ಮಂಡ್ಯ : ಮಾ.27: ಐತಿಹಾಸಿಕ ಹಾಗೂ ಪುರಾಣ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಮೇಲುಕೋಟೆಯಲ್ಲಿ ವೈರಮುಡಿ ಬ್ರಹ್ಮೋತ್ಸವ ಆರಂಭವಾಗಿದೆ. 9 ದಿನಗಳ ಕಾಲ ನಡೆಯುವ ಈ ಬ್ರಹ್ಮೋತ್ಸವದಲ್ಲಿ ಏಪ್ರಿಲ್ 1ರಂದು ನಡೆಯುವ ವೈರಮುಡಿ ಉತ್ಸವದಲ್ಲಿ ಈ ಬಾರಿ 4 ಲಕ್ಷ ಜನರು ಸೇರುವ ನಿರೀಕ್ಷೆ ಇದೆ. ಕ್ಷೇತ್ರದ ಆರಾಧ್ಯ ದೈವ ಚೆಲುವನಾರಾಯಣಸ್ವಾಮಿಗೆ ವಜ್ರ ಖಚಿತ ಕಿರೀಟ ಧಾರಣೆ ಕಣ್ತುಂಬಿಕೊಳ್ಳಲು ಭಕ್ತಗಣ ಕಾತರರಾಗಿದ್ದಾರೆ.
ಭೂ ವೈಕುಂಠ ಎಂಬ ಪ್ರಖ್ಯಾತವಾಗಿರುವ ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಮೇಲುಕೋಟೆ ಹಲವು ಪುರಾಣ, ಇತಿಹಾಸಗಳನ್ನು ತನ್ನೊಡಲಲ್ಲಿ ತುಂಬಿಕೊಂಡ ಪ್ರಮುಖ ಧಾರ್ಮಿಕ ಕ್ಷೇತ್ರ ಇದಾಗಿದ್ದು, ಇಲ್ಲಿ ವರ್ಷ ಪೂರ್ತಿ ಉತ್ಸವಗಳು ನೆರವೇರಿದ್ರೂ ಅದ್ರಲ್ಲಿ ಪ್ರಮುಖವಾದುದ್ದು ಅಂದ್ರೆ ವೈರಮುಡಿ ಬ್ರಹ್ಮೋತ್ಸವ. 9 ದಿನ ನಡೆಯುವ ವೈರಮುಡಿ ಬ್ರಹ್ಮೋತ್ಸವ ಇಂದಿನಿಂದ ಆರಂಭವಾಗಿದ್ದು, ಹಿಂದಿನ ವರ್ಷಕ್ಕಿಂತ ಈ ಬಾರಿ ಅದ್ಧೂರಿಯಾಗಿ ಉತ್ಸವ ಆಚರಣೆಗೆ ಮಂಡ್ಯ ಜಿಲ್ಲಾಡಳಿತ ಸಿದ್ಧತೆ ಮಾಡಿಕೊಳ್ಳಲಾಗಿದೆ. ಇಡೀ ಮೇಲುಕೋಟೆಗೆ ಕಲರ್ ಫುಲ್ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ. ಚೆಲುವನಾರಾಯಣಸ್ವಾಮಿ ಸನ್ನಿಧಿ, ರಾಜ ಬೀದಿ, ಉಗ್ರ ನರಸಿಂಹಸ್ವಾಮಿ ಬೆಟ್ಟ, ಕಲ್ಯಾಣಿಗಳು ದೀಪಾಲಂಕಾರದಿಂದ ಕಂಗೊಳಿಸುತ್ತಿವೆ.
ಇನ್ನು ಏಪ್ರಿಲ್ 1ರಂದು ರಾತ್ರಿ ಶ್ರೀದೇವಿ ಭೂದೇವಿ ಸಮೇತವಾಗಿ ಗರುಡಾರೂಢನಾದ ಚೆಲುವನಾರಾಯಣಸ್ವಾಮಿಗೆ ವಜ್ರ ಖಚಿತ ವೈರಮುಡಿ ಕಿರೀಟ ಧಾರಣೆ ಮಾಡಿ ಮೆರವಣಿಗೆ ಮಾಡಲಾಗುವುದು. ಅಂದು ಲಕ್ಷಾಂತರ ಭಕ್ತರು ಆಗಮಿಸಿ ದರ್ಶನ ಪಡೆಯಲಿದ್ದಾರೆ. ಇನ್ನು ಅದಕ್ಕು ಮುನ್ನ ಮಂಡ್ಯದ ಜಿಲ್ಲಾ ಖಜಾನೆಯಲ್ಲಿ ಇರಿಸಿರುವ ಕಿರೀಟವನ್ನು ಅಂದು ಬೆಳಗ್ಗೆ ಜಿಲ್ಲಾಧಿಕಾರಿ ಗೋಪಾಲಕೃಷ್ಣ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್ ಸಮ್ಮುಖದಲ್ಲಿ ಪೂಜೆ ಸಲ್ಲಿಸಿ ಬಳಿಕ ವಿಶೇಷ ಭದ್ರತೆಯೊಂದಿಗೆ ಮೇಲುಕೋಟೆಗೆ ರವಾನಿಸಲಾಗುತ್ತದೆ. ಕಳೆದ ಬಾರಿಯ ಸ್ಥಾನಿಕ ಗಲಾಟೆಯಿಂದ ಎಚ್ಚೆತ್ತಿರುವ ಜಿಲ್ಲಾಡಳಿಯ ಯಾವುದೇ ಅಡಚಣೆಯಾಗದಂತೆ ನೋಡಿಕೊಳ್ಳಲು ತೀರ್ಮಾನಿಸಿದೆ. ಇನ್ನು ಮೇಲುಕೋಟೆಗೆ ಹೋಗುವ ಮಾರ್ಗ ಮಧ್ಯೆ ಸಿಗುವ ಎಲ್ಲಾ ಗ್ರಾಮಗಳಲ್ಲೂ ಜನರು ಪೂಜೆ ಸಲ್ಲಿಸಲು ಅವಕಾಶ ಒದಗಿಸಿದೆ.