ಬಿಜೆಪಿ ಬೆಂಬಲಿಗರೆಂದು ಗುರುತಿಸಿಕೊಂಡವರೂ ಸೇರಿದಂತೆ ಸರ್ಕಾರಿ ಯೋಜನೆಗಳ ಗುತ್ತಿಗೆದಾರರು ಕರ್ನಾಟಕ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. 2019 ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಸಚಿವರು, ಶಾಸಕರು ಮತ್ತು ಅಧಿಕಾರಿಗಳು ಯೋಜನೆಯ ವೆಚ್ಚದ 40% ಅನ್ನು ಲಂಚವಾಗಿ ಕೇಳುತ್ತಿದ್ದಾರೆ ಎಂದು ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘವು ಹಲವಾರು ತಿಂಗಳುಗಳಿಂದ ಆರೋಪಿಸುತ್ತಿದೆ.
ಕರ್ನಾಟಕ ಜಿಲ್ಲೆಗಳಾದ್ಯಂತ ಒಂದು ಲಕ್ಷಕ್ಕೂ ಹೆಚ್ಚು ಸದಸ್ಯರನ್ನು ಹೊಂದಿರುವ ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘವು ಮಾರ್ಚ್ 22 ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮಧ್ಯಸ್ಥಿಕೆಯನ್ನು ಕೋರಿ ಮತ್ತೊಂದು ಪತ್ರವನ್ನು ಕಳುಹಿಸಿದೆ. ಕಳೆದ ವರ್ಷ ಪ್ರಧಾನಿ ಮತ್ತು ರಾಜ್ಯಪಾಲ ತಾವರ್ ಚಂದ್ ಗೆಹ್ಲೋಟ್‌ಗೆ ಹಲವು ಬಾರಿ ದೂರು ನೀಡಿದ್ದರೂ, ಯಾವುದೇ ಬದಲಾವಣೆಯಾಗದಿರುವುದು ಗುತ್ತಿಗೆದಾರರ ಆಕ್ರೋಶಕ್ಕೆ ಕಾರಣವಾಗಿದೆ. ಇದೀಗ, ಬಿಜೆಪಿ ಸದಸ್ಯ ಸಂತೋಷ್ ಪಾಟೀಲ್ ಇತ್ತೀಚಿಗೆ ಹಿರಿಯ ಸಚಿವ ಈಶ್ವರಪ್ಪ ವಿರುದ್ಧ ಕಮಿಶನ್ ಆರೋಪ ಮಾಡಿದ್ದಾರೆ. ಕಾಮಗಾರಿಗೆ ಮಂಜೂರಾತಿ ನೀಡಲು ಒಟ್ಟು ವೆಚ್ಚದ ಶೇ.40ರಷ್ಟು ಲಂಚವನ್ನು ಈಶ್ವರಪ್ಪ ಕೇಳಿದ್ದಾರೆ ಎಂದು ಅವರು ಆರೋಪಿಸಿರುವುದು ಸಾಕಷ್ಟು ಸದ್ದು ಮಾಡಿದೆ.
ಸಂತೋಷ್ ಪಾಟೀಲ್ ಅವರ ಆರೋಪವು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರಪ್ಪ ವಿರುದ್ಧ ಇದ್ದರೆ, ಯೋಜನಾ ವೆಚ್ಚದ 40% ಲಂಚ ನೀಡಬೇಕಾದ ಪರಿಪಾಠ ಈಗ ಕರ್ನಾಟಕ ಸರ್ಕಾರದ ಎಲ್ಲಾ ಇಲಾಖೆಗಳಿಗೂ ವಿಸ್ತರಿಸಿದೆ ಎಂದು ಗುತ್ತಿಗೆದಾರರ ಸಂಘ ಆರೋಪಿಸಿದೆ.
