ಬೆಂಗಳೂರು:ಏ.೦೧: ಮಾಜಿ ಸಿಎಂ ಸಿದ್ದರಾಮಯ್ಯ ವರುಣಾ ಕ್ಷೇತ್ರದಿಂದ ಸ್ಪರ್ಧೆ ಮಾಡೋದು ಖಚಿತ ಆಗ್ತಿದ್ದ ಹಾಗೆ ವಿರೋಧಿ ಪಾಳದ ತಂತ್ರಗಾರಿಕೆ ಶುರು ಮಾಡಿತ್ತು.. ಆದರಲ್ಲಿ ಪ್ರಮುಖ ಆದ್ದದ್ದು ಯಡಿಯೂರಪ್ಪ ಅವರ ಪುತ್ರ ಬಿ.ವೈ ವಿಜಯೇಂದ್ರ ಅವರನ್ನು ಅಖಾಡಕ್ಕೆ ಇಳಿಸಿ ಎಂದು ಬಿಜೆಪಿ ಹೈಕಮಾಂಡ್ ಕೊಟ್ಟ ಸೂಚನೆ. ಅತ್ತ ಜೆಡಿಎಸ್ ಕೂಡ ಸಿದ್ದರಾಮಯ್ಯ ವಿರುದ್ಧ ಪ್ರಬಲ ಅಭ್ಯರ್ಥಿ ಅಖಾಡಕ್ಕೆ ಇಳಿಸುವ ಬಗ್ಗೆ ಮಾತನಾಡಿತ್ತು. ಆದರೆ ಇದೀಗ ಬಿಜೆಪಿ ಹೈಕಮಾಂಡ್ ನಾಯಕರ ಮಾತಿಗೆ ಉಲ್ಟಾ ಹೊಡೆದಿದ್ದಾರೆ ಬಿಜೆಪಿ ನಾಯಕ ಬಿ.ಎಸ್ ಯಡಿಯೂರಪ್ಪ. ಈ ಹಿಂದೆ ಟಿಕೆಟ್ ಬಗ್ಗೆ ಹೈಕಮಾಂಡ್ ನಿರ್ಧಾರ ಮಾಡುತ್ತದೆ ಎಂದಿದ್ದ ಬಿ.ಎಸ್ ಯಡಿಯೂರಪ್ಪ, ಇದೀಗ ವಿಜಯೇಂದ್ರ ವರುಣಾದಿಂದ ಯಾವುದೇ ಕಾರಣಕ್ಕೂ ಸ್ಪರ್ಧೆ ಮಾಡುವುದಿಲ್ಲ. ವಿಜಯೇಂದ್ರ ಶಿವಮೊಗ್ಗದ ಶಿಕಾರಿಪುರದಿಂದಲೇ ಸ್ಪರ್ಧೆ ಮಾಡ್ತಾರೆ. ಹೈಕಮಾಂಡ್ ನಾಯಕರು ವರುಣಾದಿಂದ ಸ್ಪರ್ಧೆಗೆ ಸೂಚನೆ ಕೊಟ್ಟಿದ್ದು ಸತ್ಯ. ಆದರೆ ನಾನು ಹೈಕಮಾಂಡ್ ನಾಯಕರ ಮನವೊಲಿಸುತ್ತೇನೆ ಎಂದು ಬಹಿರಂಗವಾಗಿ ಹೇಳಿಕೆ ಕೊಟ್ಟಿದ್ದಾರೆ. ಒಂದು ವೇಳೆ ವಿಜಯೇಂದ್ರ ವರುಣಾದಿಂದಲೇ ಸ್ಪರ್ಧೆ ಮಾಡಬೇಕು ಅನ್ನೋ ಹಠಕ್ಕೆ ಬಿದ್ದರೆ ಬಿಎಸ್ ಯಡಿಯೂರಪ್ಪ ದಾರಿ ಅಂತಿಮಘಟ್ಟದಲ್ಲಿ ಬಿಜೆಪಿಯಿಂದ ಹೊರಕ್ಕೆ ತಿರುಗಿದರೂ ಅಚ್ಚರಿಯಿಲ್ಲ ಎನ್ನುವಂತಾಗಿದೆ. ಇದಕ್ಕೆ ಕಾರಣ ಬಿಜೆಪಿ ಹೈಕಮಾಂಡ್ ಮಾಡಿರೋ ರಣತಂತ್ರ ಎನ್ನಲಾಗ್ತಿದೆ.

