ಮಂಡ್ಯ : ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಸ್ವತಂತ್ರ್ಯ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸಂಸದೆಯಾಗಿ ಆಯ್ಕೆಯಾಗಿರುವ ಸುಮಲತಾ ಅಂಬರೀಶ್ ಶೀಘ್ರದಲ್ಲಿಯೇ ರಾಜ್ಯ ರಾಜಕಾರಣಕ್ಕೆ ಎಂಟ್ರಿ ನೀಡಲಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಇದರ ಜೊತೆಯಲ್ಲಿ ಪ್ರಧಾನಿ ಮೋದಿ ಸಮ್ಮುಖದಲ್ಲಿ ಸುಮಲತಾ ಅಂಬರೀಶ್ ಬಿಜೆಪಿ ಸೇರ್ಪಡೆಯಾಗುತ್ತಾರ ಎಂಬ ಮಾತು ಸಹ ರಾಜಕೀಯ ವಲಯದಲ್ಲಿ ಹರಿದಾಡುತ್ತಿದೆ. ಈ ಮಾತಿಗೆ ಪುಷ್ಠಿ ಎಂಬಂತೆ ಇಂದು ಸುಮಲತಾ ಅಂಬರೀಶ್ ಬಿಜೆಪಿ ಮುಖಂಡರ ಸಭೆಯಲ್ಲಿ ಭಾಗಿಯಾಗಿದ್ದಾರೆ. ಮಾರ್ಚ್ 12ರಂದು ಬೆಂಗಳೂರು – ಮೈಸೂರು ನೂತನ ದಶಪಥ ಹೆದ್ದಾರಿ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿ ಮಂಡ್ಯ ಜಿಲ್ಲೆಗೆ ಆಗಮಿಸುತ್ತಿದ್ದು ಇದರ ಪೂರ್ವಭಾವಿ ಸಭೆಯಲ್ಲಿ ಇಂದು ಬಿಜೆಪಿ ನಾಯಕರ ಜೊತೆಯಲ್ಲಿ ಸುಮಲತಾ ಕಾಣಿಸಿಕೊಂಡಿದ್ದಾರೆ.
ಮದ್ದೂರು ತಾಲೂಕಿನ ಗೆಜ್ಜಲಗೆರೆ ಬಳಿಯಲ್ಲಿ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು ಇಲ್ಲಿ ಇಂದು ನಡೆಸಲಾದ ಪೂರ್ವಭಾವಿ ಸಭೆಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ. ಸಚಿವ ನಾರಾಯಣ ಗೌಡ, ಕೆ.ಗೋಪಾಲಯ್ಯ, ಸಂಸದ ಪ್ರತಾಪ್ ಸಿಂಹ ಜೊತೆಯಲ್ಲಿ ಸಂಸದೆ ಸುಮಲತಾ ಅಂಬರೀಶ್ ಕೂಡ ಕಾಣಿಸಿಕೊಂಡಿದ್ದಾರೆ.
ಪೂರ್ವಭಾವಿ ಸಭೆಗೆ ಆಗಮಿಸಿದ ಸುಮಲತಾಗೆ ಬಿಜೆಪಿ ನಾಯಕರು ಕೇಸರಿ ಶಾಲು ನೀಡಿ ಸ್ವಾಗತಿಸಿದರು. ಕೇಸರಿ ಶಾಲನ್ನು ಹೆಗಲ ಮೇಲೆ ಧರಿಸದ ಸುಮಲತಾ ಕೈಯಲ್ಲಿಯೇ ಶಾಲು ಹಿಡಿದುಕೊಂಡು ಸಭೆಯಲ್ಲಿ ಭಾಗಿಯಾದರು. ಇನ್ನು ಈ ಕಾರ್ಯಕ್ರಮದ ಬಳಿಕ ಸುಮಲತಾ ಅಂಬರೀಶ್ ಪ್ರಧಾನಿ ಸಮ್ಮುಖದಲ್ಲಿಯೇ ಬಿಜೆಪಿ ಸೇರ್ಪಡೆಯಾಗುತ್ತಾರೆ ಎಂಬ ಮಾತು ಕಾಡ್ಗಿಚ್ಚಿನಂತೆ ಹರಿಯಲು ಆರಂಭಿಸಿದ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಈ ವಿಚಾರವಾಗಿ ಸ್ಪಷ್ಟನೆ ನೀಡಿದ್ದಾರೆ.
ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಗೆಜ್ಜಲಗೆರೆ ಕಾಲೋನಿಯಲ್ಲಿ ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಪ್ರಧಾನಿ ಕಾರ್ಯಕ್ರಮದಲ್ಲಿ ಎಂದಿಗೂ ಪಕ್ಷ ಸೇರ್ಪಡೆ ಇರೋದಿಲ್ಲ. ಪ್ರಧಾನಿ ಮೋದಿ ಸಮ್ಮುಖದಲ್ಲಿ ಸುಮಲತಾ ಬಿಜೆಪಿ ಪಕ್ಷ ಸೇರ್ಪಡೆಯಾಗುವ ಮಾತೇ ಇಲ್ಲ. ಸೂಕ್ತ ಸಮಯ ಬಂದಾಗ ನಿಮಗೆ ಎಲ್ಲಾ ವಿಷಯ ತಿಳಿಸುತ್ತೇವೆ ಎಂದು ಮಾರ್ಮಿಕ ಉತ್ತರ ನೀಡಿದ್ದಾರೆ.