ಉತ್ತರ ಪ್ರದೇಶದಲ್ಲಿ ಸಾರ್ವತ್ರಿಕ ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ಪ್ರಬಲ ರಾಜಕೀಯ ಪಕ್ಷಗಳು ತಮ್ಮ ತಮ್ಮ ಚುನಾವಣಾ ನೀತಿಯನ್ನು ರಚಿಸುವಲ್ಲಿ ನಿರತವಾಗಿವೆ. ಬಿಜೆಪಿಯ ಹಿಂದೂ ಕೇಂದ್ರಿತ ನೀತಿಗೆ ಸೆಡ್ಡು ಹೊಡೆಯಲು, ಸಮಾಜವಾದಿ ಪಾರ್ಟಿ, ಬಹುಜನ ಸಮಾಜ ಪಕ್ಷ ಮತ್ತು ಕಾಂಗ್ರೆಸ್ ತೀವ್ರವಾದ ವ್ಯೂಹ ರಚನೆಯಲ್ಲಿ ತೊಡಗಿವೆ. ಅದರಲ್ಲೂ, ಅಲ್ಪಸಂಖ್ಯಾತರ ಪಕ್ಷವೆಂದೇ ಕರೆಯಲ್ಪಟ್ಟಿದ್ದ ಸಮಾಜವಾದಿ ಪಕ್ಷದ ಧೋರಣೆ ಕೊಂಚ ಬದಲಾದಂತೆ ಕಾಣುತ್ತಿದೆ.
2018ರಲ್ಲಿ ಕೈರಾನಾದಲ್ಲಿ ನಡೆದ ಲೋಕಸಭಾ ಉಪಚುನಾವಣೆ ಹಾಗೂ ನೂರ್ಪುರ್ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯು ಸಮಾಜವಾದಿ ಪಕ್ಷದಲ್ಲಿನ ಬದಲಾವಣೆಯ ಕುರಿತು ಬೆಳಕು ಚೆಲ್ಲುತ್ತವೆ. ಇವೆರಡೂ ಕ್ಷೇತ್ರಗಳು ಕೋಮುಸೂಕ್ಷ್ಮ ಪ್ರದೇಶಗಳೆಂದು ಗುರುತಿಸಲ್ಪಟ್ಟಿವೆ. ಉಪಚುನಾವಣೆಯ ಸಮಯದಲ್ಲಿ ಸಿಎಂ ಯೋಗಿ ಆದಿತ್ಯನಾಥ್, ಸಮಾಜವಾದಿ ಪಕ್ಷದ ನಾಯಕ ಮಾಜಿ ಸಿಎಂ ಅಖಿಲೇಶ್ ಯಾದವ್’ಗೆ ಬಹಿರಂಗ ಸವಾಲು ಎಸೆಯುತ್ತಾರೆ.“ಅಖಿಲೇಶ್ ಯಾದವ್’ಗೆ ಇಲ್ಲಿ ಬಂದು ಪ್ರಚಾರ ನಡೆಸಲು ಧೈರ್ಯವಿಲ್ಲ. ಅವರ ಕೈಗೆ ಮುಝಫ್ಫರ್ ನಗರ ದಂಗೆಗಳ ರಕ್ತ ಅಂಟಿಕೊಂಡಿದೆ,” ಎಂದು ಅಬ್ಬರದ ಭಾಷಣ ಬಿಗಿಯುತ್ತಾರೆ.
ನೂರ್ಪುರ ವಿಧಾನಸಭಾ ಕ್ಷೇತ್ರದಲ್ಲಿ ಖುದ್ದು ಎಸ್ ಪಿ ಅಭ್ಯರ್ಥಿ ಕಣಕ್ಕಿಳಿದಿದ್ದರು. ಕೈರಾನಾದಲ್ಲಿ ಎಸ್ ಪಿಯು ರಾಷ್ಟ್ರೀಯ ಲೋಕ ದಳವನ್ನು ಬೆಂಬಲಿಸಿತ್ತು. ಆರ್ ಎಲ್ ಡಿ ತನ್ನ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಅಖಿಲೇಶ್ ಯಾದವ್ ಹೆಸರನ್ನೂ ಸೇರಿಸಿತ್ತು. ಆದರೆ, ಯೋಗಿಯ ಸವಾಲಿನ ಬಳಿಕವೂ ಅಖಿಲೇಶ್ ಯಾದವ್ ಪ್ರಚಾರಕ್ಕೆ ಹೋಗಲಿಲ್ಲ. ಕಾರಣವಿಷ್ಟೇ, ಹಿಂದೂ ಮತಗಳನ್ನು ಕೇಂದ್ರೀಕರಿಸಿ ಬಿಜೆಪಿ ಚುನಾವಣಾ ಪ್ರಚಾರ ನಡೆಸಿತ್ತು. ಒಂದು ವೇಳೆ ಅಖಿಲೇಶ್ ಯಾದವ್ ಪ್ರಚಾರಕ್ಕೆ ಹೋದಲ್ಲಿ, ಅಲ್ಲಿ ಮುಸ್ಲಿಂ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಜಮಾವಣೆಯಾದರೆ, ಅದು ಬಿಜೆಪಿಯ ಆರೋಪಗಳಿಗೆ ಪುಷ್ಟಿ ನೀಡಿದಂತಾಗುತ್ತದೆ. ಆ ಪ್ರಚಾರ ಸಭೆಯ ಫೋಟೋ ಹಾಗೂ ವೀಡಿಯೋಗಳು ಬಿಜೆಪಿ ಪ್ರಚಾರದ ಅಸ್ತ್ರಗಳಾಗುತ್ತವೆ, ಎಂಬ ಕಾರಣಕ್ಕೆ ಅಖಿಲೇಶ್ ಯಾದವ್ ಸುಮ್ಮನಿದ್ದರು.

