ಪಂಚರಾಜ್ಯಗಳ ಚುನಾವಣೆಗಳ ಮೇಲೆ ದೇಶದ ಜನತೆ ಕಣ್ಣಿಟ್ಟಿದ್ದಾರೆ. ಅದರಲ್ಲಿ ಮುಖ್ಯವಾಗಿ ಉತ್ತರಪ್ರದೇಶ ಎಲ್ಲರ ಗಮನ ಸೆಳೆದಿದೆ. ರಾಜಕೀಯ ಪಂಡಿತರ ಲೆಕ್ಕಾಚಾರದ ಪ್ರಕಾರ ಉತ್ತರ ಪ್ರದೇಶದಲ್ಲಿ ಯಾವ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯುತ್ತದೆಯೋ ಆ ಪಕ್ಷ ದೇಶದ ಆಡಳಿತ ನಡೆಸುತ್ತದೆ ಎಂಬುದು. ಅದಕ್ಕೆ ಪೂರಕ ಎಂಬಂತೆ ರಾಷ್ಟ್ರೀಯ ಹಾಗೂ ಪ್ರಾದೇಶಿಕ ಪಕ್ಷಗಳು ಅಧಿಕಾರ ಹಿಡಿಯುವ ಮಹಾದಾಸೆ ಹೊಂದಿವೆ.
2017ರಲ್ಲಿ ನಡೆದ ಉತ್ತರಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅಲೆ, ಯಾದವೇತರ ಓಬಿಸಿ ಮತಗಳ ಕ್ರೋಢಿಕರಣ, ದಲಿತ, ಸಾಂಪ್ರದಾಯಿಕ ಮೇಲ್ಜಾತಿ ಮತ ಮತ್ತು ಮುಸ್ಲಿಂ ಮತಗಳ ವಿಭಜನೆಯಿಂದಾಗಿ 2017ರಲ್ಲಿ ಶೇ.40ರಷ್ಟು ಮತ ಪಡೆದು 312 ಸ್ಥಾನಗಳನ್ನು ಗೆಲ್ಲುವ ಮೂಲಕ ಎರಡು ದಶಕಗಳ ಕಾಲ ಯಾವುದೇ ಪಕ್ಷ ಮಾಡದ ಸಾಧನೆಯನ್ನು ಬಿಜೆಪಿ ಮಾಡಿ ಅಧಿಕಾರಕ್ಕೆ ಹಿಡಿಯಿತು.
2019 ರಲ್ಲೂ ಸಹ ಇದು ಬಿಜೆಪಿಗೆ ಹೆಚ್ಚು ಲಾಭವಾಗುತ್ತಲೇ ಹೋಯಿತ್ತು. ಲೋಕಸಭೆ ಚುನಾವಣೆಯಲ್ಲಿ ಶೇ.50ರಷ್ಟು ಮತಗಳನ್ನ ಪಡೆಯಿತು. ಆದರೆ, ಬಿಜೆಪಿ ವಿರುದ್ದ ತೊಡೆ ತಟ್ಟಿದ ಎಸ್ಪಿ ಹಾಗೂ ಬಿಎಸ್ಪಿ ಮೈತ್ರಿ ಶೇ.38ರಷ್ಟು ಮತಗಳಿಗೆ ತೃಪ್ತರಾದವು. ಆದರೆ, ಲೋಕಸಭೆ ಚುನಾವಣೆ ಸಮಯದಲ್ಲಿ ಇದ್ದ ಚಿತ್ರಣ ಈಗಿಲ್ಲ. ಏಕೆಂದರೆ ಈ ಭಾರೀ ಎಲ್ಲಾ ಪಕ್ಷಗಳು ಪ್ರತ್ಯೇಕವಾಗಿ ಸ್ಪರ್ಧಿಸುತ್ತಿವೆ. ಸಾಮಾಜಿಕ ನ್ಯಾಯದ ಪರಿಕಲ್ಪನೆಯೊಂದಿಗೆ ಎಸ್ಪಿ ಮೈತ್ರಿಕೂಟವನ್ನ ರಚಿಸಿದ್ದರೆ ಇತ್ತ ಬಿಎಸ್ಪಿ ತಾನೂ ಏಕಾಂಗಿಯಾಗಿ ಸ್ಪರ್ಧಿಸಿ ಸ್ವಂತ ಬಲದ ಮೇಲೆ ಅಧಿಕಾರ ಹಿಡಿಯುವುದಾಗಿ ಹೇಳಿದೆ.
