ಧಾರವಾಡ ಗ್ರಾಮೀಣ ಕ್ಷೇತ್ರದಲ್ಲಿ ಬಿಜೆಪಿ ಕಾರ್ಯಕರ್ತ ಯೋಗೀಶ್ ಗೌಡ ಕೊಲೆ ಪ್ರಕರಣದ ಆರೋಪಿ ಆಗಿರುವ ಮಾಜಿ ಸಚಿವ ವಿನಯ್ ಕುಲಕರ್ಣಿ ಮತ್ತೊಮ್ಮೆ ಅದೃಷ್ಟವನ್ನು ಪಣಕ್ಕಿಟ್ಟಿದ್ದಾರೆ. ಜನಪ್ರತಿನಿಧಿಗಳ ನ್ಯಾಯಾಲಯ ಅರ್ಜಿ ವಜಾ ಮಾಡಿದ ಬೆನ್ನಲ್ಲೇ ಹೈಕೋರ್ಟ್ ಮೆಟ್ಟಿಲೇರಿರುವ ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಲಕರ್ಣಿ, ಧಾರವಾಡ ಜಿಲ್ಲೆಗೆ ಪ್ರವೇಶ ನೀಡುವಂತೆ ಕೋಟಿ ವಿನಯ್ ಕುಲಕರ್ಣಿ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಕೊಲೆ ಆರೋಪದಲ್ಲಿ ಜೈಲು ಸೇರಿದ್ದ ಮಾಜಿ ಸಚಿವ ವಿನಯ್ ಕುಲಕರ್ಣಿ, ಎಲ್ಲಿಯೂ ಜಾಮೀನು ಸಿಗದಿದ್ದಾಗ ಅಂತಿಮವಾಗಿ ಸರ್ವೋಚ್ಛ ನ್ಯಾಯಾಲಯದ ಬಾಗಿಲು ಬಡಿದು ಜಾಮೀನು ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಅಂತಿಮವಾಗಿ ಜಾಮೀನು ಕೂಡ ಸಿಕ್ಕಿತ್ತು. ಆದರೆ ಧಾರವಾಡ ಜಿಲ್ಲೆಗೆ ಪ್ರವೇಶವನ್ನು ನಿರಾಕರಿಸಿತ್ತು ಸುಪ್ರೀಂ ಕೋರ್ಟ್. ಇದೀಗ ಚುನಾವಣೆಗೆ ಸ್ಪರ್ಧೆ ಮಾಡಿರುವ ಕಾರಣಕ್ಕೆ ಕೆಲವು ದಿನಗಳ ಕಾಲ ಧಾರವಾಡ ಕ್ಷೇತ್ರದಲ್ಲಿ ಇರುವುದಕ್ಕೆ ಅವಕಾಶ ಕೋರಿದ್ದಾರೆ.
ಬಂಡಾಯದ ಅಖಾಡದಲ್ಲಿ ವಿನಯ್‌ಗೆ ಗೆಲ್ಲುವ ಅವಕಾಶ..!
ಧಾರವಾಡ ಗ್ರಾಮೀಣ ಕ್ಷೇತ್ರದಿಂದ ಈಗಾಗಲೇ ಪತ್ನಿ ಮೂಲಕ ನಾಮಪತ್ರ ಸಲ್ಲಿಕೆ ಮಾಡಿರುವ ಮಾಜಿ ಸಚಿವರು ಗೆದ್ದು ಬೀಗುವ ವಿಶ್ವಾಸದಲ್ಲಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಅಮೃತ ದೇಸಾಯಿ ವಿರುದ್ಧ 21 ಸಾವಿರ ಮತಗಳ ಅಂತರದಿಂದ ಸೋಲು ಕಂಡಿದ್ದ ವಿನಯ್ ಕುಲಕರ್ಣಿ, ಈ ಬಾರಿ ಬಿಜೆಪಿ ಬಂಡಾಯದಿಂದಲೇ ಗೆಲ್ಲುವ ಸಾಧ್ಯತೆ ನಿಚ್ಚಳವಾಗ್ತಿದೆ. ಬಿಜೆಪಿ ಟಿಕೆಟ್ ಆಕಾಂಕ್ಷಿಗಳಾಗಿದ್ದ ತವನಪ್ಪ ಅಷ್ಟಗಿ ಹಾಗು ಬಸವರಾಜ ಕೊರವರ ಇಬ್ಬರು ಬಿಜೆಪಿ ಬಂಡಾಯ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದು, ವಿನಯ್ ಕುಲಕರ್ಣಿ ಗೆಲುವಿನ ಹಾದಿ ಸುಗಮ ಆದಂತಿದೆ. ಆದರೂ ಕ್ಷೇತ್ರದಲ್ಲಿ ಪ್ರಚಾರ ಮಾಡಿದಾಗ ಗೆಲುವು ಇನ್ನೂ ಸರಳ ಆಗುವ ನಿರೀಕ್ಷೆಯಿಂದ ಹೈಕೋರ್ಟ್‌ನಿಂದ ವಿನಾಯ್ತಿ ಕೇಳಿದ್ದಾರೆ. ಜನಪ್ರತಿನಿಧಿಗಳ ನ್ಯಾಯಾಲಯ ಅರ್ಜಿ ತಿರಸ್ಕಾರ ಮಾಡಿದ ಬಳಿಕ ಹೈಕೋರ್ಟ್ ಮೊರೆ ಹೋಗಲಾಗಿದೆ. ಇದೀಗ ಹೈಕೋರ್ಟ್ ಸಿಬಿಐಗೆ ನೋಟಿಸ್ ನೀಡಿದ್ದು, ಅವಕಾಶ ಸಿಗುವ ನಿರೀಕ್ಷೆಯಲ್ಲಿದ್ದಾರೆ.

