ರಾಂಚಿಯಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ 17 ರನ್‌ಗಳಿಂದ ಜಯ ಸಾಧಿಸಿದೆ. ವಿರಾಟ್ ಕೊಹ್ಲಿ(Virat Kohli )ಅವರ ಸ್ಫೋಟಕ ಶತಕ ಮತ್ತು ರೋಹಿತ್ ಶರ್ಮಾ(Rohith Sharma) ಅವರ ಅರ್ಧಶತಕ ಭಾರತ ದೊಡ್ಡ ಸ್ಕೋರ್ ತಲುಪಲು ಸಹಾಯ ಮಾಡಿತ್ತು. ಏತನ್ಮಧ್ಯೆ, ಬೌಲಿಂಗ್‌ನಲ್ಲಿ ಕುಲದೀಪ್ ಯಾದವ್,(Kuldeep yadav) ಹರ್ಷಿತ್ ರಾಣಾ ಮತ್ತು ಅರ್ಶ್‌ದೀಪ್ ಸಿಂಗ್ ನಿಖರವಾಗಿ ಬೌಲಿಂಗ್ ಮಾಡಿ ಭಾರತದ ಗೆಲುವನ್ನು ಖಚಿತಪಡಿಸಿದರು.

ಒಂದೆಡೆ, ಟೀಮ್ ಇಂಡಿಯಾ ಮೊದಲ ಏಕದಿನ ಪಂದ್ಯವನ್ನು ಗೆದ್ದಿದ್ದರೂ, ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಕೋಚ್ ಗೌತಮ್ ಗಂಭೀರ್ ( Gautam Gambhir) ಅವರೊಂದಿಗೆ ಜಗಳವಾಡಿದ್ದಾರೆ ಎಂಬ ವರದಿಗಳು ಹೊರಬರುತ್ತಿವೆ.
ರಾಂಚಿಯಲ್ಲಿ ನಡೆದ ಏಕದಿನ ಪಂದ್ಯದ ನಂತರ ಟೀಮ್ ಇಂಡಿಯಾದ ಡ್ರೆಸ್ಸಿಂಗ್ ರೂಮ್‌ನಿಂದ ಕೆಲವು ಫೋಟೋಗಳು ಮತ್ತು ವೀಡಿಯೊಗಳು ಸದ್ದು ಮಾಡುತ್ತಿವೆ. ಇದರಲ್ಲಿ, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ಕೋಚ್ ಗೌತಮ್ ಗಂಭೀರ್ ನಡುವಿನ ಜಗಳಕ್ಕೆ ಅಭಿಮಾನಿಗಳು ಪರ- ವಿರೋಧದ ಚರ್ಚೆಗೆ ಮುಂದಾಗಿದ್ದಾರೆ.

