
ಧಾರವಾಡ : ಹಿರಿಯ ಸಾಹಿತಿ ಡಾ. ಪಂಚಾಕ್ಷರಿ ಹಿರೇಮಠ (92) ವಿಧಿವಶರಾಗಿದ್ದಾರೆ. ಧಾರವಾಡದ ಜಯನಗರ ನಿವಾಸದಲ್ಲಿ ನಿಧನರಾಗಿದ್ದಾರೆ. ಕವಿ, ಕಥೆಗಾರ, ಪ್ರಬಂಧಕ, ವಿಮರ್ಶಕ, ಅನುವಾದಕ ಹಾಗೂ ಸ್ವಾತಂತ್ರ್ಯ ಹೋರಾಟಗಾರರೂ ಆಗಿದ್ದ ಹಿರೇಮಠ ಅವರು 19 ಕಾವ್ಯ, 11 ಕಥಾ ಸಂಕಲನ, ಉರ್ದು ಮತ್ತು ಹಿಂದಿಯಿಂದ ಕನ್ನಡಕ್ಕೆ ಅನುವಾದಿಸಿದ 8 ಕಾದಂಬರಿ, 13 ಪ್ರಬಂಧ ಗ್ರಂಥ, 7 ಚಿಂತನ ಸಾಹಿತ್ಯ ಕೃತಿ, 6 ಜೀವನ ಚರಿತ್ರೆ, 3 ಪತ್ರ ಸಾಹಿತ್ಯ ಕೃತಿ, 7 ಮಕ್ಕಳ ಸಾಹಿತ್ಯ ಕೃತಿ, 5 ಅನುವಾದಿತ ನಾಟಕ ಸೇರಿ ಸುಮಾರು ನೂರಕ್ಕೂ ಹೆಚ್ಚು ಕೃತಿಗಳ ರಚನೆ ಮಾಡಿದ್ದರು.

ಕೊಪ್ಪಳ ಜಿಲ್ಲೆಯ ಬಿಸರಳ್ಳಿಯಲ್ಲಿ 1933ರ ಜನವರಿ 6 ರಂದು ಜನಿಸಿದ್ದ ಡಾ ಪಂಚಾಕ್ಷರಿ ಹಿರೇಮಠ, ಕರ್ನಾಟಕ ವಿವಿ ಕನ್ನಡ ಅಧ್ಯಯನ ಪೀಠದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು. ಬೆಳಗ್ಗೆ 8.30ರಿಂದ ಧಾರವಾಡದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಜಯನಗರದಲ್ಲಿರುವ ನಿವಾಸದಲ್ಲಿ ಅಂತಿಮ ದರ್ಶನ ಮುಗಿದ ಬಳಿಕ ಹುಟ್ಟೂರಿಗೆ ಕೊಂಡೊಯ್ದು ಅಂತಿಮ ವಿಧಿವಿಧಾನ ನೆರವೇರಿಸಲು ಕುಟುಂಬಸ್ಥರು ನಿರ್ಧಾರ ಮಾಡಿದ್ದಾರೆ.
ಧಾರವಾಡದಿಂದ ಮಧ್ಯಾಹ್ನ 1ರ ನಂತರ ಕೊಪ್ಪಳ ತಾಲೂಕಿನ ಸ್ವಗ್ರಾಮ ಬಿಸರಳ್ಳಿಯ ತೋಟದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುತ್ತದೆ. ಸಿಎಂ ಸಿದ್ದರಾಮಯ್ಯ ಸೇರಿ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ. ವಯೋಸಹಜ ಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಡಾ ಪಂಚಾಕ್ಷರಿ ಹಿರೇಮಠ, ರಜಾಕಾರರ ಹೋರಾಟದಲ್ಲಿ ಮುಂಚೂಣಿ ಹೋರಾಟಗಾರ ಆಗಿದ್ದರು. ನೂರಾರು ಕೃತಿ ರಚಿಸಿರುವ ಡಾ ಪಂಚಾಕ್ಷರಿ ಹಿರೇಮಠ ಅವರಿಗೆ ರಾಜ್ಯೋತ್ಸವ ಸೇರಿ ಹಲವು ಪ್ರಶಸ್ತಿಗಳು ಬಂದಿವೆ.