ಕೊರೋನಾದಿಂದ ಪಾರಾಗಲಿರುವ ಏಕೈಕ ಅಸ್ತ್ರ ಲಸಿಕೆ ಮಾತ್ರ. ಆರಂಭದಲ್ಲಿ ಲಸಿಕೆ ಸಿಗದೆ ಕೊರೋನಾ ಹೊಡೆತಕ್ಕೆ ಉರುಳಿದ ಜೀವಗಳು ಒಂದಲ್ಲಾ ಎರಡಲ್ಲಾ. ಇದೀಗ ಅಂಥಾ ಜೀವ ರಕ್ಷಕ ಲಸಿಕೆ ವ್ಯರ್ಥವಾಗುತ್ತೆ ಎನ್ನುವ ಭೀತಿ ಎದುರಾಗಿದೆ. ನಗರದ ಖಾಸಗಿ ಆಸ್ಪತ್ರೆಗಳಲ್ಲಿ ದಾಸ್ತಾನಾಗಿರುವ ಲಕ್ಷಕ್ಕೂ ಅಧಿಕ ಲಸಿಕೆ ಬಳಕೆಯಾಗದೆ ಹಾಗೇ ಉಳಿದಿದೆ.
ಕೊರೋನಾ ಗಾರ್ಡ್ ವ್ಯಾಕ್ಸಿನ್ ವೇಸ್ಟ್ ಆಗುವ ಹಂತಕ್ಕೆ !
ಜೂನ್ 26 ರಿಂದ ಕೇಂದ್ರ ಸರ್ಕಾರ ಎಲ್ಲರಿಗೂ ಉಚಿತ ಲಸಿಕೆ ಎಂದು ಘೋಷಣೆ ಮಾಡಿತ್ತು. ಹೀಗಾಗಿ ಸರ್ಕಾರ ದೊಡ್ಡ ಮಟ್ಟದಲ್ಲಿ ಲಸಿಕೆ ಹಂಚಿಕೆ ಮಾಡಲು ಶುರುಮಾಡಿಕೊಂಡಿತ್ತು. ಉಚಿತವಾಗಿ ಲಸಿಕೆ ದೊರೆಯುತ್ತಿರುವ ಕಾರಣ ಖಾಸಗಿ ಆಸ್ಪತ್ರೆಯತ್ತ ಮುಖ ಮಾಡುವುದನ್ನು ಜನರು ನಿಲ್ಲಿಸಿದ್ದರು. ಉಚಿತ ಲಸಿಕೆ ಇರುವಾಗ ಯಾರು ತಾನೆ ಹಣ ಕೊಟ್ಟು ಲಸಿಕೆ ಹಾಕಿಸುತ್ತಾರೆ? ಇದೇ ಕಾರಣಕ್ಕೆ ಈಗ ಲಕ್ಷ ಲಕ್ಷ ಡೋಸ್ ಲಸಿಕೆ ಪೋಲಾಗುವ ಆತಂಕ ಎದುರಾಗಿದೆ. ಎರಡನೇ ಅಲೆ ವೇಳೆ ಲಸಿಕೆಗೆ ಭರ್ಜರಿ ಬೇಡಿಕೆ ಬಂದಿತ್ತು. ಹೀಗಾಗಿ ಖಾಸಗಿ ಆಸ್ಪತ್ರೆಗಳು ಲಕ್ಷಲಕ್ಷ ಪ್ರಮಾಣದಲ್ಲಿ ಲಸಿಕೆ ಖರೀದಿಸಿ ಶೇಖರಣೆ ಮಾಡಿಕೊಂಡಿತ್ತು. ಆದರೆ ಸರ್ಕಾರ ಉಚಿತ ಲಸಿಕೆ ಎಂದ ಬಳಿಕ ಖಾಸಗಿ ಆಸ್ಪತ್ರೆಗಳತ್ತ ಜನ ನಡೆಯಲಿಲ್ಲ. ಹೀಗಾಗಿ ಲಕ್ಷಾಂತರ ಡೋಸ್ ವ್ಯರ್ಥಗೊಳ್ಳುವ ಆತಂಕದಲ್ಲಿ ಖಾಸಗಿ ಆಸ್ಪತ್ರೆಗಳಿವೆ.