ಇನ್ನೂ ವಿರಾಟ್ ಮತ್ತು ಗಂಭೀರ್ ಅವರ ಈ ವಿಡಿಯೋ ಹೊರಬಿದ್ದ ನಂತರ, ಈಗ ರೋಹಿತ್ ಶರ್ಮಾ ಮತ್ತು ಗೌತಮ್ ಗಂಭೀರ್ ಡ್ರೆಸ್ಸಿಂಗ್ ರೂಮಿನಲ್ಲಿ ಇರುವ ವಿಡಿಯೋ ಕೂಡ ಹೊರಬಿದ್ದಿದೆ. ಪಂದ್ಯದ ನಂತರ, ಗೌತಮ್ ಗಂಭೀರ್ ಮತ್ತು ರೋಹಿತ್ ಶರ್ಮಾ ಯಾವುದೋ ವಿಷಯದ ಬಗ್ಗೆ ಬಿಸಿ ಚರ್ಚೆ ನಡೆಸುತ್ತಿರುವುದು ಕಂಡುಬರುತ್ತದೆ. ಈ ವಿಡಿಯೋದಲ್ಲಿ, ರೋಹಿತ್ ನಕಾರಾತ್ಮಕವಾಗಿ ತಲೆ ಅಲ್ಲಾಡಿಸಿ ಶಾಟ್ ತೋರಿಸುತ್ತಿದ್ದಾರೆ. ಗೌತಮ್ ಗಂಭೀರ್, ಸಪ್ಪೆ ಮುಖದೊಂದಿಗೆ ರೋಹಿತ್ ಅವರ ಮಾತುಗಳನ್ನು ಕೇಳುತ್ತಿರುವ ಎಲ್ಲೆಡೆ ಹರಿದಾಡುತ್ತಿದೆ. ಈ ಫೋಟೋಗಳು ಮತ್ತು ವೀಡಿಯೊಗಳಲ್ಲಿ ರೋಹಿತ್ ಮತ್ತು ಗಂಭೀರ್ ನಿಖರವಾಗಿ ಏನು ಮಾತನಾಡುತ್ತಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲವಾದರೂ, ಇಬ್ಬರೂ ಯಾವುದೋ ವಿಷಯದ ಬಗ್ಗೆ ಗಂಭೀರ ಚರ್ಚೆ ನಡೆಸುತ್ತಿದ್ದಾರೆ ಎಂಬುದು ಸ್ಪಷ್ಟವಾಗಿದೆ.

ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ಭವಿಷ್ಯದ ಬಗ್ಗೆ ಭಾರತೀಯ ಕ್ರಿಕೆಟ್‌ನಲ್ಲಿ ಬಿರುಕು ಹೆಚ್ಚುತ್ತಿದ್ದು, ಈಗ ಇನ್ನೂ ಕೆಲವು ನಾಟಕೀಯ ಬೆಳವಣಿಗೆಗಳು ನಡೆಯುತ್ತಿವೆ. ಕೊಹ್ಲಿ ಮತ್ತು ಮುಖ್ಯ ಕೋಚ್ ಗೌತಮ್ ಗಂಭೀರ್ ನಡುವಿನ ಸಂಬಂಧ ಹದಗೆಟ್ಟಿದ್ದು, ಅವರ ಭವಿಷ್ಯದ ವಿಷಯದ ಬಗ್ಗೆ ಇಬ್ಬರಿಗೂ ಭಿನ್ನಾಭಿಪ್ರಾಯಗಳಿವೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಮೂಲಗಳ ಪ್ರಕಾರ, ರೋಹಿತ್ ಶರ್ಮಾ ಮುಂಬರುವ ವಿಜಯ್ ಹಜಾರೆ ಟ್ರೋಫಿಯಲ್ಲಿ ಆಡಲು ಒಪ್ಪಿಕೊಂಡಿದ್ದಾರೆ, ಆದರೆ ಕೊಹ್ಲಿ ದೇಶೀಯ ಪಂದ್ಯಾವಳಿಯಲ್ಲಿ ಆಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ವಿಜಯ್ ಹಜಾರೆ ಟ್ರೋಫಿ (ಏಕದಿನ)ಯಲ್ಲಿ ಆಡಲು ಸಿದ್ಧ ಎಂದು ರೋಹಿತ್ ಶರ್ಮಾ ಆಯ್ಕೆ ಸಮಿತಿಗೆ ತಿಳಿಸಿದ್ದಾರೆ. ಇದಲ್ಲದೇ, ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಮೆಂಟ್‌ಗೂ ಅವರು ತಮ್ಮನ್ನು ತಾವು ಲಭ್ಯವಾಗುವಂತೆ ಮಾಡಿಕೊಂಡಿದ್ದಾರೆ. ಮತ್ತೊಂದೆಡೆ, ವಿರಾಟ್ ಕೊಹ್ಲಿ ‘ಅತಿಯಾದ ತಯಾರಿ’ ಮಾಡುತ್ತಿಲ್ಲ ಎಂದು ಹೇಳಲಾಗುತ್ತಿದೆ. ಕೊಹ್ಲಿಯ ಈ ನಿಲುವು ಬಿಸಿಸಿಐಗೆ ಸಮಸ್ಯೆಯನ್ನು ಸೃಷ್ಟಿಸಿದೆ, ಏಕೆಂದರೆ ಬಿಸಿಸಿಐ ಯಾವುದೇ ಆಟಗಾರನಿಗೆ ಯಾವುದೇ ವಿನಾಯಿತಿ ನೀಡಲು ಸಿದ್ಧವಿಲ್ಲ.