‘ಇಡಿ, ಐಟಿ ತೋರಿಸಿ ಯಡಿಯೂರಪ್ಪ ನಿಯಂತ್ರಣ’
ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧ ಸಾಕಷ್ಟು ಆರೋಪಗಳಿವೆ. ಕಳೆದ ಬಾರಿ ಮುಖ್ಯಮಂತ್ರಿ ಆಗಿದ್ದಾರೆ, ಪಿಎಸ್ಐ ಹಗರಣ, ಜಲಸಂಪನ್ಮೂಲ ಇಲಾಖೆಯಲ್ಲಿ ನಡೆದಿದೆ ಎನ್ನಲಾಗ್ತಿರೋ ಸಾವಿರಾರು ಕೋಟಿ ಹಗರಣದ ಮೂಲಕ ಯಡಿಯೂರಪ್ಪ ಅವರನ್ನು ಕಟ್ಟಿಹಾಕಲಾಗಿದೆ ಎನ್ನುವುದು ಕಾಂಗ್ರೆಸ್ ಪಕ್ಷದ ಆರೋಪ. ಇನ್ನು ಈ ಹಿಂದೆ ಸ್ವತಃ ಬಿ.ವೈ ವಿಜಯೇಂದ್ರ ವಿರುದ್ಧ ಬಿಜೆಪಿಯ ಹಲವು ನಾಯಕರು ಭ್ರಷ್ಟಾಚಾರದ ಆರೋಪ ಮಾಡಿದ್ದರು. ಇದೀಗ ಆ ಎಲ್ಲಾ ಪ್ರಕರಣಗಳಲ್ಲಿ ಇಡಿ, ಐಟಿ ಭಯ ಸೃಷ್ಟಿಸಿ ಯಡಿಯೂರಪ್ಪ ಪಕ್ಷದ ವಿರುದ್ಧ ಮಾತನಾಡಬಾರದು, ಹೈಕಮಾಂಡ್ ವಿರುದ್ಧ ನಿಲ್ಲಬಾರದು ಎನ್ನುವುದು ಹೈಕಮಾಂಡ್ ಲೆಕ್ಕಾಚಾರ. ಇದೇ ಕಾರಣಕ್ಕೆ ವರುಣಾದಿಂದ ಸಿದ್ದರಾಮಯ್ಯ ವಿರುದ್ಧ ಬಿ.ವೈ ವಿಜಯೇಂದ್ರ ನಿಲ್ಲಿಸಿದ್ರೆ ಸಿದ್ದರಾಮಯ್ಯ ಕ್ಷೇತ್ರದಲ್ಲೇ ಬೀಡು ಬಿಡುವಂತೆ ಮಾಡಿದ್ರೆ ಕಾಂಗ್ರೆಸ್ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸೋದನ್ನು ತಡೆಯಬಹುದು ಅನ್ನೋದು ಬಿಜೆಪಿ ಹೈಕಮಾಂಡ್ ಲೆಕ್ಕಾಚಾರ. ಇನ್ನು ಶಿಕಾರಿಪುರದಿಂದ ವಿಜಯೇಂದ್ರ ಹೊರಕ್ಕೆ ಬಂದಾಗ ಸೋಲು ಗೆಲುವು ಅಖಾಡದಲ್ಲಿ ನಿರ್ಣಯ ಆಗುತ್ತದೆ. ಒಂದು ವೇಳೆ ಸಿದ್ದರಾಮಯ್ಯ ವಿರುದ್ಧ ಸೋತರೂ ಬಿಜೆಪಿ ಲಾಭ ಎನ್ನುವ ಆಲೋಚನೆ ಬಿಜೆಪಿ ಹೈಕಮಾಂಡ್ ನಾಯಕರದ್ದು ಎಂದು ಕಾಂಗ್ರೆಸ್ ಆರೋಪಿಸಿದೆ. ಇದೇ ಕಾರಣಕ್ಕೆ ಬಿಜೆಪಿ ಹೈಕಮಾಂಡ್ಗೆ ಯಡಿಯೂರಪ್ಪ ಬಹಿರಂಗವಾಗಿಯೇ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.

ಸಂಸದೀಯ ಮಂಡಳಿಯಲ್ಲಿ ಯಡಿಯೂರಪ್ಪ ಬಹಿರಂಗ ಮಾತಿನ ಅರ್ಥ..!?
ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಈಗ ಬಿಜೆಪಿ ಸಂಸದೀಯ ಮಂಡಳಿ ಸದಸ್ಯರಾಗಿದ್ದಾರೆ. ಟಿಕೆಟ್ ಹಂಚಿಕೆ ಇನ್ನೂ ಮೂರ್ನಾಲ್ಕು ದಿನಗಳ ಕಾಲ ಆಗಬಹುದು ಎಂದು ಸ್ವತಃ ಯಡಿಯೂರಪ್ಪ ಹೇಳಿದ್ದಾರೆ. ಇನ್ನು ಬಿಜೆಪಿ 22 ಸಾವಿರ ಪಕ್ಷದ ಪದಾಧಿಕಾರಿಗಳ ಮೂಲಕ ಬ್ಯಾಲೆಟ್ ವೋಟ್ ಸಂಗ್ರಹ ಮಾಡಿದ್ದು, 224 ಅಭ್ಯರ್ಥಿಗಳ ಆಯ್ಕೆ ಮಾಡುತ್ತಿದೆ. ಆದರೆ ಶಿಕಾರಿಪುರ ಕ್ಷೇತ್ರದಿಂದಲೇ ಸ್ಪರ್ಧೆ ಮಾಡುವಂತೆ ವಿಜಯೇಂದ್ರಗೆ ಹೇಳಿದ್ದೇನೆ ಎಂದಿರುವುದು ಬಿಜೆಪಿ ಹೈಕಮಾಂಡ್ ನಾಯಕರಿಗೆ ನುಂಗಲಾರದ ಬಿಸಿ ತುಪ್ಪ ಎಂದರೂ ಸುಳ್ಳಲ್ಲ. ಈ ಹಿಂದೆ ಶಿಕಾರಿಪುರದಿಂದ ನಾನು ಚುನಾವಣೆಗೆ ಸ್ಪರ್ಧೆ ಮಾಡ್ತಿಲ್ಲ, ಮುಂದಿನ ದಿನಗಳಲ್ಲಿ ವಿಜಯೇಂದ್ರ ಅವರನ್ನು ಗೆಲ್ಲಿಸಬೇಕು ಎಂದು ಯಡಿಯೂರಪ್ಪ ಕರೆ ಕೊಟ್ಟಿದ್ದರು. ಆ ಬಳಿಕ ಒಂದೇ ದಿನದಲ್ಲಿ ಹೈಕಮಾಂಡ್ ಎಲ್ಲಿ ಹೇಳುತ್ತೋ ಅಲ್ಲಿಂದಲೇ ಸ್ಪರ್ಧೆ ಎಂದಿದ್ದರು. ಅಂದರೆ ಹೈಕಮಾಂಡ್ ನಿರ್ಧಾರವೇ ಅಂತಿಮ ಎನ್ನುವ ರೀತಿ ಹೇಳಿದ್ದರು. ಇದೀಗ ಶಿಕಾರಿಪುರ ಕೈತಪ್ಪುವ ಭಿತಿಯಲ್ಲಿ ಯಡಿಯೂರಪ್ಪ ಮಾಡು ಇಲ್ಲವೇ ಮಡಿ ಎನ್ನುವಂತೆ ವಿಜಯೇಂದ್ರ ಶಿಕಾರಿಪುರದಿಂದಲೇ ಸ್ಪರ್ಧೆ ಮಾಡುತ್ತಾರೆ ಎಂದು ಬಹಿರಂಗವಾಗಿ ಹೇಳಿದ್ದಾರೆ. ವರುಣಾದಿಂದ ಅಖಾಡಕ್ಕೆ ಇಳಿಸದ್ರೂ ಗೆಲ್ಲುವುದು ಕಷ್ಟ. ಜೊತೆಗೆ ಸಿದ್ದರಾಮಯ್ಯ ವಿರುದ್ಧ ಮಗನನ್ನು ನಿಲ್ಲಿಸಿ ಗೆಲ್ಲಿಸಿದರೂ ಮುಂದಿನ ದಿನಗಳಲ್ಲಿ ಪ್ರಬಲ ನಾಯಕನ ವಿರೋಧ ಕಟ್ಟಿಕೊಲ್ಳಬೇಕಾಗುತ್ತದೆ. ಬಿಜೆಪಿ ಹೈಕಮಾಂಡ್ ಈಗಾಗಲೇ ದೂರ ತಳ್ಳಿದ್ದು, ಚುನಾವಣೆಗಾಗಿ ಪ್ರೀತಿ ತೋರಿಸುತ್ತಿದೆ. ಈಗ ಸಿದ್ದರಾಮಯ್ಯ ವಿರುದ್ಧ ಅಖಾಡಕ್ಕೆ ಇಳಿದರೆ ಮಕ್ಕಳ ರಾಜಕೀಯ ಜೀವನಕ್ಕೆ ಅಡ್ಡಿ ಉಂಡಾಗುತ್ತದೆ ಎನ್ನುವುದು ಯಡಿಯೂರಪ್ಪ ನಿರ್ಧಾರದ ಹಿಂದಿನ ಲೆಕ್ಕಾಚಾರ.
