ವೈಭವ್ ಸೂರ್ಯವಂಶಿ (Vaibhav Suryavanshi) 14 ವರ್ಷದ ವೈಭವ್ ಸೂರ್ಯವಂಶಿ ಅಂಡರ್-19 ವಿಶ್ವಕಪ್ ಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಕೇವಲ 80 ಎಸೆತಗಳಲ್ಲಿ 175ರನ್‌ಗಳ ಸಿಡಿಲಬ್ಬರದ ಶತಕ ಸಿಡಿಸಿ ವಿಶ್ವ ದಾಖಲೆ ಸೃಷ್ಟಿಸಿದ್ದಾರೆ. ಈ ಮೂಲಕ ಅಂಡರ್-19 ವಿಶ್ವಕಪ್‌ನಲ್ಲಿ ಶತಕ ಬಾರಿಸಿದ ಅತಿ ಕಿರಿಯ ಹಾಗೂ ಎರಡನೇ ಅತಿ ವೇಗದ ಶತಕ ಬಾರಿಸಿದ ಆಟಗಾರನೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅವರ ಪ್ರತಿಭೆ ಕ್ರಿಕೆಟ್ ಲೋಕದಲ್ಲಿ ಸಂಚಲನ ಮೂಡಿಸಿದೆ.

ವೈಭವ್ ಸೂರ್ಯವಂಶಿಯ ಪ್ರತಿಭೆ ಸಾಗರದಷ್ಟು ಆಳವಾಗಿದೆ ಎಂಬುದನ್ನು ಸಾಭೀತುಪಡಿಸಿದ್ದಾರೆ. ಕಳೆದ ಐಪಿಎಲ್ನಲ್ಲಿ ಘಟಾನುಘಟಿ ಬೌಲರ್ಗಳನ್ನೇ ಬೆಂಡೆತ್ತಿ ಸ್ಫೋಟಕ ಶತಕ ಸಿಡಿಸಿ ಕ್ರಿಕೆಟ್ ಲೋಕದಲ್ಲಿ ಸಂಚಲನ ಮೂಡಿಸಿದ್ದ ವೈಭವ್ ಸೂರ್ಯವಂಶಿ ಈಗ ಅಂಡರ್ 19 ವಿಶ್ವಕಪ್‌ನಲ್ಲಿ ಅಬ್ಬರದ ಶತಕ ಸಿಡಿಸಿ ದಾಖಲೆ ಸೃಷ್ಟಿಸಿದ್ದಾರೆ. ಇಂಗ್ಲೆಂಡ್ ವಿರುದ್ಧದ 19 ವರ್ಷದೊಳಗಿನವರ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ 55 ಎಸೆತಗಳಲ್ಲಿ ಈ ಟೂರ್ನಿಯ ಚೊಚ್ಚಲ ಶತಕ ಸಿಡಿಸಿ ಮಿಂಚಿದ್ದಾರೆ.

ಈ ಮೂಲಕ ಅಂಡರ್ 19 ವಿಶ್ವಕಪ್‌ನಲ್ಲಿ ಶತಕ ಬಾರಿಸಿದ ಅತಿ ಕಿರಿಯ ಹಾಗೂ ಎರಡನೇ ಅತಿ ವೇಗದ ಶತಕ ಬಾರಿಸಿದ ಆಟಗಾರನೆಂಬ ವಿಶ್ವದಾಖಲೆ ಸೃಷ್ಟಿಸಿದ್ದಾರೆ. ಕಳೆದ ಪಂದ್ಯದಲ್ಲಿ ಗೆಲುವಿನ ಶತಕ ಬಾರಿಸಿದ್ದ ಆರಂಭಿಕ ಆರನ್ ಜಾರ್ಜ್ ಈ ಪಂದ್ಯದಲ್ಲಿ ಕೇವಲ 9 ರನ್‌ಗಳಿಗೆ ಔಟಾದ ಬಳಿಕ ಜೊತೆಯಾದ ವೈಭವ್ ಸೂರ್ಯವಂಶಿ ಮತ್ತು ಆಯುಷ್ ಮ್ಹಾತ್ರೆ ಇಂಗ್ಲೆಂಡ್ ಬೌಲರ್‌ಗಳ ಬೆವರಿಳಿಸಿದರು.

ಎಂದಿನಂತೆ ಬೌಂಡರಿ ಸಿಕ್ಸರ್ಗಳ ಮೂಲಕ ಸೂರ್ಯವಂಶಿ 32 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಅರ್ಧಶತಕದ ಬಳಿಕ ಮತ್ತಷ್ಟು ಕೆರಳಿದ ವೈಭವ್ ಮುಂದಿನ 23 ಎಸೆತಗಳಲ್ಲಿ ಶತಕದ ಗಡಿ ದಾಟಿದರು. ಕೇವಲ 55 ಎಸೆತಗಳಲ್ಲಿ ಶತಕ ಸಿಡಿಸಿದರು. ಈ ಶತಕದ ಇನ್ನಿಂಗ್ಸ್ನಲ್ಲಿ ವೈಭವ್ ಕೇವಲ ಸಿಕ್ಸರ್ ಮತ್ತು ಬೌಂಡರಿಗಳಿಂದಲೇ 80 ರನ್ ಕಲೆಹಾಕಿದರು. ಶತಕದ ಬಳಿಕವೂ ಸ್ಫೋಟಕ ಆಟ ಮುಂದುವರೆಸಿದ ಸೂರ್ಯವಂಶಿ 80 ಎಸೆತಗಳಲ್ಲಿ 175 ರನ್ಗಳನ್ನು ಕಲೆಹಾಕಿ ವಿಕೆಟ್ ಕೀಪರ್ಗೆ ಕ್ಯಾಚಿತ್ತು ವಿಕೆಟ್ ಒಪ್ಪಿಸಿದರು. ತಮ್ಮ ಇನ್ನಿಂಗ್ಸ್ನಲ್ಲಿ ವೈಭವ್ 15 ಬೌಂಡರಿ ಹಾಗೂ 15 ಸಿಕ್ಸರ್ ಕೂಡ ಬಾರಿಸಿದ್ದರು.






