12 ವರ್ಷದ ಬಾಲಕನ ಶ್ವಾಸಕೋಶದಲ್ಲಿ 11 ತಿಂಗಳಿನಿಂದ ಶಿಳ್ಳೆ ಹೊಡೆಯುತ್ತ ಶ್ವಾಸಕೋಶಕ್ಕೆ ಸೋಂಕು ಹರಡುತ್ತಿದ್ದ ಸೀಟಿ (ವಿಶಲ್) ಅನ್ನು ಗುರುವಾರ ಶಸ್ತ್ರಚಿಕಿತ್ಸೆಯ ಮೂಲಕ ಹೊರ ತೆಗೆಯುವಲ್ಲಿ ಕೊಲ್ಕೊತ್ತಾ ವೈದ್ಯರು ಯಶಸ್ವಿಯಾಗಿದ್ದಾರೆ. ಆ ಬಾಲಕ ಬಾಯಿ ತೆರೆದಾಗಲೆಲ್ಲ ಸಣ್ಣಗೆ ಸೀಟಿ ಹೊಡೆದ ಶಬ್ದ ಬರುತ್ತಿತ್ತು. ಆದರೆ ಪೋಷಕರೂ ಇದನ್ನು ಇಷ್ಟಾಗಿ ಗಮನಿಸಲಿಲ್ಲ.
ಸರ್ಕಾರಿ ಸ್ವಾಮ್ಯದ ಎಸ್ಎಸ್ಕೆಎಂ ಆಸ್ಪತ್ರೆಯಲ್ಲಿ ವೈದ್ಯರು ಈ ಸಾಧನೆ ಮಾಡಿದ್ದಾರೆ.
ಆಕಸ್ಮಿಕವಾಗಿ ನುಂಗಿದ ಪ್ಲಾಸ್ಟಿಕ್ ಸೀಟಿಯನ್ನು ಹೊರತೆಗೆದಿದ್ದಾರೆ. 11 ತಿಂಗಳ ಕಾಲ ಶ್ವಾಸಕೋಶದಲ್ಲಿ ಸೀಟಿ ಇಟ್ಟುಕೊಂಡು ಆ ಬಾಲಕ ಬದುಕಿದ್ದು ಕೂಡ ಆಶ್ಚರ್ಯವೇ ಎಂದು ಹಿರಿಯ ವೈದ್ಯರು ಶುಕ್ರವಾರ ತಿಳಿಸಿದ್ದಾರೆ.
ದಕ್ಷಿಣ 24 ಪರಗಣ ಜಿಲ್ಲೆಯ ಬರುಯಿಪುರ್ ನಿವಾಸಿ ರೈಹಾನ್ ಲಸ್ಕರ್ ಎಂಬ ಈ ಬಾಲಕ ಜನವರಿಯಲ್ಲಿ ಆಲೂಗಡ್ಡೆ ಚಿಪ್ಸ್ ತಿನ್ನುವಾಗ ಆಕಸ್ಮಿಕವಾಗಿ ಪ್ಲಾಸ್ಟಿಕ್ ಸೀಟಿಯನ್ನು ನುಂಗಿದ್ದ ಎಂದು ಎಸ್ಎಸ್ಕೆಎಂ ಆಸ್ಪತ್ರೆಯ ತಲೆ ಮಾತ್ತು ಕುತ್ತಿಗೆ ವಿಭಾಗದ ಸರ್ಜರಿ ವೈದ್ಯರು ತಿಳಿಸಿದ್ದಾರೆ.
“ಸೀಟಿ ನುಂಗಿದ ನಂತರ ಹುಡುಗ ಬಾಯಿ ತೆರೆಯಲು ಪ್ರಯತ್ನಿಸಿದಾಗಲೆಲ್ಲಾ ಸೀಟಿಯ ಕರ್ಕಶ ಶಬ್ದವು ಹೊರಹೊಮ್ಮುತ್ತಿತ್ತು.. ಅವನು ಎದುರಿಸುತ್ತಿರುವ ಕಷ್ಟ ಅವನ ಹೆತ್ತವರಿಗೆ ಆರಂಭದಲ್ಲಿ ತಿಳಿದಿರಲಿಲ್ಲ, ಆದರೆ ಹತ್ತಿರದ ಕೊಳಕ್ಕೆ ಈಜಲು ಹೋದಾಗ ರೈಹಾನ್ ಮೊದಲಿನಂತೆ ಒಂದು ನಿಮಿಷವೂ ನೀರಿನ ಅಡಿಯಲ್ಲಿ ಇರಲು ಸಾಧ್ಯವಾಗಲಿಲ್ಲ ಎಂದು ಹೆತ್ತವರು ಕಂಡುಕೊಂಡರು. ಆ ದಿನವೇ ರೈಹಾನ್ ಎದೆನೋವು ಮತ್ತು ಉಸಿರಾಟದ ಸಮಸ್ಯೆಯ ಬಗ್ಗೆ ಹೆತ್ತವರಿಗೆ ತಿಳಿಸಿದ್ದಾನೆ ಎಂದು ಆಸ್ಪತ್ರೆಯ ಹಿರಿಯ ವೈದ್ಯರು ತಿಳಿಸಿದ್ದಾರೆ.
