~ಡಾ. ಜೆ ಎಸ್ ಪಾಟೀಲ.
ಇದೇ ಜೂನ್ ೦೮, ೨೦೨೩ ರಂದು ಅಂಕಣಕಾರ ಪಿ. ರಾಮನ್ ಅವರು ‘ದಿ ವೈರ್’ ವೆಬ್ ಜರ್ನಲ್ಲಿನಲ್ಲಿ ಬಿಜೆಪಿಯ ಮುಂಬರುವ ಸಂಸತ್ ಚುನಾವಣಾ ತಂತ್ರಗಳ ಕುರಿತು ಒಂದು ಲೇಖನವನ್ನು ಬರೆದಿದ್ದಾರೆ. ಅದರಲ್ಲಿ ಬಿಜೆಪಿ ತನ್ನ ಲೋಕಸಭಾ ಚುನಾವಣಾ ತಂತ್ರಗಳನ್ನು ಬದಲಾಯಿಸುತ್ತಿರುವ ಕುರಿತು ಬೆಳಕು ಚೆಲ್ಲಿದ್ದಾರೆ. ೫೦೦ ಸ್ಥಳಗಳಲ್ಲಿ ಕ್ಷೇತ್ರ ಮಟ್ಟದ ಸಮಾವೇಷಗಳು, ೫ ಲಕ್ಷ ‘ಪ್ರಭಾವಿ’ ಕುಟುಂಬಗಳನ್ನು ಸಂಪರ್ಕಿಸುವುದು, ಸರ್ಕಾರದ ಕಾರ್ಯಗಳಿಗೆ ಬೆಂಬಲ ಪಡೆಯಲು ‘ವಿಕಾಸ ತೀರ್ಥ’ ಆಯೋಜನೆˌ ಮತ್ತು ಸ್ನೇಹಪರ ಪ್ರಾದೇಶಿಕ ಪಕ್ಷಗಳೊಂದಿಗೆ ಹೊಂದಾಣಿಕೆ ಇವು ಪಕ್ಷವನ್ನು ಸಂಘಟಿಸುವಲ್ಲಿ ಬಿಜೆಪಿಯ ಮೊದಲ ಹೆಜ್ಜೆಗಳಾಗಲಿವೆಯಂತೆ. ಪಿ ರಾಮನ್ ಅವರು ರಾಷ್ಟ್ರೀಯ ದಿನಪತ್ರಿಕೆಗಳಲ್ಲಿ ೧೯೭೮ ರಿಂದ ರಾಜಕೀಯ ಬೆಳವಣಿಗೆಗಳ ಕುರಿತು ಸಾಕಷ್ಟು ಬರೆದಿದ್ದಾರೆˌ ಹಾಗು ಇವರು ಸ್ಟ್ರಾಂಗ್ ಲೀಡರ್ ಪಾಪ್ಯುಲಿಸಂನ ಲೇಖಕರಾಗಿದ್ದಾರೆ.
ಕರ್ನಾಟಕದ ಚುನಾವಣಾ ಫಲಿತಾಂಶವು ಸಮಕಾಲೀನ ಭಾರತೀಯ ಮಾಧ್ಯಮಗಳ ಎರಡು ವಿಭಿನ್ನ ದೃಷ್ಟಿಕೋನಗಳನ್ನು ಬೆತ್ತಲುಗೊಳಿಸಿದೆ. ಭಾರತೀಯ ಮಾಧ್ಯಮಗಳು ಬಿಜೆಪಿಯೇತರ ವಿರೋಧ ಪಕ್ಷಗಳ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡುವಾಗ ತುಂಬಾ ಅಸೂಯೆ ಪ್ರದರ್ಶಿಸುತ್ತವೆ ಮತ್ತು ಜೋರಾದ ಶಬ್ಧ ಮಾಡುತ್ತವೆ. ಅದೇ ಆಡಳಿತ ಪಕ್ಷ ಬಿಜೆಪಿಯ ವೈಫಲ್ಯಗಳ ಕುರಿತು ಮಾತನಾಡುವಾಗ ಅವುಗಳ ನಾಲಿಗೆ ಕಟ್ಟುತ್ತದೆ ಎನ್ನುತ್ತಾರೆ ಲೇಖಕರು. ಅದಕ್ಕೆ ಒಂದೆರಡು ಸ್ಯಾಂಪಲ್ ಉದಾಹರಣೆಗಳನ್ನು ಲೇಖಕರು ನೀಡಿದ್ದಾರೆ:
‘ಸಿದ್ದರಾಮಯ್ಯ ಮತ್ತು ಡಿ. ಕೆ ಶಿವಕುಮಾರ್ ನಡುವೆ ಹೆಚ್ಚಿದ ಹಗ್ಗಜಗ್ಗಾಟ…..’
‘ಸಿದ್ದರಾಮಯ್ಯ ಬೆಂಬಲಿಗರ ಹೇಳಿಕೆಗಳಿಂದ ಡಿ ಕೆ ಶಿವಕುಮಾರ್ ಅವರ ಸಹೋದರನಿಗೆ ಅಸಮಾಧಾನ….’