ಕರ್ನಾಟಕದಲ್ಲಿ ಕಮಿಷನ್ ಸಂಸ್ಕೃತಿ
ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಮಾತನಾಡಿ, ಹಲವು ದಶಕಗಳ ಹಿಂದೆಯೇ ಗುತ್ತಿಗೆದಾರರು ಸ್ಥಳೀಯ ಗುತ್ತಿಗೆದಾರರಿಗೆ ಶೇ.2ರಷ್ಟು ಲಂಚ ನೀಡಬೇಕಿತ್ತು. “ಇದು ಬಹಳ ಕಾಲ ಹಾಗೆಯೇ ಇತ್ತು. ನಂತರ 2018-19ರ ಅವಧಿಯಲ್ಲಿ ಕಾಂಗ್ರೆಸ್ ಅಧಿಕಾರಾವಧಿಯಲ್ಲಿ ಸಚಿವರ ಇಲಾಖೆಗಳು ಒಟ್ಟು ಟೆಂಡರ್ ವೆಚ್ಚದಲ್ಲಿ 10% ತೆಗೆದುಕೊಳ್ಳುತ್ತಿತ್ತು, ” ಎಂದು ಕೆಂಪಣ್ಣ ಆರೋಪಿಸಿದ್ದಾರೆ. ಕೆಂಪಣ್ಣ ಎರಡು ದಶಕಗಳಿಂದ ಸರ್ಕಾರಿ ಟೆಂಡರ್‌ಗಳಲ್ಲಿ ಕೆಲಸ ಮಾಡುತ್ತಿದ್ದಾರೆ.
“ನಾವು ಕಾಂಗ್ರೆಸ್ ಬಗ್ಗೆ ತುಂಬಾ ಅಸಮಾಧಾನ ಹೊಂದಿದ್ದೇವೆ. ವಿಧಾನಸಭಾ ಚುನಾವಣಾ ಪ್ರಚಾರದ ವೇಳೆ ಪ್ರಧಾನಿ ಮೋದಿ ಅಂದಿನ ಸರ್ಕಾರವನ್ನು ‘10% ಸರ್ಕಾರ’ ಎಂದು ಕರೆದಿದ್ದರು. ನಾವೆಲ್ಲರೂ ಸಾಮೂಹಿಕವಾಗಿ ಬಿಜೆಪಿಗೆ ಮತ ಹಾಕಿದ್ದೇವೆ, ಪರಿಸ್ಥಿತಿ ಸುಧಾರಿಸುತ್ತದೆ ಎಂದು ಭಾವಿಸಿದ್ದೆವು. ನಮಗೆ ಅಪಾರ ಭರವಸೆ ಇತ್ತು. ಆದರೆ ಪರಿಸ್ಥಿತಿ ಇನ್ನಷ್ಟು ಕೆಟ್ಟದಾಗಿವೆ, ” ಅವರು ಹೇಳಿದ್ದಾರೆ.
ರಾಜ್ಯದಲ್ಲಿನ ನಾಯಕರಿಗೆ ಪತ್ರಗಳು ಬರೆದರೂ ಯಾವುದೇ ಪ್ರತಿಕ್ರಿಯೆಯನ್ನು ಪಡೆಯದ ಕಾರಣ, ಸಂಘವು ನವೆಂಬರ್ 2021 ರಲ್ಲಿ ಪ್ರಧಾನಿ ಮೋದಿಗೆ ಪತ್ರ ಬರೆದಿತ್ತು. ಆದರೆ ಅವರಿಗೆ ಪ್ರಧಾನಿ ಕಚೇರಿಯಿಂದ ಕೂಡಾ ಯಾವುದೇ ಉತ್ತರ ಬರಲಿಲ್ಲ. ನಾವು ಮೋದಿಗೆ ಪತ್ರ ಬರೆದರೂ ಯಾವುದೇ ಬದಲಾವಣೆ ಆಗಿಲ್ಲ ಎಂದು ಕೆಂಪಣ್ಣ ಹೇಳಿದ್ದಾರೆ.