ಈಗಾಗಲೇ ಉತ್ತರಪ್ರದೇಶದಲ್ಲಿ ಚುನಾವಣಾ ರಾಜಕೀಯ ಜೋರಾಗಿದ್ದು ಪಕ್ಷಾಂತರ ಪರ್ವಕ್ಕೂ ಸಹ ಮುನ್ನುಡಿ ಬರೆದಿದೆ. ಅದರಂತೆಯೆ ಚುನಾವಣೆ ಘೋಷಣೆಯಾದ ನಂತರ ಕಳೆದ ಒಂದು ವಾರದ ಅವಧಿಯಲ್ಲಿ ಬಿಜೆಪಿಯಲ್ಲಿನ ಪ್ರಭಾವಿ ಹಿಂದುಳಿದ ವರ್ಗಗಳ ನಾಯಕರು ಎಸ್ಪಿ ಮತ್ತು ಅದರ ಮಿತ್ರಪಕ್ಷಗಳಿಗೆ ಸೇರಿದ್ದಾರೆ. ಆದರೆ, ಬಿಜೆಪಿ ನಾಯಕರೂ ಹೇಳುವ ಪ್ರಕಾರ ಇವರುಗಳು ಯಾರೂ ಸಹ ಹಿಂದುಳಿದವರಿಗೆ ಶ್ರಮಿಸುವವರಲ್ಲ. ದೇಶದಲ್ಲಿ ಯಾರಾದರೂ ಹಿಂದುಳಿದವರ ಪರ ಕಾಳಜಿ ವಹಿಸಿದರೆ ಅದು ಪ್ರಧಾನಿ ನರೇಂದ್ರ ಮೋದಿ ಮಾತ್ರ ಅಂತ ಹೇಳುತ್ತಾರೆ. ಆದರೆ, ಎಸ್ಪಿ ನಾಯಕರ ಲೆಕ್ಕಾಚಾರ ಒಂದು ವೇಳೆ ತಪ್ಪದಿದ್ದರೆ 300ಕ್ಕಿಂತ ಅಧಿಕ ಸ್ಥಾನಗಳಲ್ಲಿ ಜಯಗಳಿಸುತ್ತಾರೆ ಎಂದು ಹೇಳಲಾಗುತ್ತಿದೆ.
ಯುಪಿ ಜಾತಿ ಸಮೀಕರಣ
ಮೊದಲಿಗೆ ಉತ್ತರಪ್ರದೇಶದ ಜಾತಿ ಲೆಕ್ಕಾಚಾರವನ್ನ ನೋಡೋಣ. ರಾಷ್ಟ್ರೀಯ ಹಾಗೂ ಪ್ರಾದೇಶಿಕ ಪಕ್ಷಗಳು ಮೌಲ್ಯಮಾಪನ ಮಾಡಿದ ಪ್ರಕಾರ 25-27% ಮೇಲ್ಜಾತಿ (07% ಬ್ರಾಹ್ಮಣ ಹಾಗೂ 10% ಠಾಕೂರರು) ಜನರಿದ್ದಾರೆ. 39-40% ಓಬಿಸಿ, 20% ಎಸ್ಸಿ-ಎಸ್ಟಿಗಳು ಹಾಗೂ 16-19% ಮುಸ್ಲಿಮರು. ಕಳೆದ ಹಲವು ವರ್ಷಗಳಿಂದ ಜಾತಿ ಗಣತಿ ನಡೆದಿಲ್ಲದ ಕಾರಣ ಯಾವುದೇ ಜಾತಿಯ ನಿರ್ದಿಷ್ಟ ಶೇಕಡಾವಾರು ತಿಳಿದು ಬಂದಿಲ್ಲ.