ಗೌತಮ್ ಗಂಭೀರ್ ಅವರನ್ನು ನಿರ್ಲಕ್ಷಿಸಿದ ವಿರಾಟ್ ಕೊಹ್ಲಿ: ರಾಂಚಿಯಲ್ಲಿ ವಿರಾಟ್ ಕೊಹ್ಲಿ ತಮ್ಮ 52 ನೇ ಏಕದಿನ ಶತಕ ಬಾರಿಸಿದರು. ಶತಕ ಗಳಿಸಿದ ನಂತರ, ಕೊಹ್ಲಿ ಸಂಭ್ರಮಿಸಿದರು ಮತ್ತು ಅವರ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಬಳಿಕ ಗೌತಮ್ ಗಂಭೀರ್ ವಿರಾಟ್ ಕೊಹ್ಲಿಯನ್ನು ತಬ್ಬಿಕೊಂಡರು. 135 ರನ್ ಗಳಿಸಿದ ನಂತರ ಕೊಹ್ಲಿ ಪೆವಿಲಿಯನ್ ಬಂದಾಗ, ಗಂಭೀರ್ ಕೊಹ್ಲಿಯನ್ನು ತಬ್ಬಿಕೊಂಡಿದ್ದರು, ಆದರೆ ಗಂಭೀರ್ ಅವರ ಪ್ರತಿಕ್ರಿಯೆ ವೈರಲ್ ಆಗುತ್ತಿದೆ. ಈ ನಡುವೆಯೇ ಮತ್ತೊಂದು ವೀಡಿಯೊ ಒಳಗಿನ ವಿಷಯವನ್ನು ಸ್ಪಷ್ಟಪಡಿಸಿದೆ.
ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ, ಕೊಹ್ಲಿ ಶತಕವನ್ನು ನೋಡಿ ರೋಹಿತ್ ಉತ್ಸುಕರಾಗಿ ಎದ್ದು ನಿಂತು ಚಪ್ಪಾಳೆ ತಟ್ಟುತ್ತಿದ್ದಾರೆ. ಗಂಭೀರ್ ಕೂಡ ಕುಳಿತಲ್ಲೇ ಚಪ್ಪಾಳೆ ತಟ್ಟಿದ್ದಾರೆ. ಆದರೆ, ಟೀಮ್ ಇಂಡಿಯಾ ಪಂದ್ಯ ಗೆದ್ದ ನಂತರ, ವಿರಾಟ್ ಕೊಹ್ಲಿ ಡ್ರೆಸ್ಸಿಂಗ್ ಕೋಣೆಗೆ ಹೋಗುತ್ತಿದ್ದರು. ಆದರೆ, ಆ ಸಮಯದಲ್ಲಿ ವಿರಾಟ್, ನೀನು ನನಗೆ ಏನು ಹೇಳುತ್ತಿದ್ದೀಯಾ.. ಎನ್ನುವಂತೆ ಗಂಭೀರ್ ಅವರನ್ನು ನಿರ್ಲಕ್ಷಿಸಿರುವುದು ಕಂಡುಬಂದಿದೆ. ಆದ್ದರಿಂದ, ಟೀಮ್ ಇಂಡಿಯಾದಲ್ಲಿ ಎಲ್ಲವೂ ಸರಿಯಾಗಿಲ್ಲ ಎಂಬುದು ಸ್ಪಷ್ಟವಾಗಿದೆ. ಇನ್ನೂ ಈ ವಿಡಿಯೋದಲ್ಲಿ ವಿರಾಟ್ ತಮ್ಮ ಜೇಬಿನಿಂದ ಮೊಬೈಲ್ ಫೋನ್ ತೆಗೆದು ಅದನ್ನು ಬಳಸಲು ಪ್ರಾರಂಭಿಸುತ್ತಾರೆ. ಹಾಗೆ ಡ್ರೆಸ್ಸಿಂಗ್ ಕೋಣೆಯೊಳಗೆ ಹೋದ್ರು. ಆಗ ಅಲ್ಲಿಯೇ ಪಕ್ಕದಲ್ಲಿ ನಿಂತಿದ್ದ ಕೋಚ್ ಗೌತಮ್ ಗಂಭೀರ್ ಅವರನ್ನು ವಿರಾಟ್ ಕೊಹ್ಲಿ ನೋಡಿದ್ರು ನೋಡದಂತೆ ಹೋಗಿದ್ದಾರೆ.

