ನಮ್ಮ ಸ್ಯಾಂಡಲ್ವುಡ್ನಲ್ಲಿ ವಿಭಿನ್ನ ಕಥಾಹಂದರ ಹೊಂದಿರುವ ಚಿತ್ರಗಳು ಸದ್ದಿಲ್ಲದೆ ಶೂಟಿಂಗ್ ಮುಗಿಸಿ ತೆರೆಗೆ ಬರಲು ಸಜ್ಜಾಗಿರುತ್ತವೆ, ಇದೀಗ ಈ ಸಾಲಿಗೆ ಹೊಸ ಸೇರ್ಪಡೆ ವಾಸಂತಿ ನಲಿದಾಗ.
ಈಗಾಗಲೇ ಟೈಟಲ್ ಮೂಲಕವೇ ಸಖತ್ ಸುದ್ದಿಯಲ್ಲಿರುವ ಚಿತ್ರ ಈ ಹಿಂದೆ ‘ಕೇಳ್ರಪ್ಪೋ ಕೇಳಿ’ ವೀಡಿಯೋ ಸಾಂಗ್ ಬಿಡುಗಡೆ ಮಾಡಿ ಸೌಂಡ್ ಮಾಡಿತ್ತು ಇದೀಗ ನಾಗೇಂದ್ರ ಪ್ರಸಾದ್ ಬರೆದ ‘ಕಾಲೇಜ್ ಗೆ ಕಾಲು ಇಟ್ಟರೆ ಕನಸುಗಳು ಜೋರು’ ಎಂಬ ಮತ್ತೊಂದು ಯೂತ್ ಫುಲ್ ಸಾಂಗ್ ರಿಲೀಸ್ ಮಾಡಿ ಸುದ್ದಿಯಲ್ಲಿದೆ.
ಚಿತ್ರ ಇದೇ ಅಕ್ಟೋಬರ್ 14ರಂದು ಬಿಡುಗಡೆಯಾಗಬೇಕಿತ್ತು ಆದರೆ, ಕಾರಣಾಂತರಗಳಿಂದ ಚಿತ್ರತಂಡ ಬಿಡುಗಡೆಯನ್ನು ಮುಂದೂಡಿದೆ. ಈ ಕುರಿತು ಮಾಹಿತಿ ಹಂಚಿಕೊಳ್ಳಲು ಚಿತ್ರತಂಡ ಇತ್ತೀಚಿಗೆ ಒಂದೆಡೆ ಸೇರಿತ್ತು.

ನಿರ್ದೇಶಕ ರವೀಂದ್ರ ವೆಂಶಿ ಮಾತನಾಡಿ ಅಕ್ಟೋಬರ್ 14ರಂದೇ ಸಿನಿಮಾ ಬಿಡುಗಡೆಯಾಗಬೇಕಿತ್ತು. ಅದಕ್ಕಾಗಿ ಪ್ರಚಾರ ಕಾರ್ಯವನ್ನು ಮಾಡಿ ಮುಗಿಸಿದ್ದೆವು. ಆದ್ರೆ ಚಿತ್ರಮಂದಿರದ ಸಮಸ್ಯೆಯಿಂದ ಅಕ್ಟೋಬರ್ 14ರಂದು ಬಿಡುಗಡೆ ಮಾಡಲಾಗಲಿಲ್ಲ. ಇದು ಸ್ಟಾರ್ ಸಿನಿಮಾ ಅಲ್ಲ ಹೊಸಬರ ಸಿನಿಮಾ ಆದ್ರಿಂದ ದೊಡ್ಡ ಸಿನಿಮಾದ ಜೊತೆ ಕಾಂಪಿಟೇಶನ್ ಬೇಡ ಎಂದು ಸಿನಿಮಾ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿದೆ. ಡಿಸೆಂಬರ್ ನಲ್ಲಿ ಸಿನಿಮಾ ತೆರೆಗೆ ತರಲು ಪ್ಲ್ಯಾನ್ ಮಾಡಿಕೊಂಡಿದ್ದೇವೆ, ಸದ್ಯದಲ್ಲೇ ಸಿನಿಮಾ ಬಿಡುಗಡೆ ದಿನಾಂಕವನ್ನು ಅನೌನ್ಸ್ ಮಾಡಲಿದ್ದೇವೆ ಎಂದು ತಿಳಿಸಿದ್ದಾರೆ.
ನಾಯಕ ರೋಹಿತ್ ಶ್ರೀಧರ್ ಮಾತನಾಡಿ ಅಕ್ಟೋಬರ್ 14ರಂದು ನಮ್ಮ ಸಿನಿಮಾ ಬಿಡುಗಡೆ ಆಗಬೇಕಿತ್ತು. ಚಿತ್ರಮಂದಿರದಲ್ಲಿ ಕಾಂತಾರ, ಗುರು ಶಿಷ್ಯರು ಸಿನಿಮಾಗಳು ಚೆನ್ನಾಗಿ ಓಡುತ್ತಿದ್ದರಿಂದ ಸಿನಿಮಾ ಬಿಡುಗಡೆಯನ್ನು ಹಿಂತೆಗೆದುಕೊಂಡ್ವಿ. ಡಿಸೆಂಬರ್ ನಲ್ಲಿ ಸಿನಿಮಾ ಬಿಡುಗಡೆಯಾಗಲಿದೆ ಎಲ್ಲರೂ ಸಪೋರ್ಟ್ ಮಾಡಿ ಎಂದು ವಿನಂತಿಸಿದ್ದಾರೆ.
ರೋಹಿತ್ ಶ್ರೀಧರ್, ಭಾವನ ಶ್ರೀನಿವಾಸ್, ಜೀವಿತ ವಸಿಷ್ಠ ಚಿತ್ರದ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದು ರವೀಂದ್ರ ವಂಶಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಜೇನುಗೂಡು ಬ್ಯಾನರ್ ನಡಿ ಚಿತ್ರವನ್ನು ಕೆ. ಎನ್ ಶ್ರೀಧರ್ ನಿರ್ಮಾಣ ಮಾಡಿದ್ದಾರೆ.