ಕರ್ನಾಟಕದ ಮಟ್ಟಿಗೆ ಸಧ್ಯಕ್ಕೆ ಎಲ್ಲಾ ರಾಜಕೀಯ ಪಕ್ಷಗಳ ದೃಷ್ಟಿ ಕೇಂದ್ರೀಕರಿಸಿರುವುದು ಬಿಬಿಎಂಪಿ ಚುನಾವಣೆಯತ್ತ. ಆದರೆ ಸದ್ಯಕ್ಕೆ ಚುನಾವಣೆ ಯಾವಾಗ ಎಂಬ ಪ್ರಶ್ನೆಗೆ ಸ್ಪಷ್ಟ ಮಾಹಿತಿಗಳಿಲ್ಲ. ಆದರೆ ಎಲ್ಲಾ ಪಕ್ಷಗಳು ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳುತ್ತಿವೆ.ಇದೆಲ್ಲದರ ನಡುವೆ ಬಿಜೆಪಿ ಪಕ್ಷ ಮಾತ್ರ ಹೊಸದೊಂದು ಬದಲಾವಣೆಯನ್ನು ಮಾಡಲಿಕ್ಕೆ ಹೊರಟಿದೆ ಎನ್ನುವ ಸುದ್ದಿ ಪಕ್ಷದ ವಲಯದಲ್ಲಿ ವ್ಯಾಪಕ ಚರ್ಚೆ ಹುಟ್ಟು ಹಾಕಿದೆ. ಪಕ್ಷದ ವರಿಷ್ಠರು ಉತ್ತರ ಪ್ರದೇಶ ಮಾದರಿಯನ್ನು ಅಳವಡಿಸಿಕೊಳ್ಳಲು ಹೊಟಿದ್ದಾರೆನ್ನುವುದೇ ಚರ್ಚೆಗೆ ಮುಖ್ಯ ಕಾರಣ .ಹಾಗೆಂದುಕೊಂಡಿದ್ದೇ ಆದಲ್ಲಿ ಟಿಕೆಟ್ ನಿರೀಕ್ಷೆಯಲ್ಲಿರುವ ಸಾಕಷ್ಟು ಮಾಜಿ ಕಾರ್ಪೊರೇಟರ್ಸ್ ಗಳಿಗೆ ಸ್ಪರ್ದೆಯ ಅವಕಾಶ ಕೈ ತಪ್ಪಿ ಹೋಗುವ ಸಾಧ್ಯತೆ ದಟ್ಟವಾಗಿದೆ.
ಅಚ್ಚರಿ ಎನಿಸಿದರೂ ಇದು ಸತ್ಯ. ಹಳಬರಿಗೆ ಟಿಕೆಟ್ ನಿರಾಕರಿಸಿ ಹೊಸಬರಿಗೆ ಮಣೆ ಹಾಕಿ ಅದರಲ್ಲಿ ಯಶಸ್ವಿಯಾದ ಪ್ರಧಾನಿ ಮೋದಿ ಹಾಗೂ ಸಿಎಂ ಯೋಗಿ ಆದಿತ್ಯನಾಥ್ ಅವರ ಫಾರ್ಮೂಲವನ್ನೇ ಬಿಬಿಎಂಪಿ ಎಲೆಕ್ಷನ್ ನಲ್ಲೂ ಅಳವಡಿಸುವ ಪ್ರಯತ್ನಗಳು ಬಿಜೆಪಿ ಪಕ್ಷದಲ್ಲಿ ಬಲವಾಗಿ ನಡೆಯುತ್ತಿವೆ ಎನ್ನುವ ಸುದ್ದಿ ಕೇಳಿಬರುತ್ತಿದೆ. ಇದು 2015 ರಿಂದ 2020ರ ಅವಧಿಯಲ್ಲಿ ಕಾರ್ಪೊರೇಟರ್ಸ್ ಗಳಾಗಿದ್ದ ಸಾಕಷ್ಟು ಚುನಾಯಿತರಿಗೆ ಆಘಾತ ನೀಡಿದೆಯಂತೆ. ಇಂತದ್ದೊಂದು ವರ್ತಮಾನ ಹಾಗೂ ಬೆಳವಣಿಗೆ ಪಕ್ಷದಲ್ಲಿ ನಡೆಯುತ್ತಿದೆಯೇ..? ನಡೆಯುತ್ತಿರುವುದು ನಿಜವಾದರೆ ತಮ್ಮನ್ನು ಹೇಗೆ ಪಾರು ಮಾಡಿಕೊಳ್ಳುವುದು..? ಟಿಕೆಟ್ ಗಿಟ್ಟಿಸಿಕೊಳ್ಳಲು ಏನು ಮಾಡಬಹುದೆನ್ನುವ ಆಲೋಚನೆಯಲ್ಲಿ ಮುಳುಗುವಂತೆ ಮಾಡಿದೆಯಂತೆ.
