ತಮಿಳುನಾಡಿನಲ್ಲಿ ವಿಧಾನಸಭೆ ಚುನಾವಣೆಯ ಮತದಾನ ಪ್ರಕ್ರಿಯೆ ಆರಂಭವಾಗಿದೆ. ಈ ನಡುವೆ, ತಮಿಳು ಖ್ಯಾತ ನಟ ದಳಪತಿ ವಿಜಯ್ ಸೈಕಲ್ ತುಳಿದು ಮತಗಟ್ಟೆಗೆ ಬಂದಿರುವುದು ಸಾಕಷ್ಟು ಊಹಾಪೋಹಗಳಿಗೆ ಕಾರಣವಾಗಿದೆ.
ಸರ್ಕಾರ್ ಸಿನೆಮಾದ ಮೂಲಕ ಜಿಎಸ್‌ಟಿಯನ್ನು ಪ್ರಶ್ನಿಸಿ, ಆ ಮೂಲಕ ಕೇಂದ್ರದ ಕಣ್ಣಿಗೆ ಗುರಿಯಾಗಿ, ಕೇಂದ್ರ ತನಿಖಾ ಸಂಸ್ಥೆಗಳಿಂದ ವಿಚಾರಣೆ ಎದುರಿಸಿದ ನಟ ವಿಜಯ್ ಅವರನ್ನು ಬಿಜೆಪಿ ವಿರೋಧಿಯೆಂದೇ ಪರಿಗಣಿಸಲಾಗುತ್ತಿದೆ.
ತಮಿಳುನಾಡಿನಲ್ಲಿ ಬಿಜೆಪಿಯ ಪ್ರಬಲ ಮಿತ್ರಪಕ್ಷವಾದ ಎಐಎಡಿಎಂಕೆಯು, ಈ ಹಿಂದೆ ವಿಜಯ್ ಅವರ ಎರಡು ಸಿನೆಮಾಗಳಾದ ಮರ್ಸಲ್, ಹಾಗೂ ಸರ್ಕಾರವನ್ನು ಟೀಕಿಸಿತ್ತು. ಈ ಸಿನೆಮಾಗಳೊಂದಿಗೆ ವಿಜಯ್ ಹಾಗೂ ಎಐಎಡಿಎಂಕೆಯ ನಡುವಿನ ಮುಸುಕಿನ ಗುದ್ದಾಟ ಆರಂಭವಾಗಿತ್ತು. ಕಳೆದ ಬಾರಿ ಬಿಗಿಲ್ ಸಿನೆಮಾದ ಆಡಿಯೋ ಲಾಂಚ್ ವೇಳೆ, ವಿಜಯ್ ಎಐಎಡಿಎಂಕೆ ನೇರವಾಗಿ ತರಾಟೆಗೆ ತೆಗೆದುಕೊಂಡಿರುವುದಾಗಿಯೂ ಸುದ್ದಿಯಾಗಿತ್ತು. ಅದಾದ ಬಳಿಕ, ವಿಜಯ್ ಅಭಿಮಾನಿಗಳು ಎಐಎಡಿಎಂಕ್ ಪಕ್ಷದವರು ನಮ್ಮ (ವಿಜಯ್ ಅಭಿಮಾನಿಗಳ) ಮನೆಗೆ ಮತ ಕೇಳಲು ಬರಬಾರದೆಂದು ಪ್ರಚಾರ ಮಾಡಿದ್ದು ಸಾಕಷ್ಟು ಸುದ್ದಿಯಾಗಿತ್ತು.
ಈ ಎಲ್ಲಾ ಹಿನ್ನೆಲೆಯಲ್ಲಿ ಎಐಎಡಿಎಂಕೆ ಹಾಗೂ ಬಿಜೆಪಿಯ ವಿರುದ್ಧ ಕೇಂದ್ರದ ಇಂಧನ ಬೆಲೆ ವಿರೋಧಿಸಿ ವಿಜಯ್ ಸೈಕಲ್ ತುಳಿದು ತಮ್ಮದೇ ತಮ್ಮ ಆಕ್ರೋಶ ಹೊರಹಾಕಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದೆ.
ಇದೇ ಆಧಾರದಲ್ಲಿ, ಡಿಎಂಕೆಯ ಹಲವಾರು ನಾಯಕರು, ವಿಜಯ್ ಸೈಕಲ್ ಸವಾರಿ ಮೂಲಕ ಎಐಡಿಎಂಕೆ-ಬಿಜೆಪಿ ವಿರುದ್ಧ ಸಂದೇಶ ರವಾನಿಸಿದ್ದಾರೆ ಎಂಬುವುದಾಗಿಯೂ ಪ್ರಚಾರ ಮಾಡಿದ್ದಾರೆ.