“ಬಿಜೆಪಿ ನಿರ್ಮಿಸಿದ ಪಿಚ್ ಮೇಲೆ ನಾವು ಆಡುವುದಿಲ್ಲ” ಎಂಬ ಸಂದೇಶ ರವಾನಿಸುವ ಪ್ರಯತ್ನ ಮಾಡಿದ್ದರು. ಅಖಿಲೇಶ್ ಪ್ರಚಾರ ನಡೆಸಿದರೂ, ನಡೆಸಿಲ್ಲವಾದರೂ ಮುಸ್ಲಿಮರ ಮತಗಳು ಸಮಾಜವಾದಿ ಪಕ್ಷಕ್ಕೆ ಲಭಿಸುತ್ತವೆ, ಆದರೆ, ಒಂದು ವೇಳೆ ಪ್ರಚಾರಕ್ಕೆ ಹೋದಲ್ಲಿ ಹಿಂದೂಗಳ ಮತಗಳನ್ನು ಕಳೆದುಕೊಳ್ಳಬೇಕಾದ ಪರಿಸ್ಥಿತಿ ಎದುರಾಗಬಹುದು, ಎಂಬ ಲೆಕ್ಕಾಚಾರ ಅಖಿಲೇಶರನ್ನು ಪ್ರಚಾರದಲ್ಲಿ ಭಾಗವಹಿಸದಂತೆ ಮಾಡಿತ್ತು.
ಈ ಎರಡೂ ಸ್ಥಾನಗಳನ್ನು ಎಸ್ ಪಿ ಹಾಗೂ ಆರ್ ಎಲ್ ಡಿ ಗೆದ್ದುಕೊಂಡಿತು. ಆದರೆ, ಈ ಗೆಲುವಿನ ನಡುವೆಯೂ, ತಮ್ಮದು ಮುಸ್ಲೀಮರ ಪರವಾದ ಪಕ್ಷ ಎಂಬ ‘ಇಮೇಜ’ನ್ನು ಕಳಚಲು ಅಖಿಲೇಶ್ ಪ್ರಯತ್ನ ಪಟ್ಟಿದ್ದೂ ನಿಚ್ಚಳವಾಗಿ ಗೋಚರಿಸಿತು. ಮುಸ್ಲಿಮರ ಮತಗಳ ಮೇಲೆ ಪಕ್ಷದ ಗೆಲುವು ನಿರ್ಧಾರವಾಗಿದೆ ಎಂಬ ಹಣೆಪಟ್ಟಿಯನ್ನು ಹೋಗಲಾಡಿಸಲು ಅಖಿಲೇಶ್ ಕಾರ್ಯತಂತ್ರ ರೂಪಿಸಿದ್ದು, ಈ ಬಾರಿಯ ಚುನಾವಣೆಯಲ್ಲೂ ಅದು ಮುಂದುವರೆದಿದೆ.
ಸಾರ್ವತ್ರಿಕ ಚುನಾವಣೆಗೆ ಇನ್ನು ಕೆಲವೇ ತಿಂಗಳುಗಳು ಬಾಕಿ ಉಳಿದಿವೆ. ಈ ವೇಳೆ ಅಖಿಲೇಶ್ ಯಾದವ್ ಹಲವು ಹಿಂದೂ ದೇವಸ್ಥಾನಗಳಿಗೆ ಭೇಟಿ ನೀಡಿದ್ದಾರೆ, ಇನ್ನು ಹಲವು ಕಡೆ ಭೇಟಿ ನೀಡುವ ಉದ್ದೇಶ ಹೊಂದಿದ್ದಾರೆ. ತಾನು ಬಿಜೆಪಿಗಿಂತಲೂ ‘ದೊಡ್ಡ’ ಹಾಗೂ ‘ಉತ್ತಮ’ ಹಿಂದೂ ನಾಯಕ ಎಂಬಂತೆ ಬಿಂಬಿಸುವ ಪ್ರಯತ್ನ ನಡೆಯುತ್ತಿದೆ. ಇದರೊಂದಿಗೆ ಮುಸ್ಲಿಂ ನಾಯಕರೊಂದಿಗೆ ಹೆಚ್ಚಾಗಿ ವೇದಿಕೆ ಹಂಚಿಕೊಳ್ಳದಂತೆಯೂ ಯೋಜನೆ ರೂಪಿಸಲಾಗುತ್ತಿದೆ.