ಬಿಜೆಪಿ ಸರ್ಕಾರದ ವಿವಾದಾತ್ಮಕ ನಿರ್ಧಾರಗಳ ವಿರುದ್ಧ ಮೌನವಾಗಿದ್ದ ಮಾಧ್ಯಮಗಳು ಈಗ ಕಾಂಗ್ರೆಸ್ ಸರಕಾರದ ವಿರುದ್ಧ ನಕಾರಾತ್ಮಕ ಕಥೆಗಳನ್ನು ಹರಡಿ ಜನರನ್ನು ಪ್ರಚೋದಿಸುತ್ತಿವೆ ಎನ್ನುತ್ತಾರೆ ಲೇಖಕರು.
ಮುಖ್ಯಮಂತ್ರಿ ಹುದ್ದೆಗಾಗಿ ಇಬ್ಬರು ನಾಯಕರ ನಡುವಿನ ಸೌಹಾರ್ದಯುತ ಸ್ಪರ್ಧೆಯನ್ನು ಕನ್ನಡದ ಮಾಧ್ಯಮಗಳು ಕಾಂಗ್ರೆಸ್ ಹೈಕಮಾಂಡ್‌ನ ‘ವೈಫಲ್ಯ’ವೆಂದು ಟೀಕಿಸಿದವು. ಅಂತಿಮವಾಗಿ ಮೇ ೨೦ ರಂದು ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಪ್ರಮಾಣ ವಚನ ಸ್ವೀಕರಿಸಿದಾಗ, ಮಾಧ್ಯಮಗಳು ಸಚಿವರ ಪಟ್ಟಿಯ ಕುರಿತು ಊಹಾಪೋಹಗಳನ್ನು ಹರಡಿದವು. ಕನ್ನಡದ ಮಾಧ್ಯಮಗಳ ಬಿಜೆಪಿಯೇತರ ಪ್ರತಿಪಕ್ಷಗಳ ಕುರಿತ ಆಕ್ರಮಣಶೀಲತೆಯ ಪ್ರದರ್ಶನ ಬಿಜೆಪಿ ಆಡಳಿತದ ಕುರಿತು ಯಾವತ್ತೂ ಕಾಣಸಿಗಲಿಲ್ಲ. ಕಾಂಗ್ರೆಸ್ ಪಕ್ಷದೊಳಗಿನ ಆಂತರಿಕ ಭಿನ್ನಾಭಿಪ್ರಾಯಗಳನ್ನು ವರ್ಧಿಸಲು ಕನ್ನಡದ ಮಾಧ್ಯಮಗಳು ಇನ್ನಿಲ್ಲದಂತೆ ಪ್ರಯತ್ನಿಸಿದವು. ಅದರಲ್ಲಿ ಒಂದು ಮಾಧ್ಯಮ ಏಳು ವರ್ಷದ ಬಾಲಕಿಯನ್ನು ಸಂದರ್ಶಿಸಿ ತನ್ನ ಅಜ್ಜನಿಗೆ ಮಂತ್ರಿ ಮಾಡಬೇಕು ಎಂಬರ್ಥದ ಸುದ್ದಿ ಪ್ರಸಾರ ಮಾಡಿದವು ಎನ್ನುತ್ತಾರೆ ಲೇಖಕರು.
ಇಂತಹ ಹೈಪರ್ ಆಕ್ಟಿವಿಸಂ ಅಥವಾ ಅತಿರೇಕದ ಸುದ್ದಿಗಳೊಂದಿಗೆ ಕನ್ನಡದ ಮುದ್ರಣ ಮತ್ತು ದೃಶ್ಯ ಮಾಧ್ಯಮಗಳು ಪದೆಪದೆ ತಾವು ಒಂದು ಪಕ್ಷದ ಪರ ಎನ್ನುವುದನ್ನು ಸಾಬಿತುಪಡಿಸಿದವು. ಆದಾಗ್ಯೂ, ನರೇಂದ್ರ ಮೋದಿಯವರ ಆಡಳಿತ ಪಕ್ಷದ ಕುರಿತು ವರದಿ ಮಾಡುವಾಗ ಈ ಮಾಧ್ಯಮಗಳ ಆಕ್ರಮಣಶೀಲತೆ ಆವಿಯಾಗುವುದನ್ನು ನಾವು ಗಮನಿಸಬೇಕಿದೆ. ಕರ್ನಾಟಕದಲ್ಲಿ ಬಿಜೆಪಿ ದುರಾಡಳಿತವನ್ನು ಉದ್ದಕ್ಕೂ ಸಮರ್ಥಿಸಿಕೊಂಡು ಬಂದ ಮಾಧ್ಯಮಗಳು ವಿಪಕ್ಷಗಳ ಬಗ್ಗೆ ಸದಾ ನಕಾರಾತ್ಮಕ ಸುದ್ದಿಗಳನ್ನೆ ಬಿತ್ತರಿಸಿದವು. ಹಾಗಾಗಿ, ೨೦೧೮ರಲ್ಲಿ ೧೦೪ ಸ್ಥಾನ ಪಡೆದಿದ್ದ ಬಿಜೆಪಿ ೨೦೧೩ ರಲ್ಲಿ ೬೫ ಕ್ಕೆ ಕುಸಿಯುವಲ್ಲಿ ಮಾಧ್ಯಮಗಳ ಪಾತ್ರ ದೊಡ್ಡದಾಗಿದ್ದು ಅವು ಬಿಜೆಪಿಯ ಈ ತೀವ್ರ ಪತನದ ಬಗ್ಗೆ ಯಾವುದೇ ವಾಸ್ತವದ ವಿಶ್ಲೇಷಣೆ ಮಾಡಲಾರವು. ಬಿಜೆಪಿ ಆಡಳಿತದುದ್ದಕ್ಕೂ ಆಡಳಿತ ಪಕ್ಷವನ್ನು ಸಮರ್ಥಿಸಿದ ಕನ್ನಡದ ಮಾಧ್ಯಮಗಳು ಈಗ ಕಾಂಗ್ರೆಸ್ ಆಡಳಿತವನ್ನು ವಿರೋಧಿಸುತ್ತಿವೆ.