ಯುಪಿಯಲ್ಲಿ ಪ್ರಮುಖವಾಗಿ ಚುನಾವಣೆ ಸಮಯದಲ್ಲಿ ಐದು ಜಾತಿಯ ಪ್ರಮುಖ ಗುಂಪುಗಳಿವೆ. ಮೇಲ್ಜಾತಿ, ಯಾದವರು, ಯಾದವೇತರ ಹಿಂದುಳೀದ ವರ್ಗ, ಮುಸ್ಲಿಮರು ಹಾಗೂ ಜಾಟರ ಮತಗಳು ಪ್ರತಿ ಚುನಾವಣೆಯಲ್ಲು ಸಹ ಪ್ರಮುಖವೆನ್ನಿಸಿವೆ. ಹೀಗಾಗಿ ಪ್ರತಿ ಚುನಾವಣೆಯಲ್ಲೂ ಸಹ ಜಾತಿ ರಾಜಕಾರಣ ಉತ್ತರಪ್ರದೇಶದ ರಾಜಕೀಯದಲ್ಲಿ ಟ್ರಂಪ್ ಕಾರ್ಡ್ ಆಗಿ ಹೊರಹೊಮ್ಮಿದೆ. ಈ ಹಿಂದೆ ಅಧಿಕಾರ ಅನುಭವಿಸಿದ್ದ ಎಸ್ಪಿ ಹಾಗೂ ಬಿಎಸ್ಪಿ ಯಾದವ ಹಾಗೂ ಓಬಿಸಿ, ಯಾದವ ಹಾಗೂ ಜಾತವರ ಮತಗಳು ಸರಿಯಾಗಿ ಸಂಯೋಜಿಸಿದರ ಕಾರಣ ಈ ಎರಡು ಪಕ್ಷಗಳೆ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಹಾಗೂ ಬಿಜೆಪಿಯನ್ನು ಮೂಲೆಗುಂಪು ಮಾಡಿದ್ದವು.
ಬದಲಾದ ಸನ್ನಿವೇಶದಲ್ಲಿ…
2014ರಲ್ಲಿ ಮೋದಿ ನೇತೃತ್ವದ ಬಿಜೆಪಿಯು ಕೇಂದ್ರದಲ್ಲಿ ಸರ್ಕಾರ ರಚಿಸಿದ ನಂತರ ದೇಶಾದ್ಯಂತ ಮೋದಿ ಅಲೆ ಶುರುವಾಯಿತು. ಅದು ಎಷ್ಟರ ಮಟ್ಟಿಗೆ ಅಂದರೆ ದೇಶದಲ್ಲಿ ಯಾವುದೇ ವಿಧಾನಸಭೆ ಚುನಾವಣೆ ನಡೆಯಲಿ ಅದರಲ್ಲಿ ಮೋದಿ ಮ್ಯಾಜಿಕ್ ಇದ್ದೇ ಇರುತಿತ್ತು. ಬಿಜೆಪಿ 2017ರಲ್ಲಿ ಜಾತವೇತರ ಹಾಗೂ ಯಾದವೇತರ ಓಬಿಸಿ ಮತಗಳನ್ನು ತನ್ನ ಪರವಾಗಿ ಕ್ರೋಢೀಕರಿಸಿತ್ತು ಮತ್ತು ಆಗ ತಾನೇ ಹೊಸದಾಗಿ ಬಂದಿದ್ದ ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ವಿವಿಧ ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ಬಿಜೆಪಿ ಹಾಗೂ ಸಂಘ ಪರಿವಾರಕರು ಯಶಸ್ವಿಯಾದರು.
ಎರಡನೇಯದಾಗಿ ಎಸ್ಪಿ ಹಾಗೂ ಬಿಎಸ್ಪಿ ಆಡಳಿತವಾಧಿಯಲ್ಲಿ ಯಾವೆಲ್ಲ ಸಮುದಾಯಗಳು ನಿರ್ಲಕ್ಷ್ಯಕ್ಕೆ ಒಳಗಾಗಿದ್ದವೋ ಅಂತಹ ಸಮುದಾಯಗಳ ಮೇಲೆ ಬಿಜೆಪಿ ದೃಷ್ಟಿ ನೆಟ್ಟಿದ್ದು 2017ರಲ್ಲಿ ಜಯಭೇರಿ ಭಾರಿಸಲು ಕಾರಣವಾಯಿತು.