ನೆವೆಂಬರ್ ತಿಂಗಳ ವರೆಗಷ್ಟೇ ಲಸಿಕೆಯ ಅವಧಿ ಇರುವುದು.. ಅದಾದ ಬಳಿಕ ಈ ಲಸಿಕೆ ವೇಸ್ಟ್ !
ಸಿಲಿಕಾನ್ ಸಿಟಿ ಬೆಂಗಳೂರಲ್ಲಿರುವ ಖಾಸಗಿ ಆಸ್ಪತ್ರೆಗಳಲ್ಲಿ ಸದ್ಯಕ್ಕೆ 5 ಲಕ್ಷ ಡೋಸ್ ಲಸಿಕೆ ದಾಸ್ತಾನಾಗಿದೆಯಂತೆ. ಕೊಳ್ಳಲು ಜನರಿಲ್ಲದೆ ಆ ಲಸಿಕೆಗಳೆಲ್ಲಾ ಹಾಗೆ ಉಳಿದಿದೆ. ಅದು ಬೇರೆ ಅದರ ವ್ಯಾಲಿಡಿಟಿ ಮುಗಿಯುವ ಹಂತದಲ್ಲಿದೆ. ನವೆಂಬರ್ ಒಳಗೆ ಈ ಲಸಿಕೆ ಬಳಸದೆ ಹೋದರೆ ನಂತರ ಬಳಸಲು ಯೋಗ್ಯವಲ್ಲ. ಹೀಗಾಗಿ ಖಾಸಗಿ ಆಸ್ಪತ್ರೆಗಳಲ್ಲಿ ದಾಸ್ತಾನಿರುವ ಲಕ್ಷಾಂತರ ಡೋಸ್ ಕೋವಿಡ್ ಲಸಿಕೆ ವ್ಯರ್ಥವಾಗುವ ಆತಂಕವಿದೆ. ಕೊರೋನಾದಿಂದ ತಪ್ಪಿಸಿಕೊಳ್ಳಲು ಇರೋ ಏಕೈಕ ಮಾರ್ಗ ಲಸಿಕೆ ಮಾತ್ರ. ಅಂಥಾ ಲಸಿಕೆಯೇ ಈಗ ವೇಸ್ಟ್ ಆಗುವ ಹಂತದಲ್ಲಿದೆ. ಇದರ ಬಗ್ಗೆ ಗಮನಹರಿಸುವಂತೆ ಖಾಸಗಿ ಆಸ್ಪತ್ರೆಗಳ ಒಕ್ಕೂಟ ಫನಾ ಮನವಿಮಾಡಿಕೊಳ್ಳುತ್ತಿದೆ.
ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆಗೆ ಬೇಡಿಕೆಯೇ ಇಲ್ಲ.. ಹೀಗಾಗಿ ಪೋಲಾಗಲಿದೆ ಲಸಿಕೆ !
ಸರ್ಕಾರಿ ಆಸ್ಪತ್ರೆಗಳು, ಆರೋಗ್ಯ ಕೇಂದ್ರಗಳು ಹಾಗೂ ಸರ್ಕಾರದಿಂದ ಬೃಹತ್ ಮೇಳಗಳಲ್ಲಿ ಉಚಿತವಾಗಿ ಲಸಿಕೆ ನೀಡಲಾಗುತ್ತಿದೆ. ಹೀಗಾಗಿ ನಗರದ ಖಾಸಗಿ ಆಸ್ಪತ್ರೆಯಲ್ಲಿ 5 ಲಕ್ಷಡೋಸ್ ಲಸಿಕೆ ದಾಸ್ತಾನಾಗಿದೆ. ಈ ಪೈಕಿ 1.5 ಲಕ್ಷ ಡೋಸ್ ಕೋವ್ಯಾಕ್ಸಿನ್ ಹಾಗೂ ಉಳಿದವು ಕೋವಿಶೀಲ್ಡ್ ಲಸಿಕೆಗಳು. ನವೆಂಬರ್ ಅಂತ್ಯದ ವರೆಗೆ ಮಾತ್ರ ಈ ಲಸಿಕೆಗಳು ಬಳಕೆಗೆ ಯೋಗ್ಯವಾಗಿದ್ದು, ಆದಾದ ಬಳಿಕ ಇದರ ವ್ಯಾಲಿಡಿಟಿ ಮುಗಿಯಲಿದೆ. ಇದರಿಂದಾಗಿ ಲಸಿಕೆ ದಾಸ್ತಾನು ಮಾಡಿಕೊಂಡಿರುವ ಆಸ್ಪತ್ರೆಗಳು ನಷ್ಟದ ಸುಳಿಯಲ್ಲಿದೆ.