ಕರ್ನಾಟಕ ವಿಧಾನಸಭೆಗೆ ಚುನಾವಣಾ ದಿನಾಂಕ ಘೋಷಣೆಯಾಗುವ ಮುನ್ನವೇ ಫೆಬ್ರವರಿಯಿಂದಲೇ ಮೋದಿ ಕರ್ನಾಟಕದಲ್ಲಿ ಚುನಾವಣಾ ಪ್ರಚಾರ ಆರಂಭಿಸಿದ್ದರು. ರಾಜ್ಯದ ಕಲಬುರಗಿ, ವಿಜಯಪುರˌ ಮೈಸೂರು, ಹುಬ್ಬಳ್ಳಿ ಮತ್ತು ಮಂಡ್ಯ ಜಿಲ್ಲೆಗಳಲ್ಲಿ ಒಟ್ಟು ೧೯ ದೊಡ್ಡ ಸಮಾವೇಷಗಳನ್ನು, ಕನಿಷ್ಠ ೨೬ ಕಿ.ಮೀ. ಉದ್ದದ ಒಟ್ಟು ಆರು ರೋಡ್ ಶೋಗಳನ್ನು ಮೋದಿ ನಡೆಸಿದರು. ಮೋದಿ ಹೊರತಾಗಿ, ಬಿಜೆಪಿ ಕೇಂದ್ರಿಯ ಅಧ್ಯಕ್ಷ ಜೆ. ಪಿ. ನಡ್ಡಾ ೧೦ ಸಾರ್ವಜನಿಕ ಸಭೆಗಳು ಮತ್ತು ೧೬ ರೋಡ್ ಶೋಗಳನ್ನು, ಸ್ಮೃತಿ ಇರಾನಿ ೧೯, ರಾಜನಾಥ್ ಸಿಂಗ್ ೪, ನಿತಿನ್ ಗಡ್ಕರಿ ೩, ನಿರ್ಮಲಾ ಸೀತಾರಾಮನ್ ೮, ಹಿಮಂತ ಬಿಸ್ವಾಸ್ ಶರ್ಮಾ ೧೬, ಆದಿತ್ಯನಾಥ್ ೧೨ ಮತ್ತು ಶಿವರಾಜ್ ಸಿಂಗ್ ಚೌಹಾಣ್ ೬ ಸಭೆಗಳಲ್ಲಿ ಜನರನ್ನು ಉದ್ದೇಶಿಸಿ ಮಾತನಾಡಿದರು. ಅಮಿತ್ ಶಾ ಕೂಡ ಎಡೆಬಿಡದೆ ಪಕ್ಷದ ಪರ ಪ್ರಚಾರ ಮಾಡಿದರು. ಆದರೂ ಪಕ್ಷ ೩೧ ಸ್ಥಾನಗಳಲ್ಲಿ ಠೇವಣಿ ಕಳೆದುಕೊಂಡಿತು. ಅಂದರೆ ಬಿಜೆಪಿ ಸ್ಪರ್ಧಿಸಿದ ಒಟ್ಟು ಸ್ಥಾನಗಳಲ್ಲಿ ೧೩.೮ % ಸ್ಥಾನಗಳಲ್ಲಿ ಠೇವಣಿ ಕಳೆದುಕೊಂಡಂತಾಗಿದೆ.
ಈ ಫಲಿತಾಂಶವು ಮೋದಿ ಕೇಂದ್ರಿತ ಏಕವ್ಯಕ್ತಿ ಚುನಾವಣಾ ಪ್ರಚಾರಕ್ಕೆ ಭಾರೀ ಒತ್ತು ನೀಡಿದ್ದ ಬಿಜೆಪಿಯ ಕರುಣಾಜನಕ ಕಥೆಯನ್ನು ಹೇಳುತ್ತದೆ. ಪಕ್ಷದ ಪರ ಅಭಿಪ್ರಾಯ ರೂಪಿಸುತ್ತವೆಂದು ಪ್ರಚಾರ ಕೊಡಲಾಗಿದ್ದ ಅಮಿತ್ ಶಾ ಅವರ ಅಜೇಯ ಸಾಮಾಜಿಕ ಮಾಧ್ಯಮ ನೆಟ್‌ವರ್ಕ್‌ನ ಕತೆ ಏನಾಯಿತು? ಬೂತ್ ಮಟ್ಟದ ಸಮಿತಿಗಳು ಮತ್ತು ಮಂಡಲ ಪ್ರಮುಖರ ಸುಪ್ರಸಿದ್ಧ ತೀವ್ರ ಜಾಲಗಳು ಏನಾದವು ಎಂದು ಲೇಖಕರು ಪ್ರಶ್ನಿಸಿದ್ದಾರೆ. ಬಿಜೆಪಿ ಬೆಂಬಲಿಗರಿಗೆ ಅಪ್ರೀಯವೆನ್ನಿಸುವ ಸಂಗತಿಯೆಂದರೆ ಭಾರೀ ನಿರಿಕ್ಷೆಗಳಿಂದ ಸೃಷ್ಠಿಸಲಾಗಿದ್ದ ‘ಬ್ರಾಂಡ್ ಮೋದಿ’ ತನ್ನ ಹೊಸತನ ಮತ್ತು ಸಮೂಹ ಆಕರ್ಷಣೆಯನ್ನು ತ್ವರಿತವಾಗಿ ಕಳೆದುಕೊಳ್ಳುತ್ತಿದೆ. ಕರ್ನಾಟಕದಲ್ಲಿ, ಮೋದಿ ಮತ್ತು ಶಾ ಒಟ್ಟಾರೆಯಾಗಿ ೪೬ ಕ್ಷೇತ್ರಗಳಲ್ಲಿ ಚುನಾವಣಾ ಸಭೆಗಳು ಮತ್ತು ರೋಡ್ ಶೋಗಳನ್ನು ಮಾಡಿದ್ದಾರೆ. ಆ ಪೈಕಿ ಬಿಜೆಪಿ ಕೇವಲ ೧೫ ಕ್ಷೇತ್ರಗಳಲ್ಲಿ ಮಾತ್ರ ಗೆಲ್ಲುವಲ್ಲಿ ಯಶಸ್ವಿಯಾಗಿದೆ ಎನ್ನುತ್ತಾರೆ ಲೇಖಕರು.