ನಿಮಗೆ ಗೊತ್ತಿರಲಿ, ಮೊನ್ನೆ ನಡೆದ 403 ಸಂಖ್ಯಾಬಲದ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಹಾಲಿ ಶಾಸಕರಾಗಿರುವ 45 ಚುನಾಯಿತರಿಗೆ ಮೋದಿ ಅವರ ಸೂಚನೆ ಮೇರೆಗೆ ವರಿಷ್ಠರು ಟಿಕೆಟ್ ನಿರಾಕರಿಸಿದ್ದರು. ಈ ಮಾದಿರಿ ವರ್ಕೌಟ್ ಕೂಡ ಆಗಿತ್ತು.ಇದರಿಂದ ಉತ್ತೇಜಿತರಾಗಿರುವ ಮೋದಿ ಎಲ್ಲಾ ರಾಜ್ಯದಲ್ಲೂ ಈ ಸಿದ್ದಸೂತ್ರವನ್ನು ಅಳವಡಿಸಿ ನೋಡಿ ಎನ್ನುವ ಸಂದೇಶ ರವಾನಿಸಿದ್ದಾರಂತೆ. ಇದನ್ನು ಬಿಬಿಎಂಪಿ ಎಲೆಕ್ಷನ್ ನಲ್ಲೂ ಅಳವಡಿಸಲು ಸೂಚನೆ ಸಿಕ್ಕಿದೆ ಎನ್ನಲಾಗಿದ್ದು ವರಿಷ್ಠರು ಇದಕ್ಕಾಗಿ ಹೊಸ ಮುಖಗಳ ಅನ್ವೇಷಣೆಯಲ್ಲೂ ತೊಡಗಿದ್ದಾರೆ ಎಂದು ಬಿಜೆಪಿ ಮೂಲಗಳಿಂದ ಮಾಹಿತಿ ಸಿಕ್ಕಿದೆ.
198 ಸದಸ್ಯ ಬಲದ ಬಿಬಿಎಂಪಿಯಲ್ಲಿ ಕಳೆದ ಬಾರಿ ಹೆಚ್ಚು ಸ್ಥಾನಗಳನ್ನು ಗಳಿಸಿಯೂ ಬಿಜೆಪಿ ಕೆಲವು ಮುಖಂಡರ ಅತಿಯಾದ ಆತ್ಮವಿಶ್ವಾಸ ಹಾಗೂ ಹೊಣೆಗೇಡಿತನದಿಂದ ನಾಲ್ಕು ವರ್ಷ ಅಧಿಕಾರ ಕಳೆದುಕೊಳ್ಳಬೇಕಾಗಿ ಬಂತು. ಕೊನೇ ಅವಧಿಗಷ್ಟೇ ಬಿಜೆಪಿ ತನ್ನ ಅಭ್ಯರ್ಥಿಯನ್ನು ಮೇಯರ್ ಸ್ಥಾನದಲ್ಲಿ ಪ್ರತಿಷ್ಟಾಪಿಸಲು ಯಶಸ್ವಿಯಾಗಿತ್ತು. ಇದರಿಂದ ಸಾಕಷ್ಟು ಪಾಠ ಕಲಿತಿರುವ ವರಿಷ್ಠರು ಈ ಬಾರಿಯ ಚುನಾವಣೆಯಲ್ಲಿ ತೂಗಿ ಅಳೆದು ಟಿಕೆಟ್ ನೀಡೋ ನಿರ್ದಾರಕ್ಕೆ ಬಂದಿದೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಇನ್ನು ಕೆಲವರು ಪಕ್ಷಕ್ಕೆ ನಿಷ್ಠರಾಗಿದ್ದುಕೊಂಡೇ ಕೆಲಸ ಮಾಡುತ್ತೇವೆ. ಹೈಕಮಾಂಡ್ ಹೊಸಬರನ್ನು ಸೂಚಿಸಿದರೆ ಅವರ ಪರವಾಗಿಯೇ ಕೆಲಸ ಮಾಡುತ್ತೇವೆ. ನಮಗೂ ಅಧಿಕಾರ ಇಲ್ಲದಾಗ ಗುರುತಿಸಿ ಟಿಕೆಟ್ ಕೊಟ್ಟು ಕಾರ್ಪೊರೇಟರ್ ಆಗುವ ಅವಕಾಶ ಕೊಟ್ಟಿಲ್ವಾ..? ನಮ್ಮಂತೆ ಇತರರಿಗೂ ಕಾರ್ಪೊರೇಟರ್ ಆಗೋ ಆಸೆ ಇರಲ್ವೇ..? ಹಾಗಾಗಿ ಹೈಕಮಾಂಡ್ ಸೂಚಿಸಿದವರ ಪರ ಕೆಲಸ ಮಾಡೋದಾಗಿ ಸತತ ಮೂರು ಬಿಜೆಪಿಯಿಂದ ಕಾರ್ಪೋರೇಟರ್ ಆದ ಮುಖಂಡರೊಬ್ಬರು ಹೇಳಿದರು.
