ಬಿಜೆಪಿ ರಾಜ್ಯಾಧ್ಯಕ್ಷ ಆಯ್ಕೆ ಬೆನ್ನಲ್ಲೇ ಬಿಜೆಪಿಯಲ್ಲಿ ಒಳಜಗಳ ಭುಗಿಲೆದ್ದಿದೆ. ಮಾಜಿ ಸಚಿವ ವಿ ಸೋಮಣ್ಣ, ಅಮಿತ್ ಶಾ ನನ್ನ ಮನೆಯಲ್ಲಿ ಕೂತು ನನ್ನ ಜೀವ ತೆಗೆದರು ಎಂದು ಹೇಳುವ ಮೂಲಕ ಬೇಸರ ವ್ಯಕ್ತಪಡಿಸಿದ್ದಾರೆ.
ತುಮಕೂರು ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಸಿದ್ದಲಿಂಗ ಸ್ವಾಮೀಜಿಯವರ ಬಳಿ ತಮ್ಮ ನೋವು ಹಂಚಿಕೊಂಡಿರುವ ಅವರು, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಎರಡು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುವ ಒತ್ತಡವತ್ತು. ಇದರಿಂದ ನಾನು ನನ್ನ ಕ್ಷೇತ್ರವನ್ನು ಕಳೆದುಕೊಂಡೆ ಜೊರೆಗೆ ಅಧಿಕಾರವು ಕಳೆದುಕೊಂಡೆ ಎಂದು ಹೇಳಿಕೊಂಡಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ.
ಇಲ್ಲಿ ಬಿಟ್ಟು ಅಲ್ಲಿಗೆ ಹೋಗಿ ಸ್ಪರ್ಧೆ ಮಾಡಿದ್ದೇ ನನ್ನ ದೊಡ್ಡ ಮಹಾ ಅಪರಾಧ. ಆಗೊಲ್ಲ ಅಂತ ಹೇಳಿದ್ದೆ. ಆದರೆ ಅಮಿತ್ ಶಾ ಬಂದು ಮನೆಯಲ್ಲಿ ಕುಂತುಕೊಂಡು ಜೀವ ತೆಗೆದರು. ಏನ್ಮಾಡ್ಲಿ? ಎಂದು ಬೇಸರ ತೋಡಿಕೊಂಡಿದ್ದಾರೆ.
ಇದರ ಬಳಿಕ ಪ್ರಧಾನಿ ನರೇಂದ್ರ ಮೋದಿ ಕೂಡ ದೆಹಲಿಗೆ ಕರೆಸಿಕೊಂಡಿದ್ದರು. ನನ್ನನ್ನು ನಾಲ್ಕು ದಿನ ಅಲ್ಲಿಯೇ ಇರಿಸಿಕೊಂಡು ನೀನು ಎರಡೂ ಕಡೆ ನಿಂತುಕೊ ಅಂದಿದ್ದರು ನಾನು ಆಗಲ್ಲ ಅಂದರೂ ನನ್ನನ್ನು ಬಲವಂತವಾಗಿ ನಿಲ್ಲಿಸಿದರು ಎಂದು ಸ್ವಾಮಿಗಳ ಬಳಿ ಬೇಸರ ವ್ಯಕ್ತಪಡಿಸಿದ್ದಾರೆ.
ಸುದ್ದಿವಾಹಿನಿಗಳ ಜೊತೆ, ಸಿದ್ದಗಂಗಾ ಮಠಕ್ಕೆ ಬರಲು ಇದು ಭೇಟಿಯಲ್ಲ. ನಾನು ಶ್ರೀ ಮಠದ ಒಬ್ಬ ಭಕ್ತ. ನನಗೂ ದೊಡ್ಡ ಗುರುಗಳಿಗೂ ಅವಿನಾಭಾವ ಸಂಬಂಧವಿದೆ. 10ರೊಳಗೆ ದೆಹಲಿಗೆ ಹೋಗಿ ನಮ್ಮ ಭಾವನೆ ವ್ಯಕ್ತಪಡಿಸುತ್ತೇವೆ. ಬಸನಗೌಡ ಪಾಟೀಲ ಯತ್ನಾಳ, ಅರವಿಂದ ಲಿಂಬಾವಳಿ, ಅರವಿಂದ ಬೆಲ್ಲದ, ರಮೇಶ್ ಜಾರಕಿಹೊಳಿ ಸೇರಿದಂತೆ ಐದಾರು ಜನ ನಾಯಕರು ಸೇರಿ ಹೈಕಮಾಂಡ್‌ಗೆ ನಮ್ಮ ನೋವು ಹೇಳುತ್ತೇವೆ. ನಾವು ಹಿರಿಯರು ನಮ್ಮದೇ ಆದ ಅನುಭವ, ಸೇವೆ ಇದೆ, ಆಲೋಚನೆ ಇದೆ. ಅದನ್ನೆಲ್ಲ ಹೈ ಕಮಾಂಡ್ ಮುಂದೆ ಹೇಳ್ತಿವಿ ಎಂದು ಹೇಳಿದ್ದಾರೆ.