ಇದು ಸ್ಪಷ್ಟವಾಗಿ, ದ್ವೇಷ-ಚಾಲಿತ ಮತಬ್ಯಾಂಕ್‌ನ ತೀವ್ರವಾದ ಸವೆತ ಮತ್ತು ಸ್ಥಳೀಯ ನಾಯಕತ್ವವನ್ನು ಉಪೇಕ್ಷಿಸಿ ಮೋದಿ ಕೇಂದ್ರಿತ ಚುನಾವಣಾ ಪ್ರಚಾರದ ವೈಖರಿಯ ಪರಿಣಾಮ ಎಂದಿದ್ದಾರೆ ಲೇಖಕರು. ಕರ್ನಾಟಕದಲ್ಲಿ ಮೋದಿ ಮ್ಯಾಜಿಕ್ ಬೆಲೆ ಕಳೆದುಕೊಂಡಿದ್ದು ಸ್ಪಷ್ಟವಾಗಿದೆ. ಇದಕ್ಕೂ ಕೇವಲ ಐದು ತಿಂಗಳ ಹಿಂದೆ, ಮೋದಿ ಮ್ಯಾಜಿಕ್ ಮತ್ತು ಬೂತ್ ಮ್ಯಾನೇಜ್‌ಮೆಂಟ್ ಎರಡೂ ಹಿಮಾಚಲ ಪ್ರದೇಶದಲ್ಲಿ ಇದೇ ರೀತಿಯ ಹಿನ್ನಡೆಯನ್ನು ಅನುಭವಿಸಿದವು, ಅಲ್ಲಿ ಎಂಟು ಬಿಜೆಪಿ ಮಂತ್ರಿಗಳು ಸೋತಿದ್ದರು. ಬಿಜೆಪಿಯು ತನ್ನ ಪಕ್ಷದ ಅಧ್ಯಕ್ಷರ ತವರು ರಾಜ್ಯವನ್ನು ಗೆಲ್ಲಲು
ಮೋದಿಯಿಂದ ಐದುˌ ನಡ್ಡಾ ಸ್ವತಃ ೫೦, ಮತ್ತು ಯೋಗಿ ಆದಿತ್ಯನಾಥ್ ರಿಂದ ೨೦ ಸಭೆಗಳು ಮತ್ತು ರೋಡ್ ಶೋಗಳನ್ನು ಆಯೋಜಿಸಿತ್ತು. ಮತದಾನಕ್ಕೆ ಒಂದು ದಿನ ಮೊದಲು, ಮೋದಿ ಅವರು ತಮ್ಮ ಸಾಕು ಮಾಧ್ಯಮಗಳ ಭಾರೀ ಪ್ರಚಾರದೊಂದಿಗೆ ರಾಜ್ಯದ ಮತದಾರರಿಗೆ ಒಂದು ಭಾವನಾತ್ಮಕ ಸಾರ್ವಜನಿಕ ಮನವಿಯನ್ನು ಮಾಡಿದರು ಎಂದು ಲೇಖಕರು ಜ್ಞಾಪಿಸಿದ್ದಾರೆ.