ಮೂರನೇಯದಾಗಿ ರಾಜನಾಥ ಸಿಂಗ್ (ಠಾಕೂರ್), ಕಲ್ರಾಜ್ ಮಿಶ್ರಾ (ಬ್ರಾಹ್ಮಣ), ಕೇಶವ್ ಪ್ರಸಾದ ಮೌರ್ಯ (ಯಾದವೇತರ ಒಬಿಸಿ), ಉಮಾಭಾರತಿ (ಯಾದವೇತರ ಓಬಿಸಿ) ನಾಯಕರನ್ನು ಪಕ್ಷ ಸಂಘಟನೆಗೆ ಹೆಚ್ಚಾಗಿ ಬಳಸಿಕೊಂಡಿತ್ತು. ಇದೇ ವೇಳೆ ಬಿಎಸ್ಪಿಯ ಪ್ರಮುಖ ಪ್ರಭಾವಿ ನಾಯಕರೆಂದೆ ಗುರುತಿಸಿಕೊಂಡಿದ್ದ ರಿಟಾ ಬಹುಗುಣ ಜೋಷಿ, ಸ್ವಾಮಿ ಪ್ರಸಾದ್ ಮೌರ್ಯ, ಅಪ್ನಾದಳದ ಅನುಪ್ರಿಯ ಪಟೇಲ್ ಎಲ್ಲರೂ ಬಿಜೆಪಿಯೊಂದಿಗೆ ಗುರುತಿಸಿಕೊಂಡಿದ್ದರಿಂದ ಬಿಜೆಪಿಗೆ ಜಾತಿ ಸಮೀಕರಣಲ್ಲಿ ಲಾಭವಾಯಿತ್ತು.
ಆದರೆ, ಕಳೆದ ಚುನಾವಣೆಯಲ್ಲಿ ಬಿಜೆಪಿ ಶೇ.60ಕ್ಕಿಂತ ಹೆಚ್ಚು ಮತಗಳನ್ನು ಗುರಿಯಾಗಿಸಿದೆ. ಬ್ರಾಹ್ಮಣ(10%), ಠಾಕೂರ್(12%), ಯಾದವೇತರ ಓಬಿಸಿ(33%) ಹಾಗೂ ಜಾತವೇತರ (7-10%) ದಲಿತ ಮತಗಳು. 2017ರಲ್ಲಿ ಬಿಜೆಪಿ ಪ್ರಮುಖವಾಗಿ ಈ ಮೂರು ಪ್ರಬಲ ಜಾತಿ ಮತಗಳನ್ನು ಸೆಳೆದ ಕಾರಣ ಅಧಿಕಾರಕ್ಕೇರಿತ್ತು.
ಮತ್ತೊಂದೆಡೆ ಮುಸ್ಲಿಮರ ಮತಗಳು ವಿಭಜನೆಗೊಂಡವು. ಪಶ್ಚಿಮ ಯುಪಿಯಲ್ಲಿ ಎಸ್ಪಿ-ಕಾಂಗ್ರೆಸ್ ಮೈತ್ರಿಗೆ ಮತ ನೀಡಿದರೆ ರಾಜ್ಯದ ಇತರೆ ಭಾಗಗಳಲ್ಲಿ ಬಿಎಸ್ಪಿಗೆ ಮತ ನೀಡಿದ್ದಾರೆ. ಇದು ಬಿಜೆಪಿಗೆ 2019ರ ಲೋಕಸಭೆ ಚುನಾವಣೆ ವೇಳೆ ಶೇ.50ರಷ್ಟು ಮತಗಳನ್ನು ಪಡೆಯುವುದಕ್ಕೆ ಸಹಕಾರಿಯಾಯಿತ್ತು.
ಪರಿಸ್ಥಿತಿ ಈಗಲೂ ಹಾಗೇ ಇದೆಯಾ?
ಸದ್ಯ ಬದಲಾಗಿರುವ ಪರಿಸ್ಥಿತಿಯಲ್ಲಿ ಠಾಕೂರ್ ಸಮುದಾಯದವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲಾಗಿದೆ. ಆದರೆ, ಈ ಸಮುದಾಯದ ಯೋಗಿ ಆದಿತ್ಯನಾಥ್ ಮೇಲೆ ಬ್ರಾಹ್ಮಣರು ಹಾಗೂ ಯಾದವೇತರ ಓಬಿಸಿ ಜನಾಂಗದವರು ಬಿಜೆಪಿಯ ಮೇಲೆ ಮುನಿಸಿಕೊಂಡಿದ್ದಾರೆ ಮತ್ತು ಬಿಜೆಪಿಯ ಭದ್ರ ವೋಟ್ ಬ್ಯಾಂಕ್ ಒಡದಿದೆ. ಅದಕ್ಕೆ ಉತ್ತಮ ಉದಾಹರಣೆ ಎಂದರೆ ಇತ್ತೀಚಿಗಷ್ಟೇ ಬಿಜೆಪಿಯನ್ನು ತೊರೆದ ಮೂವರು ಹಾಲಿ ಸಚಿವರು ಹಾಗೂ 9 ಜನ ಶಾಸಕರು.