ಅಧಿಕಾರಿಗಳು ಮತ್ತು ಮಂತ್ರಿಗಳು ಲಂಚವನ್ನು “ಕಮಿಷನ್” ಅಥವಾ “ಕಮಿಷನ್ ದರಗಳು” ಎಂದು ಉಲ್ಲೇಖಿಸುತ್ತಾರೆ ಎಂದು ಗುತ್ತಿಗೆದಾರರು ಹೇಳುತ್ತಾರೆ. 2019 ರಲ್ಲಿ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗ ಕಮಿಷನ್ ದರವು 40% ಕ್ಕೆ ಏರಿತು ಎಂದು ಕೆಂಪಣ್ಣ ಆರೋಪಿಸಿದ್ದಾರೆ. ಈ ಲಂಚದ ಶೇಕಡಾ ಹತ್ತರಷ್ಟು ಸ್ಥಳೀಯ ಶಾಸಕರಿಗೆ ಹೋಗುತ್ತದೆ. ಸ್ಥಳೀಯ ಸಂಸ್ಥೆಗಳಲ್ಲಿ ಅಧಿಕಾರಿಗಳಿಗೆ ಶೇ.5-7ರಷ್ಟು ನೀಡಬೇಕು. ನಮ್ಮ ಪೇಪರ್‌ಗಳನ್ನು ಪ್ರಕ್ರಿಯೆಗೊಳಿಸಲು ನಾವು ಇನ್ನೂ 5% ಪಾವತಿಸಬೇಕಾಗುತ್ತದೆ. ಯೋಜನೆಯ ಉಸ್ತುವಾರಿ ನೋಡಿಕೊಳ್ಳುವ ಎಂಜಿನಿಯರ್‌ಗಳಿಗೆ ಶೇ.10ರಷ್ಟು ಅನುದಾನ ನೀಡಬೇಕು. ಈ ಸರ್ಕಾರದ ಅಡಿಯಲ್ಲಿ, ಹೆಚ್ಚಿನ ಬಾರಿ, ಲಂಚವು ಯೋಜನಾ ವೆಚ್ಚದ 45% ಆಗುತ್ತದೆ, ” ಎಂದು ಕೆಂಪಣ್ಣ ವಿವರಿಸುತ್ತಾರೆ.
ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘವು, ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಅವರಿಗೆ ಮೂರು ಪತ್ರಗಳನ್ನು ಬರೆದು, ತಮ್ಮನ್ನು ಭೇಟಿ ಮಾಡಲು ಸಮಯ ಕೇಳಿತ್ತು.
“ಅವರು ಒಮ್ಮೆಯೂ ಪ್ರತಿಕ್ರಿಯಿಸಲಿಲ್ಲ. ನಾವು ಆರು ತಿಂಗಳ ಹಿಂದೆ ಕರ್ನಾಟಕ ರಾಜ್ಯಪಾಲರನ್ನು ಭೇಟಿ ಮಾಡಿದ್ದೇವೆ, ಅವರು ನಮ್ಮ ದೂರನ್ನು ರಾಜ್ಯ ಸರ್ಕಾರಕ್ಕೆ ಉಲ್ಲೇಖಿಸುವುದಾಗಿ ಹೇಳಿದರು. ಆದರೆ ಆ ಬಳಿಕ ಯಾವುದೇ ಕ್ರಮ ಕೈಗೊಂಡಿಲ್ಲ” ಎಂದು ಕೆಂಪಣ್ಣ ತಿಳಿಸಿದರು.
ಕರ್ನಾಟಕ ಸರ್ಕಾರದಿಂದ 22,000 ಕೋಟಿ ರೂ. ಬಾಕಿ
ಒಟ್ಟಾರೆಯಾಗಿ, ರಾಜ್ಯ ಸರ್ಕಾರ ಇನ್ನೂ 22,000 ಕೋಟಿ ರೂಪಾಯಿಗಳ ಪಾವತಿಯನ್ನು ಬಿಡುಗಡೆ ಮಾಡಿಲ್ಲ ಎಂದು ಗುತ್ತಿಗೆದಾರರು ಆರೋಪಿಸಿದ್ದಾರೆ. ಕರ್ನಾಟಕ ಸರ್ಕಾರದ ಎಲ್ಲಾ ಇಲಾಖೆಗಳಿಂದ ಬಾಕಿ ಉಳಿದಿವೆ. ಆದರೆ ಗುತ್ತಿಗೆದಾರರು ಲೋಕೋಪಯೋಗಿ (PWD), ನೀರಾವರಿ ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಈ ಮೂರು ಇಲಾಖೆಗಳಿಂದ 10,000 ಕೋಟಿ ರೂ.ಗಳನ್ನು ಬಾಕಿ ಉಳಿಸಿಕೊಂಡಿದ್ದಾರೆ.