ಹಿಂದೂ ಓಲೈಕೆ ಹಾಗೂ ಹಿಂದುತ್ವದ ವಿಚಾರದಲ್ಲಿ ಬಿಜೆಪಿ ನಾಯಕರನ್ನು ಮೀರಿಸಲು ಸಾಧ್ಯವಾಗದಿದ್ದರೂ ಅವರಿಗೆ ಸರಿಸಮಾನಾದ ನಾಯಕ ಎಂಬುದನ್ನು ನಿರೂಪಿಸಲು ಅಖಿಲೇಶ್ ಒದ್ದಾಡುತ್ತಿದ್ದಾರೆ. ಬಹಿರಂಗವಾಗಿ ಮುಸ್ಲೀಮರನ್ನು ಬೆಂಬಲಿಸುವ ಹಾಗೂ ಅವರ ಪರವಾಗಿ ದನಿ ಎತ್ತುವ ದಿನಗಳು ಈಗ ಮುಗಿದು ಹೋಗಿವೆ. ಇದಕ್ಕೆ ಉದಾಹರಣೆಯೆಂದರೆ, ಒಂಬತ್ತು ಬಾರಿ ಶಾಸಕರಾಗಿದ್ದ ಮುಸ್ಲಿಂ ಸಮುದಾಯದ ಪ್ರಭಾವಿ ನಾಯಕರೆಂದು ಎನಿಸಿಕೊಂಡಿದ್ದ ಅಜಂ ಖಾನ್ ರನ್ನು ಬಿಜೆಪಿ ಸರ್ಕಾರವು 2020ರ ಫೆಬ್ರವರಿಯಲ್ಲಿ ಬಂಧಿಸಿದರೂ ಯಾವುದೇ ಗಮನಾರ್ಹ ಪ್ರತಿಭಟನೆ ಎಸ್ ಪಿ ವತಿಯಿಂದ ಮೂಡು ಬರಲಿಲ್ಲ. ಅಜಂ ಖಾನ್ ಹಾಗೂ ಅವರ ಕುಟುಂಬಸ್ಥರ ವಿರುದ್ಧ ನೂರಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣ ದಾಖಲಿಸಿದ್ದರೂ, ಎಸ್.ಪಿ. ಬಹಿರಂಗವಾಗಿ ಅಜಂ ಖಾನ್ ಬೆಂಬಲಕ್ಕೆ ನಿಲ್ಲಲಿಲ್ಲ.

“ಅಜಂ ಖಾನ್ ಪರವಾಗಿ ಬೀದಿಗಿಳಿದು ಹೋರಾಟ ನಡೆಸಿದ್ದರೂ, ಅವರ ಸಮಸ್ಯೆ ಈಡೇರುತ್ತಿರಲಿಲ್ಲ. ಅಜಂ ಖಾನ್ ಸಮಸ್ಯೆಗೆ ಪರಿಹಾರ ನೀಡಲು ನಾವು ಅಧಿಕಾರಕ್ಕೆ ಬರುವುದು ಅಗತ್ಯ. ಅದಕ್ಕಾಗಿ ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳಲಾಗಿದೆ,” ಎಂದು ಹೇಳಿ ಎಸ್.ಪಿ. ನಾಯಕರು ಸ್ಪಷ್ಟನೆ ನೀಡುವ ಪ್ರಯತ್ನ ಮಾಡಿದ್ದರು.
ರಾಜಕೀಯದಲ್ಲಿ ಇಸ್ಲಾಂ ಎಂಬ ಕುರಿತು ಅಧ್ಯಯನ ನಡೆಸಿರುವ ಹಿಲಾಲ್ ಅಹ್ಮದ್ ಹೇಳುವ ಪ್ರಕಾರ, ಪ್ರಸ್ತುತ ರಾಜಕೀಯದಲ್ಲಿ ಹಿಂದುತ್ವ ಎಂಬುದು ಪ್ರಭಾವಿ ನಿರೂಪಣೆಯಾಗಿದೆ. ದೇಶದ ರಾಜಕೀಯ ಇತಿಹಾಸ ನೊಡಿದರೆ, ಪ್ರತಿ ದಶಕಗಳಿಗೆ ರಾಜಕೀಯದ ಸ್ವರೂಪ ಬದಲಾಗಿದೆ. ಸಮಜವಾದಿ ರಾಜಕೀಯ, ಜಾತ್ಯಾತೀತವಾದಿ ರಾಜಕೀಯದ ನಂತರ ಈಗ ಹಿಂದುತ್ವವಾದಿ ರಾಜಕೀಯದ ಕಾಲ ಬಂದಿದೆ. ಹಿಂದುತ್ವವೇ ಹೊಸ ಆಟ. ಈ ಆಟವನ್ನು ಆಡಲೇಬೇಕಾದ ಪರಿಸ್ಥಿತಿ ಎದುರಾಗಿದೆ, ಎಂದು ಹೇಳಿದ್ದಾರೆ.
