ಕರುನಾಡ ಚಕ್ರವರ್ತಿ ಶಿವರಾಜಕುಮಾರ್, ರಿಯಲ್ ಸ್ಟಾರ್ ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಪ್ರಮುಖಪಾತ್ರದಲ್ಲಿ ನಟಿಸಿರುವ, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಚೊಚ್ಚಲ ನಿರ್ದೇಶನದ ಹಾಗೂ ಎಂ. ರಮೇಶ್ ರೆಡ್ಡಿ ಯವರು ತಮ್ಮ “ಸೂರಜ್ ಪ್ರೊಡಕ್ಷನ್ ” ಬ್ಯಾನರ್ ನಲ್ಲಿ ನಿರ್ಮಿಸುತ್ತಿರುವ ಕನ್ನಡದ ಬಹುನಿರೀಕ್ಷಿತ ಚಿತ್ರ “45” ಆರಂಭದಿಂದಲೂ ಸಾಕಷ್ಟು ಸದ್ದು ಮಾಡುತ್ತಿದೆ.
ಇತ್ತೀಚಿಗೆ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದ್ದು, ಪೋಸ್ಟ್ ಪ್ರೊಡಕ್ಷನ್ ವರ್ಕ್ ಬಿರುಸಿನಿಂದ ಸಾಗಿದೆ. ಅಪಾರವೆಚ್ಚದಲ್ಲಿ ಅದ್ದೂರಿಯಾಗಿ ಮೂಡಿಬರುತ್ತಿರುವ ಈ ಚಿತ್ರಕ್ಕೆ ಹಾಲಿವುಡ್ ನ 150 ಕ್ಕೂ ಅಧಿಕ ಚಿತ್ರಗಳಿಗೆ ಗ್ರಾಫಿಕ್ಸ್ ಕೆಲಸ ಮಾಡಿ ,ಆಸ್ಕರ್ ಗೆ ನಾಮಿನೇಟ್ ಆಗಿದ್ದ ಟೊರೊಂಟೊದ “MARZ” ವಿ ಎಫ್ ಎಕ್ಸ್ ಕಂಪನಿ ಗ್ರಾಫಿಕ್ಸ್ ಕೆಲಸ ಮಾಡುತ್ತಿದೆ.
ಇದು ಈ ಖ್ಯಾತ ಕಂಪನಿ ಗ್ರಾಫಿಕ್ಸ್ ಕೆಲಸ ಮಾಡುತ್ತಿರುವ ಭಾರತದ ಅದರಲ್ಲೂ, ಕನ್ನಡದ ಮೊದಲ ಚಿತ್ರ “45”. ಹಾಲಿವುಡ್ ನ ಹೆಸರಾಂತ ” MARZ” ಸಂಸ್ಥೆಯ ತಂತ್ರಜ್ಞರಾದ ಮಿಸ್ಟರ್ ರಾಫೆಲ್ ಹಾಗೂ ಮಿಸ್ಟರ್ ಜಸ್ಟಿನ್ ಅವರ ನೇತೃತ್ವದಲ್ಲಿ ಗ್ರಾಫಿಕ್ಸ್ ಕಾರ್ಯ ನಡೆಯುತ್ತಿದೆ. ಇತ್ತೀಚಿಗೆ “45” ಚಿತ್ರದ ಗ್ರಾಫಿಕ್ಸ್ ಕೆಲಸದ ನಿಮಿತ್ತವಾಗಿ ಟೊರಾಂಟೋದ “MARZ” ವಿ ಎಫ್ ಎಕ್ಸ್ ಕಂಪನಿಗೆ ಭೇಟಿ ನೀಡಿದ ಚಿತ್ರಗಳನ್ನು ನಿರ್ದೇಶಕ ಅರ್ಜುನ್ ಜನ್ಯ ಹಂಚಿಕೊಂಡಿದ್ದಾರೆ.