ಉತ್ತರಪ್ರದೇಶ ಚುನಾವಣೆಯಲ್ಲಿ ತುಸು ವಿಭಿನ್ನವಾಗಿ ಸದ್ದು ಮಾಡುತ್ತಿರುವ ಪಕ್ಷ ಎಂದರೆ ಅದು ಸಮಾಜವಾದಿ ಪಕ್ಷ. ಇದೀಗ ಎಸ್ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ವಿದ್ಯಾರ್ಥಿ ಘಟಕದ ಸದಸ್ಯೆಗೆ ಟಿಕೆಟ್ ನೀಡುವ ಮೂಲಕ ಆಶ್ಚರ್ಯ ಮೂಡಿಸಿದ್ದಾರೆ.
2017ರಲ್ಲಿ ಲಖನೌನಲ್ಲಿ ಕಾರ್ಯಕ್ರಮ ಒಂದಕ್ಕೆ ತೆರಳುತ್ತಿದ್ದ ವೇಳೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಬೆಂಗಾವಲು ಪಡೆಗಳನ್ನು ತಡೆದು ವಿದ್ಯಾರ್ಥಿಗಳು ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟಿಸಿದ್ದರು. ಅಂದಿನ ಪ್ರತಿಭಟನೆಯ ನೇತೃತ್ವವನ್ನು ವಹಿಸಿದ್ದ ಪೂಜಾ ಶುಕ್ಲಾಗೆ ಈಗ ಲಖನೌ ಉತ್ತರದ ಟಿಕೆಟ್ಅನ್ನು ನೀಡಲಾಗಿದೆ.

ಈ ಕುರಿತು ಮಾತನಾಡಿರುವ ಪೂಜಾ ಶುಕ್ಲಾ, 2017ರಲ್ಲಿ ನಾನು ವಿದ್ಯಾರ್ಥಿಗಳ ಮೂಲಭೂತ ಹಕ್ಕುಗಳಿಗಾಗಿ ಪ್ರತಿಭಟಿಸಿದಾಗ ನನ್ನನ್ನು 20 ದಿನಗಳ ಕಾಲ ಜೈಲಿನಲ್ಲಿರಿಸಿದ್ದರು. ಆ ನಂತರ ನನಗೆ ಸರ್ಕಾರದ ನೀತಿಗಳ ವಿರುದ್ದ ಹೋರಾಡಲು ಮತ್ತಷ್ಟು ಸ್ಪೂರ್ತಿ ಸಿಕ್ಕಿತು. ಇದೀಗ ವರಿಷ್ಠರು ಚುನಾವಣೆಯಲ್ಲಿ ಹೋರಾಡುವುದಕ್ಕೆ ಒಂದು ಅವಕಾಶ ಕೊಟ್ಟಿದ್ದಾರೆ ಎಂದಿದ್ದಾರೆ.