~ ಡಾ. ಜೆ ಎಸ್ ಪಾಟೀಲ
ಭಾರತಲ್ಲಿ ಅತ್ಯುತ್ತಮ ಆಸ್ಪತ್ರೆ ಯಾವುದು ಎಂದು ಯಾರಾದರೂ ಕೇಳಿದರೆ ತಕ್ಷಣಕ್ಕೆ ಬರುವ ಉತ್ತರ ದಿಲ್ಲಿಯ ಸರಕಾರಿ ಸ್ವಾಮ್ಯದ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಏಮ್ಸ್) ಎಂದು. ದೇಶದ ಅತ್ಯುತ್ತಮ ಎಂಜಿನಿಯರಿಂಗ್ ಕಾಲೇಜುಗಳು ಯಾವುವು ಎಂದಾಗ ಎಲ್ಲರು ಬೆರಳು ಮಾಡುವುದು ಸರಕಾರಿ ಉನ್ನತ ಶಿಕ್ಷಣ ಸಂಸ್ಥೆಗಳಾದ ಐಐಟಿಗಳತ್ತ. ದೇಶದ ಅತ್ಯುತ್ತಮ ಮ್ಯಾನೆಜ್ಮೆಂಟ್ ಕಾಲೇಜುಗಳಾವುವು ಎಂದಾಗ ನಾವೆಲ್ಲ ಸರಕಾರಿ ಐಐಎಂಗಳತ್ತ ನೋಡುತ್ತೇವೆ. ಪ್ರಾಥಮಿಕˌ ಮಾಧ್ಯಮಿಕ ಮತ್ತು ಪ್ರೌಢ ಶಿಕ್ಷಣ ಪಡೆಯಲು ದೇಶದ ಅತ್ಯುತ್ತಮ ಶಾಲೆಗಳು ಯಾವುವು ಎಂದರೆ ಸರಕಾರದ ಕೇಂದ್ರೀಯ ವಿದ್ಯಾಲಗಳುˌ ಸೈನಿಕ ಶಾಲೆಗಳುˌ ಮತ್ತು ಮುರಾರ್ಜಿ ದೇಸಾಯಿ ವಸತಿ ಶಾಲೆಗಳು ಎನ್ನುವ ಸಂಗತಿ ನಾವೆಲ್ಲ ಬಲ್ಲೆವು. ದೇಶದ ಪ್ರವಾಸೋದ್ಯಮ ಮತ್ತು ಸಾರಿಗೆ ಕ್ಷೇತ್ರಕ್ಕೆ ಭಾರತೀಯ ರೈಲ್ವೆ ನೀಡಿದ ಕಾಣಿಕೆ ಮತ್ಯಾವ ಖಾಸಗಿ ಸಾರಿಗೆ ಸಂಸ್ಥೆಯು ಸರಿಗಟ್ಟಲಾರದು.

