ಕಲಬುರಗಿ: ಅಫಜಲಪುರ ವಿಧಾನ ಸಭಾ ಕ್ಷೇತ್ರದಲ್ಲಿ ಆರ್.ಡಿ.ಪಾಟೀಲ್ ಕೂಡಾ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧೆ ಮಾಡುವುದು ಖಚಿತ ಎಂದು ಆರ್.ಡಿ.ಪಾಟೀಲ ಸಹೋದರ ಮಹಾಂತೇಶ ಪಾಟೀಲ ಖಚಿತ ಪಡಿಸಿದ್ದಾರೆ.
ಇಂದು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, ನಾವು ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ ಕೆಲಸ ಮಾಡಿದ್ದೆವೆ. ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿ ಅನಿವಾರ್ಯ ಕಾರಣದಿಂದ ನಾವು ಅರ್ಜಿ ಹಾಕಲು ಆಗಿಲ್ಲ. ಈಗಲೂ ಕಾಂಗ್ರೆಸ್ ವರಿಷ್ಠರ ಜೊತೆಗೆ ಮಾತನಾಡುತ್ತೇವೆ. ಒಂದು ವೇಳೆ ನಮಗೆ ಟಿಕೆಟ್ ಸಿಗದಿದ್ದರೆ, ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಆರ್.ಡಿ.ಪಾಟೀಲ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಈಗಾಗಲೇ ಕ್ಷೇತ್ರದಲ್ಲಿ ಎಲ್ಲಾ ಸಮುದಾಯದ ಎಲ್ಲಾ ಜನರ ಅಭಿಪ್ರಾಯ ಪಡೆದು ಈ ನಿರ್ಣಯಕ್ಕೆ ಬಂದಿದ್ದೆವೆ. ಜನಪರ ಕೆಲಸಗಳಿಂದ ವಂಚಿತವಾದ ಅಫಜಲಪುರ ಕ್ಷೇತ್ರಕ್ಕೆ ಅಭಿವೃದ್ಧಿ ಮಾಡುವ ಗುರಿಯನಿಟ್ಟುಕೊಂಡು, ಚುನಾವಣೆಗೆ ಸ್ಪರ್ಧಿಸಲು ನಿರ್ಧರಿಸಿದ್ದೆವೆ. ಅಫಜಲಪುರ ಸಮಗ್ರ ಅಭಿವೃದ್ಧಿ ಮಾಡುವುದು ನಮ್ಮ ಗುರಿ. ಆ ನಿಟ್ಟಿನಲ್ಲಿ ನಾವು ಕೆಲಸ ಮಾಡುತ್ತೆವೆ ಎಂದರು.

ನಂತರ ಮಾತನಾಡಿದ ಬಸುಗೌಡ ಪಾಟೀಲ, ಅಫಜಲಪುರ ವಿಧಾನ ಸಭಾ ಕ್ಷೇತ್ರದಲ್ಲಿ ಹೊಂದಾಣಿಕೆ ರಾಜಕಾರಣ ನಡೆಯುತ್ತಾ ಬಂದಿದೆ. ಆದರೆ ಅದಕ್ಕೆ ಬೇಸತ್ತು ಕ್ಷೇತ್ರದ ಜನರು ಹೊಸ ಮುಖಕ್ಕೆ ಮಣೆ ಹಾಕುತ್ತಿದ್ದಾರೆ. ಕ್ಷೇತ್ರದ ಜನತೆಗೆ ಸೂಕ್ತ ಅಭ್ಯರ್ಥಿಯಾಗಿ ಆರ್.ಡಿ.ಪಾಟೀಲ ಅವರು ಬಂದಿದ್ದಾರೆ. ಎಲ್ಲಾ ಸಮುದಾಯವು ಅವರನ್ನು ಬೆಂಬಲಿಸಿದೆ ಮುಂದೆಯೂ ಅವರನ್ನ ಸಂಪೂರ್ಣವಾಗಿ ಬೆಂಬಲಿಸಿ 2023 ರ ವಿಧಾನ ಸಭಾ ಚುನಾವಣೆಯಲ್ಲಿ ಆರ್.ಡಿ.ಪಾಟೀಲ ಅವರನ್ನು ಪ್ರಚಂಡ ಬಹುಮತದಿಂದ ಗೆಲ್ಲಿಸುವ ವಿಶ್ವಾಸವಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಗ್ರಾಮ ಪಂಚಾಯತಿ ಸದಸ್ಯ ಬಸವರಾಜ ಕಿಣಗಿ, ಗುಂಡುರಾವ ಅಂಕಲಗಿ, ಅಂಬಣ್ಣ ನರಗೋಧಿ, ಗುಡುಸಾಬ್ ಮುಲ್ಲಾ, ಅನ್ವರ ತಾಂಬೋಳಿ, ರಮೇಶ ಸುಲೇಕಾರ, ಕರೇಪ್ಪ ಪೂಜಾರಿ, ಸೈಪಾನ್ ಜಮಾದಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.