ಕುಟುಂಬದ ಸದಸ್ಯರು ರೈಹಾನ್ನನ್ನು ಕೊಲ್ಕೊತ್ತಾದ ರಾಷ್ಟ್ರೀಯ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕರೆದೊಯ್ದರು. ಆದರೆ ಅಲ್ಲಿನ ವೈದ್ಯರು ಸಹಾಯ ಮಾಡಲು ಸಾಧ್ಯವಾಗಲಿಲ್ಲ.

“ನನ್ನ ಮಗ ಸೀಟಿ ನುಂಗಿದ ಬಗ್ಗೆ ನಮಗೆ ಹೇಳಿರಲಿಲ್ಲ. ಉಸಿರಾಟದ ತೊಂದರೆ ಶುರುವಾದ ನಂತರ ವೈದ್ಯರಲ್ಲಿಗೆ ಹೋದೆವು ಎಂದು ಪೋಷಕರು ತಿಳಿಸಿದ್ದಾರೆ. ವೈದ್ಯಕೀಯ ಕಾಲೇಜಿನ ವೈದ್ಯರು ಏನನ್ನೂ ಮಾಡಲು ಸಾಧ್ಯವಾಗದ ನಂತರ, ನಾವು ಅವನಿಗೆ ಸಹಾಯ ಮಾಡಲು ಎಲ್ಲವನ್ನೂ ಪ್ರಯತ್ನಿಸಿದ್ದೇವೆ ಆದರೆ ಅವನ ಆರೋಗ್ಯ ಸ್ಥಿತಿ ಹದಗೆಟ್ಟಿತು. ನಂತರ ನಾವು ಅವನನ್ನು ಬರುಯಿಪುರದ ಸ್ಥಳೀಯ ವೈದ್ಯರ ಬಳಿಗೆ ಕರೆದೊಯ್ದಿದ್ದೇವೆ, ಅವರು ರೈಹಾನ್ಗೆ ಸೋಂಕು ತಗುಲಿರುವುದನ್ನು ಕಂಡು ಎಸ್ಎಸ್ಕೆಎಂ ಆಸ್ಪತ್ರೆಗೆ ಕಳುಹಿಸಿದರು ”ಎಂದು ಹುಡುಗನ ತಂದೆ ಹೇಳಿದರು.
ಎಸ್ಎಸ್ಕೆಎಂನಲ್ಲಿ ಗುರುವಾರ ಪ್ರಾಧ್ಯಾಪಕ ಅರುಣಾಭ ಸೇನ್ಗುಪ್ತಾ ನೇತೃತ್ವದ ವೈದ್ಯರು ಅವನಿಗೆ ಶಸ್ತ್ರಚಿಕಿತ್ಸೆ ನಡೆಸಿದರು.
“ನಾವು ಶ್ವಾಸಕೋಶದ ಒಳಗಿನ ಸೀಟಿಯನ್ನು ಪತ್ತೆಹಚ್ಚಲು ಅಗತ್ಯವಾದ X- ರೇ ಮತ್ತು CT ಸ್ಕ್ಯಾನ್ ಅನ್ನು ನಡೆಸಿದೆವು ಮತ್ತು ಅವನ ಸ್ಥಿತಿಯನ್ನು ಸ್ಥಿರಗೊಳಿಸಲು ಅಗತ್ಯವಾದ ಔಷಧಿಗಳನ್ನು ನೀಡಿದೆವು. ಅದರ ನಂತರ ಸೀಟಿ ತೆಗೆಯುವ ಶಸ್ತ್ರಚಿಕಿತ್ಸೆ ನಡೆಸಲಾಯಿತು. ನಾವು ಬ್ರಾಂಕೋಸ್ಕೋಪಿಯನ್ನು ನಡೆಸಿದ ನಂತರ ಆಪ್ಟಿಕಲ್ ಫೋರ್ಸ್ಪ್ ಬಳಸಿ ದೇಹದ ಅಂಗದಿಂದ ಸೀಟಿಯನ್ನು ಹೊರತೆಗೆದಿದ್ದೇವೆ ಎಂದು ಆಸ್ಪತ್ರೆಯ ಹಿರಿಯ ವೈದ್ಯರು ತಿಳಿಸಿದ್ದಾರೆ.
ಸದ್ಯ ಬಾಲಕ ಸ್ಥಿರವಾಗಿದ್ದಾನೆ ಎಂದು ಹಿರಿಯ ವೈದ್ಯರು ತಿಳಿಸಿದ್ದಾರೆ.
ನಾನು ಈಗ ಸಂತೋಷ ಮತ್ತು ಸಮಾಧಾನ ಹೊಂದಿದ್ದೇನೆ. SSKM ಆಸ್ಪತ್ರೆಯ ವೈದ್ಯರಿಗೆ ನಾನು ಋಣಿಯಾಗಿದ್ದೇನೆ. ಅವರಿಂದಲೇ ನನ್ನ ಮಗ ಇಂದು ಬದುಕಿದ್ದಾನೆ’ ಎಂದು ಅವರ ತಂದೆ ಹೇಳಿದ್ದಾರೆ.
ಈಗ ರೈಹಾನ್ ಸೀಟಿಯಿಲ್ಲದೇ ಶಿಳ್ಳೆ ಹೊಡೆಯುತ್ತ ಖುಷಿಯಾಗಿರಬಹುದು.