ಇಂದಿಗೂ ದೇಶದ ಅತಿ ಹೆಚ್ಚು ಜನರು ಪ್ರಯಾಣಿಸುವುದು ಭಾರತೀಯ ರೇಲ್ವೆಗಳ ಮೂಲಕ. ಅಮೆರಿಕೆಯ ಅಂತರಿಕ್ಷ ಸಂಶೋಧನಾ ಸಂಸ್ಥೆಗೆ ಜಗತ್ತಿನಲ್ಲೆ ಅತ್ಯಂತ ಪ್ರತಿಸ್ಪರ್ಧಿ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಯಾವುದು ಎಂದು ಕೇಳಿದರೆ ತಕ್ಷಣಕ್ಕೆ ಭಾರತ ಸರಕಾರದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಎನ್ನುವ ಉತ್ತರ ದೊರೆಯುತ್ತದೆ. ನಾವು ಈ ಬಗೆಯ ಅನೇಕ ನಿದರ್ಶನಗಳನ್ನು ನೀಡಬಹುದು. ಯಾವುದೇ ಕ್ಷೇತ್ರವಾಗಿರಲಿ ಸರ್ಕಾರಿ ಸಂಸ್ಥೆಗಳ ಕಾರ್ಯಕ್ಷಮತೆಗೆ ಸರಿಗಟ್ಟುವ ಮತ್ತೊಂದು ಖಾಸಗಿ ಸಂಸ್ಥೆ ದೇಶದಲ್ಲಿ ಕಳೆದ ಏಳು ದಶಕಗಳಲ್ಲಿ ಹುಟ್ಟಿಕೊಂಡಿಲ್ಲ ಎಂದರೆ ತಪ್ಪಾಗಲಿಕ್ಕಿಲ್ಲ. ಕೋವಿಡ್ ಸಾಂಕ್ರಮಿಕ ರೋಗ ಉಲ್ಬಣಿಸಿದ ಸಂಕೀರ್ಣ ಸಂದರ್ಭದಲ್ಲಿ ದೇಶಾದ್ಯಂತ ಸರ್ಕಾರಿ ಆಸ್ಪತ್ರೆಗಳು ಮಾತ್ರ ಜನರಿಗೆ ಉಚಿತ ಮತ್ತು ಹೊರೆಯಾಗದ ಚಿಕಿತ್ಸೆ ನೀಡಿದ್ದನ್ನು ನಾವು ಮರೆಯಲಾಗದು.

ಅದೇ ಸಂದರ್ಭದಲ್ಲಿ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳು ದೇಶದ ಜನರಿಗೆ ಸೇವೆಯನ್ನು ನೀಡಿದ್ದವು. ಬಡತನˌ ಆರ್ಥಿಕ ಸಂಕಷ್ಟಗಳಿಗೆ ಸರಕಾರಿ ಸ್ವಾಮ್ಯದ ಬ್ಯಾಂಕುಗಳು ನೆರವಾದವು. ಸರ್ಕಾರಿ ರೈಲುಗಳುˌ ಬಸ್ಸುಗಳು ಮಾತ್ರ ಕಾರ್ಮಿಕರನ್ನು, ಜನರನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಾಗಿಸುವಲ್ಲಿ ಮಹತ್ವದ ಪಾತ್ರ ವಹಿಸಿದವು. ಸರ್ಕಾರದ ಏರ್ ಇಂಡಿಯಾ ಸಂಸ್ಥೆಯ ವಿಮಾನಗಳು ಮಾತ್ರ ವಿದೇಶದಲ್ಲಿದ್ದ ಭಾರತೀಯರನ್ನು ದೇಶಕ್ಕೆ ಕರೆತಂದವು. ದೇಶಾದ್ಯಂತ ಕೋವಿಡ್ ಸಾಂಕ್ರಮಿಕ ರೋಗ ಹರಡಿದಾಗ ಸರಕಾರ ಅವೈಜ್ಞಾನಿಕ ಮತ್ತು ಅಮಾನುಷ ರೀತಿಯಲ್ಲಿ ಲಾಕ್ಡೌನ್ ಘೋಷಣೆ ಮಾಡಿದ್ದನ್ನು ನಾವು ಬಲ್ಲೆವು. ಆ ಕಾರಣದಿಂದ ದೇಶದಲ್ಲಿ ಕೃತಕ ಸಾರಿಗೆ ಅಭಾವ ಸೃಷ್ಠಿಸುವ ಮೂಲಕ ಖಾಸಗಿ ಸಾರಿಗೆ ಸಂಸ್ಥೆಗಳು ಜನರನ್ನು ಲೂಟಿ ಮಾಡಿದವು. ಇಂದಿಗೂ ದೇಶದ ಸಾರ್ವಜನಿಕ ಅಥವಾ ಸರಕಾರಿ ಸಾರಿಗೆ ಸಂಸ್ಥೆಗಳು ಅತ್ಯಂತ ಹೆಚ್ಚು ವಿಶ್ವಾಸಾರ್ಹವಾಗಿರುವುದು ಸುಳ್ಳಲ್ಲ.

