
ವಿಜಯಪುರ: ಪಟ್ಟಣದ ತಾಳಿಕೋಟೆ ರಸ್ತೆಯಲ್ಲಿರುವ ಮುಸ್ಲಿಂ ಸಮಾಜದ ಖಬರಸ್ಥಾನದಲ್ಲಿದ್ದ 80ಕ್ಕೂ ಹೆಚ್ಚು ಗೋರಿಗಳನ್ನು ಭಾನುವಾರ ಬೆಳಿಗ್ಗೆ ನೆಲಸಮಗೊಳಿಸಿದ್ದು, ಈ ಸಂಬಂಧ ಆರು ಜನರ ವಿರುದ್ಧ ದೂರು ದಾಖಲಿಸಲಾಗಿದೆ.ದಾವಣಗೆರೆಯ ನೀಲಮ್ಮ ಬಾರಿಕಾಯಿ ಹಾಗೂ ಕಾಶೀನಾಥ ಮಲ್ಲಿಕಾರ್ಜುನ, ಬಾಗಲಕೋಟೆಯ ವಿಜಯ ಬಾರಿಕಾಯಿ, ಮುದ್ದೇಬಿಹಾಳದ ವಿಜಯಲಕ್ಷ್ಮಿ ಬಾರಿಕಾಯಿ ಹಾಗೂ ಜೆಸಿಬಿ ಆಪರೇಟರ್ ಗುಡಿಹಾಳದ ಸಂಗಮೇಶ ಹಿರೇಕುರಬರ ವಿರುದ್ಧ ದೂರು ನೀಡಲಾಗಿದೆ.ಖಬರಸ್ಥಾನ ಇರುವ ಜಮೀನಿನ ಮಾಲೀಕತ್ವ ತಮ್ಮದಿದೆ’ ಎಂದು ನೀಲಮ್ಮ ಬಾರಿಕಾಯಿ ಎಂಬುವವರು ಎರಡು ಜೆಸಿಬಿಗಳಿಂದ ಇಲ್ಲಿದ್ದ 80ಕ್ಕೂ ಹೆಚ್ಚು ಗೋರಿಗಳನ್ನು ನೆಲಸಮಗೊಳಿಸಿದ್ದಾರೆ.ಗೋರಿಗಳನ್ನು ನೆಲಸಮ ಮಾಡಲಾಗಿರುವ ವಿಷಯ ತಿಳಿಯುತ್ತಿದ್ದಂತೆ ನೂರಾರು ಮುಸ್ಲಿಮರು ಸ್ಥಳದಲ್ಲಿ ಜಮಾಯಿಸಿ ಆಕ್ರೋಶ ವ್ಯಕ್ತಪಡಿಸಿದರು.ತಕ್ಷಣ ಪಿಎಸ್‌ಐ ಸಂಜಯ ತಿಪರೆಡ್ಡಿ ಸ್ಥಳಕ್ಕೆ ಧಾವಿಸಿ ಸಿಬ್ಬಂದಿಯೊಂದಿಗೆ ಬಿಗಿ ಬಂದೋಬಸ್ತ್ ಕ್ರಮ ಕೈಗೊಂಡಿದ್ದಾರೆ.ಘಟನೆಯ ಕುರಿತು ಪೊಲೀಸ್ ಠಾಣೆಗೆ ದೂರು ನೀಡಿರುವ ಪುರಸಭೆ ಸದಸ್ಯ ಮೆಹಬೂಬ ಗೊಳಸಂಗಿ, ‘ಖಬರಸ್ಥಾನ ಜಾಗದ ಸಲುವಾಗಿ ಮುಸ್ಲಿಂ ಸಮಾಜದವರಿಗೆ ಹಾಗೂ ಜಮೀನಿನ ಮಾಲೀಕರಾದ ನೀಲಮ್ಮ ಬಾರಿಕಾಯಿ ಅವರ ನಡುವೆ ತಕರಾರು ಇದ್ದು, ಕೋರ್ಟ್‌ನಲ್ಲಿ ದಾವೆ ದಾಖಲಾಗಿ ವಿಚಾರಣೆ ನಡೆದು, ನಮ್ಮ ಸಮಾಜದಂತೆ ಆದೇಶವಾಗಿದೆ’ ಎಂದು ದೂರಿನಲ್ಲಿ ಉಲ್ಲೇಖಿಸಿದ್ದು,’ಕೋರ್ಟ್ ಆದೇಶವನ್ನು ಉಲ್ಲಂಘಿಸಿ ಗೋರಿಗಳನ್ನು ನೆಲಸಮ ಮಾಡಲಾಗಿದೆ’ ಎಂದು ಆರೋಪಿಸಿದ್ದಾರೆ.ಈದ್ಗಾ ಮೈದಾನದ ಪಕ್ಕದಲ್ಲಿರುವ ಸ್ಮಶಾನದಲ್ಲಿ ಭಾನುವಾರ ಗೋರಿಗಳನ್ನು ನೆಲಸಮ ಮಾಡಿರುವ ಕುರಿತು ಪಿಎಸ್‌ಐ ಸಂಜಯ ತಿಪರೆಡ್ಡಿ ಅವರೊಂದಿಗೆ ಪುರಸಭೆ ಸದಸ್ಯ ಮಹೆಬೂಬ ಗೊಳಸಂಗಿ ಹಾಗೂ ಇತರೆ ಮುಖಂಡರು ಚರ್ಚೆ ನಡೆಸಿದರು
