
ಪಂಜಾಬ್ ಕಿಂಗ್ಸ್ (PBKS) ವಿರುದ್ಧದ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ (RCB) ತಂಡ ಗೆದ್ದು ಬೀಗಿದೆ.ಆ ಮೂಲಕ ಐಪಿಎಲ್ 2025 ರ ಚಾಂಪಿಯನ್ ಆಗಿ ಆರ್.ಸಿ.ಬಿ ಹೊರಹೊಮ್ಮಿದೆ. 18 ವರ್ಷಗಳ ಅಭಿಮಾನಿಗಳ ಕಪ್ ಗೆಲ್ಲುವ ಆಸೆ ಕಡೆಗೂ ಈಡೇರಿದೆ. ಈ ಬಗ್ಗೆ ಸೆಲೆಬ್ರಿಟಿಗಳು ಸೇರಿದಂತೆ ಸಾಕಷ್ಟು ಗಣ್ಯರು ಕೂಡ ತಮ್ಮ ಸಂತಸ ಹಂಚಿಕೊಂಡಿದ್ದಾರೆ.

ಇನ್ನು ಆರ್.ಸಿ.ಬಿ ಗೆಲುವಿನ ಕುರಿತು ಉದ್ಯಮಿ, ಆರ್.ಸಿ.ಬಿ ಮಾಜಿ ಮಾಲೀಕ ವಿಜಯ್ ಮಲ್ಯ (Vijay malya) ಟ್ವೀಟ್ ಮಾಡಿ ಸಂತಸ ವ್ಯಕ್ತಪಡಿಸಿದ್ದಾರೆ. ನಾನು ಆರ್‌ಸಿಬಿಯನ್ನು ಸ್ಥಾಪಿಸಿದಾಗ ಬೆಂಗಳೂರಿಗೆ ಐಪಿಎಲ್ ಟ್ರೋಫಿ ಬರಬೇಕು ಎಂಬುದು ನನ್ನ ಕನಸಾಗಿತ್ತು. ಯುವಕನಾಗಿದ್ದಾಗ ದಂತಕಥೆ ಕಿಂಗ್ ಕೊಹ್ಲಿಯನ್ನು (Virat kohli) ಆಯ್ಕೆ ಮಾಡುವ ಸೌಭಾಗ್ಯ ನನಗಿತ್ತು ಮತ್ತು ಅವರು 18 ವರ್ಷಗಳ ಕಾಲ ಆರ್‌ಸಿಬಿಯೊಂದಿಗೆ ಇದ್ದಾರೆ ಎಂಬುದು ಗಮನಾರ್ಹ ಎಂದಿದ್ದಾರೆ.

ಇನ್ನು ಆರ್‌ಸಿಬಿ ಇತಿಹಾಸದ ಅಳಿಸಲಾಗದ ಭಾಗವಾಗಿ ಉಳಿದಿರುವ ಕ್ರಿಸ್ ಗೇಲ್ ಮತ್ತು ಮಿಸ್ಟರ್ 360 ಎಬಿ ಡಿವಿಲ್ಲರ್ಸ್ ಅವರನ್ನು ಆಯ್ಕೆ ಮಾಡುವ ಗೌರವವೂ ನನಗಿತ್ತು. ಅಂತಿಮವಾಗಿ, ಐಪಿಎಲ್ ಟ್ರೋಫಿ ಬೆಂಗಳೂರಿಗೆ ಆಗಮಿಸುತ್ತಿದೆ. ನನ್ನ ಕನಸನ್ನು ನನಸಾಗಿಸಿದ ಎಲ್ಲರಿಗೂ ಅಭಿನಂದನೆಗಳು ಮತ್ತು ಮತ್ತೊಮ್ಮೆ ಧನ್ಯವಾದಗಳು. ಆರ್‌ಸಿಬಿ ಅಭಿಮಾನಿಗಳು ಅತ್ಯುತ್ತಮರು ಮತ್ತು ಅವರು ಐಪಿಎಲ್ ಟ್ರೋಫಿಗೆ ಅರ್ಹರು. ಈ ಸಲಾ ಕಪ್ ಬೆಂಗಳೂರಿಗೆ ಬರುತ್ತೆ ! ಎಂದು ಪೋಸ್ಟ್ ಮಾಡಿದ್ದಾರೆ.