ಬೆಂಗಳೂರು : ಕ್ರಿಕೆಟ್ ಆಟದಲ್ಲಿ ತನ್ನ ಬ್ಯಾಟಿಂಗ್ ಶೈಲಿಯ ಮೂಲಕವೇ ಕ್ರೀಡಾಸಕ್ತರ ಮನಗೆದ್ದಿರುವ ಬಿಹಾರದ ಪ್ರತಿಭೆ ವೈಭವ್ ಸೂರ್ಯವಂಶಿಗೆ ಪ್ರತಿಷ್ಠಿತ ಬಾಲ ಪುರಸ್ಕಾರ ಒಲಿದಿದೆ. ನವದೆಹಲಿಯಲ್ಲಿಂದು ನಡೆದ ಕಾರ್ಯಕ್ರಮದಲ್ಲಿ ಬಿಹಾರದ ಪ್ರತಿಭೆ ವೈಭವ್‌ಗೆ(Vaibhav Suryavanshi) ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.

ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು, ಎಲ್ಲರೂ ಕಲೆ ಮತ್ತು ಸಂಸ್ಕೃತಿ, ಪರಿಸರ, ನಾವೀನ್ಯತೆ, ಅಸಾಧಾರಣ ಪ್ರತಿಭೆ ಶೌರ್ಯ, ವಿಜ್ಞಾನ ಮತ್ತು ತಂತ್ರಜ್ಞಾನ, ಸಾಮಾಜಿಕ ಸೇವೆ ಮತ್ತು ಕ್ರೀಡೆಯಂತಹ ವಿವಿಧ ಕ್ಷೇತ್ರಗಳಲ್ಲಿ ತನ್ನ ಪ್ರತಿಭೆಯನ್ನು ಪ್ರದರ್ಶನ ಮಾಡಿದ್ದೀರಿ ಎಂದು ಶ್ಲಾಘಿಸಿದ್ದಾರೆ.

ಈ ಸಮಾಜಕ್ಕೆ ನೀವೆಲ್ಲರೂ ಅಭಿನಂದನೀಯ ಕೆಲಸ ಮಾಡಿದ್ದೀರಿ. ವೈಭವ ಸೂರ್ಯವಂಶಿ ಅತ್ಯಂತ ಸ್ಪರ್ಧಾತ್ಮಕ ಮತ್ತು ಪ್ರತಿಭೆಗಳಿಂದ ತುಂಬಿರುವ ಕ್ರಿಕೆಟ್ ಲೋಕದಲ್ಲಿ ತಮ್ಮ ಹೆಸರು ಗಳಿಸುವ ಮೂಲಕ ಅನೇಕ ದಾಖಲೆಗಳನ್ನು ನಿರ್ಮಿಸಿದ್ದಾರೆ. ಅವರಂತಹ ಧೈರ್ಯಶಾಲಿ ಮತ್ತು ಪ್ರತಿಭಾನ್ವಿತ ಮಕ್ಕಳು ಉತ್ತಮ ಕಾರ್ಯಗಳನ್ನು ಹೀಗೆಯೇ ಮುಂದುವರಿಸುವುದರ ಜೊತೆಗೆ ಭಾರತದ ಭವಿಷ್ಯವನ್ನು ಉಜ್ವಲಗೊಳಿಸುತ್ತಾರೆ ಎಂದು ರಾಷ್ಟ್ರಪತಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಪ್ರಶಸ್ತಿಗಳು ದೇಶದ ಎಲ್ಲಾ ಮಕ್ಕಳಿಗೆ ಸ್ಫೂರ್ತಿ ನೀಡುತ್ತವೆ. ಅವರ ಪ್ರೋತ್ಸಾಹಕ್ಕಾಗಿ ಈ ಪ್ರಶಸ್ತಿಯನ್ನು ಅವರಿಗೆ ನೀಡಲಾಗಿದೆ ಎಂದು ಮುರ್ಮು ತಿಳಿಸಿದ್ದಾರೆ.