ಶಿಕಾರಿಪುರದಲ್ಲೂ ವಿಜಯೇಂದ್ರಗೆ ಹಳ್ಳ ತೋಡಿದ ನಾಯಕರು..!

ಶಿವಮೊಗ್ಗದ ಶಿಕಾರಿಪುರ ಸಾದರ ಲಿಂಗಾಯತರು ಹಾಗು ಬಂಜಾರ ಸಮುದಾಯ ಹೆಚ್ಚಾಗಿ ವಾಸ ಮಾಡುವ ಕ್ಷೇತ್ರ. ಆದರೆ ಈಗಾಗಲೇ ಸರ್ಕಾರ ಒಳಮೀಸಲಾತಿ ಪ್ರಕಟ ಮಾಡಿದ್ದು, ಬಂಜಾರ ಸಮುದಾಯ ಭಾರತೀಯ ಜನತಾ ಪಾರ್ಟಿ ವಿರುದ್ಧ ತಿರುಗಿ ಬಿದ್ದಿದೆ. ಮಾಜಿ ಸಿಎಂ ಯಡಿಯೂರಪ್ಪ ಅವರ ಮನೆ ಮೇಲೆ ಕಲ್ಲು ತುರಾಟವನ್ನೂ ನಡೆಸಿದೆ. ಯಡಿಯೂರಪ್ಪ ವಿರುದ್ಧ ಬಂಜಾರ ಸಮುದಾಯವನ್ನು ಎತ್ತಿ ಕಟ್ಟುವ ಕೆಲಸವನ್ನು ಸ್ವತಃ ಬಿಜೆಪಿ ನಾಯಕರೇ ಮಾಡುತ್ತಿದ್ದಾರೆ ಎಂಂದು ಕಾಂಗ್ರೆಸ್ ಆರೋಪ ಮಾಡಿದೆ. ಇದೆಲ್ಲವನ್ನೂ ನೋಡಿದಾಗ ರಾಜಕಾರಣದಲ್ಲಿ ಯಡಿಯೂರಪ್ಪ ಅವರನ್ನು ಮುಗಿಸುವ ಸಂಚು ಮಾಡಿದ್ದಾರಾ..? ಎಂದು ಎನಿಸದೆ ಇರದು. ಇದಕ್ಕೆ ಮತ್ತೊಂದು ಕಾರಣ ಅಂದರೆ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಅರ್ಧದಲ್ಲೇ ಇಳಿಸಿದ್ದು, ಹಾಗು ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ಬಳಿಕ ಮೆಲ್ಲನೆ ಬದಿಗೆ ಸರಿಸುವ ಕೆಲಸ ಮಾಡಿದ್ದು. ಆದರೆ ಇದೀಗ ಮತಕ್ಕಾಗಿ ಯಡಿಯೂರಪ್ಪ ಜೊತೆಗೆ ಫೋಟೋ ಪೋಸ್ ಕೊಡ್ತಿರೋ ಹೈಕಮಾಂಡ್ ನಾಯಕರು, ಚುನಾವಣೆ ಮುಗಿಯುತ್ತಿದ್ದ ಹಾಗೆ ಯಡಿಯೂರಪ್ಪ ಕರ್ನಾಟಕದ ಲಾಲ್ ಕೃಷ್ಣ ಅಡ್ವಾಣಿ ಆಗಲಿದ್ದಾರೆ ಎನ್ನುವುದು ಬಿಜೆಪಿ ಬಲ್ಲ ಮೂಲಗಳ ನಿಖರ ಮಾತು.
ಕೃಷ್ಣಮಣಿ