎನ್ನುವ ಅಂಶ ತಿಳಿದುಬಂದಿದೆ. ಹೀಗಾಗಿ ಎಸ್ಐಟಿ ಮಲ್ಲಿಕಾರ್ಜುನ ಮನೆ ಮತ್ತು ಕಚೇರಿ ಮೇಲೆ ದಾಳಿ ಮಾಡಿ ಪರಿಶೀಲನೆ ನಡೆಸಿದೆ.

2023ರಲ್ಲಿ ಆಳಂದ ಕ್ಷೇತ್ರದಲ್ಲಿ ಮತಗಳ್ಳತನ ಆಗಿದೆ ಎಂದು ಕಾಂಗ್ರೆಸ್ ಶಾಸಕ ಬಿ.ಆರ್. ಪಾಟೀಲ್ ದೂರು ನೀಡಿದ್ದು, ಈ ಸಂಬಂಧ ಎಫ್ಐಆರ್ ದಾಖಲಾಗಿತ್ತು. ಮತ್ತೊಂದೆಡೆ ಈ ಮತಗಳ್ಳತನ ಸಂಬಂಧ ರಾಹುಲ್ ಗಾಂಧಿ ಧ್ವನಿ ಎತ್ತಿದ್ದು, ಬಿಜೆಪಿ ಹಾಗೂ ಚುನಾವಣಾ ಆಯೋಗದ ವಿರುದ್ಧ ಬಹಿರಂಗ ಆರೋಪ ಮಾಡಿದ್ದು, ಇದು ರಾಷ್ಟ್ರ ಮಟ್ಟದಲ್ಲಿ ದೊಡ್ಡ ಸುದ್ದಿಯಾಗಿತ್ತು. ರಾಹುಲ್ ಗಾಂಧಿ ಮೊದಲು ಬೆಂಗಳೂರಿನ ಮಹದೇವಪುರ ಕ್ಷೇತ್ರದಲ್ಲಿ ಮತಗಳ್ಳನವಾಗಿದೆ ಎಂದು ಆರೋಪ ಮಾಡಿದ್ದರು. ಬಳಿಕ ಕಲಬುರಗಿ ಜಿಲ್ಲೆಯ ಆಳಂದ ಕ್ಷೇತ್ರದಲ್ಲೂ ಮತಗಳ್ಳತನವಾಗಿದೆ ಎಂದು ಆರೋಪಿಸಿದ್ದರು. ಇದರ ಬೆನ್ನಲ್ಲೇ ರಾಜ್ಯ ಸರ್ಕಾರ ಆಳಂದ ಕ್ಷೇತ್ರದ ಮತಗಳ್ಳತನ ಪ್ರಕರಣವನ್ನು ಎಸ್ಐಟಿಗೆ ವಹಿಸಿತ್ತು.