ಇದೆಲ್ಲದರ ನಡುವೆಯೇ ನಮ್ಮ ಜೇಷ್ಠತೆ-ಅನುಭವ-ಹಿರಿತನಕ್ಕೆ ಬೆಲೆ ಕೊಡಲೇಬೇಕು. ಟಿಕೆಟ್ ಕೊಟ್ಟರೆ ಪಕ್ಷದಲ್ಲಿ ಇರುತ್ತೇವೆ. ಇಲ್ಲವಾದಲ್ಲಿ ಬೇರೆ ದಾರಿ ಹುಡುಕಿಕೊಳ್ಳುತ್ತೇವೆ. ಬೆಲೆ ಇಲ್ಲದ ಜಾಗದಲ್ಲಿ ಇರೋದಕ್ಕಿಂತ ಬೆಲೆ ಕೊಡೋ ಜಾಗವನ್ನು ಹುಡುಕಿಕೊಂಡು ಹೋಗುವುದು ಸೂಕ್ತವಲ್ವೇ..? ಹಾಗಾಗಿ ಕಾದು ನೋಡುತ್ತೇವೆ, ಈಗಲೇ ಎಲ್ಲವನ್ನು ನಿರ್ಧರಿಸಲಿಕ್ಕೆ ಆಗುವುದಿಲ್ಲ.ವಾರ್ಡ್ ಕಾರ್ಯಕರ್ತರು-ಬೆಂಬಲಿಗರ ಜತೆ ಮಾತನಾಡುತ್ತೇವೆ ಎಂದು ಮಾಜಿ ಕಾರ್ಪೋರೇಟರ್ ಒಬ್ಬರು ತಿಳಿಸಿದರು.
ಬಿಬಿಎಂಪಿ ಎಲೆಕ್ಷನ್ ಯಾವ ಕ್ಷಣದಲ್ಲಿ ಬೇಕಾದರೂ ಘೋಷಣೆಯಾಗಿ ದಿನಾಂಕ ನಿಗಧಿಯಾಗುವ ಸಾಧ್ಯತೆಗಳಿರುವುದರಿಂದ ಬಿಜೆಪಿ ವರಿಷ್ಠರು ಈಗಾಗಲೇ ವಾರ್ಡ್ ಮಟ್ಟದಲ್ಲಿ ಹೊಸ ಮುಖಗಳಿಗೆ ಹುಡುಕಾಟವನ್ನೂ ಶುರು ಮಾಡಿದ್ದಾರಂತೆ. ಹೊಸಬರಿಗೆ ಮೊದಲ ಆಧ್ಯತೆ ನೀಡುವುದರ ಜತೆಗೆ ಅಕ್ರಮ-ಹಗರಣ-ಭ್ರಷ್ಟಾಚಾರವಿಲ್ಲದ ಶುದ್ಧಹಸ್ತದ ಜನಾನುರಾಗಿಗಳ ಹುಡುಕಾಟ ಶುರುವಿಟ್ಟುಕೊಂಡಿದ್ದಾರಂತೆ. ಒಟ್ಟಿನಲ್ಲಿ ಉತ್ತರ ಪ್ರದೇಶದ ಮಾದರಿಯಲ್ಲೇ ಹೊಸಬರಿಗೆ ಅವಕಾಶದ ಬಾಗಿಲನ್ನು ತೆರೆದರೆ, ಮಾಜಿಗಳಿಗೆ ಇರುವ ಅವಕಾಶದ ಬಾಗಿಲನ್ನು ಮುಚ್ಚಿಲಾಗುತ್ತೆ ಎಂಬ ಸುದ್ದಿ ಬಿಜೆಪಿ ಆಂತಕರಿ ವಲಯದಲ್ಲಿ ದೊಡ್ಡ ಮಟ್ಟದಲ್ಲೇ ಚರ್ಚೆಯಾಗುತ್ತಿದೆ. ಒಂದು ವೇಳೆ ಹೀಗೆಯಾದರೆ ಪಾಲಿಕೆ ಚುನಾವಣೆಯ ಹೊತ್ತಲ್ಲಿ ಬಿಜೆಪಿಯಲ್ಲಿ ಅಸಮಾಧಾನ ಸ್ಫೋಟಿಸುವ ಸಾಧ್ಯತೆ ದಟ್ಟವಾಗಿದೆ.