ಉತ್ತರ ಪ್ರದೇಶದಲ್ಲಿ ಬಿಜೆಪಿ ಸೋಲಲು ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಕಾರಣ ಎಂದು ಕನೌಜ್ ಲೋಕಸಭಾ ಕ್ಷೇತ್ರದಿಂದ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಎದುರು ಪರಾಭವಗೊಂಡಿದ್ದ ಬಿಜೆಪಿಯ ಮಾಜಿ ಸಂಸದ ಸುಬ್ರತ್ ಪಾಠಕ್ ಹೇಳಿದ್ದಾರೆ. ಉತ್ತರ ಪ್ರದೇಶ ಲೋಕಸಬಾ ಚುನಾವಣೆಯಲ್ಲಿ ಬಿಜೆಪಿ ತೋರಿರುವ ಕಳಪೆ ಪ್ರದರ್ಶನದ ಕುರಿತು ಬಿಜೆಪಿಯ ಕೇಂದ್ರ ನಾಯಕತ್ವಕ್ಕೆ ಪರಾಮರ್ಶೆ ವರದಿ ಸಲ್ಲಿಕೆಯಾಗಲು ಬಾಕಿ ಇರುವಾಗಲೇ ಬಿಜೆಪಿಯ ಮಾಜಿ ಸಂಸದನಿಂದ ಈ ಹೇಳಿಕೆ ಹೊರ ಬಿದ್ದಿದೆ.
ಇದಲ್ಲದೆ ವಿರೋಧ ಪಕ್ಷಗಳು ಒಂದು ವೇಳೆ ಬಿಜೆಪಿ 400 ಸ್ಥಾನಗಳಲ್ಲಿ ಗೆದ್ದರೆ ಸಂವಿಧಾನವನ್ನು ಬದಲಾವಣೆ ಮಾಡಲಿದೆ ಎಂದು ಅಪಪ್ರಚಾರ ನಡೆಸಿದ್ದರಿಂದ ನನಗೆ ದಲಿತ ಮತಗಳ ನಷ್ಟವುಂಟಾಗಿ ಪರಾಭವಗೊಳ್ಳುವಂತಾಯಿತು ಎಂದು ಸುಬ್ರತ್ ಪಾಠಕ್ ಪ್ರತಿಪಾದಿಸಿದರು..
ಉತ್ತರ ಪ್ರದೇಶದಾದ್ಯಂತ ಬಿಜೆಪಿಯು ಹಲವಾರು ಕ್ಷೇತ್ರಗಳನ್ನು ಕಳೆದುಕೊಳ್ಳಲು ಪ್ರಶ್ನೆ ಪತ್ರಿಕೆ ಸೋರಿಕ ಪ್ರಮುಖ ಕಾರಣ ಎಂದು ಹೇಳಿರುವ ಪಾಠಕ್ ಚುನಾವಣಾ ಪ್ರಚಾರದ ಸಂದರ್ಭದಲ್ಲೂ ಕೂಡಾ ನಾವು ಎದುರುಗೊಂಡ ಯುವಕರು ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ಪರೀಕ್ಷೆಗಳು ರದ್ದಾಗಿರುವ ಕುರಿತು ಆಕ್ರೋಶಗೊಂಡಿದ್ದರು..