ಆದರೆ, ಕಾಂಗ್ರೆಸ್ ಬಿಜೆಪಿಯನ್ನು ೪೦ ಸ್ಥಾನಗಳಿಂದ ೨೫ ಕ್ಕೆ ಕುಸಿಯುವಂತೆ ಮಾಡಿ ಅಧಿಕಾರ ಹಿಡಿಯಿತು. ಪ್ರಜಾಪ್ರಭುತ್ವ ಗಟ್ಟಿಯಾಗಿದ್ದ ಹಳೆಯ ದಿನಗಳಲ್ಲಿ, ಬಿಜೆಪಿಯ ಅಂತಹ ಪುನರಾವರ್ತಿತ ಹಿನ್ನಡೆಗಳು ರಾಷ್ಟ್ರೀಯ ಕಾರ್ಯಕಾರಿಣಿ ಅಥವಾ ಸಂಸದೀಯ ಮಂಡಳಿಯಂತಹ ವೇದಿಕೆಗಳಲ್ಲಿ ಚರ್ಚಿಸಲ್ಪಡುತ್ತಿದ್ದವು. ೧೯೯೧ ರಲ್ಲಿ ಆರ್ಥಿಕ ಉದಾರೀಕರಣವನ್ನು ಹೊಸದಾಗಿ ಪರಿಚಯಿಸಿದಾಗ ಈ ರೀತಿಯ ಚರ್ಚೆಗಳು ನಡೆದಿದ್ದವು. ಆದರೆ ಮೋದಿ ನಾಯಕತ್ವದ ಬಿಜೆಪಿಯಲ್ಲಿ ಯಾವುದೇ ನಿರ್ಧಾರಗಳನ್ನು ಪಕ್ಷದ ಸಾಂಸ್ಥಿಕ ವೇದಿಕೆಗಳಲ್ಲಿ ತೆಗೆದುಕೊಳ್ಳುವ ಬದಲಿಗೆ ಕೇವಲ ಕೆಲವೆ ಕೆಲವು ಮೋದಿಯ ವಿಶ್ವಾಸಾರ್ಹ ಪರಮಾಪ್ತರು ತೆಗೆದುಕೊಳ್ಳುತ್ತಾರೆ. ಈಗ ಬಿಜೆಪಿಯಲ್ಲಿ ಯಾವುದೇ ಪ್ರಮಾದಗಳ ಕುರಿತು ಪಕ್ಷದ ಮಟ್ಟದ ಆತ್ಮಾವಲೋಕನದ ಚರ್ಚೆಯ ಪ್ರಯತ್ನಗಳೆ ನಡೆಯುವುದಿಲ್ಲ ಎನ್ನುತ್ತಾರೆ ಲೇಖಕರು.
ಕರ್ನಾಟಕದ ಹೀನಾಯ ಸೋಲು ಮೋದಿ ವರ್ಚಸ್ಸನ್ನು ಪ್ರತಿಷ್ಠಾಪಿಸುವ ಹಲವಾರು ಕ್ರಿಯಾ ಯೋಜನೆಗಳ ಪ್ರಯತ್ನಕ್ಕೆ ದೊಡ್ಡ ಅಘಾತವನ್ನು ನೀಡಿದೆ. ಬಿಜೆಪಿ ಮುಂದಿನ ಒಂದು ವರ್ಷ ಮೋದಿಯ ಒಂಬತ್ತು ವರ್ಷಗಳ ಯಶಸ್ವಿ ಹಾಗು ಪ್ರಶ್ನಾತೀತ ಆಡಳಿತದ ಆಚರಣೆಯನ್ನು ಕೆಲವು ವಿನೂತನ ಕಾರ್ಯಕ್ರಮಗಳ ಮೂಲಕ ಆಚರಿಸಲು ಉದ್ದೇಶಿಸಿತ್ತು. ಆದರೆ ಬಿಜೆಪಿಯ ಸರಣಿ ಚುನಾವಣಾ ಸೋಲುಗಳು ಮತ್ತು ರಾಷ್ಟ್ರಮಟ್ಟದಲ್ಲಿ ವಿರೋಧ ಪಕ್ಷಗಳು ಒಗ್ಗೂಡುತ್ತಿರುವ ಭಯವು ಬಿಜೆಪಿಯ ಆಚರಣೆಗಳ ಮೇಲೆ ಕಾರ್ಮೋಡವನ್ನು ಕವಿಯುವಂತೆ ಮಾಡಿದೆ. ಈ ಆಚರಣೆಗಳನ್ನೆ ಪೂರ್ಣ ಪ್ರಮಾಣದ ಚುನಾವಣಾ ಪ್ರಚಾರ ಕಾರ್ಯಗಳನ್ನಾಗಿ ಪರಿವರ್ತಿಸುವುದು ಬಿಜೆಪಿಗೆ ಅನಿವಾರ್ಯವಾದಂತಿದೆ ಎನ್ನುತ್ತಾರೆ ಲೇಖಕರು. ಮುಂದಿನ ದಿನಗಳಲ್ಲಿ ಇನ್ನೂ ಅನೇಕ ರಾಜ್ಯಗಳ ವಿಧಾನಸಭೆಯ ಚುನಾವಣೆಗಳು ಜರುಗಲಿವೆ. ಮೋದಿ ವರ್ಚಸ್ಸು ತೀವ್ರವಾಗಿ ಕುಸಿಯುತ್ತಿದೆ ಎನ್ನುತ್ತಾರೆ ಲೇಖಕರು.
