ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮತ್ತು ಜೆಡಿಎಸ್ ಶಾಸಕ ಸಾ ರಾ ಮಹೇಶ್ ನಡುವಿನ ಜಟಾಪಟಿ ಮತ್ತೆ ಮುಂದುವರೆದಿದೆ. ಈ ಹಿಂದೆಯೂ ಹಲವು ಬಾರಿ ಮಾತಿನ ಮೂಲಕ ಚಾಟಿ ಬೀಸಿದ್ದ ಸಾ ರಾ ಮಹೇಶ್ ಅವರು, ಈಗ ಮತ್ತೆ ರೋಹಿಣಿ ಸಿಂಧೂರಿ ವಿರುದ್ದ ಕಿಡಿಕಾರಿದ್ದಾರೆ.
“ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ವರ್ತನೆ ಅಕ್ಷಮ್ಯ ಮತ್ತು ಖಂಡನೀಯ. ತಾವೊಬ್ಬ ಅತ್ಯಂತ ಪ್ರಾಮಾಣಿಕ ಅಧಿಕಾರಿ ಎಂದು ಬಿಂಬಿಸಿಕೊಳ್ಳುತ್ತಿರುವ ಇವರು ಜನಪ್ರತಿನಿಧಿಗಳ ಮೇಲೆ ಸವಾರಿ ಮಾಡಲು ಹೊರಟಿದ್ದಾರೆ,” ಎಂದು ಸಾ ರಾ ಮಹೇಶ್ ಆರೋಪಿಸಿದ್ದಾರೆ.
ಹಾಸನದಲ್ಲಿ ಜಿಲ್ಲಾಧಿಕಾರಿಯಾಗಿದ್ದಾಗ ತಮ್ಮ ದಿಢೀರ್ ವರ್ಗಾವಣೆಗೆ ನ್ಯಾಯ ಕೇಳಲು KAT ಗೆ ಹೋಗಿದ್ದ ಇದೇ ಅಧಿಕಾರಿ ಮೈಸೂರಿನಲ್ಲಿ ಉಲ್ಟಾ ಹೊಡೆದ ಕಥೆ ಇಡೀ ನಾಡಿಗೆ ಗೊತ್ತಿದೆ. ಇಂಥವರಿಂದ ನಾನು ಪಾಠ ಕಲಿಯಬೇಕಿಲ್ಲ. ‘ತನಗೊಂದು ನ್ಯಾಯ, ಪರರಿಗೊಂದು ನ್ಯಾಯ’ ಎನ್ನುವ ಇಂತಹ ಅಧಿಕಾರಿ, ಸಾಂವಿಧಾನಿಕ ಸಂಸ್ಥೆಗಳು/ ಸಮಿತಿಗಳಿಗೆ ಯಾವ ರೀತಿ ಅಧಿಕಾರಿಗಳು ಶಿಷ್ಟಾಚಾರ ಪಾಲಿಸಬೇಕೆಂದು ಸರ್ಕಾರ ಹೊರಡಿಸಿರುವ ಸುತ್ತೋಲೆಗಳನ್ನು ಓದಿ ಮೊದಲು ಅರ್ಥಮಾಡಿಕೊಳ್ಳಲಿ, ಎಂದು ಟ್ವಿಟರ್ ಮೂಲಕ ಅಸಮಾಧಾನ ಬಹಿರಂಗಪಡಿಸಿದ್ದಾರೆ.
ನಡೆದದ್ದೇನು?
ಮಂಗಳವಾರ ಸಂಜೆ ವಿಧಾನಮಂಡಲ ಕಾಗದ ಪತ್ರಗಳ ಸಮಿತಿ ಸಭೆಯನ್ನು ಕರೆಯಲಾಗಿತ್ತು. ಈ ಸಭೆಯ ಕುರಿತು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿಯವರಿಗೆ ಮಾಹಿತಿಯನ್ನೂ ಕೊಡಲಾಗಿತ್ತು. ಆದರೆ, ಶಿಷ್ಟಾಚಾರದ ಪ್ರಕಾರ ಜಿಲ್ಲಾಧಿಕಾರಿಯವರು ಸಮಿತಿ ಸದಸ್ಯರನ್ನು ಸ್ವಾಗತಿಸಿರಲಿಲ್ಲ.
ಈ ಕುರಿತಾಗಿ ಸಭೆಗೆ ಹಾಜರಾಗಿದ್ದ ಮಹೇಶ್ ಮತ್ತು ರೋಹಿಣಿ ಸಿಂಧೂರಿ ನಡುವೆ ತೀವ್ರ ಮಾತಿನ ಚಕಮಕಿ ನಡೆದಿತ್ತು. ಒಂದು ಹಂತದಲ್ಲಿ ಸಾ ರಾ ಮಹೇಶ್ ಅವರು, ನಿಮ್ಮನ್ನು ಸಭೆಗೆ ಕರೆದಿರಲಿಲ್ಲ. ಆದರೂ ಬಂದಿದ್ದೀರಿ ಸಂತೋಷ. ನಿಮಗೆ ಸಮಯ ಇದ್ದರೆ ಇಲ್ಲೇ ಇರಬಹುದು, ಎಂದರು.
ಹೀಗೆ ಹೇಳಿತ್ತಿದ್ದಂತೆಯೇ ಬೇಸರಗೊಂಡ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಸಭೆಯನ್ನು ಅರ್ಧದಲ್ಲಿಯೇ ಬಿಟ್ಟು ವಾಪಾಸ್ಸು ತೆರಳಿದರು.