ಸದ್ಯ ತಿಳಿದು ಬಂದಿರುವ ಮಾಹಿತಿ ಪ್ರಕಾರ ಎಸ್ಪಿ ಕಡೆಗೆ ನಾಯಕರುಗಳು ಮುಖ ಮಾಡುತ್ತಿದ್ದಾರೆ. ಏಕೆಂದರೆ ಸದ್ಯ ಬಿಜೆಪಿ ಆಡಳಿತ ವಿಚಾರದಲ್ಲಿ ವಿರೋಧಿ ಅಲೆ ಎದುರಿಸುತ್ತಿದ್ದೆ ಮತ್ತು ಬಿಜೆಪಿ ವಿರೋಧಿ ಮುಸ್ಲಿಂ ಮತಗಳು ವಿಭಜನೆಯಾಗದಂತೆ ಸಂಪೂರ್ಣವಾಗಿ ಎಸ್ಪಿಗೆ ಬರುತ್ತದೆ ಎಂದು ಸಮೀಕ್ಷೆಯೊಂದು ತಿಳಿಸಿದೆ.
ರಾಜಕೀಯ ವಿಶ್ಲೇಷಕರು ಹೇಳುವ ಪ್ರಕಾರ ಯಾವ ಪಕ್ಷ ಶೇ.35ರಷ್ಟು ಮತ ಪಡೆಯುತ್ತದೆಯೋ ಆ ಪಕ್ಷ ಸರ್ಕಾರ ರಚಿಸುತ್ತದೆ. ಆದರೆ, ಈ ನಡುವೆ ಬಿಜೆಪಿ ಯಾದವೇತರ ಓಬಿಸಿ ಮತಗಳು ತಮ್ಮ ಪಕ್ಷದ ಪರವಾಗಿ ಇರುತ್ತವೆ ಹಾಲಿ ಪಕ್ಷ ತೊರೆದಿರುವ ನಾಯಕರು ಓಬಿಸಿ ಮತದಾರರ ಮೇಲೆ ಯಾವುದೇ ರೀತಿಯ ಪರಿಣಾಮವನ್ನು ಬೀರುವುದಿಲ್ಲ ಎಂದು ಸಮರ್ಥಿಸಿಕೊಂಡಿದೆ.
ಬಿಜೆಪಿ ವಕ್ತಾರರೊಬ್ಬರು ಹಾಲಿ ಪಕ್ಷ ತೊರೆದಿರುವವರು ಯಾರೂ ಮೂಲ ಕಾರ್ಯಕರ್ತರಲ್ಲ ಮತ್ತು ಅಷ್ಟಾಗಿ ಜನಪ್ರಿಯತೆ ಏನು ಪಡೆದಿಲ್ಲ. ರಾಜ್ಯದಲ್ಲಿ ಯೋಗಿ ಆದಿತ್ಯನಾಥ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಇವರುಗಳಿಗಿಂತ ಹೆಚ್ಚು ಜನಪ್ರಿಯತೆ ಪಡೆದಿದ್ದಾರೆ ಎಂದು ಹೇಳಿದ್ದಾರೆ.
ಈ ಹಿಂದೆ ಒಂದು ಅವಧಿಗೆ ಆಡಳಿತ ನಡೆಸಿದ ರಾಜಕೀಯ ಪಕ್ಷಗಳು ಇನ್ನೊಂದು ಅವಧಿಗೆ ಆಡಳಿತವನ್ನು ನಡೆಸಿಲ್ಲ. ಅದಾಗ್ಯೂ ಬಿಜೆಪಿ ಈ ಭಾರೀ ಶೇ.40ರಷ್ಟು ಮತಗಳನ್ನ ಪಡೆಯುವ ಮೂಲಕ ಆ ಸಂಪ್ರದಾಯವನ್ನು ಮುರಿದು ಎರಡನೇ ಭಾರಿಗೆ ಅಧಿಕಾರದ ಗದ್ದುಗೆ ಏರಲಿದೆ ಎಂದು ವಕ್ತಾರರು ಹೇಳಿದ್ದಾರೆ. ಆದರೆ, ಜಾತಿ ಸಮೀಕರಣದ ಫಲ ಯಾರಿಗೆ ಸಿಹಿ ನೀಡುತ್ತದೆ ಎಂಬುದನ್ನ ಮಾರ್ಚ್ 10ರವರೆಗೆ ಕಾದು ನೋಡಬೇಕಿದೆ.