ಕರ್ನಾಟಕದಲ್ಲಿ ಮೋದಿ ವರ್ಚಸ್ಸು ಕುಸಿದ ಬಗ್ಗೆ ರಾಷ್ಟ್ರಮಟ್ಟದಲ್ಲಿ ದೊಡ್ಡ ಚರ್ಚೆಯಾಗುತ್ತಿದೆ. ಇದು ಹೀಗೆ ವ್ಯಾಪಕವಾಗಿ ಪಸರಿಸಿದರೆ ಹಾಗು ವಿರೋಧ ಪಕ್ಷಗಳು ಒಂದಾಗುತ್ತ ಹೋದರೆ ೨೦೨೪ ರ ಸಂಸತ್ ಚುನಾವಣೆ ಗೆಲ್ಲುವುದು ಕಷ್ಟವಾಗುತ್ತದೆ ಎನ್ನುವ ಆತಂಕ ಮೋದಿ-ಶಾ ಜೋಡಿಗೆ ಕಾಡುತ್ತಿದೆ. ಮೇ ೨೮ ರಂದು ಸಂಸತ್ ಭವನ ಉದ್ಘಾಟನಾ ಕಾರ್ಯಕ್ರಮ ಮುಗಿದ ಕೂಡಲೇ ಬಿಜೆಪಿ ಮುಖ್ಯಮಂತ್ರಿಗಳನ್ನು ಕರೆಸಿ ಪ್ರಾದೇಶಿಕ ಪಕ್ಷಗಳೊಂದಿಗೆ ಸೌಹಾರ್ದಯುತವಾಗಿ ಇರುವಂತೆ ಮೋದಿ ಫರ್ಮಾನು ಹೊರಡಿಸಿದ್ದಾರೆ. ಇದು, ಸ್ಪಷ್ಟವಾಗಿ, ಮುಂದಿನ ವರ್ಷದ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಪ್ರಾದೇಶಿಕ ಪಕ್ಷಗಳ ಬೆಂಬಲವನ್ನು ನಿರೀಕ್ಷಿಸಿ ಕೈಗೊಂಡ ತೀರ್ಮಾನವಾಗಿದೆ. ಇದನ್ನೇ ಗಮನದಲ್ಲಿಟ್ಟುಕೊಂಡು ಸಂಸತ್ತಿನ ಉದ್ಘಾಟನಾ ಕಾರ್ಯಕ್ರಮದ ನಡುವೆಯೇ ಮೋದಿ ಸೌಜನ್ಯದಿಂದ ಹೋಗಿ ಹೆಚ್.ಡಿ. ದೇವೇಗೌಡರನ್ನು ಮಾತನಾಡಿಸಿದ್ದಾರೆ.
ಕರ್ನಾಟಕದಲ್ಲಿ ಲೋಕಸಭೆ ಚುನಾವಣೆಯಲ್ಲಿ ಮತ್ತು ನಂತರ ದೇವೇಗೌಡರ ಬೆಂಬಲ ನಿರ್ಣಾಯಕವಾಗಲಿದೆ ಎಂದು ಬಹುಶಃ ಮೋದಿಯವರು ಯೋಚಿಸಿರುವಂತಿದೆ. ಬಿಜೆಪಿಯ ಅತಿ ಆತ್ಮವಿಶ್ವಾಸ ಕರ್ನಾಟಕದ ಚುನಾವಣೆಯಲ್ಲಿ ಮಣ್ಣುಪಾಲಾಗಿದೆ. ಈ ಎಲ್ಲಾ ಬೆಳವಣಿಗೆಗಳಿಂದ ಕಂಗಾಲಾಗಿರುವ ಬಿಜೆಪಿಯು ಮರು ಹೊಂದಾಣಿಕೆಯ ಚುನಾವಣಾ ತಂತ್ರ ಹೆಣೆಯುತ್ತಿದೆ. ಬಿಜೆಪಿ ಮುಂದಿನ ಒಂದು ವರ್ಷ ಪೂರ್ತಿ ಚುನಾವಣಾ ಪ್ರಚಾರದ ವರ್ಷವಾಗಿ ಆಚರಿಸಲು ಅನೇಕ ಯೋಜನೆಗಳನ್ನು ಹಮ್ಮಿಕೊಂಡಿದೆ. ಅವು ಈ ಕೆಳಗಿನಂತಿವೆ:
೧. ಬೃಹತ್ ಜನಾಂದೋಲನದ ಮಿಂಚುದಾಳಿಯ ಭಾಗವಾಗಿ ಬಿಜೆಪಿ ಕ್ಷೇತ್ರ ಮಟ್ಟದಲ್ಲಿ ಒಟ್ಟು ೫೦೦ ಸಾರ್ವಜನಿಕ ಸಭೆಗಳನ್ನು ನಡೆಸುವುದು.
೨. ಬಿಜೆಪಿ ಪರ ಮತದಾನ ಮಾಡುವಂತೆ ಜನರ ಮೇಲೆ ಪ್ರಭಾವ ಬೀರಬಲ್ಲ ೫ ಲಕ್ಷ ‘ಗಣ್ಯ’ ಕುಟುಂಬಗಳೊಂದಿಗೆ ಸಂಪರ್ಕ ಸಾಧಿಸುವಂತೆ ರಾಜ್ಯಗಳ ಬಿಜೆಪಿ ನಾಯಕರಿಗೆ ನಿರ್ದೇಶನ ನೀಡಲಾಗಿದೆ.
೩. ದೇಶದ ೫೪೩ ಲೋಕಸಭಾ ಕ್ಷೇತ್ರಗಳನ್ನು ೧೪೪ ಕ್ಲಸ್ಟರ್‌ಗಳಾಗಿ ವಿಂಗಡಿಸಲಾಗುವುದು. ಸಚಿವರು ಮತ್ತು ಪಕ್ಷದ ನಾಯಕರು ತಿಂಗಳಿಗೆ ಎಂಟು ದಿನಗಳು ಈ ಕ್ಲಸ್ಟರ್ ಗಳ ಜನರೊಂದಿಗೆ ಸಂಪರ್ಕ ಸಾಧಿಸಬೇಕು.