ಕೊಹ್ಲಿ- ಗಂಭೀರ್ ನಡುವೆ ಈ ಹಿಂದೆ ಏನಾಗಿತ್ತು..?
ಟೆಸ್ಟ್ ನಾಯಕತ್ವ ತೊರೆದಿರುವ ವಿರಾಟ್ ಕೊಹ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಮುಂಬರುವ ಮೂರು ಪಂದ್ಯಗಳ ಓಡಿಐ ಸರಣಿಯಲ್ಲಿ ತಮ್ಮ ಬ್ಯಾಟಿಂಗ್ ಕಡೆಗೆ ಹೆಚ್ಚಿನ ಗಮನ ಕೇಂದ್ರಿಕರಿಸಬೇಕೆಂದು ಮಾಜಿ ಆರಂಭಿಕ ಬ್ಯಾಟ್ಸ್‌ಮನ್ ಗೌತಮ್ ಗಂಭೀರ್ ಈ ಹಿಂದೆ ಸಲಹೆ ನೀಡಿದ್ದರು. ವಿರಾಟ್ ಕೊಹ್ಲಿಯಿಂದ ಏನನ್ನು ಹೊಸದಾಗಿ ನೋಡಲು ಬಯಸುತ್ತೀರಿ? ನಾಯಕತ್ವ ಎಂಬುದು ಯಾರೊಬ್ಬರ ಜನ್ಮ ಸಿದ್ದ ಹಕ್ಕಲ್ಲ. ಮೂರು ಐಸಿಸಿ ಟ್ರೋಫಿ ಹಾಗೂ ನಾಲ್ಕು ಬಾರಿ ಐಪಿಎಲ್ ಟ್ರೋಫಿ ಗೆದ್ದಿರುವ ಎಂಎಸ್ ಧೋನಿ ಕೂಡ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಆಡಿದ್ದಾರೆ, ಎಂದು 2022ರಲ್ಲಿ ಹೇಳಿದ್ದರು. ಇದು ವಿರಾಟ್ ಪಿತ್ತ ನೆತ್ತಿಗೇರಲು ಕಾರಣವಾಗಿತ್ತು.