ಬಿಬಿಎಂಪಿಯಿಂದ ಪಾವತಿಯ ಅಂತಿಮ ಕಂತನ್ನು ಇನ್ನೂ ಸ್ವೀಕರಿಸದ ಗುತ್ತಿಗೆದಾರರಲ್ಲಿ ಚಿಕ್ಕ ತಾಯಣ್ಣ ಒಬ್ಬರು , ಅವರು ಬಿಬಿಎಂಪಿಗಾಗಿ ವೈಟ್ ಟಾಪಿಂಗ್ ಯೋಜನೆಯ ಕೆಲಸ ಮಾಡಿದ್ದಾರೆ. ಸರ್ಕಾರಿ ವ್ಯವಸ್ಥೆಯಲ್ಲಿನ ವಿವಿಧ ಜನರಿಗೆ ಈಗಾಗಲೇ ಯೋಜನೆಯ ಮೌಲ್ಯದ 28% ರಷ್ಟನ್ನು ಲಂಚವಾಗಿ ಪಾವತಿಸಿದ್ದರೂ, ಅಂತಿಮ ಪಾವತಿಯನ್ನು ಬಿಡುಗಡೆ ಮಾಡಲು ಬಿಬಿಎಂಪಿಯ ಅಧಿಕಾರಿಗಳು ಹೆಚ್ಚಿನದನ್ನು ಕೇಳುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
“ನಮ್ಮ ವೆಚ್ಚದ ಸುಮಾರು 40% ಕಚ್ಚಾ ವಸ್ತು ಮತ್ತು ಸಾರಿಗೆಯಾಗಿದೆ. ನಾವು ವಿವಿಧ ತೆರಿಗೆಗಳಲ್ಲಿ ಸುಮಾರು 20% ಅನ್ನು ಪಾವತಿಸುತ್ತೇವೆ ಮತ್ತು ಇದರ ಮೇಲೆ ನಾವು 40% ಅನ್ನು ಲಂಚವಾಗಿ ಪಾವತಿಸಬೇಕಾದರೆ, ನಾವು ನಮಗೆ ಹೇಗೆ ಉಳಿಸಿಕೊಳ್ಳಬಹುದು? ಎಂದು ಕೇಳಿದ್ದಾರೆ.
ಬಿಬಿಎಂಪಿ ಅಧಿಕಾರಿಗಳಿಂದ ಚಿಕ್ಕ ತಾಯಣ್ಣ ಅವರಿಗೆ ಬಂದ ವಾಟ್ಸಾಪ್ ಸಂದೇಶಗಳನ್ನು ದಿ ನ್ಯೂಸ್ ಮಿನಿಟ್ ನೋಡಿದೆ, ಅಲ್ಲಿ ಅಧಿಕಾರಿಗಳು “ತಮಗೆ ಏನು ಬಾಕಿ ಇದೆ” ಅದನ್ನು ಸ್ವೀಕರಿಸುವವರೆಗೆ, ತಾಯಣ್ಣನ ಫೈಲ್‌ಗಳನ್ನು “ಮೂವ್ ಮಾಡಲು” ಸಾಧ್ಯವಿಲ್ಲ ಎಂದು ಹೇಳುತ್ತಿದ್ದಾರೆ. ಈ ಮೊತ್ತವನ್ನು ಕೇವಲ ಬಿಬಿಎಂಪಿ ಅಧಿಕಾರಿಗಳಿಗೆ ಮಾತ್ರವಲ್ಲ, ಹಳೆಯ ಫೈಲ್‌ನಲ್ಲಿ ಆಸಕ್ತಿ ವಹಿಸಲು ಪ್ರೇರೇಪಿಸಬೇಕಾದ ಹಿರಿಯ ಅಧಿಕಾರಿಗಳಿಗೆ ಕೂಡ ಕೇಳಲಾಗುತ್ತದೆ ಎಂದು ಸಂದೇಶಗಳು ಹೇಳುತ್ತವೆ.
