2019ರ ಚಳಿಗಾಲದ ಅಧಿವೇಶನದಲ್ಲಿ (Winter session) ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ಪೌರತ್ವ ತಿದ್ದುಪಡಿ ಕಾಯ್ದೆ (CAA) ವಿರೋಧಿಸಿ ದೇಶಾದ್ಯಂತ ಪ್ರತಿಭಟನೆಗಳು ನಡೆದಿದ್ದವು. ಈ ಕುರಿತು ಉತ್ತರಪ್ರದೇಶದಲ್ಲಿ ತೀವ್ರವಾಗಿ ಎಡ ಪಕ್ಷಗಳು ಹಾಗೂ ವಿರೋಧಪಕ್ಷಗಳು ಪ್ರತಿಭಟನೆ ನಡೆಸಿದ್ದವು. ಈ ಕುರಿತು ಯೋಗಿ ಸರ್ಕಾರವು (CM Yogi Adityanath) ಸಾರ್ವಜನಿಕ ಆಸ್ತಿ ಹಾನಿಗೆ ಸಂಬಂಧಿಸಿದಂತೆ ಪ್ರತಿಭಟನಕಾರರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವುದಾಗಿ ನೋಟಿಸ್ ನೀಡಿತ್ತು.
ಈ ಕುರಿತು ಪ್ರತಿಭಟನಕಾರರು ಸುಪ್ರೀಂ ಕೋರ್ಟ್ಗೆ (supreme court) ಅರ್ಜಿ ಸಲ್ಲಿಸಿ ಪ್ರಶ್ನಿಸಿದ್ದರು, ಇದಕ್ಕೆ ಸುಪ್ರೀಂ ಕೋರ್ಟ್ ಸಹ ತೀವ್ರ ಅಸಮಾಧಾನವನ್ನ ವ್ಯಕ್ತಪಡಿಸಿತ್ತು. ಈ ಕುರಿತು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಚಂದ್ರಚೂಡ್ ಹಾಗೂ ಸೂರ್ಯಕಾಂತ್ ಅವರಿದ್ದ ದ್ವಿಸದಸ್ಯ ಪೀಠ ಯುಪಿ ಅಧಿಕಾರಿಗಳನ್ನು ತೀವ್ರ ತರಾಟೆ ತೆಗೆದುಕೊಂಡಿತ್ತು.
ನ್ಯಾಯಾಪೀಠ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಅಧಿಕಾರಿಗಳು ನೀಡಿದ್ದ ನೋಟಿಸ್ಗಳನ್ನು ಈಗಾಗಲೇ ಹಿಂಪಡೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನೀವೇ ದೂರುದಾರರಾಗಿದ್ದೀರಿ, ನೀವೇ ಸಾಕ್ಷಿ ಹಾಗೂ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿದ್ದೀರಿ ಬಳಿಕ ನೀವೆ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳು ಮುಂದಾಗುತ್ತೀರಿ ಇದಕ್ಕೆ ಯಾವ ಕಾನೂನಿನಲ್ಲಿ ಅನುಮತಿ ನೀಡಲಾಗಿದೆ ಎಂದು ಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು.

ಇದೀಗ ಸರ್ಕಾರ ನೋಟಿಸ್ ಹಿಂಪಡೆದಿರುವುದು ಚುನಾವಣಾ ಗಿಮಿಕ್ ಎಂದು ಹೇಳಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇದು ಯುಪಿ ಬಿಜೆಪಿಗೆ ಎಷ್ಟು ಲಾಭ ತಂದು ಕೊಡಲಿದೆ ಎಂಬುದನ್ನ ಕಾದು ನೋಡಬೇಕಿದೆ.