ಆದರೆ, ವಿಜಯ್ ಆಪ್ತರು ಈ ಊಹಾಪೋಹಗಳನ್ನು ಸ್ಪಷ್ಟವಾಗಿ ನಿರಾಕರಿಸದಿದ್ದರೂ, ಸೈಕಲ್ ಸವಾರಿಗೆ ಬೇರೆಯದ್ದೇ ಆದ ಸ್ಪಷ್ಟಣೆಯನ್ನು ನೀಡಿದ್ದಾರೆ. ಮತಗಟ್ಟೆ ವಿಜಯ್ ನಿವಾಸದ ಸಮೀಪವೇ ಇರುವುದರಿಂದ ಅನಗತ್ಯ ಟ್ರಾಫಿಕ್ ತಪ್ಪಿಸಲು ವಿಜಯ್ ಸೈಕಲ್ ಸವಾರಿ ಮಾಡಿದ್ದಾರೆ. ಇದರ ಹಿಂದೆ ಬೇರೆ ಯಾವುದೇ ಉದ್ದೇಶವಿಲ್ಲವೆಂದು ವಿಜಯ್ ಆಪ್ತ ರಿಯಾಝ್ ಕೆ ಅಹ್ಮದ್ ಟ್ವೀಟ್ ಮಾಡಿದ್ದಾರೆ.
ಈ ಕುರಿತು ಡಿಎಂಕೆಯನ್ನು ತರಾಟೆಗೆ ತೆಗೆದುಕೊಂಡ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧೆಗೆ ಇಳಿದಿರುವ ಖುಷ್ಬೂ ಸುಂದರ್ ಸಿ, ನಟ ವಿಜಯ್ ಅವರ ಸೈಕಲ್ ಸವಾರಿ ಇಂಧನ ಬೆಲೆ ಏರಿಕೆ ವಿರುದ್ಧವಲ್ಲ. ಡಿಎಂಕೆ ನಾಯಕರು ಇನ್ನೊಬ್ಬರ ಸೈಕಲ್ ಏರಿ ಸವಾರಿ ಮಾಡುವುದನ್ನು ನಿಲ್ಲಿಸಲಿ ಎಂದು ಹೇಳಿದ್ದಾರೆ.
ಪರೋಕ್ಷವಾಗಿ ಡಿಎಂಕೆ ಪ್ರಚಾರ ನಡೆಸಿದರೇ ತಲೈ ಅಜಿತ್?
ಈ ನಡುವೆ ತಮಿಳು ಚಿತ್ರಂಗದ ಮತ್ತೋರ್ವ ಖ್ಯಾತ ನಟ ತಲೈ ಅಜಿತ್ ಕೂಡಾ ಡಿಎಂಕೆ ಪರ ಸಂದೇಶ ನೀಡಿದ್ದಾರೆಂದು ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ನಡೆಯುತ್ತಿದೆ. ಕೆಂಪು ದಾರವಿರುವ ಕಪ್ಪು ಮಾಸ್ಕ್ ಧರಿಸಿ ತನ್ನ ಹೆಂಡತಿ ಶಾಲಿನಿಯೊಂದಿಗೆ ಮತ ಚಲಾಯಿಸಲು ಬಂದ ಅಜಿತ್, ಡಿಎಂಕೆ ಪರ ಸಂದೇಶ ನೀಡಿದ್ದದಾರೆಂದು ಡಿಎಂಕೆ ಅಭಿಮಾನಿಗಳು ಪ್ರಚಾರ ಮಾಡುತ್ತಿದ್ದಾರೆ. ಡಿಎಂಕೆಯ ಬಾವುಟದ ಬಣ್ಣ ಕೆಂಪು-ಕಪ್ಪು ಬಣ್ಣವಾಗಿರುವ ಹಿನ್ನೆಲೆಯಲ್ಲಿ ಒಂದಕ್ಕೊಂದು ಸಂಬಂಧ ಕಲ್ಪಿಸಲಾಗಿದೆಯೇ ವಿನಃ, ಅಜಿತ್ ಅಧಿಕೃತವಾಗಿ ಎಲ್ಲಿಯೂ ಡಿಎಂಕೆ ಪರ ಪ್ರಚಾರ ನಡೆಸಿಲ್ಲ.
ಬಿಜೆಪಿಗೆ ಮತ ಚಲಾಯಿಸದಂತೆ ಕೋರಿದರೇ ಮಕ್ಕಳ್ ಸೆಲ್ವನ್ ವಿಜಯ್ ಸೇತುಪತಿ?
ಈ ನಡುವೆ, ಪ್ರತಿಭಾವಂತ ನಟ ವಿಜಯ್ ಸೇತುಪತಿ ಪರೋಕ್ಷವಾಗಿ ಬಿಜೆಪಿಗೆ ಮತ ಚಲಾಯಿಸದಂತೆ ಕೋರಿದ್ದಾರೆ ಎಂಬ ಮಾತುಗಳೂ ಅಲ್ಲಲ್ಲಿ ತೇಲಿಬರುತ್ತಿವೆ. ಸಾರ್ವಜನಿಕ ಸಭೆಯೊಂದರಲ್ಲಿ ಮಾತನಾಡುತ್ತಾ ಸೇತುಪತಿ, ಧರ್ಮಕ್ಕೆ ಒಂದು ಸಮಸ್ಯೆ ಅಂತ ಬರುವವರ ಜೊತೆ ಹೋಗಬೇಡಿ. ಧರ್ಮವನ್ನು ಮನುಷ್ಯರು ಕಾಪಾಡಲು ಆಗುವುದಿಲ್ಲ ಎಂದು ಹೇಳಿದ್ದರು. ಇದು, ಧರ್ಮವನ್ನೇ ರಾಜಕೀಯ ಗುರಾಣಿಯಾಗಿಸಿಕೊಂಡ ಬಿಜೆಪಿಗೆ ಇರಿಸು-ಮುರಿಸು ತರಿಸಿದೆ.