ಅಧಿಕಾರಿಗಳು ತಮ್ಮ ಕಷ್ಟವನ್ನು ಅರ್ಥಮಾಡಿಕೊಳ್ಳುತ್ತಾರೆ ಎಂಬ ಭರವಸೆಯೊಂದಿಗೆ ಸರ್ಕಾರವನ್ನು ಸಾರ್ವಜನಿಕವಾಗಿ ನಾಚಿಕೆಪಡಿಸುವ ಕೆಲಸವನ್ನೂ ಮಾಡಿದ್ದಾರೆ ಎಂದು ಗುತ್ತಿಗೆದಾರರು ಹೇಳುತ್ತಾರೆ. ರಾಜ್ಯಾದ್ಯಂತ ಹಲವಾರು ಜಿಲ್ಲೆಗಳಲ್ಲಿ, ಸಂಘದ ಸದಸ್ಯರು ಸಾರ್ವಜನಿಕ ಸಭೆಗಳನ್ನು ನಡೆಸಿ ಕೆಲವು ಯೋಜನೆಗಳು ಏಕೆ ಪೂರ್ಣಗೊಳ್ಳುತ್ತಿಲ್ಲ ಮತ್ತು ಇದರಿಂದಾಗಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂದು ವಿವರಿಸುತ್ತಿದ್ದಾರೆ.
“ಬೆಂಗಳೂರಿನ ರಸ್ತೆಗಳು ಎಷ್ಟು ಹದಗೆಟ್ಟಿವೆ ಎಂದು ಜನರು ದೂರುತ್ತಲೇ ಇರುತ್ತಾರೆ ಮತ್ತು ಗುತ್ತಿಗೆದಾರರು ಕಳಪೆ ಕೆಲಸ ಮಾಡಲು ಅಥವಾ ಕೆಲಸವನ್ನು ನಡುವೆ ನಿಲ್ಲಿಸುವ ಬಗ್ಗೆ ಆಗಾಗ್ಗೆ ದೂಷಿಸುತ್ತಾರೆ. ಆದರೆ ನಾವು ಸಂಪೂರ್ಣವಾಗಿ ಆರೋಪ ಹೊರಲು ಸಾಧ್ಯವಿಲ್ಲ, ”ಎಂದು ಬೆಂಗಳೂರಿನ ಶಾಂತಿನಗರ ಪ್ರದೇಶದ ರಸ್ತೆ ಕಾಮಗಾರಿಯ ಗುತ್ತಿಗೆಯನ್ನು ವಾಡಿಕೆಯಂತೆ ಕೈಗೊಂಡಿರುವ ನಿರ್ಮಾಣ ಕಂಪನಿಯ ಮಾಲೀಕ ಸಂದಾನಪ್ಪ ಹೇಳುತ್ತಾರೆ.
ಬೆಂಗಳೂರಿನ ಸೆಂಟ್ರಲ್ ಬ್ಯುಸಿನೆಸ್ ಡಿಸ್ಟ್ರಿಕ್ಟ್‌ನಲ್ಲಿರುವ ಅನೇಕ ರಸ್ತೆಗಳು ಶಾಂತಿನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತವೆ. ಲಂಚ ನೀಡದಿದ್ದಲ್ಲಿ ಬಿಬಿಎಂಪಿ ಅಧಿಕಾರಿಗಳು ನಿತ್ಯ ಮೂರರಿಂದ ಆರು ತಿಂಗಳು ಪಾವತಿ ಸ್ಥಗಿತಗೊಳಿಸುತ್ತಾರೆ ಎಂದು ಸಂದಾನಪ್ಪ ಆರೋಪಿಸಿದ್ದಾರೆ. “ನಾವು ಕೆಲಸವನ್ನು