ನವದೆಹಲಿ: ಕಳೆದ ಕೆಲ ಸಮಯದಿಂದ ಬಿಜೆಪಿ(BJP) ವಿರುದ್ಧ ವೋಟ್ ಚೋರಿ (Vote Chori) ಆರೋಪ ಮಾಡುತ್ತಿರುವ ಕಾಂಗ್ರೆಸ್(Congress) ಇಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ಬೃಹತ್ ಪ್ರತಿಭಟನೆ(Protest) ನಡೆಸಿದೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆದ ಬೃಹತ್ ಪ್ರತಿಭಟನೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಜೊತೆಗೆ ಕರ್ನಾಟಕದಿಂದಲೂ ಸಾವಿರಾರು ಕಾರ್ಯಕರ್ತರು ದೆಹಲಿ ರ‍್ಯಾಲಿಯಲ್ಲಿ ಭಾಗವಹಿಸಿದ್ದಾರೆ.

ಇಂದಿನ ಬೃಹತ್ ಪ್ರತಿಭಟನೆಯಲ್ಲಿ ರಾಹುಲ್ ಗಾಂಧಿ ಚುನಾವಣಾ ಆಯೋಗ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕರ್ನಾಟಕದಲ್ಲಿ ಮತಗಳ್ಳತನ ಆಗಿದ್ದು ಸಾಬೀತಾಗಿದೆ. ನರೇಂದ್ರ ಮೋದಿ ಮತ ಕಳ್ಳತನ ಮಾಡಿ ಅಧಿಕಾರಕ್ಕೆ ಬಂದಿದ್ದಾರೆ. ಅಷ್ಟೇ ಅಲ್ಲದೇ ಬಿಜೆಪಿಯ ಜೊತೆ ಕೇಂದ್ರ ಚುನಾವಣಾ ಆಯೋಗ ಶಾಮೀಲಾಗಿದ್ದು, ಚುನಾವಣಾ ಆಯೋಗಕ್ಕಾಗಿ ಕಾನೂನನ್ನೇ ಬದಲಾವಣೆ ಮಾಡಿದ್ದಾರೆ. ಹರಿಯಾಣದಲ್ಲಿಯೂ ಮತಗಳ್ಳತನ ಆಗಿದೆ. ಅದು ಹೇಗೆ ಆಗಿದೆ ಅಂತಾ ತಿಳಿಯಬೇಕಿದೆ. ಒಂದೇ ಬೂತ್ನಲ್ಲಿ ಒಬ್ಬ ವ್ಯಕ್ತಿ 200 ಸಲ ಹೇಗೆ ಮತ ಹಾಕಲು ಸಾಧ್ಯ? ಎಂದು ಪ್ರಶ್ನಿಸಿದ್ದಾರೆ.

ಇನ್ನು ವೋಟ್ ಚೋರಿ ಬಗ್ಗೆ ಸಂಸತ್ನಲ್ಲಿ ಪ್ರಸ್ತಾಪ ಮಾಡಲು ಮುಂದಾದರೆ ನಮಗೆ ಅವಕಾಶ ಕೊಡಲಿಲ್ಲ. ಸತ್ಯವು ಅತ್ಯಂತ ಮುಖ್ಯ ಎಂದು ಮಹಾತ್ಮ ಗಾಂಧೀಜಿ ಹೇಳಿದ್ದರು. ಆದರೆ ಸತ್ಯವಲ್ಲ, ಶಕ್ತಿಯೇ ಮುಖ್ಯ ಎಂದು ಭಾಗವತ್ ಹೇಳಿದರು. ಸತ್ಯ ಎತ್ತಿಹಿಡಿಯುವ ಮೂಲಕ ಮೋದಿ ಮತ್ತು ಆರ್‌ಎಸ್‌ಎಸ್ ಸರ್ಕಾರವನ್ನು ನಾವು ತೆಗೆದುಹಾಕುತ್ತೇವೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.