ಬಿಜೆಪಿ ಸರ್ಕಾರದ ಮೇಲೆ ಕೆಂಡದಂತಹ ಕೋಪ..!
ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ನಾನು ಭಾಗಿ ಇಲ್ಲದೇ ಇದ್ದರೂ ಉದ್ದೇಶಪೂರ್ವಕವಾಗಿ ನನ್ನನ್ನು ಸಿಲುಕಿಸಲಾಯ್ತು ಅನ್ನೋದು ವಿನಯ್ ಕುಲಕರ್ಣಿ ಕೋಪಕ್ಕೆ ಕಾರಣ. ಅದರಲ್ಲೂ ಸಿಎಂ ಬಸವರಾಜ ಬೊಮ್ಮಾಯಿ, ಗೃಹ ಸಚಿವರಾಗಿದ್ದ ವೇಳೆ ರಾಜಕೀಯ ಕಾರಣಕ್ಕಾಗಿ ನನ್ನನ್ನು ಸಿಲುಕಿಸಿ, ಬಿಜೆಪಿಗೆ ಲಾಭ ಆಗುವಂತೆ ಮಾಡಿದರು. ಪಂಚಮಸಾಲಿ ಸಮುದಾಯಕ್ಕೆ ಸೇರಿದ ನನ್ನನ್ನು ರಾಜಕೀಯವಾಗಿ ಮುಗಿಸಲು ಸಂಚು ರೂಪಿಸಿದವರಿಗೆ ನನ್ನ ಕ್ಷೇತ್ರದ ಜನರು ಹಾಗು ರಾಜ್ಯದ ಇತರೆ ಕಡೆ ವಾಸ ಮಾಡ್ತಿರೋ ಪಂಚಮಸಾಲಿ ಸಮುದಾಯ ಉತ್ತರ ಕೊಡಲಿದೆ ಎನ್ನುವ ವಿಶ್ವಾಸದಲ್ಲಿ ವಿನಯ್ ಕುಲಕರ್ಣಿ ಇದ್ದಾರೆ. ಇದೀಗ ಹೈಕೋರ್ಟ್‌ನಲ್ಲಿ 30 ದಿನಗಳ ವಿನಾಯ್ತಿಗಾಗಿ ಅರ್ಜಿ ಸಲ್ಲಿಕೆ ಮಾಡಿದ್ದು, ಕೋರ್ಟ್ ಅವಕಾಶ ಕೊಟ್ಟರೆ ಧಾರವಾಡ ಗ್ರಾಮೀಣ ಕ್ಷೇತ್ರ ಅಷ್ಟೇ ಅಲ್ಲದೆ ಇಡೀ ಜಿಲ್ಲೆಯಲ್ಲಿ ಕಾಂಗ್ರೆಸ್ ಕೈ ಮೇಲಾಗುವಂತೆ ಮಾಡುವ ಚಿಂತನೆಯಲ್ಲಿದ್ದಾರೆ.
ನಾನು ವಿನಯ್ ಕುಲಕರ್ಣಿ ಅಭಿಯಾನ ಶುರು..!
ಧಾರವಾಡ ಗ್ರಾಮೀಣ ಕ್ಷೇತ್ರಕ್ಕೆ ಕೋರ್ಟ್ ಅನುಮತಿ ನೀಡದಿದ್ದರೆ ಪ್ರತಿಯೊಂದು ಗ್ರಾಮದಲ್ಲೂ ವಿನಯ್ ಕುಲಕರ್ಣಿ ಹೆಸರಲ್ಲಿ ಅಭಿಯಾನ ಮಾಡಲು ನಿರ್ಧಾರ ಮಾಡಿದ್ದಾರೆ. ದಾವಣಗೆರೆ, ಹಾವೇರಿ ಸೇರಿದಂತೆ ಧಾರವಾಡ ಜಿಲ್ಲೆ ಗಡಿಭಾಗದಲ್ಲಿ ವಿನಯ್ ಕುಲಕರ್ಣಿ ಪ್ರಚಾರ ಮಾಡಲು ತಯಾರಿ ಮಾಡಿದ್ದಾರೆ. ಡಿಜಿಟಲ್ ಮೂಲಕ ಪ್ರತಿಯೊಂದು ಗ್ರಾಮದಲ್ಲೂ ವಿನಯ್ ಕುಲಕರ್ಣಿ ಭಾಷಣೆ ಆಲಿಸುವಂತೆ ಮಾಡುವ ತಯಾರಿಗಳೂ ನಡೆದಿವೆ. ಹೈಕೋರ್ಟ್‌ನಲ್ಲಿ ವಿಚಾರಣೆ ನಡೆದು ವಿನಯ್ ಕುಲಕಕರ್ಣಿಗೆ ಅವಕಾಶ ಕೊಟ್ಟರೆ ಎಲ್ಲವೂ ಸುಗಮ. ಒಂದು ವೇಳೆ ಅವಕಾಶ ಕೊಡದಿದ್ದರೆ ಮತ್ತೊಂದು ರೀತಿಯಲ್ಲಿ ಚುನಾವಣೆ ಮಾಡಲು ವಿನಯ್ ಕುಲಕರ್ಣಿ ಕೂಡ ಮಾನಸಿಕವಾಗಿ ಸಜ್ಜಾಗಿದ್ದಾರೆ. ಎಲ್ಲವೂ ಧಾರವಾಡ ಗ್ರಾಮೀಣ ಕ್ಷೇತ್ರದ ಜನರ ಕೈಲಿದ್ದು, ಮೇ 10ಕ್ಕೆ ಜನರು ವಿನಯ್ ಕುಲಕರ್ಣಿ ಭವಿಷ್ಯ ಬರೆಯಲಿದ್ದಾರೆ.