ಉತ್ತರ ಪ್ರದೇಶದ ಜನಸಂಖ್ಯೆಯಲ್ಲಿ 20% ಜನರು ಮುಸ್ಲೀಮರು. ಸಮಾಜವಾದಿ ಪಕ್ಷದ ಸ್ಥಾಪಕ ಮುಲಾಯಂ ಸಿಂಗ್ ಯಾದವ್ ಅವರ ಜಾತ್ಯಾತೀತತೆಯನ್ನು ಮುಕ್ತಕಂಠದಿಂದ ಶ್ಲಾಘಿಸುವ ಹಿರಿಯ ಮುಸ್ಲಿಂ ತಲೆಗಳು, ಅಖಿಲೇಶ್ ಯಾದವ್ ಕುರಿತು ಆ ಭಾವನೆಯನ್ನು ಹೊಂದಿರದೇ ಇರುವುದು ಪಕ್ಷಕ್ಕೆ ಹಿನ್ನಡೆ ಉಂಟುಮಾಡುವ ಸಾಧ್ಯತೆಯಿದೆ. ಮೇಲಾಗಿ, ಏನೇ ಆದರೂ, ಮುಸ್ಲಿಂ ಮತಗಳು ತಮ್ಮ ಪಕ್ಷಕ್ಕೇ ಸೀಮಿತ ಎಂಬ ಧೋರಣೆ ಎಸ್.ಪಿ.ಗೆ ಮುಳುವಾಗುವ ಸಾಧ್ಯತೆಯಿದೆ.

ಸಿಎಎ, ಎನ್ಆರ್ ಸಿ ಸಮಯದಲ್ಲಿ ಕಾಂಗ್ರೆಸ್ ನೀಡಿರುವ ಬಹಿರಂಗ ಬೆಂಬಲ ಹಲವು ಮುಸ್ಲೀಮರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಆದರೆ, ಇವುಗಳಲ್ಲಿ ಎಷ್ಟು ಜನರು ಕಾಂಗ್ರೆಸ್ ಪಾಲಿಗೆ ಮತದಾರರಾಗಿ ಬದಲಾಗುತ್ತಾರೆ ಎಂಬುದು ಚುನಾವಣೆಯಲ್ಲಿ ತಿಳಿಯಬೇಕಷ್ಟೆ. ಇದರ ನಡುವೆ, ಉತ್ತರ ಪ್ರದೇಶ ರಾಜಕಾರಣಕ್ಕೆ ಅಸಾದುದ್ದೀನ್ ಓವೈಸಿ ಪ್ರವೇಶ ಕೂಡಾ ಎಸ್.ಪಿ. ಪಾಲಿನ ಮುಸ್ಲಿಂ ಮತಗಳನ್ನು ಸೆಳೆಯುವ ಸಾಧ್ಯತೆಯಿದೆ.
ಬಿಜೆಪಿ ನಿರ್ಮಿಸಿದ ಪಿಚ್ ಮೇಲೆ ನಾವು ಆಡುವುದಿಲ್ಲ ಎಂದು ಹಠ ಹಿಡಿದ ಸಮಾಜವಾದಿ ಪಕ್ಷ, ಈಗ ಖುದ್ದು ಬಿಜೆಪಿಯ ಅಂಗಳದಲ್ಲಿಯೇ ಆಟವಾಡಲು ನಿರ್ಧರಿಸಿದಂತಿದೆ. ಶತಾಯಗತಾಯ ಬಿಜೆಪಿಯಿಂದ ಅಧಿಕಾರವನ್ನು ಕಿತ್ತುಕೊಳ್ಳಲೇಬೇಕೆಂಬ ಆಸೆಯಿಂದ ತನ್ನ ರಾಜಕೀಯ ನೀತಿ ರೂಪಿಸುತ್ತಿರುವ ಎಸ್.ಪಿ. ಎಷ್ಟರ ಮಟ್ಟಿಗೆ ಸಫಲವಾಗಬಹುದು ಎಂಬುದನ್ನು ಕಾದು ನೋಡಬೇಕಿದೆ.