ಪ್ರಾರಂಭಿಸುವ ಹೊತ್ತಿಗೆ, ನಾವು ಒಟ್ಟು ಯೋಜನೆಯ ಸುಮಾರು 14% ನಷ್ಟು ಮೊತ್ತವನ್ನು ಕಮಿಷನ್ ಆಗಿ ಪಾವತಿಸುತ್ತೇವೆ. ಪ್ರತಿ ಬಾರಿ ಹೊಸ ಅಧಿಕಾರಿ ಅಧಿಕಾರ ವಹಿಸಿಕೊಂಡಾಗ ಅವರೂ ಲಂಚ ಕೇಳುತ್ತಾರೆ, ಆಗ ಯೋಜನೆ ಸ್ಥಗಿತಗೊಳ್ಳುತ್ತದೆ
”ಆರೋಗ್ಯ ಇಲಾಖೆ 2000 ಕೋಟಿ ರೂ.ಗಳ ಟೆಂಡರ್ ಕರೆದಿದೆ. 10% ಮುಂಗಡವಾಗಿ ಪಾವತಿಸದಿದ್ದರೆ, ನಮ್ಮ ಟೆಂಡರ್ ವೆಚ್ಚವು ಕಡಿಮೆಯಿದ್ದರೂ ಮತ್ತು ನಾವು ಎಲ್ಲಾ ಅವಶ್ಯಕತೆಗಳನ್ನು ಪೂರೈಸಿದರೂ, ಬಿಡ್ ಅನ್ನು ಸ್ವೀಕರಿಸಲಾಗುವುದಿಲ್ಲ ಎಂದು ನಮಗೆ ತಿಳಿಸಲಾಯಿತು. ಮಂತ್ರಿಗಳ ಪರ ಕೆಲಸ ಮಾಡಿ ಅವರ ಪರವಾಗಿ ಲಂಚ ವಸೂಲಿ ಮಾಡುವ ಏಜೆಂಟರಿದ್ದಾರೆ. ಮತ್ತು ಮೊತ್ತವನ್ನು ಪಾವತಿಸುವವರೆಗೆ, ಅವರು ನಮ್ಮ ಟೆಂಡರ್ ಪೇಪರ್‌ಗಳನ್ನು ಪ್ರಕ್ರಿಯೆಗೊಳಿಸಲು ನಿರಾಕರಿಸುತ್ತಾರೆ ಅಥವಾ ಅವುಗಳನ್ನು ಹಿಂದಕ್ಕೆ ಕಳುಹಿಸುತ್ತಾರೆ. ಲಂಚ ಕೊಟ್ಟ ತಕ್ಷಣ ವೇಗ ಹೆಚ್ಚುತ್ತದೆ” ಎಂದು ತಮ್ಮ ಅನುಭವವನ್ನು ವಿವರಿಸುತ್ತಾರೆ ಚಂದನ್ ರೆಡ್ಡಿ. ಅವರ ಕಂಪನಿಯು ಸರ್ಕಾರಿ ಲ್ಯಾಬ್‌ಗಳನ್ನು ನಿರ್ಮಿಸಲು ಉಪ-ಗುತ್ತಿಗೆ ತೆಗೆದುಕೊಳ್ಳುತ್ತದೆ.
ಏತನ್ಮಧ್ಯೆ, ಬಿಜೆಪಿ ಕಾರ್ಯಕರ್ತ ಮತ್ತು ಹಿಂದೂ ವಾಹಿನಿ ಎಂಬ ಸಂಘಟನೆಯ ಕಾರ್ಯದರ್ಶಿ ಸಂತೋಷ್, ಸಚಿವ ಈಶ್ವರಪ್ಪ ವರ್ಕ್ ಆರ್ಡರ್ ನೀಡಲು ಮತ್ತು 2019ರಲ್ಲಿ ಪೂರ್ಣಗೊಳಿಸಿದ ಯೋಜನೆಗೆ ಹಣ ಬಿಡುಗಡೆ ಮಾಡಲು 40% ಲಂಚ ಕೇಳಿದ್ದಾರೆ ಎಂದು ಆರೋಪಿಸಿದ್ದಾರೆ.