14 ವರ್ಷದ ಯುವ ಪ್ರತಿಭೆ ವೈಭವ್ ಸೂರ್ಯವಂಶಿಯ ವಯಸ್ಸಿಗೂ ಹಾಗೂ ಸಾಧನೆಗೂ ಯಾವುದೇ ಸಂಬಂಧವಿಲ್ಲ. ವಯಸ್ಸನ್ನೂ ಮೀರಿದ ಸಾಧನೆಯಾಗಿದ್ದು, ಈ ಹಿಂದಿನ ಐಪಿಎಲ್ ಪಂದ್ಯದಲ್ಲಿ ರಾಜಸ್ತಾನ ತಂಡದ ಪರ ಆಡಿದ್ದ ಪೋರನ ಬ್ಯಾಟಿಂಗ್ ಅಬ್ಬರಕ್ಕೆ ಖುದ್ದು ಪ್ರಧಾನಿ ನರೇಂದ್ರ ಮೋದಿಯೇ ಮನಸೋತಿದ್ದರು. ತನ್ನ ಚೊಚ್ಚಲ ಪಂದ್ಯದಲ್ಲೇ ಸಿಕ್ಸರ್ ಸಿಡಿಸುವ ಮೂಲಕ ಐಪಿಎಲ್‌ಗೆ ಪದಾರ್ಪಣೆ ಮಾಡಿದ್ದ ವೈಭವ್ ಸೂರ್ಯವಂಶಿ 3ನೇ ಪಂದ್ಯದಲ್ಲೇ ಸ್ಫೋಟಕ ಶತಕ ಸಿಡಿಸಿ ಇತಿಹಾಸ ಸೃಷ್ಟಿಸಿದ್ದರು. ಬಳಿಕ ಅವರನ್ನು ಪಾಟ್ನಾದ ವಿಮಾನ ನಿಲ್ದಾಣದಲ್ಲಿ ಭೇಟಿಯಾಗಿ, ಮೋದಿ ಅಭಿನಂದಿಸಿದ್ದರು. “ವೈಭವ್ ಅವರ ಕ್ರಿಕೆಟ್ ಕೌಶಲ್ಯಕ್ಕೆ ದೇಶದೆಲ್ಲೆಡೆ ಮೆಚ್ಚುಗೆ ಸಿಕ್ಕಿದೆ. ಅವರ ಭವಿಷ್ಯದ ಪ್ರಯತ್ನಗಳಿಗೆ ನನ್ನ ಶುಭಾಶಯಗಳು” ಎಂದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದರು.

ಚಿಕ್ಕ ವಯಸ್ಸಿನಲ್ಲಿ ದೊಡ್ಡ ಮಟ್ಟದ ಸಾಧನೆ ಮಾಡಿರುವ ವೈಭವ್ ಇದೀಗ ರಾಷ್ಟ್ರಮಟ್ಟದ ಗಮನ ಸೆಳೆಯುವಂತೆ ಮಾಡಿದ್ದಾನೆ. ಇನ್ನೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗಿಯಾಗಲು ದೆಹಲಿಗೆ ತೆರಳಿರುವ ಕಾರಣಕ್ಕೆ ವಿಜಯ್ ಹಜಾರೆ ಟ್ರೋಫಿಯಲ್ಲಿ ವೈಭವ್ ಅನುಪಸ್ಥಿತಿ ಕಾಣುತ್ತಿದೆ. 2025ರ ಈ ಪ್ರಶಸ್ತಿಗೆ 18 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ 20 ಮಕ್ಕಳನ್ನು ಈ ಗೌರವಕ್ಕೆ ಆಯ್ಕೆ ಮಾಡಲಾಗಿದ್ದು, ವಿಶೇಷವಾಗಿತ್ತು.

ಮುಖ್ಯವಾಗಿ ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರವು ಭಾರತ ಸರ್ಕಾರವು ಧೈರ್ಯ, ಕಲೆ ಮತ್ತು ಸಂಸ್ಕೃತಿ, ಪರಿಸರ, ಸಾಮಾಜಿಕ ಸೇವೆ, ವಿಜ್ಞಾನ ಮತ್ತು ತಂತ್ರಜ್ಞಾನ ಮತ್ತು ಕ್ರೀಡೆಗಳಲ್ಲಿ ಅಸಾಧಾರಣ ಶ್ರೇಷ್ಠತೆಗಾಗಿ ಮಕ್ಕಳಿಗೆ ವಾರ್ಷಿಕವಾಗಿ ನೀಡುವ ಪ್ರತಿಷ್ಠಿತ ರಾಷ್ಟ್ರೀಯ ಗೌರವವಾಗಿದೆ. ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರವು ಭಾರತದ ಅತ್ಯುನ್ನತ ನಾಗರಿಕ ಗೌರವವಾಗಿದ್ದು, ಇದು 5-18 ವರ್ಷ ವಯಸ್ಸಿನ ಮಕ್ಕಳಿಗೆ ನೀಡಲಾಗುತ್ತದೆ.