ಕೋವಿಡ್ ಸಂದರ್ಭ ಒತ್ತಟ್ಟಿಗಿರಲಿˌ ವಾರದ ಕೊನೆ ದಿನಗಳುˌ ಸರಣಿ ರಜೆ ಮತ್ತು ಹಬ್ಬ ಹರಿದಿನಗಳ ಸಂದರ್ಭಗಳಲ್ಲಿ ಖಾಸಗಿ ಸಾರಿಗೆ ಸಂಸ್ಥೆಗಳು ಪ್ರಯಾಣ ದರವನ್ನು ದುಪ್ಪಟ್ಟು ಮಾಡುವ ಮೂಲಕ ಸಾರ್ವಜನಿಕರನ್ನು ಹಾಡುಹಗಲೇ ದೋಚುತ್ತವೆ. ಕೋವಿಡ್ ಸಾಂಕ್ರಮಿಕ ರೋಗ ಹಬ್ಬಿದೆ ಎಂಬ ಸುದ್ದಿ ಹರಡಿದ್ದೇ ಒಂದು ಬಹುದೊಡ್ಡ ಅಂತರಾಷ್ಟ್ರೀಯ ಹಗರಣ ಎನ್ನುವುದು ಬಹಳಷ್ಟು ಜನರಿಗೆ ತಿಳಿದಿಲ್ಲ. ಅದನ್ನೇ ನೆಪವಾಗಿಟ್ಟುಕೊಂಡು ಖಾಸಗಿ ಆಸ್ಪತ್ರೆಗಳು ಸಾಮಾನ್ಯ ಶೀತˌ ಜ್ವರˌ ನೆಗಡಿಗಳಿಂದ ಬಳಲುವ ಜನರನ್ನು ಸುಲಿಗೆ ಮಾಡಿದವು. ಕೋವಿಡ್ ಸಾಂಕ್ರಮಿಕ ರೋಗ ಉಲ್ಬಣಿಸಿದೆ ಎಂದು ಜನರಲ್ಲಿ ಕೃತಕ ಭಯ ಹುಟ್ಟಿಸಿದ ಸಂದರ್ಭದಲ್ಲಿ ಈ ಖಾಸಗಿ ಆಟಗಾರರು/ಕ್ರೀಡಾಪಟುಗಳು/ಸಿನೆಮಾ ನಟರು/ಸೆಲೆಬ್ರಿಟಿಗಳು ಮತ್ತು ಅವರ ಅಭಿಮಾನಿಗಳು ಎಲ್ಲಿದ್ದರು? ಸಾಂಕ್ರಮಿಕ ಸಂದರ್ಭದಲ್ಲಿ ಈ ಕಾರ್ಪೊರೇಟ್ ಕಳ್ಳೋದ್ಯಮಿಗಳು ಎಲ್ಲಿದ್ದರು?
ಸರ್ಕಾರಿ ವೈದ್ಯರು, ದಾದಿಯರು, ಪೊಲೀಸ್ˌ ಪೌರ ಕಾರ್ಮಿಕರು ಮತ್ತು ಪುರಸಭೆ ನೌಕರರು ತಮ್ಮ ಜೀವದ ಹಂಗು ತೊರೆದು ಜನರ ಸೇವೆ ಮಾಡಿದ್ದರು. ದಕ್ಷತೆ, ಪಾರದರ್ಶಕತೆ ಮತ್ತು ಪ್ರಾಮಾಣಿಕತೆಯ ಗುತ್ತಿಗೆ ಪಡೆದವರಂತಾಡುವ ಖಾಸಗಿ ಸಂಸ್ಥೆಗಳ ಹಣೆಬರಹ ನಾನು ಚನ್ನಾಗಿ ಬಲ್ಲೆ. ಕಳೆದ ೨೫ ವರ್ಷಗಳಿಂದ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಉದ್ಯೋಗ ಮಾಡಿರುವ ನಾನು ಅಲ್ಲಿನ ಎಲ್ಲ ಹುಳುಕುಗಳನ್ನು ಹತ್ತಿರದಿಂದ ನೋಡಿದ್ದೇನೆ. ನಾನು ಕೆಲಸ ಮಾಡುತ್ತಿದ್ದ ಶಿಕ್ಷಣ ಸಂಸ್ಥೆಯೊಂದರಲ್ಲಿ ನಮ್ಮ ಮೇಲಾಧಿಕಾರಿಯೊಬ್ಬ “We want only average and below average employs. We don’t want gold medalist” ಎಂದು ಪದೇ ಪದೇ ಹೇಳುತ್ತಿದ್ದ. ನಾನು ಒಬ್ಬ ಗೋಲ್ಡ್ ಮೆಡಲಿಸ್ಟ್ ಆಗಿದ್ದಕ್ಕೆ ಮತ್ತು ನಾನು ಆತನ ಎಲ್ಲ ಅಕ್ರಮಗಳನ್ನು ಪ್ರಶ್ನಿಸುತ್ತಿದ್ದದ್ದಕ್ಕೆ ಆತ ಹಾಗೆ ಹೇಳುತ್ತಿದ್ದ ಎನ್ನುವುದು ನನಗೆ ತಿಳಿಯುತ್ತಿತ್ತು.

