ವಾಲ್ಮಿಕಿ ಅಭಿವೃದ್ದಿ ನಿಗಮ (Valmiki development board) ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ , ಪ್ರಕರಣದ ತನಿಖೆಗೆ ಸಿಬಿಐ (CBI) ಎಂಟ್ರಿಯಾಗಿದೆ. ಈ ಪ್ರಕರಣದಲ್ಲಿ ಅಕ್ರಮವಾಗಿ 200 ಅಕೌಂಟ್ ಗಳಿಗೆ ಹಣ ವರ್ಗಾವಣೆ ಆಗಿರುವುದರ ಕುರಿತು ಮಾಹಿತಿ ಕಲೆ ಹಾಕಲು ಸಿಬಿಐ ಮುಂದಾಗಿದೆ.
ಹೀಗಾಗಿ ಈಗಾಗಲೇ ಈ ಎಲ್ಲಾ ಅಕೌಂಟ್ ಮಾಲೀಕರನ್ನ ಸಿಬಿಐ ವಿಚಾರಣೆಗೆ ಒಳಪಡಿಸಿದೆ. ಜೊತೆಗೆ ಆರೋಪಿಗಳು ನಕಲಿ ಬ್ಯಾಂಕ್ ಖಾತೆ (Fake bank accounts) ತೆರೆಯಲು ಬಳಸಿದ್ದ ಕಂಪನಿ ಮಾಲೀಕರನ್ನೂ ಕೂಡ ವಿಚಾರಣೆಗೆ ಒಳಪಡಿಸಲಿದ್ದಾರೆ ಸಿಬಿಐ ಅಧಿಕಾರಿಗಳು. ಹೀಗಾಗಿ ತಮ್ಮ ಬ್ಯಾಂಕ್ ಸ್ಟೇಟ್ ಮೆಂಟ್ ಸಮೇತ ವಿಚಾರಣೆಗೆ ಹಾಜರಾಗುವಂತೆ ಸಿಬಿಐ ಸೂಚನೆ ಕೂಡ ಕೊಟ್ಟಿತ್ತು.
ಹೀಗಾಗಿ ತಮಗೇ ಗೊತ್ತಿಲ್ಲದೆ ತಮ್ಮ ಕಂಪನಿ ಹೆಸರಲ್ಲಿ ಖಾತೆ ತೆರೆದು ಕೋಟಿ ಕೋಟಿ ಹಣ ಇಟ್ಟಿದ್ದಾರೆ ಎಂದು ತಿಳಿದು ಅಚ್ಚರಿಗೊಳಗಾಗಿದ್ದ ಈ ಮಾಲೀಕರು ಸಿಬಿಐ ಅಧಿಕಾರಿಗಳ ಮುಂದೆ, ನಮ್ಮ ಕಂಪನಿ ಹೆಸರಲ್ಲಿ ನಕಲಿ ಖಾತೆ ತೆರೆದಿರುವ ವಿಚಾರವೇ ಗೊತ್ತಿಲ್ಲ ಎಂದು ಹೇಳಿಕೆ ಕೊಟ್ಟಿದ್ದಾರೆ. ಅಲ್ಲದೇ ಸಿಐಡಿ ನೋಟೀಸ್ (CID notice) ಕೊಟ್ಟ ನಂತರವಷ್ಟೇ ಈ ವಿಚಾರ ತಿಳಿದಿರೋದಾಗಿ ಮಾಲೀಕರು ಹೇಳಿಕೊಂಡಿದ್ದಾರೆ.