ಬೆಳಗಾವಿ ಜಿಲ್ಲೆಯ ಹಿಂಡಲಗಾದಲ್ಲಿ ನಿರ್ಮಿಸುವ ರಸ್ತೆಗೆ ಕೂಡಲೇ ಕಾಮಗಾರಿ ಆರಂಭಿಸುವಂತೆ ಸಚಿವರು ಎಂದು ಪಟ್ಟು ಹಿಡಿದರು. “ನಾನು ಕೆಲಸದ ಆದೇಶಕ್ಕಾಗಿ ಕಾಯಲಿಲ್ಲ ಏಕೆಂದರೆ ಈಶ್ವರಪ್ಪ ಅವರು ತಾನು ಮಂತ್ರಿ ಮತ್ತು ತನ್ನದೇ ಅಂತಿಮ ಅಧಿಕಾರ ಎಂದು ಹೇಳಿದರು. ಆದ್ದರಿಂದ, ನಾನು ಯೋಜನೆಯನ್ನು ಪ್ರಾರಂಭಿಸಿದೆ. ಅದರ ನಂತರ, ಜಿಲ್ಲೆಯಲ್ಲಿ ಉಪಚುನಾವಣೆಯಿಂದಾಗಿ ಮಾದರಿ ನೀತಿ ಸಂಹಿತೆ ಜಾರಿಗೆ ಬಂದಿತು, ಆದ್ದರಿಂದ ಅವರು ನನಗೆ ಕೆಲಸದ ಆದೇಶವನ್ನು ನೀಡಲು ಸಾಧ್ಯವಾಗಲಿಲ್ಲ ಎಂದು ಹೇಳಿದರು. ಆದರೆ ಈಶ್ವರಪ್ಪ ಚಿಂತಿಸದೆ ಕೆಲಸದಲ್ಲಿ ಮುಂದುವರಿಯುವಂತೆ ಹೇಳಿದರು ಎಂದು ಪಾಟೀಲ್ ದಿ ನ್ಯೂಸ್ ಮಿನಿಟ್ ಗೆ ತಿಳಿಸಿದ್ದಾರೆ.
“ಸಾಂಕ್ರಾಮಿಕ ಮತ್ತು ಇತರ ರಾಜಕೀಯ ಕಾರಣಗಳಿಂದಾಗಿ, ಪ್ರಕ್ರಿಯೆಯು ವಿಳಂಬವಾಗುತ್ತಲೇ ಇತ್ತು. ನಾನು 2019 ರಲ್ಲಿ ಯೋಜನೆಯನ್ನು ಪೂರ್ಣಗೊಳಿಸಿದೆ ಆದರೆ ಅದಕ್ಕಾಗಿ ಒಂದು ಪೈಸೆಯನ್ನೂ ಸ್ವೀಕರಿಸಿಲ್ಲ. ನಾನು ಅದಕ್ಕಾಗಿ ಹೆಚ್ಚು ಸಾಲ ಮಾಡಿದ್ದೇನೆ ಮತ್ತು ಈಗ ಸಾಲಗಾರರು ನನ್ನ ಬೆನ್ನು ಬಿದ್ದಿದ್ದಾರೆ ”ಎಂದು ಅವರು ಹೇಳಿದ್ದಾರೆ.
ಈ ಆರೋಪ ಬಹಿರಂಗವಾದಾಗಿನಿಂದ ಈಶ್ವರಪ್ಪ ಅವರು ತಮ್ಮ ಮೇಲಿರುವ ಆರೋಪವನ್ನು ತಳ್ಳಿಹಾಕಿದ್ದಾರೆ. ತನಗೆ ಸಂತೋಷ್ ಪಾಟೀಲ್ ಅವರ ಪರಿಚಯವೇ ಇಲ್ಲ ಎಂದು ಹೇಳಿದ್ದಾರೆ. ಅಲ್ಲದೆ, ಈಶ್ವರಪ್ಪ ಅವರು ಸಂತೋಷ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.
“ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ, ನಾವು ಸಾಮಾನ್ಯವಾಗಿ ಯಾವುದೇ ಗುತ್ತಿಗೆಗಳನ್ನು ಪಡೆಯಲಿಲ್ಲ. ಬಿಜೆಪಿ ಸರ್ಕಾರ ರಚಿಸಿದ್ದರಿಂದ ನಮಗೆ ಸರ್ಕಾರಿ ಗುತ್ತಿಗೆ ಸಿಗುತ್ತದೆ ಎಂದು ಭಾವಿಸಿದ್ದೆವು. ನಮ್ಮವರೇ ನಮ್ಮನ್ನು ವಂಚಿಸುತ್ತಿರುವಂತೆ ಕಾಣುತ್ತಿದೆ” ಎಂದು ಪಾಟೀಲ್ ಹೇಳಿದ್ದಾರೆ.