ಈಗ ಆ ಶಿಕ್ಷಣ ಸಂಸ್ಥೆಯಲ್ಲಿ ನಕಲಿ ವಿಜ್ಞಾನಿಗಳುˌ ಆಡಳಿತ ಮಂಡಳಿಯ ಎದುರಿಗೆ ನಡು ಬಗ್ಗಿಸಿˌ ಕೈಕಟ್ಟಿಕೊಂಡು ನಿಂತು ಹೇಳಿದ್ದಕ್ಕೆಲ್ಲ ಹೂಂಗೊಡುತ್ತ ಅತ್ಯನ್ನತ ಹುದ್ದೆಯನ್ನು ಅಲಂಕಿರಿಸಿದ್ದಾರೆ. ಇದು ಎಲ್ಲಾ ಖಾಸಗಿ ಸಂಸ್ಥೆಗಳ ಹಣೆಬರಹ. ನಾವು ಪ್ರತಿಯೊಂದು ಖಾಸಗಿ ಸಂಸ್ಥೆಗಳನ್ನು ಕೂಲಂಕುಷವಾಗಿ ಅವಲೋಕಿಸಬೇಕಿದೆ. ಇತ್ತೀಚಿಗೆ ಖಾಸಗಿ ಬ್ಯಾಂಕುಗಳು ಸಾರ್ವಜನಿಕರನ್ನು ವಂಚಿಸಿ ಮತ್ತು ಲೂಟಿ ಹೊಡೆದು ಕೊನೆಗೆ ದಿವಾಳಿ ಘೋಷಿಸಿಕೊಳ್ಳುತ್ತಿವೆ. ಐಸಿಐಸಿಐ ಬ್ಯಾಂಕಲ್ಲಿ ಅತ್ಯುನ್ನತ ಮಟ್ಟದಲ್ಲಿ ನಡೆದ ಆರ್ಥಿಕ ಹಗರಣ ನಮ್ಮೆದುರಿಗೆ ಜ್ವಲಂತ ಉದಾಹರಣೆಯಾಗಿ ನಿಂತಿದೆ. ದೇಶಾದ್ಯಂತ ನೂರಾರು ಖಾಸಗಿ ಬ್ಯಾಂಕುಗಳು ಈ ಹಿಂದೆ ತಮ್ಮ ಗ್ರಾಹಕರನ್ನು ಮುಳುಗಿಸಿ ಕಣ್ಮರೆಯಾಗಿವೆ. ಉದ್ದೇಶಪೂರ್ವಕವಾಗಿಯೇ ಗ್ರಾಹಕರನ್ನು ಮುಳುಗಿಸಿ ದಿವಾಳಿ ಘೋಸಿಸಿಕೊಳ್ಳುತ್ತಿರುವ ಖಾಸಗಿ ಬ್ಯಾಂಕುಗಳ ದುಷ್ಕ್ರತ್ಯ ಇಂದಿಗೂ ನಿತಿಲ್ಲ.
ಮುಂದುವರೆಯುವುದು…