೪. ಮೋದಿ ಆಡಳಿತವು ನಿರ್ಮಿಸಿದ ಮೂಲಸೌಕರ್ಯಗಳನ್ನು ಪರಿಣಾಮಕಾರಿಯಾಗಿ ಪ್ರಚಾರ ಮಾಡಲು ‘ವಿಕಾಸ ತೀರ್ಥ’ ಕಾರ್ಯಕ್ರಮಗಳನ್ನು ನಡೆಸುವಂತೆ ಪಕ್ಷದ ಕಾರ್ಯಕರ್ತರಿಗೆ ನಿರ್ದೇಶನ ನೀಡಲಾಗಿದೆ.
೫. ‘ಟಿಫಿನ್ ಪೇ ಚರ್ಚಾ’ ಮತ್ತೊಂದು ಪ್ರಚಾರ ಕಾರ್ಯಕ್ರಮವಾಗಿದ್ದು, ಎಲ್ಲಾ ವರ್ಗದ ಮತದಾರರನ್ನು ವ್ಯಾಪಕವಾಗಿ ತಲುಪಬೇಕೆಂದು ರಾಜ್ಯ ಬಿಜೆಪಿ ನಾಯಕರಿಗೆ ನಿರ್ದೇಶಿಸಲಾಗಿದೆ. ಈ ವಾರ ಇದನ್ನು ಔಪಚಾರಿಕವಾಗಿ ಆರಂಭಿಸಿದ ಯುಪಿ ಮುಖ್ಯಮಂತ್ರಿ ಆದಿತ್ಯನಾಥ್, ಇದು ರಾಜ್ಯದ ಎಲ್ಲಾ ೪೦೪ ಕ್ಷೇತ್ರಗಳಲ್ಲಿ ನಡೆಯುತ್ತದೆ ಎಂದು ಹೇಳಿದ್ದಾರೆ.
೬. ದೇಶದಾದ್ಯಂತ ೫೧ ಸಮಾವೇಷಗಳನ್ನು ನಡೆಸುವಂತೆ ಬಿಜೆಪಿಯ ಹಿರಿಯ ನಾಯಕರಿಗೆ ಹೈಕಮಾಂಡ್ ಸೂಚನೆ ನೀಡಿದೆ. ದೆಹಲಿಯು ಅಂತಹ ಪ್ರಚಾರಗಳನ್ನು ಮೇಲ್ವಿಚಾರಣೆ ಮಾಡುತ್ತದೆ ಹಾಗು ಅವುಗಳ ಪರಿಣಾಮವನ್ನು ನಿರ್ಣಯಿಸುತ್ತದಂತೆ.
೭. ಮೊದಲಿಗೆ, ಮೋದಿ ಸ್ವತಃ ಈ ವರ್ಷ ಚುನಾವಣೆಗೆ ಹೋಗಲಿರುವ ರಾಜ್ಯಗಳ ಮೇಲೆ ನಿಗಾ ಇಟ್ಟಿದ್ದಾರೆ. ರಾಜಸ್ಥಾನದಲ್ಲಿ, ಅವರು ಎರಡು ಅಭಿಯಾನಗಳನ್ನು ಈಗಾಗಲೆ ಮಾಡಿದ್ದಾರೆ, ಈ ವರ್ಷದಲ್ಲಿ ಇದು ಅವರ ನಾಲ್ಕನೇ ಮತ್ತು ಐದನೆಯ ಅಭಿಯಾನವಾಗಿದೆ ಎನ್ನುತ್ತಾರೆ ಲೇಖಕರು.
ಕಳೆದ ಆರು ತಿಂಗಳಲ್ಲಿ ಬಿಜೆಪಿಯ ಸರಣಿ ಚುನಾವಣಾ ಹಿನ್ನಡೆಗಳು ಕೆಲವು ಅನಪೇಕ್ಷಿತ ಫಲಾನುಭವಿಗಳನ್ನು ಸಹ ಹೊಂದಿವೆ. ಕಳೆದ ವರ್ಷದುದ್ದಕ್ಕೂ, ಮಧ್ಯಪ್ರದೇಶದಂತಹ ರಾಜ್ಯಗಳಲ್ಲಿ ಹೊಸ ಮುಖ್ಯಮಂತ್ರಿಯನ್ನು ನೇಮಿಸುವ ಬಗ್ಗೆ ಮತ್ತು ರಾಜಸ್ಥಾನದಲ್ಲಿ ವಸುಂಧರಾರಾಜೆ ಸಿಂಧಿಯಾ ಅವರನ್ನು ನಾಯಕಿಯಾಗಿ ಘೋಷಿಸುವ ಕುರಿತು ಚರ್ಚೆ ನಡೆದಿದೆ. ನವೆಂಬರ್ ೨೦೨೨ ರಲ್ಲಿ ಹಿಮಾಚಲ ಪ್ರದೇಶದಲ್ಲಿ ಪಕ್ಷವು ಸೋಲನ್ನು ಅನುಭವಿಸುವವರೆಗೂ ಹೊಸ ನೇಮಕ ಮತ್ತು ವಜಾಗೊಳಿಸುವುದು ದಿನದ ಆದೇಶವಾಗಿತ್ತು. ಇದರಿಂದ ಗಾಬರಿಗೊಂಡ ಬಿಜೆಪಿ ಆಡಳಿತದ ಮುಖ್ಯಮಂತ್ರಿಗಳು ಮೋದಿ ಭಾವಚಿತ್ರಗಳುಳ್ಳ ಜಾಹೀರಾತುಗಳನ್ನು ಹೆಚ್ಚು ಹೆಚ್ಚು ಪ್ರಕಟಿಸಿದರು. ೨೦೨೧ ರ ಕೊನೆಯಲ್ಲಿ ಬಿಜೆಪಿ ವರಿಷ್ಠರು ಹೆಚ್ಚಿನ ಆತ್ಮವಿಶ್ವಾಸದಿಂದ ಆಡಳಿತದಲ್ಲಿ ಬದಲಾವಣೆಗಳ ಸರಣಿಯನ್ನು ಹೇರಿದ ವಿಧಾನವನ್ನು ನಾವು ಗಮನಿಸಬೇಕು.
ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಇದಕ್ಕೆ ಮೊದಲ ಬಲಿಯಾದರು. ಸೆಪ್ಟೆಂಬರ್ ೧೧, ೨೦೨೧ ರಂದು ರೂಪಾನಿಯನ್ನು ಕುರ್ಚಿಯಿಂದ ಇಳಿಸಲಾಯಿತು. ಪ್ರಧಾನಿಯೊಂದಿಗಿನ ದೂರವಾಣಿ ಮಾತುಕತೆಯ ನಂತರ ತಕ್ಷಣ ರೂಪಾನಿಗೆ ರಾಜಿನಾಮೆ ನೀಡಲು ಸೂಚಿಸಲಾಯಿತು. ರೂಪಾನಿ ಸ್ಥಾನದಲ್ಲಿ ಅತ್ಯಂತ ಲೋ ಪ್ರೊಫೈಲ್ ವುಳ್ಳ ಭೂಪೇಂದ್ರ ಪಟೇಲ್ ಅವರನ್ನು ಪ್ರತಿಷ್ಠಾಪಿಸಲಾಯಿತು. ರೂಪಾನಿ ಅವರು ಆರು ತಿಂಗಳ ಅವಧಿಯಲ್ಲಿ ಅಧಿಕಾರ ವಂಚನೆಯ ಆದೇಶ ಪಡೆದ ನಾಲ್ಕನೇ ಬಿಜೆಪಿ ಮುಖ್ಯಮಂತ್ರಿ ಆಗಿದ್ದರು. ಬಿಜೆಪಿ ಹೈಕಮಾಂಡಿನ ಇತರ ಬಲಿಪಶುಗಳೆಂದರೆ ಮಾರ್ಚ್ ೩ ರಂದು ಉತ್ತರಾಖಂಡ್‌ನ ತ್ರಿವೇಂದ್ರ ಸಿಂಗ್ ರಾವತ್, ಜುಲೈ ೭ ರಂದು ತಿರತ್ ಸಿಂಗ್ ರಾವತ್. ಜುಲೈ ೨೭ ರಂದು ಕರ್ನಾಟಕದ ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ. ಆದರೆ, ಕೇವಲ ಏಳೇ ತಿಂಗಳೊಳಗೆ, ಬಿಜೆಪಿ ಹೈಕಮಾಂಡ್ ತಿರತ್ ಸಿಂಗ್ ಬಗ್ಗೆಯೂ ಭ್ರಮನಿರಸನಗೊಂಡಿತು.
ನಂತರ, ಪುಷ್ಕರ್ ಸಿಂಗ್ ಧಾಮಿಯನ್ನು ಮಾರ್ಚ್ ೨೩, ೨೦೨೨ ರಂದು ಉತ್ತರಾಖಂಡ ಸಿಎಂ ಆಗಿ ನೇಮಿಸಲಾಯಿತು. ಆದರೆ, ಹಿಮಾಚಲ ಪ್ರದೇಶ ಮತ್ತು ಕರ್ನಾಟಕದಲ್ಲಿ ಬಿಜೆಪಿಯ ಸೋಲು ಮಧ್ಯಪ್ರದೇಶದಲ್ಲಿ ಶಿವರಾಜ್ ಸಿಂಗ್ ಚೌಹಾಣ್‌ಗೆ ಹೊಸ ಚೈತನ್ಯವನ್ನು ನೀಡಿದೆ ಎಂಬುದು ಸ್ಪಷ್ಟವಾಗಿದೆ ಎನ್ನುತ್ತಾರೆ ಲೇಖಕರು. ಒಟ್ಟಾರೆ ಬಿಜೆಪಿ ಮತ್ತು ಮೋದಿಯ ದುರಾಡಳಿತ ಮತ್ತು ದ್ವೇಷ ಬಿತ್ತುವ ಅಭಿಯಾನದಿಂದ ದೇಶದ ಜನರು ಕ್ರಮೇಣವಾಗಿ ಭ್ರಮನಿರಸನಗೊಳ್ಳುತ್ತಿದ್ದು ಮೋದಿಯವರ ಫೇಕ್ ಮುಖವಾಡ ಬಯಲುಗೊಳ್ಳುತ್ತಿದೆ. ಭಾರತದ ಹಿತದೃಷ್ಟಿಯಿಂದ ೨೦೨೪ ರಲ್ಲಿ ಬಿಜೆಪಿಯ ಸೋಲು ನಿರ್ಣಾಯಕವಾಗಲಿದೆ.
~ಡಾ. ಜೆ ಎಸ್ ಪಾಟೀಲ.