‘ಬಿಜೆಪಿಯ ಭ್ರಷ್ಟಾಚಾರವನ್ನು ಸಾರ್ವಜನಿಕರ ಮುಂದೆ ಬಹಿರಂಗಪಡಿಸುತ್ತೇನೆ’
ಅಸೋಸಿಯೇಷನ್‌ನ ಗುತ್ತಿಗೆದಾರರು ಬಿಜೆಪಿಯಿಂದ ನಿರಾಸೆ ಅನುಭವಿಸುತ್ತಿದ್ದಾರೆ ಎಂದು ಹೇಳುತ್ತಾರೆ. ಆದರೆ ಇನ್ನೂ ತಮ್ಮ ಬಾಕಿ ಪಾವತಿಸಲಾಗುವುದು ಎಂದು ಭಾವಿಸುತ್ತೇವೆ. ಹೆಸರು ಹೇಳಲಿಚ್ಛಿಸದ ಗುತ್ತಿಗೆದಾರರೊಬ್ಬರು ತಮ್ಮ ಸಂದೇಶವನ್ನು ರವಾನಿಸುವ ಏಕೈಕ ಮಾರ್ಗವೆಂದರೆ, ಮುಂಬರುವ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಪ್ರಚಾರ ಮಾಡುವುದನ್ನು ನಾವು ವಿರೋಧಿಸುವುದಿಲ್ಲ ಎಂದು ಹೇಳಿದರು.
“ನಾವು ನಿಜವಾಗಿಯೂ ಯಾವುದೇ ಒಂದು ಪಕ್ಷವನ್ನು ಬೆಂಬಲಿಸುವುದಿಲ್ಲ, ನಾವು ಏಕರೂಪದ ಗುಂಪಲ್ಲ. ಸಂಘವು ಎಲ್ಲಾ ಜಾತಿ, ಧರ್ಮ ಮತ್ತು ಸಿದ್ಧಾಂತದ ಜನರನ್ನು ಹೊಂದಿದೆ. ಆದರೆ ನಮ್ಮ ವ್ಯವಹಾರವನ್ನು ನಿರ್ಬಂಧಿಸಿರುವುದು ನಮ್ಮೆಲ್ಲರ ಮೇಲೆ ಸಮಾನವಾಗಿ ಪರಿಣಾಮ ಬೀರುತ್ತದೆ. ಹೀಗಾಗಿ ಭ್ರಷ್ಟಾಚಾರ ನಿರ್ಮೂಲನೆ ಮಾಡುವ ಉದ್ದೇಶದಿಂದ ಬಿಜೆಪಿ ಅಧಿಕಾರಕ್ಕೆ ಬಂದರೂ ಈ ಸರ್ಕಾರದಲ್ಲಿ ಏನಾಗುತ್ತಿದೆ ಎಂಬುದನ್ನು ಜನತೆಗೆ ಹೇಳುತ್ತೇವೆ ಎಂದರು.
ಮಂಡ್ಯದಲ್ಲಿ ಕೆಲಸ ಮಾಡುತ್ತಿರುವ ಮತ್ತೊಬ್ಬ ಗುತ್ತಿಗೆದಾರರು ಈ ಅಭಿಪ್ರಾಯಗಳನ್ನು ಒಪ್ಪುತ್ತಾರೆ. “ನಮಗೆ ಕಾಯಕವೇ ಕೈಲಾಸ. ನಮ್ಮ ಕೆಲಸವು ಪರಿಣಾಮ ಬೀರುತ್ತಿದ್ದರೆ ಮತ್ತು ನಮ್ಮ ಹಣವು ವರ್ಷಗಳವರೆಗೆ ಹಿಡಿದಿಟ್ಟುಕೊಳ್ಳುತ್ತಿದ್ದರೆ, ನಾವು ನಮ್ಮ ಕುಟುಂಬಗಳನ್ನು ಹೇಗೆ ಪೋಷಿಸುತ್ತೇವೆ? ಇದೇ ರೀತಿ ಮುಂದುವರಿದರೆ ಚುನಾವಣೆಯ ಮೂಲಕ ಬಿಜೆಪಿಗೆ ತಕ್ಕ ಪಾಠ ಕಲಿಸಲು ಯೋಚಿಸಬಹುದು ಎಂದು ಹೇಳಿದ್ದಾರೆ.