ಇನ್ನು ಮುಂದೆ ವಿರಾಟ್ ಕೊಹ್ಲಿ ಹೆಚ್ಚಿನ ರನ್ ಗಳಿಸುವ ಕಡೆಗೆ ಗಮನಹರಿಸಬೇಕು ಹಾಗೂ ಇದು ತಂಡದ ಪಾಲಿಗೆ ತುಂಬಾ ಮುಖ್ಯ. ನೀವು ಭಾರತ ತಂಡವನ್ನು ಪ್ರತಿನಿಧಿಸಬೇಕೆಂಬ ಕನಸು ಕಂಡಿದ್ದಾಗ, ನೀವು ನಾಯಕನಾಗಬೇಕೆಂಬ ಕನಸು ಕಾಣಬಾರದು. ಭಾರತ ತಂಡದ ಪರ ಪಂದ್ಯಗಳನ್ನು ಗೆಲ್ಲಿಸಬೇಕೆಂಬ ಕನಸು ಇರಬೇಕು, ಇದರಲ್ಲಿ ಯಾವುದೇ ಬದಲಾವಣೆಯಾಗಬಾರದು. ಅದು ಬಿಟ್ಟು ಟಾಸ್‌ಗೆ ಹೋಗಬೇಕು, ಫೀಲ್ಡ್ ಪ್ಲೇಸ್‌ಮೆಂಟ್ ಮಾಡಬೇಕೆಂದನ್ನು ನಿರೀಕ್ಷಿಸಬಾರದು. ಆದರೆ ನಿಮ್ಮ ಶಕ್ತಿ ಹಾಗೂ ಉದ್ದೇಶ ತಂಡವನ್ನು ಗೆಲ್ಲಿಸುವುದರ ಕಡೆಗೆ ಇರಬೇಕು, ಇದು ಯಾವುದೇ ಸನ್ನಿವೇಶದಲ್ಲಿ ಬದಲಾವಣೆಯಾಗಬಾರದು,” ಎಂದು ಗಂಭೀರ್ ತಿಳಿಸಿದ್ದರು.
ಐಪಿಎಲ್ 2020 ಸೀಸನ್‌ನಲ್ಲಿ ಕೊಹ್ಲಿ ನಾಯಕತ್ವದ ಬಗ್ಗೆ ಮಾತನಾಡುತ್ತಾ ಗಂಭೀರ್ ಕಟುವಾದ ಕಾಮೆಂಟ್‌ಗಳನ್ನು ಮಾಡಿದ್ದರು. ಆರ್‌ಸಿಬಿ ನಾಯಕತ್ವದ ಜವಾಬ್ದಾರಿಯಿಂದ ಕೊಹ್ಲಿಯನ್ನು ತೆಗೆದುಹಾಕಬೇಕು ಎಂದು ಸಲಹೆ ನೀಡಿದ್ದರು. ಈ ಕಾಮೆಂಟ್‌ಗಳು ಇಷ್ಟು ದಿನ ಸೈಲೆಂಟ್ ಆಗಿದ್ದು, ಗೌತಮ್ ಗಂಭೀರ್ ಟೀಂ ಇಂಡಿಯಾದ ಮುಖ್ಯ ಕೋಚ್ ಆಗುತ್ತಿದ್ದಂತೆ ಮತ್ತೆ ಚರ್ಚೆಗೆ ಎಡೆಮಾಡಿ ಕೊಡುತ್ತಲೇ ಬರುತ್ತಿವೆ.

8 ವರ್ಷದ ಕೊಹ್ಲಿ ನಾಯಕತ್ವದಲ್ಲಿ ಆರ್‌ಸಿಬಿ ಒಂದು ಭಾರಿಯೂ ಪ್ರಶಸ್ತಿ ಗೆದ್ದಿಲ್ಲ. ಬೇರೆ ಯಾವ ನಾಯಕನಿಗೆ ಇಷ್ಟು ಸಮಯ ಸಿಕ್ಕಿದೆ? ಕನಿಷ್ಠ ಯಾವ ಆಟಗಾರನಿಗೆ ಅಂತಹ ಅವಕಾಶ ಸಿಕ್ಕಿದೆ? ಹಾಗಾಗಿ ಈ ವೈಫಲ್ಯಕ್ಕೆ ವಿರಾಟ್ ಕೊಹ್ಲಿಯೇ ಹೊಣೆಯಾಗಬೇಕು. ನಾನು ಕೇವಲ ಈ ಒಂದು ವರ್ಷದ ಬಗ್ಗೆ ಮಾತನಾಡುತ್ತಿಲ್ಲ, 8 ವರ್ಷಗಳ ಈ ಸುದೀರ್ಘ ಸಮಯದ ವೈಫಲ್ಯದ ಬಗ್ಗೆ ಮಾತನಾಡುತ್ತಿದ್ದೇನೆ. ನಾನು ವಿರಾಟ್ ಕೊಹ್ಲಿ ವಿರುದ್ಧ ಅಲ್ಲ. ಆದರೆ ಆರ್‌ಸಿಬಿ ಸೋಲಿಗೆ ನಾನೇ ಹೊಣೆ ಎಂದು ನಾಯಕತ್ವದಿಂದ ಕೆಳಗಿಳಿಯಬೇಕು’ ಎಂದು ಗಂಭೀರ್ ಹೇಳಿದ್ದರು.