ಲಸಿಕೆಯ ವ್ಯರ್ಥ ತಪ್ಪಿಸಲು ಖಾಸಗಿ ಆಸ್ಪತ್ರೆಗಳ ವಾದ ಏನು ?
– ಲಸಿಕಾ ಉತ್ಪಾದನಾ ಕಂಪನಿಗಳು ಲಸಿಕೆಯನ್ನ ವಾಪಸ್ಸು ಪಡೆದು ಸರ್ಕಾರಕ್ಕೆ ನೀಡಬೇಕು
– ಸ್ವಯಂ ಸೇವಾ ಸಂಘಗಳು ಸರ್ಕಾರದ ಮೂಲಕ ಲಸಿಕೆ ಕೊಳ್ಳುವ ಬದಲು ಖಾಸಗಿ ಕಂಪನಿಗಳಿಂದ ಕೊಳ್ಳಲಿ
– ಸಮಯ ಕಡಿಮೆ ಇರುವುದರಿಂದ ಸರ್ಕಾರ ಕ್ರಮ ತೆಗೆದುಕೊಂಡು ವ್ಯಾಕ್ಸಿನ್ ವ್ಯರ್ಥವಾಗದಂತೆ ನೋಡಿಕೊಳಬೇಕು ಎನ್ನುವುದು ಖಾಸಗಿ ಆಸ್ಪತ್ರೆಗಳ ವಾದ
– ಸರ್ವೀಸ್ ಚಾರ್ಜ್ ಖಾಸಗಿ ಆಸ್ಪತ್ರೆಗೆ ಕೊಟ್ಟು ಉಚಿತ ಲಸಿಕೆಯನ್ನು ಖಾಸಗಿ ಆಸ್ಪತ್ರೆಯಲ್ಲೂ ಮಾಡುವುದು
ಲಸಿಕೆ ಜೀವ ಸಂಜೀವಿನಿ. ಅದು ಪೋಲಾಗಬಾರದು. ಆದರೆ ಖಾಸಗಿ ಆಸ್ಪತ್ರೆಗಳ ಅತಿಯಾಸೆ ಈಗ ಜೀವ ರಕ್ಷಕ ಲಸಿಕೆಗಳು ವ್ಯರ್ಥವಾಗುವ ಹಂತಕ್ಕೆ ತಂದು ನಿಲ್ಲಿಸಿದೆ. ಅದೇನೆ ಇದ್ದರೂ ಸರ್ಕಾರ ಹಾಗೂ ಬಿಬಿಎಂಪಿ ಇದಕ್ಕೊಂದು ಪರ್ಯಾಯ ದಾರಿ ಹುಡುಕಿಕೊಂಡು ಲಸಿಕೆ ಪೋಲಾಗುವುದನ್ನು ಆದಷ್ಟು ತಡೆಯಬೇಕಿದೆ. ಈ ಬಗ್ಗೆ ಸಂಬಂಧಪಟ್ಟವರು ಶೀಘ್ರವೇ ಗಮನ ಹರಿಸಲಿ ಎನ್ನುವುದೇ ನಮ್ಮ ಆಶಯ.