ಕೊಹ್ಲಿ ಬಗ್ಗೆ ಗಂಭೀರ್ ಈ ಎಲ್ಲ ಮಾತುಗಳನ್ನು ಆಡುವ ಮೂಲಕ ವಿರಾಟ್ ಆಟವನ್ನು ಟೀಕಿಸಿದ್ದರು. ಸ್ವಂತ ಬಲದ ಮೇಲೆ ಕ್ರಿಕೆಟ್ ಲೋಕ ಆಳುತ್ತಿರುವ ಕೊಹ್ಲಿಯ ವಿಚಾರದಲ್ಲಿ ಗಂಭೀರ್‌ಗೆ ಅಸೂಯೆ ಮೂಡಿತಾ? ಎಂಬ ಚರ್ಚೆಗಳು ನಡೆಯುತ್ತಿವೆ. ಹೀಗಾಗಿಯೇ ಕೇವಲ ಹೊರಜಗತ್ತಿಗೆ ಇಬ್ಬರು ಚೆನ್ನಾಗಿರುವ ಸಂದೇಶ ರವಾನಿಸುವ ಪ್ರಯತ್ನ ಮಾಡಿದ್ದಾರಷ್ಟೇ. ಆದರೆ ಡ್ರೆಸ್ಸಿಂಗ್ ರೂಂನಲ್ಲಿನ ವಿಡಿಯೋ ಹಲವು ಅನುಮಾನಗಳನ್ನು ಹುಟ್ಟು ಹಾಕುತ್ತಿದೆ. ಅಲ್ಲದೆ ಕೆಲವು ವಿಚಾರಗಳಲ್ಲಿ ಇಬ್ಬರ ನಡುವಿನ ಮುನಿಸನ್ನೂ ಕೂಡ ಬಯಲಿಗೆ ತಂದಿದೆ. ರೋಹಿತ್ ಹಾಗೂ ಕೊಹ್ಲಿ ಇಬ್ಬರೂ ಗಭೀರ್ ಜೊತೆ ವೈಮನಸ್ಸು ಹೊಂದಿರುವುದು ಇದೀಗ ಬಿಸಿಸಿಐಗೆ ದೊಡ್ಡ ತಲೆನೋವಾಗಿ ಪರಿಣಮಿಸಿ ಆಟಗಾರರ ನಡುವಿನ ಜಗಳವನ್ನು ತಣಿಸಿ ಯಥಾಸ್ಥಿತಿಗೆ ತಂಡವನ್ನು ಮರಳಿ ತರಲು ಕ್ರಿಕೆಟ್ ಸಂಸ್ಥೆ ಮುಂದಾಗುತ್ತಿದೆ. ಆದರೆ ಗಂಭೀರ್ ಮಾತುಗಳು ಹಾಗೂ ನಡವಳಿಕೆಯ ಬಗ್ಗೆ ವಿರಾಟ್ ಫ್ಯಾನ್ಸ್ ಕಾದು ಕೆಂಡವಾಗಿರೋದಂತು ಸುಳ್ಳಲ್ಲಾ..!





